Relationship: ಬ್ರೇಕಪ್ ಬಳಿಕ ಭಾವನೆಗಳೇ ಮರುಗಟ್ಟಿದಂತಾಗಲು ಇವೇ ಪ್ರಮುಖ ಕಾರಣಗಳು; ಆ ನೋವಿನಿಂದ ಹೊರ ಬರೋದು ಹೇಗೆ?
ಪ್ರೀತಿಯ ಭಾವನೆಗಳು, ಬಾಂಧವ್ಯ ಬಲು ಚಂದ. ಆದರೆ ಬ್ರೇಕಪ್ ಅತೀವ ನೋವು ಕೊಡುವ ಭಾವನೆ. ಈ ಭಾವನೆ ನಿಮ್ಮನ್ನು ಎಷ್ಟರಮಟ್ಟಿಗೆ ಕುಗ್ಗಿಸುತ್ತೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಹಲವರು ಬ್ರೇಕಪ್ ಬಳಿಕ ಭಾವನೆಗಳೇ ಇಲ್ಲದಂತೆ ಬದುಕುತ್ತಾರೆ. ಅದಕ್ಕೆ ಕಾರಣಗಳೇನು?
ಪ್ರೀತಿಯೆಂಬ ಮಳೆಯಲ್ಲಿ ಮಿಂದೇಳುತ್ತಿದ್ದವರಿಗೆ ಬ್ರೇಕಪ್ ಎನ್ನುವ ನೋವು ನುಂಗಲಾರದ ತುತ್ತಿನಂತೆ ಭಾಸವಾಗುತ್ತಿರುತ್ತದೆ. ಜಗತ್ತೇ ಕೊನೆಯಾಯ್ತು ಎಂಬ ಭಾವನೆಯಲ್ಲಿ ಇರುತ್ತಾರೆ. ಬಾಳಪಯಣದ ಕೊನೆಯ ಹಂತದವರೆಗೂ ಜೊತೆಯಾಗಿ ಇರಬೇಕು ಎಂದುಕೊಂಡಿದ್ದ ಸಂಬಂಧವೊಂದು ನಡುವಿನಲ್ಲೇ ಕೊಂಡಿ ಕಳಚಿಕೊಂಡಾಗ ಇಂತಹ ನೋವು ಎದುರಾಗುವುದು ಸಹಜ. ಬ್ರೇಕಪ್ ಎಂದರೆ ಅದು ನೋವಲ್ಲ, ಕೋಪವಲ್ಲ, ಅದೊಂದು ರೀತಿಯಲ್ಲಿ ಖಾಲಿತನದ ಭಾವನೆ. ಭಾವನೆಗಳೆಲ್ಲ ಒಡೆದು ಚೂರಾದಾಗ ಕಾಡುವ ಒಂದು ನಿರ್ಲಿಪ್ತ ಭಾವವೇ ಈ ಬ್ರೇಕಪ್ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಬ್ರೇಕಪ್ ಎಂಬ ದೊಡ್ಡ ಬಿರುಗಾಳಿ ಬೀಸಿದ ಬಳಿಕ ಆ ಬಿರುಗಾಳಿಯ ಹೊಡೆತದಿಂದ ನಿಮ್ಮನ್ನು ನೀವು ಹೊರಗೆ ತಂದುಕೊಳ್ಳುವುದು ಯಾರಿಗಾದರೂ ಸಹ ಬಹಳ ಸಮಯ ತೆಗೆದುಕೊಳ್ಳುತ್ತದೆ. ಅನೇಕ ಸಂದರ್ಭಗಳಲ್ಲಿ ಈ ಬ್ರೇಕಪ್ ಎನ್ನುವುದು ಒಬ್ಬ ವ್ಯಕ್ತಿಯನ್ನು ಆಂತರಿಕವಾಗಿ ಸಂಪೂರ್ಣ ಧ್ವಂಸ ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುತ್ತದೆ. ಭಾವನೆಯೇ ಇಲ್ಲದ ಜೀವಿಯಂತೆ ಬದುಕುವುದು ಕಷ್ಟದ ಕೆಲಸ. ಕೆಲವರು ಇನ್ನೊಬ್ಬರ ಎದುರು ತಮ್ಮ ಭಾವನೆಗಳನ್ನು ಮರೆಮಾಚಲು ಇಷ್ಟಪಡುತ್ತಾರೆ. ಆದರೂ ಇದೊಂದು ದೀರ್ಘಾವಧಿಯ ನೋವು ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಬ್ರೇಕಪ್ ಎನ್ನುವುದು ಹೆಚ್ಚಿನ ಜನರಿಗೆ ಬಹಳ ಕಷ್ಟಕರವಾದಂತಹ ಜೀವನದ ಘಟ್ಟ. ನಾವು ಅತ್ಯಂತ ಪ್ರೀತಿಸುವವರ ಜೊತೆಯಲ್ಲಿ ಸಂಬಂಧ ಕಡಿದುಕೊಳ್ಳುವುದು ನಮ್ಮ ಭಾವನೆಗಳೆಲ್ಲ ಮರುಗಟ್ಟಿಬಿಡುವಂತೆ ಮಾಡಿಬಿಡಬಹುದು. ಹೀಗಾಗಿ ಬ್ರೇಕಪ್‌ನ ಬಳಿಕ ಈ ರೀತಿ ಏಕೆ ಆಗುತ್ತದೆ..? ಯಾಕೆ ನಾವು ಭಾವನೆಗಳೇ ಇಲ್ಲದ ಜೀವಿಯಂತೆ ಬದುಕಲು ಆರಂಭಿಸಿಬಿಡುತ್ತೇವೆ..? ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ಈ ರೀತಿ ನಿಮ್ಮ ಜೀವನದಲ್ಲಿ ಭಾವನೆಗಳೆಲ್ಲ ಸತ್ತು ಹೋಗಲು ಈ ಕಾರಣಗಳು ಇರಬಹುದು ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಬ್ರೇಕಪ್ ಬಳಿಕ ಭಾವನೆಗಳು ಮರುಗಟ್ಟುವುದೇಕೆ?
1. ಮಾನಸಿಕವಾಗಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು: ಬ್ರೇಕಪ್‌ನ ಬಳಿಕ ಉಂಟಾಗುವ ತೀವ್ರವಾದ ಭಾವನಾತ್ಮಕ ದುಃಖಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈ ರೀತಿ ಬದಲಾಗಬಹುದು ಎಂದು ಅಂದಾಜಿಸಬಹುದಾಗಿದೆ. ಭಾವನೆಗಳೇ ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತಿರುವಾಗ ಭಾವನೆಗಳೇ ಇಲ್ಲದವರಂತೆ ಬದುಕುವ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತೀರಿ.
2. ಭಾವನೆಗಳು ನಿಯಂತ್ರಣಕ್ಕೆ ಬಾರದಷ್ಟು ತುಂಬಿಕೊಳ್ಳುವುದು : ಅತಿಯಾಗಿ ಭಾವನಾತ್ಮಕ ಏರಿಳಿತಗಳಿಂದ ಬಳಲುವುದು ಕೂಡ ನಿಮ್ಮಲ್ಲಿ ಈ ರೀತಿಯ ಬದಲಾವಣೆ ಉಂಟಾಗಲು ಪ್ರೇರೇಪಿಸಬಹುದಾಗಿದೆ. ನೀವು ಭಾವನಾತ್ಮಕವಾಗಿ ತುಂಬಾ ದಣಿದಿರುತ್ತೀರಿ. ಹೀಗಾಗಿ ನೀವು ನಿಮ್ಮನ್ನು ನೀವು ಮರುಹೊಂದಿಸಿಕೊಳ್ಳಲು ಸಾಧ್ಯವಾಗುತ್ತಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಜೀವು ಭಾವನಾರಹಿತ ಜೀವಿಯಾಗಿ ಬದುಕುವ ಪ್ರಯತ್ನಕ್ಕೆ ಮುಂದಾಗುತ್ತೀರಿ.
3. ಮುಚ್ಚಿಟ್ಟುಕೊಳ್ಳುವುದು: ನಿಮ್ಮ ಮಾಜಿ ಸಂಬಂಧವನ್ನು ಕಳೆದುಕೊಂಡಿರುವುದರಿಂದ ಆಗಿರುವ ನಷ್ಟವನ್ನು ಸಮರ್ಪಕವಾಗಿ ದುಃಖಿಸುವಲ್ಲಿ ನೀವು ವಿಫಲರಾದಾಗ ಕೂಡ ಭಾವನೆಗಳು ಮರುಗಟ್ಟುತ್ತವೆ. ನೀವು ಇನ್ಯಾವ ಸಂಬಂಧವನ್ನೂ ಒಪ್ಪಿಕೊಳ್ಳಲು ನಿಮ್ಮ ಭಾವನೆಗಳು ಸ್ಪಂದಿಸುವುದಿಲ್ಲ. ನೀವು ನಿಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವ ಕಾರ್ಯಕ್ಕೆ ಮುಂದಾಗುತ್ತೀರಿ.
4. ತಿರಸ್ಕಾರದ ದೀರ್ಘಕಾಲದ ಪರಿಣಾಮ: ಸಂಬಂಧಗಳು ಕಡಿದು ಹೋಗುವುದು ನಿಮ್ಮ ಅಹಂಗೆ ಕೂಡ ಪೆಟ್ಟು ಕೊಡುತ್ತದೆ. ಇದು ನಿಮಗೆ ಆಳವಾಗಿ ನೋವುಂಟು ಮಾಡುತ್ತದೆ. ಒಂದು ರೀತಿ ನಾನು ಯಾರಿಗೂ ಬೇಡವಾದವನು ಎಂಬ ಭಾವನೆ ಪದೇ ಪದೇ ನಿಮ್ಮ ಅಹಂಗೆ ಪೆಟ್ಟು ಕೊಡುತ್ತಲೇ ಇರುತ್ತದೆ.
