ಬೆಳಗ್ಗೆ ಬೇಗ ಏಳುವುದಕ್ಕಿಂತ ತಡವಾಗಿ ಏಳುವುದು ಉತ್ತಮವೇ; ಭಾರತೀಯರ ಅಚ್ಚರಿಗೊಳಿಸಿದ ಸಂಶೋಧನೆ, ವೈದ್ಯರು ಹೀಗಂದ್ರು
ಬೆಳಗ್ಗೆ ಬೇಗ ಏಳುವವರಲ್ಲಿ ಅರಿವಿನ ಕಾರ್ಯ ಉತ್ತಮವಾಗಿರುತ್ತದೆ ಎಂದು ಪರಿಗಣಿಸಲಾಗುತ್ತದೆ. ಆದರೆ ತಡವಾಗಿ ಏಳುವವರು ಬುದ್ಧಿವಂತಿಕೆ, ತಾರ್ಕಿಕ ಮತ್ತು ಜ್ಞಾಪಕಶಕ್ತಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ ಎಂದು ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆ ಹೇಳಿದೆ.
ಪ್ರತಿನಿತ್ಯ ಸರಿಯಾಗಿ ನಿದ್ರೆ ಮಾಡುವುದು ದೇಹಕ್ಕೆ ಒಂದೊಳ್ಳೆ ಔಷಧಿ. ಇದನ್ನು ಆರೋಗ್ಯ ತಜ್ಞರು ಕೂಡಾ ಒಪ್ಪಿಕೊಳ್ಳುತ್ತಾರೆ. ರಾತ್ರಿ ಸರಿಯಾಗಿ ನಿದ್ದೆ ಮಾಡಿದರೆ, ಮರುದಿನ ಮನಸ್ಸು ಮತ್ತು ದೇಹ ಲವಲವಿಕೆಯಿಂದ ಕೂಡಿರುತ್ತದೆ. ದಿನದ ಕಾರ್ಯಕ್ಷಮತೆ ಸರಿಯಾಗಿರುತ್ತದೆ. ಮಾಡುವ ಕೆಲಸಗಳು ಖುಷಿಯಿಂದ ಸಾಗುತ್ತವೆ. ಸಾಮಾನ್ಯವಾಗಿ ಭಾರತದಲ್ಲಿ ಅನಾದಿಕಾಲದಿಂದಲೂ ಬೆಳಗ್ಗೆ ಬೇಗ ಏಳುವ ಅಭ್ಯಾಸ. ಪೋಷಕರು ತಮ್ಮ ಮಕ್ಕಳಿಗೆ ರಾತ್ರಿ ಬೇಗನೆ ಮಲಗುವ ಮತ್ತು ಬೆಳಗ್ಗೆ ಬೇಗನೆ ಏಳುವ ಅಭ್ಯಾಸವನ್ನು ಬೆಳೆಸುತ್ತಾರೆ. ಆದರೆ ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ಹೊಸ ಸಂಶೋಧನೆಯು, ಬೆಳಗಿನ ಜಾವ ಬೇಗನೆ ಏಳುವುದಕ್ಕಿಂತ ತಡವಾಗಿ ಏಳುವುದು ಒಳ್ಳೆಯದು ಎಂದು ಹೇಳಿದೆ.
ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬೆಳಗ್ಗೆ ಬೇಗ ಏಳುವವರಲ್ಲಿ ಅರಿವಿನ ಕಾರ್ಯ ಉತ್ತಮವಾಗಿರುತ್ತದೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ಸಂಶೋಧನೆ ಹೇಳಿದ್ದು ಬೇರೆ. 26,000 ಜನರ ಮೇಲೆ ನಡೆಸಿದ ಸಂಶೋಧನೆ ಪ್ರಕಾರ, “ತಡವಾಗಿ ಏಳುವವರು ಬುದ್ಧಿವಂತಿಕೆ, ತಾರ್ಕಿಕ ಮತ್ತು ಜ್ಞಾಪಕಶಕ್ತಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ” ಎಂದು ಸಂಶೋಧನೆ ಹೇಳಿದೆ.
ಈ ಕುರಿತು ಅಪೋಲೋ ಆಸ್ಪತ್ರೆಯ ನರವಿಜ್ಞಾನಿ ಡಾ ಸುಧೀರ್ ಕುಮಾರ್ ಅವರು ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿದ್ದಾರೆ. ಮನುಷ್ಯರು ಮಲಗುವ ಮಾದರಿಯನ್ನು ನಿರ್ಧರಿಸುವ ಕಾಲಮಾಪನಗಳನ್ನು ವಿವರಿಸಿದ ಅವರು, ಕ್ರೋನೋಟೈಪ್‌ಗಳನ್ನು ಆಯಾ ವ್ಯಕ್ತಿಗೆ ಅನುಸಾರವಾಗಿ ಜೆನಿಟಿಕಲ್ ಆಗಿ ನಿರ್ಧರಿಸಲಾಗುತ್ತದೆ. ಹೀಗಾಗಿ ಅವುಗಳನ್ನು ಬದಲಾಯಿಸಲಾಗುವುದಿಲ್ಲ. ರಾತ್ರಿ ತಡವಾಗಿ ಮಲಗುವವರ ಕ್ರೊನೊಟೈಪ್ ತಡವಾಗಿ ಮಲಗಲು ಮತ್ತು ತಡವಾಗಿ ಏಳಲು ಆದ್ಯತೆ ನೀಡುತ್ತದೆ. ಇದೇ ವೇಳೆ ಬೇಗ ಏಳುವವರ ಕ್ರೊನೊಟೈಪ್ ಬೇಗ ಮಲಗಲು ಮತ್ತು ಬೇಗನೆ ಎದ್ದೇಳುವಂತೆ ಮಾಡುತ್ತದೆ ಎಂದು ವಿವರಿಸಿದ್ದಾರೆ.
ಬೇಗ ಎದ್ದರೂ ಕಾರ್ಯಕ್ಷಮತೆ ವೃದ್ಧಿಸದರಿಲು ಕಾರಣವೇನು?
ಆಧುನಿಕ ಯುಗದಲ್ಲಿ, ವೃತ್ತಿಪರ ಬದ್ಧತೆಗಳು ಅಥವಾ ಜೀವನಶೈಲಿಯಿಂದಾಗಿ ಜನರು ನಿದ್ರೆಯ ವಿಷಯದಲ್ಲಿ ವಿಭಿನ್ನ ವೇಳಾಪಟ್ಟಿ ಹೊಂದಿರುತ್ತಾರೆ. ಮೆಲಟೋನಿನ್ ಉತ್ಪಾದಿಸಲು ಸಹಾಯ ಮಾಡುವ ದೇಹದ ನೈಸರ್ಗಿಕ ಸಿರ್ಕಾಡಿಯನ್ ಲಯಕ್ಕೆ ಅನುಗುಣವಾಗಿ, 12 ಗಂಟೆಗಿಂತ ಮೊದಲು ಮಲಗುವುದು ಒಳ್ಳೆಯದು. ಹಲವು ಸಂದರ್ಭಗಳಲ್ಲಿ, ರಾತ್ರಿ ತಡವಾಗಿ ಮಲಗುವವರು ತಮ್ಮ ಆನುವಂಶಿಕ ಪ್ರವೃತ್ತಿಯನ್ನು ಲೆಕ್ಕಿಸದೆ ಬೇಗನೆ ಎಚ್ಚರಗೊಳ್ಳುವವರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಲಾಗಿದೆ.
ಜನರು ತಮ್ಮ ಕ್ರೋನೋಟೈಪ್ ವಿರುದ್ಧವಾಗಿ ನಡೆದುಕೊಳ್ಳಲು ಪ್ರಯತ್ನಿಸಿದಾಗ, ಅವರು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. “ಉತ್ತಮ ಕಾರ್ಯಕ್ಷಮತೆ ಪಡೆಯಲು ನಿಮ್ಮ ಕಾಲಮಾಪನ ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಮಲಗುವ ಅಭ್ಯಾಸ ರೂಢಿಸಿಕೊಳ್ಳುವುದು ಮುಖ್ಯ” ಎಂದು ಡಾ ಕುಮಾರ್ ಹೇಳಿದ್ದಾರೆ.
ಪ್ರತಿನಿತ್ಯ ಎಷ್ಟು ಸಮಯ ಮಲಗಬೇಕು?
ವಯಸ್ಕರಿಗೆ ಪ್ರತಿನಿತ್ಯ ಕನಿಷ್ಠ ಏಳರಿಂದ ಒಂಬತ್ತು ಗಂಟೆಗಳ ನಿದ್ರೆ ಮಾಡುವುದನ್ನು ಶಿಫಾರಸು ಮಾಡಲಾಗುತ್ತದೆ. ಏಳು ಗಂಟೆಗಳಿಗಿಂತ ಕಡಿಮೆ ಅಥವಾ ಒಂಬತ್ತು ಗಂಟೆಗಳಿಗಿಂತ ಹೆಚ್ಚು ಮಲಗಿದರೆ ಸ್ಥೂಲಕಾಯತೆ, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಒಳಗಾಗುವ ಅಪಾಯ ಬರಬಹುದು. ಅಗತ್ಯಕ್ಕಿಂತ ಕಡಿಮೆ ನಿದ್ರೆ ಮಾಡಿದರೂ ಆರೋಗ್ಯಕ್ಕೆ ಅಪಾಯವಿದೆ ಎಂದು ವೈದ್ಯರು ಹೇಳುತ್ತಾರೆ.