Shobha Gupta: ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಗುಜರಾತ್ ಸರ್ಕಾರದ ನಿದ್ದೆಗೆಡಿಸಿದ ಅಡ್ವೋಕೇಟ್ ಶೋಭಾ ಗುಪ್ತಾ
ಕನ್ನಡ ಸುದ್ದಿ  /  ಜೀವನಶೈಲಿ  /  Shobha Gupta: ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಗುಜರಾತ್ ಸರ್ಕಾರದ ನಿದ್ದೆಗೆಡಿಸಿದ ಅಡ್ವೋಕೇಟ್ ಶೋಭಾ ಗುಪ್ತಾ

Shobha Gupta: ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಗುಜರಾತ್ ಸರ್ಕಾರದ ನಿದ್ದೆಗೆಡಿಸಿದ ಅಡ್ವೋಕೇಟ್ ಶೋಭಾ ಗುಪ್ತಾ

ಗುಜರಾತ್ ಕೋಮು ಗಲಭೆ (2002) ವೇಳೆ ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆಕೆಯ ಕುಟುಂಬ ಸದಸ್ಯರನ್ನು ಕೊಲೆಗೈದ 11 ಅಪರಾಧಿಗಳನ್ನು ಮತ್ತೆ ಜೈಲಿಗಟ್ಟುವಲ್ಲಿ ಯಶಸ್ವಿಯಾದವರು ಅಡ್ವೋಕೇಟ್ ಶೋಭಾ ಗುಪ್ತಾ. ದೆಹಲಿಯಲ್ಲಿ ಬಹಳ ಜನಪ್ರಿಯರಾಗಿರುವ ಈ ಸಮಾಜಮುಖಿ ನ್ಯಾಯವಾದಿಯ ವ್ಯಕ್ತಿ ಚಿತ್ರಣ ಇಲ್ಲಿದೆ.

ಅಡ್ವೋಕೇಟ್‌ ಶೋಭಾ ಗುಪ್ತಾ, ಬಿಲ್ಕಿಸ್ ಬಾನೋ ಅವರ ವಕೀಲರು
ಅಡ್ವೋಕೇಟ್‌ ಶೋಭಾ ಗುಪ್ತಾ, ಬಿಲ್ಕಿಸ್ ಬಾನೋ ಅವರ ವಕೀಲರು

ಗೋಧ್ರಾ ಹತ್ಯಾಕಾಂಡದ ನಂತರ ನಡೆದ ಗುಜರಾತ್ ಗಲಭೆ (2002)ಯ ವೇಳೆ ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕೋಮು ದೌರ್ಜನ್ಯದ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್‌ ಸರ್ಕಾರದ ಕ್ರಮ ಇಂದು (ಜ.8) ಮತ್ತೊಮ್ಮೆ ವ್ಯಾಪಕ ಖಂಡನೆಗೆ ಒಳಗಾಗಿದೆ.

ಗುಜರಾತ್ ಸರ್ಕಾರದ ಅತಿರೇಕದ ಕ್ರಮವನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್ ಬಾನೋ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠ ಸಮರ್ಥಿಸಿಕೊಂಡಿದೆ. ಅಷ್ಟೇ ಅಲ್ಲ, ಕಾನೂನು ಮತ್ತು ಸಂವಿಧಾನ ಚೌಕಟ್ಟು ಮೀರಿ ವರ್ತಿಸಿದ ಗುಜರಾತ್ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಬಿಲ್ಕಿಸ್ ಬಾನೋ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದು, ಪ್ರಸಿದ್ಧ ಅಡ್ವೋಕೇಟ್ ಶೋಭಾ ಗುಪ್ತಾ. ಸಾಮಾಜಿಕ ಜಾಲತಾಣಗಳಲ್ಲಿ ಶೋಭಾ ಅವರ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಬಿಲ್ಕಿಸ್ ಬಾನೋ ಪರ ವಾದ ಮಂಡಿಸಿದ ನ್ಯಾಯವಾದಿ ಶೋಭಾ ಗುಪ್ತಾ ಈ ಹಿಂದೆಯೂ ಹಲವು ಸಮಾಜಮುಖಿ ಕೆಲಸಗಳಿಂದ ಗಮನಸೆಳೆದವರು.

ಅಡ್ವೋಕೇಟ್ ಶೋಭಾ ಗುಪ್ತಾ ಸದ್ಯ ಸುದ್ದಿಯ ಕೇಂದ್ರ ಬಿಂದು. ಅವರು ಮೂಲತಃ ರಾಜಸ್ಥಾನದ ಟೋಂಕ್ ಜಿಲ್ಲೆಯವರು. ಸರಿ ಸುಮಾರು ಎರಡೂವರೆ ದಶಕದ ವಕೀಲಿಕೆಯ ಅನುಭವ ಅವರ ಸಂಪತ್ತು. ಮಾನವಹಕ್ಕು ಮತ್ತು ಮಹಿಳಾ ಪರ ನಿಲುವು ಹೊಂದಿರುವ ಶೋಭಾ ಗುಪ್ತಾ ರಾಷ್ಟ್ರೀಯತೆಯ ವಿಚಾರದಲ್ಲಿ ಕೂಡ ಕಾಳಜಿ ಹೊಂದಿರುವ ಸೂಕ್ಷ್ಮಭಾವ ಜೀವಿ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಪೋಸ್ಟ್‌ಗಳನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ.