5. ಆಘಾತ: ಬ್ರೇಕಪ್ ತುಂಬಾ ಆಘಾತಕಾರಿಯಾಗಿದ್ದು ನಿಮ್ಮ ಮಾಜಿ ಸಂಗಾತಿಯಿಂದ ನೀವು ಭಾವನಾತ್ಮಕವಾಗಿ ನಿಂದಿಸಲ್ಪಟ್ಟಿದ್ದರೆ ನೀವು ಭಾವನಾತ್ಮಕವಾಗಿ ಆಘಾತಕ್ಕೆ ಒಳಗಾಗುತ್ತೀರಿ. ಇದು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತಾ ಹೋಗುತ್ತದೆ.
6. ವಾಸ್ತವದಲ್ಲಿ ಬದುಕಲಾರಿರಿ: ಭಾವನೆಗಳ ಮರುಗಟ್ಟುವಿಕೆಯಿಂದಾಗಿ ನಿಮಗೆ ಹಿಂದಿನದನ್ನು ಕೇಂದ್ರೀಕರಿಸಲು ಅಥವಾ ಭವಿಷ್ಯದ ಬಗ್ಗೆ ಚಿಂತಿಸಲು ಕಷ್ಟವಾಗಿಬಿಡುತ್ತದೆ. ಈ ನಷ್ಟದಿಂದ ನೀವು ಪ್ರಸ್ತುತ ಭಾವನೆಗಳಿಗೆ ಪ್ರತಿಕ್ರಿಯಿಸುವಲ್ಲಿಯೂ ವಿಫಲರಾಗಿಬಿಡುತ್ತೀರಿ.
7. ಭಾವನಾತ್ಮಕವಾಗಿ ನಿಮ್ಮನ್ನು ನೀವು ತಡೆಹಿಡಿಯುತ್ತೀರಿ: ಕೆಲವರು ತಮ್ಮ ಭಾವನೆಗಳನ್ನು ಇನ್ನೊಬ್ಬರ ಎದುರು ತೋರಿಸಿಕೊಳ್ಳದೇ ಇರಲು ಸಾಮಾನ್ಯವಾಗಿ ಅನುಸರಿಸುವ ಮಾರ್ಗವೆಂದರೆ ಅದನ್ನು ಬಚ್ಚಿಟ್ಟುಕೊಳ್ಳಲು ಯತ್ನಿಸುವುದು. ಭಾವನಾತ್ಮಕವಾಗಿ ಯಾರ ಎದುರು ನಾನು ದುರ್ಬಲಗೊಂಡಿದ್ದೇನೆ ಎಂದು ತೋರಿಸಿಕೊಳ್ಳಲು ಇಚ್ಛಿಸದೇ ನೀವು ಅವುಗಳನ್ನು ತಡೆಹಿಡಿಯಲು ಯತ್ನಿಸುತ್ತೀರಿ.
ನೀವು ಕೂಡ ಬ್ರೇಕಪ್‌ನ ಬಳಿಕ ಭಾವನೆಗಳು ಮರುಗಟ್ಟಿದಂತಹ ಅನುಭವವನ್ನು ಹೊಂದಿದ್ದರೆ ಮೊದಲನೆಯದಾಗಿ ತಾಳ್ಮೆಯನ್ನು ಬೆಳೆಸಿಕೊಳ್ಳಿ ಹಾಗೂ ನಿಮ್ಮನ್ನು ನೀವು ಕಾಳಜಿ ಮಾಡುವುದನ್ನು ಕಲಿತುಕೊಳ್ಳಿ. ಸಮಯ ಕಳೆದಂತೆ ಈ ಭಾವನೆಗಳ ಮರುಗಟ್ಟುವಿಕೆ ಕೂಡ ಕೊನೆಯಾಗುತ್ತಾ ಹೋಗುತ್ತದೆ. ಆದರೆ ಕೆಲವರಿಗೆ ಎಷ್ಟೇ ಸಮಯ ಕಳೆದರೂ ಇದು ವಾಸಿಯಾಗುತ್ತಿಲ್ಲ ಎಂದಾದರೆ ನೀವು ತಜ್ಞ ವೈದ್ಯರನ್ನು ಕಾಣುವುದು ಒಳಿತು. ದೇಹಕ್ಕೆ ಗಾಯವಾದಾಗ ಹೇಗೆ ಚಿಕಿತ್ಸೆಯ ಅಗತ್ಯವಿರುತ್ತದೆಯೋ ಅದೇ ರೀತಿ ಮನಸ್ಸಿಗೆ ಗಾಯವಾದಾಗ ಕೂಡ ಅದಕ್ಕೂ ಚಿಕಿತ್ಸೆಯ ಅನಿವಾರ್ಯತೆ ಇರುತ್ತದೆ ಎಂಬುದನ್ನು ನೀವು ಅರ್ಥ ಮಾಡಿಕೊಂಡಾಗ ಮಾತ್ರ ಬ್ರೇಕಪ್ ಎಂಬ ನೋವಿನಿಂದ ಹೊರಬರಲು ಸಾಧ್ಯವಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ವಿಭಾಗ