ಆಗಸ್ಟ್‌ನಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಮಳೆ, ಬಿತ್ತನೆಗೆ ಹಿನ್ನಡೆ; ಕೋಲಾರ ಸೇರಿ ಕರ್ನಾಟಕದ ರೈತರು ಕಂಗಾಲು
ಕೋಲಾರ ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದೆ. ಇದರಿಂದ ಬಿತ್ತನೆಯೂ ಕುಂಠಿತವಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ರಾಗಿ ಪೈರು ಒಣಗುತ್ತಿದೆ ಎಂದು ಅನ್ನದಾತ ನೋವು ತೋಡಿಕೊಂಡಿದ್ದಾನೆ.
ಕೋಲಾರ: ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ವರುಣ ಅಬ್ಬರಿಸುತ್ತಿದ್ದು, ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿ ಕುಂಭದ್ರೋಣ ಮಳೆಯಿಂದ ಭೂಕುಸಿತ, ಮನೆ-ಮಠಗಳಿಗೆ ಹಾನಿ ಸೇರಿದಂತೆ ವಿವಿಧ ಪ್ರಕಣಗಳಲ್ಲಿ 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಆಗಸ್ಟ್ 13 ರಿಂದ ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮುಂದಿನ ನಾಲ್ಕೈದು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆೆ ಇದೆ. ಆದರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಚಿತ್ರಣ ಬೇರೆಯೇ ಕಥೆಯನ್ನು ಹೇಳುತ್ತಿದೆ.
ಉತ್ತರದ ಕೆಲವು ರಾಜ್ಯಗಳಲ್ಲಿ ಅತಿವೃಷ್ಟಿಯಾಗಿದ್ದರೆ, ಕರ್ನಾಟಕದ ಬಯಲು ಸೀಮೆ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಮಳೆಯ ಕೊರತೆ ಹೆಚ್ಚಾಗುತ್ತಲೇ ಇರುವುದು ಅನ್ನದಾತರನ್ನು ಕಂಗಾಲಾಗಿಸಿದೆ. ವಿಶೇಷವಾಗಿ ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ಕೋಲಾರದಲ್ಲಿ ಮಳೆ ಕೊರತೆ ರೈತರನ್ನು ಚಿಂತೆಗೆ ದೂಡಿದೆ.
ಜಿಲ್ಲೆಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವೇಳೆಗಾಗಲೇ ಶೇಕಡಾ 50 ರಷ್ಟು ಬಿತ್ತನೆ ಮುಗಿಯಬೇಕಿತ್ತು. ಆದರೆ ಆಗಸ್ಟ್ 16 ರವರೆಗೆ ಕೇವಲ 15 ರಷ್ಟು ಬಿತ್ತನೆಯಾಗಿರುವುದು ಆತಂಕಕಾರಿ ಬೆಳವಣಿಯಾಗಿದೆ. ಮಳೆಯಾಶ್ರಿತ ಬೆಳೆಗಳಾದ ನೆಲಗಡಲೆ, ತೊಗರಿ, ಹಲಸಂದಿ, ರಾಗಿ, ಭತ್ತ, ಮುಸಿಕಿನ ಜೋಳ, ಮೇವಿನ ಜೋಳ, ಸಿರಿಧಾನ್ಯಗಳು ಹಾಗೂ ಅವರೆ ಬಿತ್ತನೆ ನಿರ್ದಿಷ್ಟ ಪ್ರಮಾಣದಲ್ಲಿ ಆಗಿಲ್ಲ.
