Co sleeping: ಪಾಲಕರು ಮಗುವಿನ ಜತೆ ನಿದ್ರಿಸಬಹುದೇ, ಮಕ್ಕಳನ್ನು ಪ್ರತ್ಯೇಕ ಕೋಣೆಯಲ್ಲಿ ಮಲಗಿಸಬೇಕೆ? ಇದು ಗುಣಮಟ್ಟದ ನಿದ್ರೆಯ ವಿಷಯ
ಕನ್ನಡ ಸುದ್ದಿ  /  ಜೀವನಶೈಲಿ  /  Co Sleeping: ಪಾಲಕರು ಮಗುವಿನ ಜತೆ ನಿದ್ರಿಸಬಹುದೇ, ಮಕ್ಕಳನ್ನು ಪ್ರತ್ಯೇಕ ಕೋಣೆಯಲ್ಲಿ ಮಲಗಿಸಬೇಕೆ? ಇದು ಗುಣಮಟ್ಟದ ನಿದ್ರೆಯ ವಿಷಯ

Co sleeping: ಪಾಲಕರು ಮಗುವಿನ ಜತೆ ನಿದ್ರಿಸಬಹುದೇ, ಮಕ್ಕಳನ್ನು ಪ್ರತ್ಯೇಕ ಕೋಣೆಯಲ್ಲಿ ಮಲಗಿಸಬೇಕೆ? ಇದು ಗುಣಮಟ್ಟದ ನಿದ್ರೆಯ ವಿಷಯ

Co sleeping: ಪಾಲಕರು ತಮ್ಮ ಮಗುವಿನ ಜತೆ ಮಲಗಬಹುದೇ? ಮಗುವಿಗೆ ಮಲಗಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕೆ? ಯಾವ ವಯೋಮಾನದಲ್ಲಿ ಮಕ್ಕಳನ್ನು ಪ್ರತ್ಯೇಕವಾಗಿ ಮಲಗಿಸಬೇಕು, ಈ ಕುರಿತು ವಿವಿಧ ದೇಶಗಳ ಮನಸ್ಥಿತಿ ಹೇಗಿದೆ ತಿಳಿಯೋಣ.

ಪಾಲಕರು ಮಗುವಿನ ಜತೆ ನಿದ್ರಿಸಬಹುದೇ, ಮಕ್ಕಳನ್ನು ಪ್ರತ್ಯೇಕ ಕೋಣೆಯಲ್ಲಿ ಮಲಗಿಸಬೇಕೆ?
ಪಾಲಕರು ಮಗುವಿನ ಜತೆ ನಿದ್ರಿಸಬಹುದೇ, ಮಕ್ಕಳನ್ನು ಪ್ರತ್ಯೇಕ ಕೋಣೆಯಲ್ಲಿ ಮಲಗಿಸಬೇಕೆ?

ಗಂಡ ಹೆಂಡಿರ ನಡುವೆ ಪುಟ್ಟ ಮಗು ಅಥವಾ ಮಕ್ಕಳು ಮಲಗಿದ್ದರೆ ಖುಷಿಯೋ ಖುಷಿ. ಆ ಮಗುವಿಗೆ ಜೋ ಜೋ ಹಾಡುತ್ತ ನಿದ್ದೆಗೆ ಜಾರಲು ಬಹುತೇಕ ಎಲ್ಲರೂ ಬಯಸುತ್ತಾರೆ. ಈ ರೀತಿ ಒಟ್ಟಾಗಿ ನಿದ್ದೆ ಮಾಡುವುದು ಉತ್ತಮವೇ? ಇದರಿಂದ ಗುಣಮಟ್ಟದ ನಿದ್ದೆಗೆ ತೊಂದರೆಯಾಗುವುದೇ? ಇತ್ಯಾದಿ ಅಧ್ಯಯನಗಳು ನಡೆಯುತ್ತಿವೆ. ಭಾರತದಂತಹ ದೇಶಗಳಲ್ಲಿ ಮಕ್ಕಳನ್ನು ಜತೆಗೆ ಮಲಗಿಸಿಕೊಳ್ಳಲು ಬಯಸುತ್ತಾರೆ. ಆದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ಮಕ್ಕಳಿಗೆ ಸ್ವಾವಲಂಬನೆ ಕಲಿಸಿಕೊಡಲು ಪ್ರಮುಖ ಆದ್ಯತೆ ನೀಡುತ್ತಾರೆ. ಅಲ್ಲಿ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಪ್ರತ್ಯೇಕ ಕೊಠಡಿಗಳಲ್ಲಿ ಮಲಗುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ದಕ್ಷಿಣ ಏಷ್ಯಾದ ದೇಶಗಳಲ್ಲಿ ಮಕ್ಕಳು-ಪೋಷಕರು ಜತೆಯಾಗಿ ಮಲಗಲು ಬಯಸುತ್ತಾರೆ.

