ಕನ್ನಡ ಸುದ್ದಿ  /  ಜೀವನಶೈಲಿ  /  ಹಳದಿ ಲೋಹದ ಸುತ್ತಮುತ್ತ: ಚಿನ್ನದ ಬಗ್ಗೆ ನೀವು ತಿಳಿದಿರಬೇಕಾದ ವೈಜ್ಞಾನಿಕ ಸಂಗತಿಗಳಿವು -ಜ್ಞಾನ ವಿಜ್ಞಾನ ಅಂಕಣ

ಹಳದಿ ಲೋಹದ ಸುತ್ತಮುತ್ತ: ಚಿನ್ನದ ಬಗ್ಗೆ ನೀವು ತಿಳಿದಿರಬೇಕಾದ ವೈಜ್ಞಾನಿಕ ಸಂಗತಿಗಳಿವು -ಜ್ಞಾನ ವಿಜ್ಞಾನ ಅಂಕಣ

ಎಚ್‌.ಎ.ಪುರುಷೋತ್ತಮ ರಾವ್: ಚಿನ್ನ ಮೆದುವಾದ, ಹೊಳಪನ್ನು ಹೊಂದಿದ, ಯಾವ ರೂಪಕ್ಕೂ ತರಬಲ್ಲುದಾದ ಹಾಗೂ ತುಕ್ಕುಹಿಡಿಯದ ಅಮೂಲ್ಯ ಲೋಹ. ಮೇಲಾಗಿ ಚಿನ್ನವು ಉತ್ತಮ ವಿದ್ಯುತ್ ವಾಹಕ ಹಾಗೂ ಉಷ್ಣವಾಹಕ.

ಚಿನ್ನದ ಬಗ್ಗೆ ಅಪರೂಪದ ಮಾಹಿತಿ (ಎಚ್‌ಎ ಪುರು‍ಷೋತ್ತಮ ರಾವ್ ಅಂಕಣ)
ಚಿನ್ನದ ಬಗ್ಗೆ ಅಪರೂಪದ ಮಾಹಿತಿ (ಎಚ್‌ಎ ಪುರು‍ಷೋತ್ತಮ ರಾವ್ ಅಂಕಣ)