ಬಿಲ್ಕಿಸ್ ಬಾನೋ ಕೇಸ್‌ನಲ್ಲಿ ಕೋಮುದೌರ್ಜನ್ಯದ ಅಪರಾಧಿಗಳನ್ನು ಸೆರೆಗೆ ಕಳುಹಿಸುವಲ್ಲಿ ಅವರು ಪಟ್ಟ ಶ್ರಮ, ಗುಜರಾತ್ ಸರ್ಕಾರ 2022ರಲ್ಲಿ ನಿಯಮ ಮತ್ತು ಸಂವಿಧಾನದ ಚೌಕಟ್ಟು ಮೀರಿ ಆ ಅಪರಾಧಿಗಳನ್ನು ಬಿಡುಗಡೆ ಮಾಡಲು ಆದೇಶ ನೀಡಿದಾಗ ಅವರು ಅನುಭವಿಸಿದ ಸಂಕಟಗಳನ್ನು ಗಮನಿಸಬೇಕು. ನ್ಯಾಯದ ಪರ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿ, ಸಂತ್ರಸ್ತರ ಪರವಾದ ಸಹಾನುಭೂತಿ ಅವರನ್ನು ಸಮಾಜಮುಖಿಯನ್ನಾಗಿಸಿದೆ.

ರಾಜಸ್ಥಾನ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ ಕಾರ್ಮಿಕ ಕಾನೂನಿನಲ್ಲಿ ಹೆಚ್ಚುವರಿ ಡಿಪ್ಲೊಮಾವನ್ನು ಪಡೆದರು. ದೆಹಲಿಯ ಜಿಲ್ಲಾ ನ್ಯಾಯಾಲಯಗಳಲ್ಲಿ 1999ರಲ್ಲಿ ವಕೀಲಿಕೆ ಶುರುಮಾಡಿದರು. ಅದಾಗಿ ದೆಹಲಿಯ ಹೈಕೋರ್ಟ್‌ನಲ್ಲಿ ವಕೀಲಿಕೆ ಆರಂಭಿಸಿದರು. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್, ದೆಹಲಿ ಜಲ ಮಂಡಳಿ ಮತ್ತು ಗ್ರಾಮ ಸಭೆ, ವಿವಿಧ ಬ್ಯಾಂಕ್‌ಗಳನ್ನು ಪ್ರತಿನಿಧಿಸುವ ಸ್ಥಾಯಿ ಸಲಹೆಗಾರರಾಗಿ ಕೆಲಸ ಮಾಡಿದರು. ಸುಪ್ರೀಂ ಕೋರ್ಟ್‌ನಲ್ಲೂ ವಕೀಲಿಕೆ ಶುರುಮಾಡಿದರು.

ಹೀಗೆ ವಿಸ್ತೃತ ಕಾನೂನು ವಿಷಯಗಳ ಅನುಭವ ಪಡೆದ ಶೋಭಾ, ದೆಹಲಿಯ ವಕೀಲರ ವಲಯದಲ್ಲಿ ಬಹಳ ಜನಪ್ರಿಯರಾದರು. ವಕೀಲಿಕೆಯಲ್ಲಿ ಎರಡೂವರೆ ದಶಕದ ಅನುಭವ ಹೊಂದಿರುವ ಶೋಭಾ ಗುಪ್ತಾ, ವಿದ್ವತ್ಪೂರ್ಣ ಕಾನೂನು ವೃತ್ತಿಪರರಾಗಿ ಗುರುತಿಸಿಕೊಂಡಿದ್ದಾರೆ.