‘ಬಾರದ ಮಳೆ, ಹೊಲದಲ್ಲಿ ಬಾಡಿದ ರಾಗಿ ಪೈರು’
ಕೆಲವರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ಮಳೆ ಬಾರದ ಕಾರಣ ಇಂತಹ ಹೊಲಗಳಲ್ಲಿ ರಾಗಿ ಪೈರು ಬಾಡಿಕೊಂಡಿವೆ. ಒಂದು ವೇಳೆ ಮಳೆಯಾದರು ಗುಂಟುವೆಗೆ ಸಿಗೋದಿಲ್ಲ ಅನ್ನೋದು ಅನ್ನದಾತರ ಅಳಲು. ಬಹುತೇಕರು ಹೊಲ ಉಳುಮೆ, ಬಿತ್ತನೆ ಬೀಜಗಳ ಸಂಗ್ರಹ ಸೇರಿದಂತೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡು ಬಿತ್ತನೆ ಮಾಡಲು ವರುಣನ ಕೃಪೆಗಾಗಿ ಕಾದು ಕುಳಿತ್ತಿದ್ದಾರೆ.
‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ದ ಪ್ರತಿನಿಧಿ ಜೊತೆ ಮಾತನಾಡಿದ ಮಾಲೂರು ತಾಲೂಕು ಮಿರುಪನಹಳ್ಳಿಯ ರೈತ ವಿ. ಮಂಜುನಾಥ್, ಕೋವಿಡ್‌ನಿಂದಾಗಿ ಕಂಪನಿಗಳನ್ನು ಬಂದ್ ಮಾಡಿದ್ದ ಫಲವೋ ಏನೋ ಗೊತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿಯೇ ಬೇರೆ ರೀತಿಯಲ್ಲಿ ಇದೆ. ಬಿತ್ತನೆ ಮಾಡಿ 20 ದಿನಗಳಾಗಿವೆ, ಇದುವರೆಗೆ ಒಂದೇ ಒಂದು ಹನಿ ಮಳೆ ಬಿದ್ದಿಲ್ಲ. ಇದೇ ವಾತಾವರಣ ಮುಂದುವರಿದರೆ ರಾಗಿ ಪೈರು ಒಣಗಿ ಹೋಗುತ್ತೆ ಅಂತ ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷ ರಾಗಿ ಬಿತ್ತನೆಗೂ ಮುನ್ನವೇ ಹಲವರು ಮಳೆ ನೀರಿಗೆ ಮೂಲಂಗಿ ಬೆಳೆದು ಹಣ ಮಾಡಿಕೊಂಡಿದ್ದರು. ಈ ಬಾರಿಯೂ ಒಳ್ಳೆಯ ಮಳೆಯಾಗುತ್ತೆ ಅಂತ ಹೊಲದಲ್ಲಿ ಮೂಲಂಗಿ ಬಿತ್ತನೆ ಮಾಡಿದ್ದೆ. ಆದರೆ ಮಳೆ ಕೈಕೊಟ್ಟಿತು, ಮತ್ತೊಂದೆಡೆ ರೋಗ ಬಾಧೆಯಿಂದ ಮೂಲಂಗಿ ಬೆಳೆ ಆಗಿಲ್ಲ. ಪರಿಣಾಮವಾಗಿ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶ ಮಾಡಿ ರಾಗಿ ಬಿತ್ತನೆ ಮಾಡಿದ್ದೇನೆ. ಸದ್ಯಕ್ಕೆ ಬೆಳೆ ಚೆನ್ನಾಗಿದೆ. ಆದರೆ ಎರಡ್ಮೂರು ದಿನಗಳಲ್ಲಿ ಮಳೆ ಬಾರದಿದ್ದರೆ ರಾಗಿ ಬೆಳೆ ಉಳಿಸಿಕೊಳ್ಳೋದು ಕಷ್ಟವಾಗುತ್ತೆ ಎಂದು ಬೇಸರದಿಂದಲೇ ನುಡಿದಿದ್ದಾರೆ.
‘ಪೈರು ಮೊಣಕಾಲುದ್ದ ಬರಬೇಕಿತ್ತು’
ಈ ವೇಳೆಗಾಗಲೇ ಸಾಮಾನ್ಯ ಮಳೆಯಾಗಿದ್ದರೂ ರಾಗಿ ಬೆಳೆಗೆ ಗುಂಟುವೆ ಹಾಕಿ, ಕಳೆಯ ಕೆಲಸವನ್ನೂ ಮುಗಿಸಬೇಕಾಗಿತ್ತು. ಪೈರು ಮೊಣಕಾಲುದ್ದ ಬರಬೇಕಿತ್ತು. ಆದರೆ ಮಳೆ ಹಿಂದಕ್ಕೆ ಹೋಗಿರುವುದರಿಂದ ಪೈರು ಒಣಗುತ್ತಿದೆ ಎಂದು ಮಿರುಪನಹಳ್ಳಿಯ ಮತ್ತೊಬ್ಬ ರೈತ ರಾಜಣ್ಣ ತಿಳಿಸಿದ್ದಾರೆ.
ಕೃಷಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ರೂಪಾದೇವಿ ಮಾತನಾಡಿ, ನೆಲಗಡೆಲೆ 10 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ ಕೇವಲ 2,905 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. 68,400 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ 9,900 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಸೆಪ್ಟೆಂಬರ್ 15ರವರೆಗೂ ಬಿತ್ತನೆಗೆ ಅವಕಾಶ ಇರುವುದರಿಂದ ಮುಂದಿನ ದಿನಗಳಲ್ಲಿ ಮಳೆ ಬಂದರೆ ರಾಗಿ ಬಿತ್ತನೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಮಳೆ ಬಾರದಿದ್ದರೆ ಬಿತ್ತನೆ ಪ್ರಮಾಣ ಕುಂಠಿತವಾಗುತ್ತದೆ ಎಂದಿದ್ದಾರೆ.
ವರ್ಷದ ಆರಂಭದಲ್ಲಿ 362 ಮಿಲಿ ಮೀಟರ್ ಮಳೆಯಾಗಿತ್ತು. ಆದರೆ ಬಿತ್ತನೆ ಸಮಯದಲ್ಲೇ ಮಳೆ ಕೈಕೊಟ್ಟಿದೆ. ಜನವರಿಯಿಂದ ಆಗಸ್ಟ್ ವರೆಗೆ ಕೋಲಾರ ಜಿಲ್ಲೆಯಲ್ಲಿ 288 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ ಸಾಮಾನ್ಯಕ್ಕಿಂತ ಅತಿ ಕಡಿಮೆ ಮಳೆಯಾಗಿದೆ. ಜುಲೈನಲ್ಲಿ ಶೇಕಡಾ 26 ರಷ್ಟು ಮಳೆ ಕೊರತೆಯಾಗಿದೆ. ಆಗಸ್ಟ್‌ನಲ್ಲಿ ಆಗಸ್ಟ್ 16ರವರೆಗೆ ಕೇವಲ ಮೂರ್ನಾಲ್ಕು ಮಿಲಿ ಮೀಟರ್ ಮಾತ್ರ ಮಳೆಯಾಗಿದೆ. ಇದರಿಂದ ಬಿನ್ನತ್ತನೆಗೆ ಭಾರಿ ಹಿನ್ನಡೆಯಾಗಿದೆ ಎಂಬುದು ಜಿಲ್ಲೆಯ ಅಧಿಕಾರಿಗಳ ಮಾತು.
ನೀವೂ ಸಲಹೆ ಕೊಡಿ
ಹಳ್ಳಿ ಬದುಕು ವಿಶೇಷ ಅಂಕಣದಲ್ಲಿ ಮುಂದಿನ ಬುಧವಾರ ಮತ್ತೊಂದು ಹೊಸ ವಿಷಯದೊಂದಿಗೆ ಸಿಗೋಣ. ನಿಮ್ಮ ಹಳ್ಳಿಯಲ್ಲಿ ನೀವು ಗಮನಿಸಿದ ಅಪರೂಪದ ವಿದ್ಯಮಾನ, ವಿಶೇಷ ಎನಿಸುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಕರ್ನಾಟಕದ ಗ್ರಾಮೀಣ ಬದುಕು ಪರಿಚಯಿಸುವ ಈ ಅಂಕಣ ಬೆಳೆಸಲು ನೀವೂ ನೆರವಾಗಬಹುದು. ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳಿಗೂ ಸ್ವಾಗತ. ಇಮೇಲ್: raghavendra.y@htdigital.in, ht.kannada@htdigital.in
ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