ಎಷ್ಟು ದಿನಕ್ಕೊಮ್ಮೆ ಬೆಡ್‌ಶೀಟ್ ವಾಶ್ ಮಾಡಬೇಕು? ಆರೋಗ್ಯ ಸುಧಾರಿಸಿ, ನಿದ್ದೆ ಚೆನ್ನಾಗಿ ಬರ್ಬೇಕು ಅಂದ್ರೆ ಈ ವಿಚಾರ ನಿಮಗೆ ತಿಳಿದಿರಬೇಕು
ಕನ್ನಡ ಸುದ್ದಿ  /  ಜೀವನಶೈಲಿ  /  ಎಷ್ಟು ದಿನಕ್ಕೊಮ್ಮೆ ಬೆಡ್‌ಶೀಟ್ ವಾಶ್ ಮಾಡಬೇಕು? ಆರೋಗ್ಯ ಸುಧಾರಿಸಿ, ನಿದ್ದೆ ಚೆನ್ನಾಗಿ ಬರ್ಬೇಕು ಅಂದ್ರೆ ಈ ವಿಚಾರ ನಿಮಗೆ ತಿಳಿದಿರಬೇಕು

ಎಷ್ಟು ದಿನಕ್ಕೊಮ್ಮೆ ಬೆಡ್‌ಶೀಟ್ ವಾಶ್ ಮಾಡಬೇಕು? ಆರೋಗ್ಯ ಸುಧಾರಿಸಿ, ನಿದ್ದೆ ಚೆನ್ನಾಗಿ ಬರ್ಬೇಕು ಅಂದ್ರೆ ಈ ವಿಚಾರ ನಿಮಗೆ ತಿಳಿದಿರಬೇಕು

ಪ್ರತಿದಿನ ನಾವು ತಪ್ಪದೇ ಬಳಸುವ ವಸ್ತುಗಳಲ್ಲಿ ಬೆಡ್‌ಶೀಟ್ ಕೂಡ ಒಂದು. ಬೆಚ್ಚನೆಯ ನಿದ್ದೆಗೆ ಸಂಗಾತಿಯಾಗುವುದು ಬೆಡ್‌ಶೀಟ್‌ಗಳು. ಆದರೆ ಈ ಬೆಡ್‌ಶೀಟ್‌ ಅನ್ನು ಕೆಲವರು ಆಗಾಗ ವಾಶ್ ಮಾಡುವುದಿಲ್ಲ. ಹೀಗೆ ಕೆಲವು ದಿನಗಳ ಕಾಲ ತೊಳೆಯದೇ ಬಳಸುವುದರಿಂದ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ. ಹಾಗಾದರೆ ಎಷ್ಟು ದಿನಕ್ಕೊಮ್ಮೆ ಬೆಡ್‌ಶೀಟ್ ವಾಶ್ ಮಾಡಬೇಕು ನೋಡಿ.

ಎಷ್ಟು ದಿನಕ್ಕೊಮ್ಮೆ ಬೆಡ್‌ಶೀಟ್ ವಾಶ್ ಮಾಡಬೇಕು?
ಎಷ್ಟು ದಿನಕ್ಕೊಮ್ಮೆ ಬೆಡ್‌ಶೀಟ್ ವಾಶ್ ಮಾಡಬೇಕು? (PC: Canva )

ದಿನವಿಡಿ ಕೆಲಸ ಮಾಡಿ, ಹೊರಗಡೆ ಸುತ್ತಾಡಿ ದಣಿದು ಬರುವ ನಾವು ಹಾಸಿಗೆ ಕಂಡಾಕ್ಷಣ ಒರಗಿ ಬಿಡುತ್ತೇವೆ. ಹಾಸಿಗೆಯ ಜೊತೆ ಮಲಗುವ ಸಂದರ್ಭದಲ್ಲಿ ನಮಗೆ ಜೊತೆಯಾಗುವುದು ಬೆಡ್‌ಶೀಟ್‌ಗಳು. ಬೆಚ್ಚನೆಯ ಹೊದಿಕೆ ಹೊದ್ದು ಮಲಗಿದಾಗ ಬೇಡವೆಂದರೂ ಕಣ್ಣಿಗೆ ನಿದ್ದೆ ಆವರಿಸುತ್ತದೆ. ಅದರಲ್ಲೂ ಚಳಿಗಾಲದಲ್ಲಂತೂ ಬೆಡ್‌ಶೀಟ್‌ಗಳು ಬೇಕೇ ಬೇಕು. ಅದಿಲ್ಲ ಎಂದರೆ ನಿದ್ದೆ ಬರಲು ಸಾಧ್ಯವಿಲ್ಲ.