ಈ ಕುರಿತಂತೆ ಟ್ರೆಂಡ್ಸ್ ಇನ್ ಎಕಾಲಜಿ ಅಂಡ್ ಎವಲ್ಯೂಷನ್‌ನಲ್ಲಿ ಪ್ರಕಟವಾದ ಅಧ್ಯಯನವು "ಪ್ರಾಣಿಗಳು ಗುಂಪಾಗಿ ಮಲಗಲು ಬಯಸುತ್ತವೆ" ಎಂದಿದೆ. ವಿವಿಧ ವಯೋಮಾನಗಳಿಗೆ ತಕ್ಕಂತೆ ಸಹ-ನಿದ್ರೆಯ ವರ್ತನೆಗಳ ಕುರಿತು Goffredina Spanò ಮತ್ತು Gina Mason ಚರ್ಚಿಸಿದ್ದಾರೆ.

ಶಿಶುಗಳ ಜತೆ ನಿದ್ರಿಸುವುದು

ಪಾಶ್ಚಾತ್ಯ ಮತ್ತು ದಕ್ಷಿಣ ಏಷ್ಯಾ ದೇಶಗಳು ಈ ಕುರಿತು ವಿಭಿನ್ನ ದೃಷ್ಟಿಕೋನ ಹೊಂದಿವೆ. ದಕ್ಷಿಣ ಅಮೆರಿಕಾ, ಏಷ್ಯಾ, ಆಫ್ರಿಕಾದಂತಹಲ್ಲಿ ಪಾಲಕರು ತಮ್ಮ ಶಿಶುಗಳ ಜತೆ ನಿದ್ರಿಸುವುದು ಸಾಮಾನ್ಯವಾಗಿದೆ. ಈ ರೀತಿ ನಿದ್ರೆ ಮಾಡುವುದರಿಂದ ಶಿಶುಗಳಿಗೆ ಸುರಕ್ಷಿತ, ಭದ್ರತೆಯ ಭಾವ ಮೂಡುವುದೆಂದು ಸಂಶೋಧಕರು ಹೇಳಿದ್ದಾರೆ. ಸುರಕ್ಷತೆಯನ್ನು ಹೊರತುಪಡಿಸಿ ನೋಡಿದರೆ ಈ ರೀತಿ ಒಟ್ಟಾಗಿ ನಿದ್ರಿಸುವುದು ಮಗುವಿನೊಂದಿಗೆ ಬಾಂಧವ್ಯ ಹೆಚ್ಚಿಸುತ್ತದೆ. ಮಕ್ಕಳ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿ. ಪಾಲಕರ ನಿರಂತರ ಉಪಸ್ಥಿತಿಯಿಂದ ಮಕ್ಕಳ ಒತ್ತಡ, ಖಿನ್ನತೆ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಭಾರತದಲ್ಲಿ ಶಿಶುವಿಗೆ ಸಾಮಾನ್ಯವಾಗಿ ತೊಟ್ಟಿಲಿನ ವ್ಯವಸ್ಥೆ ಮಾಡಲಾಗುತ್ತದೆ. ತುಸು ದೊಡ್ಡದಾದ ಬಳಿಕ ಹಾಸಿಗೆಯಲ್ಲಿ ಜತೆಯಾಗಿ ಮಲಗಿಸಿಕೊಳ್ಳುತ್ತಾರೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಅಲ್ಲಿ ಚಿಕ್ಕ ಮಕ್ಕಳಿಗೆ ಸ್ವಾವಲಂಬನೆ ನೀಡಬೇಕೆಂದು ಹೇಳಲಾಗುತ್ತದೆ. ಇದೇ ಸಮಯದಲ್ಲಿ ಹಠಾತ್ ಶಿಶು ಮರಣ ಸಿಂಡ್ರೋಮ್ (ಎಸ್‌ಐಡಿಎಸ್‌) ಕುರಿತು ಕಾಳಜಿಯನ್ನೂ ವ್ಯಕ್ತಪಡಿಸುತ್ತವೆ. ಇದೇ ಕಾರಣಕ್ಕೆ ಒಂದೇ ಹಾಸಿಗೆಯಲ್ಲಿ ಮಗುವಿನ ಜತೆ ಮಲಗುವುದನ್ನು ವಿರೋಧಿಸುತ್ತಾರೆ. ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ನಂತಹ ಸಂಸ್ಥೆಗಳು "ಪಾಲಕರು ಮತ್ತು ಶಿಶು ಒಂದೇ ಹಾಸಿಗೆಯಲ್ಲಿ ಮಲಗಿದರೆ ಹಠಾತ್‌ ಶಿಶು ಮರಣಕ್ಕೆ ಕಾರಣವಾಗಬಹುದು. ಇಂತಹ ಎಸ್‌ಐಡಿಎಸ್‌ ಕಡಿಮೆ ಮಾಡಲು ಮಗುವಿಗೆ ಹಾಸಿಗೆಯಲ್ಲಿ ಇನ್ನಷ್ಟು ಎತ್ತರದ ಪ್ರತ್ಯೇಕ ಮೇಲ್ಮೈ ರೂಪಿಸಬೇಕಂದು" ಶಿಫಾರಸು ಮಾಡಿವೆ. ಶಿಶುವಿನ ಜತೆ ಮಲಗುವುದು ಉತ್ತಮ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಮಕ್ಕಳಿಗೆ ಉತ್ತಮ ನಿದ್ರೆ, ಹಸಿವಾದಗ ಆಹಾರ ನೀಡಲು ಸಹಕಾರಿ ಎಂದು ಅಭಿಪ್ರಾಯಪಡುತ್ತಾರೆ.

ಮಕ್ಕಳ ಬಾಲ್ಯದಲ್ಲಿ ಸಹ-ನಿದ್ರೆ ಉತ್ತಮವೇ?

ಮಕ್ಕಳು ತುಸು ದೊಡ್ಡವರಾದಂತೆ ಹೆತ್ತವರು ಪ್ರತ್ಯೇಕವಾಗಿ ಮಲಗಿಸಲು ಬಯಸುವುದು ಸಾಮಾನ್ಯವಾಗಿದೆ. ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಅವರು ಒಟ್ಟಿಗೆ ನಿದ್ರಿಸುವುದು ಸಾಮಾನ್ಯ. ಆಟಿಸಂ (ಸ್ವಲೀನತೆ), ಖಿನ್ನತೆ, ಆತಂಕದ ತೊಂದರೆಗಳು, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸಹ ನಿದ್ರೆಯು ವಿಶೇಷವಾಗಿ ಪ್ರಯೋಜನಕಾರಿ ಎಂದು ಸಂಶೋಧಕರು ಹೇಳಿದ್ದಾರೆ.

