Dasara Holidays: ದಸರಾ ರಜೆಯಲ್ಲಿ ಮಕ್ಕಳನ್ನು ಸಂಭಾಳಿಸುವುದು ಹೇಗೆ? ವಿದ್ಯಾರ್ಥಗಳ ಹಾಲಿಡೇ ಅದ್ಭುತವಾಗಿಸಲು ಇಲ್ಲಿದೆ ಟಿಪ್ಸ್‌-parenting dasara holidays top activities to engage your child during dussehra here tips for parents pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Dasara Holidays: ದಸರಾ ರಜೆಯಲ್ಲಿ ಮಕ್ಕಳನ್ನು ಸಂಭಾಳಿಸುವುದು ಹೇಗೆ? ವಿದ್ಯಾರ್ಥಗಳ ಹಾಲಿಡೇ ಅದ್ಭುತವಾಗಿಸಲು ಇಲ್ಲಿದೆ ಟಿಪ್ಸ್‌

Dasara Holidays: ದಸರಾ ರಜೆಯಲ್ಲಿ ಮಕ್ಕಳನ್ನು ಸಂಭಾಳಿಸುವುದು ಹೇಗೆ? ವಿದ್ಯಾರ್ಥಗಳ ಹಾಲಿಡೇ ಅದ್ಭುತವಾಗಿಸಲು ಇಲ್ಲಿದೆ ಟಿಪ್ಸ್‌

Dasara Holidays: ಮಕ್ಕಳಿಗೆ ಇದು ದಸರಾ ರಜೆಯ ಸಮಯ. ರಜಾ ದಿನಗಳು ಮಕ್ಕಳ ಪಾಲಿಗೆ ನೆನಪಿನಲ್ಲಿ ಉಳಿಯುವಂತೆ ಮಾಡಲು ಹೆತ್ತವರು ಪ್ರಯತ್ನಿಸಬೇಕು. ರಜಾ ದಿನಗಳಲ್ಲಿ ಮಕ್ಕಳು ಮೊಬೈಲ್‌, ಟಿವಿಯಲ್ಲಿ ಹೆಚ್ಚು ಕಾಲ ಕಳೆಯುವ ಬದಲು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು.

Dasara Holidays: ದಸರಾ ರಜೆಯಲ್ಲಿ ಮಕ್ಕಳನ್ನು ಸಂಭಾಳಿಸುವುದು ಹೇಗೆ? ಈ ಸಲಹೆಗಳನ್ನು ಪಾಲಿಸಿ
Dasara Holidays: ದಸರಾ ರಜೆಯಲ್ಲಿ ಮಕ್ಕಳನ್ನು ಸಂಭಾಳಿಸುವುದು ಹೇಗೆ? ಈ ಸಲಹೆಗಳನ್ನು ಪಾಲಿಸಿ

Dasara Holidays: ಮಕ್ಕಳಿಗೆ ಮಧ್ಯಾವಧಿ ಪರೀಕ್ಷೆ ಮುಗಿದು ದಸರಾ ಹಾಲಿಡೇ ಸಮಯ ಬಂದಿದೆ. ಇನ್ನು ಹತ್ತು ಹನ್ನೆರಡು ದಿನ ಮಕ್ಕಳನ್ನು ಮನೆಯಲ್ಲಿ ಹೇಗೆ ನಿಯಂತ್ರಿಸುವುದು ಎಂದು ಸಾಕಷ್ಟು ಹೆತ್ತವರು ಆಲೋಚಿಸುತ್ತಾರೆ. ಮಕ್ಕಳು ಟೀವಿ ಅಥವಾ ಮೊಬೈಲ್‌ನಲ್ಲಿಯೇ ಮುಳುಗಿ ಹೋಗಬಹುದು ಎಂಬ ಆತಂಕವೂ ಇರುತ್ತದೆ. ಮಕ್ಕಳ ರಜೆಯ ಮಜವನ್ನು ಹೆಚ್ಚಿಸುವುದು ಹೇಗೆ ಎಂದು ಸಾಕಷ್ಟು ಜನರು ಆಲೋಚಿಸುತ್ತಿರಬಹುದು. ಈಗ ಎಲ್‌ಕೆಜಿ ಯುಕೆಜಿಯಿಂದ ಪ್ರೈಮರಿ ಹೈಸ್ಕೂಲ್‌ ವಿದ್ಯಾರ್ಥಿಗಳಿಗೂ ರಜೆ ಇರಬಹುದು. ದೊಡ್ಡ ಮಕ್ಕಳನ್ನು ರಜೆಯಲ್ಲಿ ಹೇಗೋ ಸಂಭಾಳಿಸಬಹುದು. ಇವರಿಗೆ ಈ ಹತ್ತು ದಿನ ಥಟ್‌ ಎಂದು ಕಳೆದುಬಿಡಬಹುದು. ಪುಟ್ಟ ಮಕ್ಕಳಿದ್ದರೆ ಮಾತ್ರ ಅಪ್ಪ ಅಥವಾ ಅಮ್ಮ ರಜೆ ದಿನಗಳಲ್ಲಿ ಹೆಚ್ಚು ಕಾಳಜಿ ವಹಿಸಬೇಕಾಗಬಹುದು. ಮೈಸೂರು ದಸರಾ, ಮಂಗಳೂರು ದಸರಾ, ಮಡಿಕೇರಿ ದಸರಾ ಎಂದೆಲ್ಲ ಕನ್ನಡ ನಾಡಿನಲ್ಲೆಡೆ ದಸರಾ ಹಬ್ಬದ ಸಡಗರದ ಸಮಯದಲ್ಲಿ ಮಕ್ಕಳಿಗೆ ರಜೆಯ ಅನುಭವ ಸ್ಮರಣೀಯವಾಗಿಸಲು ಹೆತ್ತವರು ಪ್ರಯತ್ನಿಸಬಹುದು.