ಆದರೆ ಇತ್ತೀಚಿನ ಒತ್ತಡದ ಜೀವನಶೈಲಿಯ ನಡುವೆ ಜನರು ತಮ್ಮ ಬೆಡ್‌ಶೀಟ್ ಹಾಗೂ ಬ್ಲಾಂಕೆಟ್‌ಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಆಗಾಗ ಬೆಡ್‌ಶೀಟ್ ಬದಲಿಸುವುದು, ವಾಶ್ ಮಾಡುವುದು ಮಾಡುತ್ತಿಲ್ಲ. ಇದರಿಂದ ಸಮಸ್ಯೆ ತಪ್ಪಿದ್ದಲ್ಲ. ಹಾಗಾದರೆ ಎಷ್ಟು ದಿನಕ್ಕೊಮ್ಮೆ ಬೆಡ್‌ಶೀಟ್ ವಾಶ್ ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.

ತಜ್ಞರ ಪ್ರಕಾರ ಒಂದರಿಂದ ಎರಡು ವಾರಗಳಿಗೊಮ್ಮೆ ತಪ್ಪದೇ ಬೆಡ್‌ಶೀಟ್ ತೊಳೆಯಬೇಕು. ಅದರಲ್ಲೂ ಪ್ರಾಣಿಗಳನ್ನು ಸಾಕುವವರು, ಅಲರ್ಜಿ ಇರುವವರು, ಹೆಚ್ಚು ಬೆವರುವವರು ವಾರಕೊಮ್ಮೆ ಬೆಡ್‌ಶೀಟ್ ತೊಳೆಯಬೇಕು.

ಆಗಾಗ ಬೆಡ್‌ಶೀಟ್ ವಾಶ್ ಮಾಡುವುದರಿಂದ ನೈಮರ್ಲ್ಯ ಕಾಪಾಡಿಕೊಳ್ಳಬಹುದು. ಇದರಿಂದ ಮಲಗುವ ಕೋಣೆಯು ತಾಜಾವಾಗಿರುತ್ತದೆ. ಬಹಳ ದಿನಗಳ ಕಾಲ ಬೆಡ್‌ಶೀಟ್ ಒಗೆಯದೇ ಬಳಸುವುದರಿಂದ ಕೊಳೆ, ಜಿಡ್ಡಿನಾಂಶ, ಧೂಳು ಹಾಗೂ ಸೂಕ್ಷ್ಮಜೀವಿಗಳು ಬೆಡ್‌ಶೀಟ್‌ನಲ್ಲಿ ರಾಜ್ಯಭಾರ ಮಾಡುತ್ತವೆ.

ಎಷ್ಟು ದಿನಕ್ಕೊಮ್ಮೆ ಬೆಡ್‌ಶೀಟ್ ತೊಳೆಯಬೇಕು?

ವಾರಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಬೆಡ್‌ಶೀಟ್ ತೊಳೆಯುವುದರಿಂದ ಬೆಡ್‌ಶೀಟ್ ಮೇಲಿರುವ ಧೂಳು, ಕೊಳೆ, ಬ್ಯಾಕ್ಟೀರಿಯಾ, ಅಲರ್ಜಿ ಉಂಟು ಮಾಡುವ ಸೂಕ್ಷ್ಮಜೀವಿಗಳು ಸಂಪೂರ್ಣವಾಗಿ ಸ್ವಚ್ಛಗೊಳುತ್ತವೆ. ಇಲ್ಲದೇ ಹೋದರೆ ಚರ್ಮದ ಕಿರಿಕಿರಿ, ಮೊಡವೆ, ಅಲರ್ಜಿಗಳು ಮತ್ತು ಉಸಿರಾಟದ ಸಮಸ್ಯೆಗಳು ಉಂಟಾಗಬಹುದು.

ತಜ್ಞರ ಪ್ರಕಾರ ಆಗಾಗ ಬೆಡ್‌ಶೀಟ್ ಒಗೆಯುವುದು ನಿದ್ದೆಯ ಗುಣಮಟ್ಟ ಕಾಪಾಡಿಕೊಳ್ಳಲು ಬಹಳ ಮುಖ್ಯವಾಗಿದೆ. ಇದರಿಂದ ಯಾವುದೇ ಅಡಚಣೆಯಿಲ್ಲದೇ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತದೆ.