ಪ್ರೌಢಾವಸ್ಥೆಯಲ್ಲಿ ಸಹ ನಿದ್ರೆ

ಮಕ್ಕಳು ಹರೆಯಕ್ಕೆ ಕಾಲಿಟ್ಟಾಗ ಸಾಮಾನ್ಯವಾಗಿ ಹೆತ್ತವರು ಮಕ್ಕಳನ್ನು ಪ್ರತ್ಯೇಕವಾಗಿ ನಿದ್ರಿಸಲು ವ್ಯವಸ್ಥೆ ಮಾಡುತ್ತಾರೆ. ಇಬ್ಬರು ಮಕ್ಕಳಿದ್ದರೆ ಅಮ್ಮನ ಜತೆ ಮಗಳು, ಅಪ್ಪನ ಜತೆ ಮಗ ಈ ರೀತಿಯೂ ಹೊಂದಾಣಿಕೆ ಇರುತ್ತದೆ. ಇಲ್ಲವಾದರೆ ಒಡಹುಟ್ಟಿದವರು ಒಟ್ಟಿಗೆ ನಿದ್ರಿಸುವುದೂ ಇದೆ. ಇದೇ ರೀತಿ ದಂಪತಿ ಕೂಡ ಮದುವೆಯಾಗಿ ಎಷ್ಟು ವರ್ಷ ಕಳೆದರೂ ಜತೆಯಾಗಿ ಮಲಗುತ್ತಾರೆ. ಆದರೆ, ದಂಪತಿ ಹಾಸಿಗೆ ಹಂಚಿಕೊಳ್ಳುವುದು ಯಾವಾಗಲೂ ಪ್ರಣಯಕ್ಕಾಗಿ ಅಲ್ಲ. ಕೆಲವು ಅಧ್ಯಯನಗಳ ಪ್ರಕಾರ ಗಂಡ ಹೆಂಡತಿ ಈ ರೀತಿ ಒಟ್ಟಿಗೆ ಮಲಗುವುದರಿಂದ ಮಹಿಳೆಯರು ಸಾಮಾನ್ಯವಾಗಿ ಕಳಪೆ ಗುಣಮಟ್ಟದ ನಿದ್ರೆ ಅನುಭವಿಸುತ್ತಾರಂತೆ. ವಿಶೇಷವಾಗಿ ಗಂಡನ ಹೊರಳಾಟ ಇತ್ಯಾದಿಗಳಿಂದ ತೊಂದರೆ ಅನುಭವಿಸುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಒಂಟಿಯಾಗಿ ಮಲಗುವುದಕ್ಕೆ ಹೋಲಿಸಿದರೆ ಸಹ ನಿದ್ರೆಯು ಗುಣಮಟ್ಟದ ನಿದ್ರೆಗೆ ತೊಂದರೆ ನೀಡಬಹುದು ಎಂದು Goffredina Spanò ಮತ್ತು Gina Mason ಚರ್ಚಿಸಿದ್ದಾರೆ.

 

ಗಂಡ ಹೆಂಡತಿ ಮಲಗುವುದರಿಂದ ಮಹಿಳೆಯರು ಸಾಮಾನ್ಯವಾಗಿ ಕಳಪೆ ಗುಣಮಟ್ಟದ ನಿದ್ರೆ ಅನುಭವಿಸುತ್ತಾರಂತೆ
ಗಂಡ ಹೆಂಡತಿ ಮಲಗುವುದರಿಂದ ಮಹಿಳೆಯರು ಸಾಮಾನ್ಯವಾಗಿ ಕಳಪೆ ಗುಣಮಟ್ಟದ ನಿದ್ರೆ ಅನುಭವಿಸುತ್ತಾರಂತೆ

ಒಟ್ಟಾಗಿ ನಿದ್ರಿಸುವುದು ಬೇಕೇ ಬೇಡವೇ ಎನ್ನುವುದನ್ನು "ಸಾಂಸ್ಕೃತಿಕ ಅಂಶಗಳಿಗಿಂತ" "ನಿದ್ರೆಯ ಗುಣಮುಟ್ಟ ಸುಧಾರಿಸುವ" ಆಧಾರದಲ್ಲಿ ಗಮನಿಸಬೇಕೆಂದು ಅವರು ಸಲಹೆ ನೀಡಿದ್ದಾರೆ. ವೈಯಕ್ತಿಕ ಅಗತ್ಯ, ಆದ್ಯತೆಗಳಿಗೆ ತಕ್ಕಂತೆ ಗುಣಮಟ್ಟದ ನಿದ್ರೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಅವರು ಚರ್ಚಿಸಿದ್ದಾರೆ.

Whats_app_banner