ಅಜ್ಜಿ ಮನೆಗೆ ಹೋಗಿ

ಈ ಕಾಲದಲ್ಲಿ ಇಂತಹದ್ದೇ ಇಲ್ಲ ಎಂದು ಸಾಕಷ್ಟು ಜನರು ಅಂದುಕೊಳ್ಳಬಹುದು. ಸಿಟಿಯಲ್ಲಿ ಇರುವವರು ಹಳ್ಳಿಗೆ ಕಳುಹಿಸಲು ಹಿಂದೇಟು ಹಾಕಬಹುದು. ನಗರದಲ್ಲಿರುವವರು ಕನಿಷ್ಠ ಒಂದು ವಾರವಾದರೂ ಹಳ್ಳಿಗೆ ಹೋಗುವುದು ಒಳ್ಳೆಯದು. ಮಕ್ಕಳ ಮನಸ್ಸಲ್ಲಿ ನಗರ ಜೀವನವು "ಕಷ್ಟಗಳೇ ಇಲ್ಲದ ಸುಂದರ ಪ್ರಪಂಚ" ಎಂಬ ಭ್ರಮೆಯನ್ನು ಸೃಷ್ಟಿಸುತ್ತವೆ. ಜಗತ್ತು ಇರುವುದೇ ಹೀಗೆ, ಕಟ್ಟಡಗಳು, ವಾಹನಗಳು, ಶಾಪಿಂಗ್‌, ಪಾರ್ಕ್‌ ಎಂದು ಮಕ್ಕಳ ಮನಸ್ಸು ಸೀಮಿತ ಜಗತ್ತಿನಲ್ಲಿರುತ್ತವೆ. ಹಳ್ಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ, ಅಲ್ಲಿ ಹಿರಿಯರ ಜತೆ ಕಾಲ ಕಳೆಯುವಂತೆ ಮಾಡಿ. ಇದೇ ಸಮಯದಲ್ಲಿ ಗ್ರಾಮೀಣ ಮಕ್ಕಳ ಜತೆ ಗ್ರಾಮೀಣ ಆಟಗಳನ್ನು ಆಡಲಿ. ಆ ಮಕ್ಕಳೊಂದಿಗೆ ಹತ್ತಿರದ ಕಾಡುಮೇಡು ಸುತ್ತಲಿ. ಇದು ಮಕ್ಕಳಿಗೆ ಒಳ್ಳೆಯ ಅನುಬವ ನೀಡುತ್ತದೆ. ಅಯ್ಯೋ ಹಳ್ಳಿಗೆ ಹೋದ್ರೆ ಮಗಳಿಗೆ, ಮಗನಿಗೆ ಜ್ವರ ಬರುತ್ತದೆ, ಮೈಕೈ ಗಾಯವಾಗುತ್ತದೆ, ದೇಹ ಗಲೀಜು ಆಗುತ್ತದೆ ಎಂದೆಲ್ಲ ಅಂದುಕೊಳ್ಳಬೇಡಿ. ತಪ್ಪದೇ ಈ ದಸರಾ ರಜೆಯಲ್ಲಿ ಸಿಟಿಯಲ್ಲಿರುವವರು ಮಕ್ಕಳನ್ನು ಹಳ್ಳಿಗೆ ಕರೆದುಕೊಂಡು ಹೋಗಿ. ಹಳ್ಳಿಯಲ್ಲಿರುವವರು ಕೂಡ ತಮ್ಮ ಅಜ್ಜಿ ಮನೆಗೆ ಹೋಗಬಹುದು.