ಬೆಡ್‌ಶೀಟ್ ವಾಶ್ ಮಾಡುವ ಸರಿಯಾದ ಕ್ರಮ

ಆಗಾಗ ಬೆಡ್‌ಶೀಟ್ ತೊಳೆಯುವುದು ಎಷ್ಟು ಮುಖ್ಯವೋ ಸರಿಯಾದ ಕ್ರಮದಲ್ಲಿ ವಾಶ್ ಮಾಡುವುದು ಕೂಡ ಅಷ್ಟೇ ಮುಖ್ಯ ಎಂಬುದು ತಜ್ಞರ ಸಲಹೆ. ಸಾಮಾನ್ಯವಾಗಿ ಜನರನ್ನು ಬೆಡ್‌ಶೀಟ್‌ ಅನ್ನು ತಣ್ಣೀರಿನಲ್ಲಿ ತೊಳೆಯುತ್ತಾರೆ. ಆದರೆ ಇದರಿಂದ ಪರಿಣಾಮಕಾರಿಯಾಗಿ ಸೂಕ್ಷ್ಮಜೀವಿಗಳು ಹೊರ ಹೋಗುವಂತೆ ಮಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ವಾಷಿಂಗ್ ಮೆಷಿನ್ ಒಳಗೆ ಬೆಡ್‌ಶೀಟ್ ಅನ್ನು ಕಿಕ್ಕಿರಿದು ತುಂಬುತ್ತಾರೆ. ಈ ರೀತಿ ಕೂಡ ಮಾಡಬಾರದು. ಇದರಿಂದ ಬೆಡ್‌ಶೀಟ್‌ನಲ್ಲಿರುವ ಕೊಳೆ ಹೋಗುವುದಿಲ್ಲ. ಇದು ಸರಿಯಾಗಿ ವಾಶ್ ಆಗಿರುವುದಿಲ್ಲ. ವಾಷಿಂಗ್ ಮಷಿನ್‌ಗೆ ಬೆಡ್‌ಶೀಟ್ ಹಾಕುವಾಗ ನಿಮ್ಮ ವಾಷಿಂಗ್ ಮಷಿನ್‌ ಎಷ್ಟು ಕೆಜಿ ಎಂಬುದನ್ನು ಪರಿಗಣಿಸಿ ಒಂದು ಅಥವಾ ಎರಡು ಬೆಡ್‌ಶೀಟ್ ಮಾತ್ರ ಹಾಕಬೇಕು. ಬೆಡ್‌ಶೀಟ್‌ನಲ್ಲಿರುವ ಕ್ರಿಮಿಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಬಿಸಿ ನೀರಿನಲ್ಲಿ ನೆನೆಸುವುದು ಉತ್ತಮ ಎನ್ನಲಾಗುತ್ತದೆ. ಆದರೆ ಕೆಲವು ಬಟ್ಟೆಗಳು ಬಿಸಿನೀರಿನಲ್ಲಿ ಅದ್ದಿದರೆ ಹಾಳಾಗುತ್ತವೆ. ಹಾಗಾಗಿ ಈ ವಿಚಾರದಲ್ಲಿ ಎಡವದಿರಿ.

ಬೆಡ್‌ಶೀಟ್ ಕಾಳಜಿಗೆ ಟಿಪ್ಸ್

* ಬಿಸಿ ನೀರು ಬಳಕೆ: ಪ್ರತಿ ಬಾರಿ ವಾಶ್ ಮಾಡುವಾಗಲು ಬಿಸಿನೀರು ಬಳಸದೇ ಇದ್ದರೂ ಆಗೊಮ್ಮೆ ಈಗೊಮ್ಮೆ ಬೆಡ್‌ಶೀಟ್ ವಾಶ್ ಮಾಡುವಾಗ ಬಿಸಿನೀರು ಬಳಸಿ. ಇದರಿಂದ ಸೂಕ್ಷ್ಮಜೀವಿಗಳನ್ನು ಸುಲಭವಾಗಿ ಕೊಲ್ಲಬಹುದು.

* ಡಿರ್ಟಜೆಂಟ್ ಹಾಗೂ ಫ್ಯಾಬ್ರಿಕ್ ಸಾಫ್ಟನರ್ ಅನ್ನು ಹೆಚ್ಚು ಬಳಸಬೇಡಿ. ಇದರ ಬಳಕೆಯ ಪ್ರಮಾಣ ಮಿತಿಯಾಗಿರಲಿ.

* ಶೀಲಿಂಧ್ರ ಬೆಳವಣಿಗೆಯನ್ನು ತಪ್ಪಿಸಲು ಒಗೆದ ನಂತರ ಸರಿಯಾಗಿ ಒಣಗಿಸುವುದು ಕೂಡ ಬಹಳ ಮುಖ್ಯ.

* ಒಗೆಯುವ ಸಂದರ್ಭ ಬೆಡ್‌ಶೀಟ್ ಲೇಬಲ್ ಮೇಲೆ ಅಂಟಿಸಿರುವ ನಿಯಮಗಳನ್ನ ಸರಿಯಾಗಿ ಓದಿಕೊಳ್ಳಿ

ಆರಂಭದಲ್ಲಿ ಪದೇ ಪದೇ ಬೆಡ್‌ಶೀಟ್ ತೊಳೆಯುವುದು ನಿಮಗೆ ಕಿರಿಕಿರಿ ಅನ್ನಿಸಬಹುದು. ಆದರೆ ಇದರ ಪರಿಣಾಮಗಳು ನಿಮಗೆ ಅನುಭವಕ್ಕೆ ಬಂದ ಮೇಲೆ ಖಂಡಿತ ಪದೇ ಪದೇ ಬೆಡ್‌ಶೀಟ್ ವಾಶ್ ಮಾಡುತ್ತೀರಿ. ಅಲರ್ಜಿ, ಉಸಿರಾಟದ ಸಮಸ್ಯೆ ಇರುವವರಿಗೆ ಇದು ಅತಿ ಅವಶ್ಯ ಮಾಹಿತಿ.

Whats_app_banner