ಸಾಮಾಜಿಕ ಸೂಕ್ಷ್ಮಗಳನ್ನೂ ಅರಿತು, ಸ್ಪಂದಿಸುತ್ತಿರುವ ಶೋಭಾ ಗುಪ್ತಾ ಅವರು, “ಫ್ಲ್ಯಾಗ್” ಎಂಬ ‘ಫ್ರೀ ಲೀಗಲ್ ಏಯ್ಡ್ ಗ್ರೂಪ್’ನ ಸ್ಥಾಪಕರು. ಕಾನೂನು ಲೋಪದೋಷದ ಕಾರಣ ಬಂಧಿತರಾಗಿರುವ ಬಾಲಾಪರಾಧಿಗಳಿಗೆ ಉಚಿತ ಕಾನೂನು ನೆರವು ನೀಡುವುದಕ್ಕಾಗಿ ಈ ಗುಂಪನ್ನು ರಚಿಸಲಾಗಿದೆ. ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯವಾದಿ ವಿಜಯ್ ಹನ್ಸಾರಿಯಾ ಮಾರ್ಗದರ್ಶನದಲ್ಲಿ ಈ ಗುಂಪು ಕೆಲಸ ಮಾಡುತ್ತಿತ್ತು. ದೆಹಲಿಯ ಬಾಲ ನ್ಯಾಯ ಸಮಿತಿಯ ಅಂದಿನ ಅಧ್ಯಕ್ಷ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಸೇರಿ ಹಲವರು 'ಫ್ಲ್ಯಾಗ್' ನ ಮಾರ್ಗದರ್ಶಿಗಳಾಗಿದ್ದರು.

ದೆಹಲಿಯಲ್ಲಿ ಬಾಲಾಪರಾಧಿಗಳಿಗೆ ಈ ರೀತಿ ಕಾನೂನು ನೆರವು ನೀಡಲು ಮುಂದಾದ ಮೊದಲ ಗುಂಪು ಇದಾಗಿತ್ತು. ಈ ಗುಂಪಿನ ಎರಡು-ಮೂರು ಸದಸ್ಯರು ಬಾಲಾಪರಾಧಿ ಮತ್ತು ಅವರ ಪೋಷಕರಿಗೆ ಸಹಾಯ ಮಾಡಲು ಬಾಲಾಪರಾಧಿ ಮಂಡಳಿಗಳಿಗೆ ಪ್ರತಿದಿನ ಹಾಜರಾಗುತ್ತಿದ್ದರು. ವಕೀಲರಿಗೆ ಕೇಸ್‌ ಹಂಚುವ ಕೆಲಸವನ್ನು ಶೋಭಾ ಮಾಡುತ್ತಿದ್ದರು. ಈ ಗುಂಪಿನ ಅವಿರತ ಪ್ರಯತ್ನದ ಕಾರಣ ಒಟ್ಟು ಬಾಲಾಪರಾಧಿಗಳಾಗಿ ಕೈದಿಗಳಾಗಿದ್ದವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು.

ಮಹಿಳಾ ಸಬಲೀಕರಣದ ಕಡೆಗೂ ಗಮನಹರಿಸಿದ್ದ ಶೋಭಾ ಗುಪ್ತಾ, ವಿ ದ ವುಮೆನ್ ಆಫ್ ಇಂಡಿಯಾ ಎಂಬ ತಂಡವನ್ನೂ ರಚಿಸಿಕೊಂಡು ಕಾನೂನು ಹೋರಾಟದಲ್ಲೂ ಭಾಗವಹಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಿವಿಧ ಕೇಸ್‌ಗಳನ್ನು ವಿ ದ ವುಮೆನ್‌ ಆಫ್ ಇಂಡಿಯಾ ಪರವಾಗಿ ಶೋಭಾ ಗುಪ್ತಾ ನಿರ್ವಹಿಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ನ ವಕೀಲರ ಸಂಘಗಳ ಸಕ್ರಿಯ ಸದಸ್ಯೆಯಾಗಿರುವ ಅವರು, ಮಹಿಳಾ ಕ್ರಿಕೆಟ್ ತಂಡದ ನಾಯಕಿಯೂ ಆಗಿದ್ದಾರೆ. 2019 ರಲ್ಲಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ನಡೆಸಿದ ಕ್ರಿಕೆಟ್ ಟೂರ್ನಿಯಲ್ಲಿ "ಆಲ್ ರೌಂಡರ್" ಟ್ರೋಫಿಯನ್ನು ಪಡೆದಿದ್ದರು. ಶೋಭಾ ಗುಪ್ತಾ ಅವರು ಅಂಕಣಕಾರ್ತಿಯಾಗಿಯೂ ಹೆಸರು ಮಾಡಿದ್ದು, ದ ಲೀಫ್‌ಲೆಟ್‌ನಲ್ಲಿ ಅವರ ಅಂಕಣ ಕೆಲಕಾಲ ಪ್ರಕಟವಾಗಿದೆ.

ಶೋಭಾ ಗುಪ್ತಾ ಅವರ ಸೋಷಿಯಲ್ ಮೀಡಿಯಾ ಲಿಂಕ್‌ಗಳು

-----------

(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳನ್ನು ಸ್ವಾಗತಿಸುತ್ತೇವೆ. ನಿಮ್ಮ ಪ್ರತಿಕ್ರಿಯೆ ನಮ್ಮ ಬರಹಗಳಿಗೆ ಜೀವಾಳ. umesh.s@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್​ ಮಾಡಬಹುದು.)

Whats_app_banner