ಮನೆ ಕೆಲಸಕ್ಕೆ ಮಕ್ಕಳ ಸಹಾಯ ಪಡೆಯಿರಿ

ಮನೆಯಲ್ಲಿ ಮಕ್ಕಳು ರಾಜರಂತೆ ಮೊಬೈಲ್‌ ಹಿಡಿದುಕೊಂಡು ದಿನಪೂರ್ತಿ ಇರುವುದು ಬೇಡ. ಲೇಟಾಗಿ ಎದ್ದು ಸೋಮಾರಿಗಳಾಗುವುದೂ ಬೇಡ. ಈ ರಜಾ ದಿನಗಳಲ್ಲಿ ಮಕ್ಕಳಿಂದ ಕೆಲವು ಕೆಲಸ ಮಾಡಿಸಿ. ಮಕ್ಕಳಿಗೆ ಬಟ್ಟೆ ಮಡುಚೋದು, ಪಾತ್ರೆ ವಾಷ್‌ ಮಾಡೋದು, ಅಡುಗೆ ಮಾಡುವುದು ಕಳುಹಿಸಿಕೊಡಿ. ಸಾಂಬಾರ್‌ ಮಾಡುತ್ತಿರುವಾಗ ತರಕಾರಿ ಹೆಚ್ಚಲು ಸಹಾಯ ಪಡೆಯಿರಿ. ಪುಟ್ಟ ಮಕ್ಕಳಾಗಿದ್ದರೆ ಅವರು ನಿಮಗೆ ಸಹಾಯ ಮಾಡುವಂತೆ "ಆ ಪಾತ್ರೆ ತಾ, ಇದು ತಾ" ಎಂದೆಲ್ಲ ಕೆಲಸ ಮಾಡಿಸಿ ಅವರಿಗೂ ಅಮ್ಮ ಅಪ್ಪನಿಗೆ ಸಹಾಯ ಮಾಡುತ್ತಿರುವ ಫೀಲ್‌ ಬರಿಸಬಹುದು.

ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿ

ಮನೆಯ ಹತ್ತಿರದ ಲೈಬ್ರೆರಿ ಪಾರ್ಕ್‌ಗೆ ಮಕ್ಕಳನ್ನು ಕರೆದುಕೊಂಡು ಹೋಗಿ. ಹೆಚ್ಚಿನವರು ಮಾಲ್‌ಗಳಿಗೆ ಕರೆದುಕೊಂಡು ಹೋಗುತ್ತಾರೆ. ಇದಕ್ಕಿಂತ ಲೈಬ್ರೆರಿಗೆ ಹೋಗಿ ಇಂತಿಷ್ಟು ಸಮಯ ಕತೆ ಪುಸ್ತಕ, ದಿನಪತ್ರಿಕೆಗಳನ್ನು ಓದುವಂತೆ ತಿಳಿಸಿ.

ಸೈಕ್ಲಿಂಗ್‌, ಆಟಕ್ಕೆ ಅವಕಾಶ ನೀಡಿ

ಸೈಕಲ್‌ ಇದ್ದರೆ ಮಕ್ಕಳು ಒಂದಿಷ್ಟು ಹೊತ್ತು ಸವಾರಿ ಮಾಡಲಿ. ಓರಗೆಯ ಗೆಳೆಯರಿದ್ದರೆ ಹೊರಗಡೆ ಆಟವಾಡಲಿ. ವಾಲಿಬಾಲ್‌, ಟೆನ್ನಿಸ್‌ನಂತಹ ಆಟ ಆಡುವವರು ಇದ್ದರೆ ಅವರೊಂದಿಗೆ ಮಕ್ಕಳನ್ನು ಆಡಲು ಬಿಡಿ. ದೈಹಿಕವಾಗಿ ಮಕ್ಕಳು ಸ್ಟ್ರಾಂಗ್‌ ಆಗಿರಲು ಇಂತಹ ಆಟಗಳು ನೆರವಾಗುತ್ತವೆ.

ಮಕ್ಕಳಿಗೆ ಕಥೆ ಹೇಳಿ

ರಜಾ ದಿನಗಳಲ್ಲಿ ಮಕ್ಕಳೊಂದಿಗೆ ಸಮಯ ಕಳೆಯುವ ಅವಕಾಶ ಹೆತ್ತವರಿಗೆ ದೊರಕುತ್ತದೆ. ಉದ್ಯೋಗಸ್ಥರು ಈ ಅವಧಿಯಲ್ಲಿ ಮಕ್ಕಳಿಗಾಗಿ ಸಮಯ ಮಾಡಿಕೊಳ್ಳುವುದು ಉತ್ತಮ. ಮಕ್ಕಳಿಗೆ ಈ ಸಮಯದಲ್ಲಿ ಕಥೆ ಹೇಳಿ. ದಸರಾ ಹಬ್ಬದ ಕಥೆಗಳನ್ನೂ ಹೇಳಬಹುದು. ಸುತ್ತಮುತ್ತಲಿನ ಹಲವು ಮಕ್ಕಳನ್ನು ಸೇರಿಸಿ ಕ್ವಿಜ್‌ ನಡೆಸಬಹುದು.

ಹಬ್ಬದ ಸಂಭ್ರಮ ಮೂಡಿಸಿ

ಮಕ್ಕಳಿಗೆ ಹಬ್ಬದ ಮಹತ್ವ, ಧಾರ್ಮಿಕ ಆಚರಣೆಗಳು ಇತ್ಯಾದಿಗಳನ್ನು ತಿಳಿಸಿ ಕೊಡಿ. ಮನೆಗೆ ತೋರಣ ಕಟ್ಟುವಾಗ ಮಕ್ಕಳ ನೆರವು ಪಡೆಯಿರಿ. ಮಕ್ಕಳಿಗಾಗಿ ಸಿಹಿತಿಂಡಿ ಮಾಡಿ. ಮಕ್ಕಳು ಹಬ್ಬದ ಖುಷಿಯಲ್ಲಿರುವಂತೆ ಮಾಡಿ.

ಕ್ಲೀನಿಂಗ್‌ ಸೆಸನ್‌

ಪ್ರತಿನಿತ್ಯ ಮನೆ ಕ್ಲೀನ್‌ ಮಾಡಲು ಮಕ್ಕಳ ನೆರವು ಪಡೆಯಿರಿ. ಶಾಲೆ ಇರುವ ಸಮಯದಲ್ಲಿ ಮಕ್ಕಳಿಗೆ ಕಸ ಹಾಕಲು ಮಾತ್ರ ತಿಳಿದಿರುತ್ತದೆ. ಮನೆಯ ಸ್ವಚ್ಛತೆ ಬಗ್ಗೆ ಗಮನ ಇರುವುದಿಲ್ಲ. ರಜಾ ದಿನಗಳಲಿ ಮನೆಯನ್ನು ಕ್ಲೀನ್‌ ಮಾಡಲು ಮಕ್ಕಳ ನೆರವು ಪಡೆಯಿರಿ.

ಟ್ರಿಪ್‌ ಹೋಗಿ

ಮಕ್ಕಳ ಜತೆ ಟ್ರಿಪ್‌ ಆಯೋಜಿಸಿ. ಎಲ್ಲಾದರೂ ಸುತ್ತಾಡಿ ಬನ್ನಿ. ಇದರಿಂದ ಮಕ್ಕಳೂ ಖುಷಿಯಾಗುತ್ತಾರೆ. ಈ ರಜಾ ಅವಧಿಯಲ್ಲಿ ಟ್ರಿಪ್‌ ಹೋಗುವವರು ಹೆಚ್ಚು ಇರುತ್ತಾರೆ. ಹೀಗಾಗಿ ಹೆಚ್ಚು ಜನರು ಹೋಗುವ, ದಟ್ಟಣೆ ಹೆಚ್ಚಿರುವ ಸ್ಥಳಗಳನ್ನು ಅವಾಯ್ಡ್‌ ಮಾಡಿ.

ಮಕ್ಕಳ ಈ ಹತ್ತು ಪ್ಲಸ್‌ ರಜೆ ಮುಗಿಯಲು ಹೆಚ್ಚು ಸಮಯ ಬೇಕಿಲ್ಲ. ರಜಾ ಸಿಕ್ಕಿದ್ದೂ ಗೊತ್ತಾಗದು, ರಜೆ ಮುಗಿದದ್ದೂ ಗೊತ್ತಾಗದು ಎನ್ನುವಂತಹ ಪುಟ್ಟ ರಜೆ ಇದಾಗಿದೆ. ಈ ಹತ್ತು ದಿನಗಳನ್ನು ಮಕ್ಕಳು ನೆನಪಿಟ್ಟುಕೊಳ್ಳುವಂತಾಗಲೂ ಸೂಕ್ತ ಪ್ಲ್ಯಾನ್‌ ಮಾಡಿ.

mysore-dasara_Entry_Point