ಚಿನ್ನದ ಬಗ್ಗೆ ಅಪರೂಪದ ಮಾಹಿತಿ: ಪುರಾತನ ಕಾಲದಿಂದ ಈವರೆಗೂ ಚಿನ್ನದ ವ್ಯಾಮೋಹ ಕಡಿಮೆಯಾಗಿಲ್ಲ. ಚಿನ್ನಕ್ಕಾಗಿ ಕೊಲೆ, ಸುಲಿಗೆಗಳಾಗಿವೆ. ಆಗುತ್ತಲೇ ಇವೆ. ಆಭರಣಗಳ ಪಾತ್ರವಂತೂ ಪ್ರಪಂಚದಾದ್ಯಂತ ವ್ಯಾಪಕವಾಗಿದೆ. ಕೆಲ ಲೋಹಗಳಿಂದ ಚಿನ್ನವನ್ನು ತಯಾರಿಸಲು ರಾಜರುಗಳಿಂದ ಹಣ ಕಿತ್ತು ರಸವಾದಿ ಅಥವಾ ರಸತಂತ್ರಜ್ಞರುಗಳು ಅನೇಕ ವ್ಯರ್ಥ ಪ್ರಯತ್ನಗಳನ್ನು ನಡೆಸಿದ್ದುಂಟು. ವಾಸ್ತವವಾಗಿ ಚಿನ್ನ ಮೆದುವಾದ, ಹೊಳಪನ್ನು ಹೊಂದಿದ, ಯಾವ ರೂಪಕ್ಕೂ ತರಬಲ್ಲುದಾದ ಹಾಗೂ ತುಕ್ಕುಹಿಡಿಯದ ಅಮೂಲ್ಯ ಲೋಹ. ಮೇಲಾಗಿ ಚಿನ್ನವು ಉತ್ತಮ ವಿದ್ಯುತ್ ವಾಹಕ ಹಾಗೂ ಉಷ್ಣವಾಹಕ. ದಂತ ಚಿಕಿತ್ಸೆಯಲ್ಲಿ ಮತ್ತು ಕೃತಕ ಹಲ್ಲಿನ ತಯಾರಿಕೆಗಳಲ್ಲೂ ಚಿನ್ನದ ಬಳಕೆ ಸಾಮಾನ್ಯವೆನಿಸಿದೆ. ಒಂದೊಂದಾಗಿ ಯಾವ ಆಮ್ಲಗಳೂ ಇದರ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಕೇವಲ ಸೆಲಿನಿಕ್ ಆಮ್ಲ ಹಾಗೂ ಅಕ್ವಾರಿಜಿಯಾ (ದ್ರವರಾಜ)ಗಳು (aqua regia) ಮಾತ್ರ ಇದರ ಮೇಲೆ ಪ್ರಭಾವ ಬೀರಬಲ್ಲದು. ಪ್ರಬಲ ನೈಟ್ರಿಕ್ ಆಮ್ಲ ಮತ್ತು ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲಗಳು 1:4 ಪ್ರಮಾಣದಲ್ಲಿ ಬೆರೆತಿರುವ ದ್ರವರಾಜ ಮಾತ್ರ ಚಿನ್ನವನ್ನು ಕರಗಿಸಬಲ್ಲ ದ್ರವವಾಗಿದ್ದು ಅಕ್ಕಸಾಲಿಗರು ಚಿನ್ನವನ್ನು ಶುದ್ದಮಾಡುವುದಕ್ಕೆ ಅದನ್ನು ಈಗಲೂ ಬಳಸುವುದುಂಟು.

ಟ್ರೆಂಡಿಂಗ್​ ಸುದ್ದಿ

ಚಿನ್ನವು 1063 ಡಿಗ್ರಿ ಸೆಂಟಿಗ್ರೇಡ್ ಪ್ರಮಾಣದ ಉಷ್ಣತೆಯಲ್ಲಿ ಮಾತ್ರವೇ ಕರಗಬಲ್ಲದು. ಇದನ್ನು ಸಪೂರವಾದ ಸರಿಗಳನ್ನಾಗಿಸಬಹುದು (ತಂತಿ) ಅಂದರೆ 1/2,50,000 ಇಂಚಿನಷ್ಟು ತೆಳ್ಳಗೆ ರೂಪಿಸಲು ಸಾಧ್ಯವಿದೆ. ಇದು ಜವಳಿ ವಸ್ತ್ರಗಳಲ್ಲಿ ಚಿನ್ನದ ಮೆರುಗು ತುಂಬಲು ಅವಕಾಶವಾಗಿದೆ. ಹೀಗೆ ಬಹೂಪಯೋಗಿ ಚಿನ್ನವನ್ನು ಆಳವಾದ ಗಣಿಗಳ ಗಣಿಗಳ ಮೂಲಕ ಹೊರ ತೆಗೆದು ಸಂಸ್ಕರಿಸುವ ಕೆಲಸ ಈಗಲೂ ನಡೆಯುತ್ತಲೇ ಇದೆ. ಇಷ್ಟೆಲ್ಲಾ ಆರ್ಥಿಕ ಮಹತ್ವವುಳ್ಳ ಚಿನ್ನ ವೈದ್ಯಕೀಯ ಕ್ಷೇತ್ರದಲ್ಲೂ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಹೆಚ್ಚಿನಂಶದ ಚಿನ್ನ ದೇಹಕ್ಕೆ ಸೇರಿದರೆ ಅದು ಸಾವನ್ನೂ ತರಬಲ್ಲದು ಎಂಬ ಅಂಶ ಕೂಡಾ ಗಮನಾರ್ಹ.

ಮೊದಲು ಚಿನ್ನವನ್ನು ಅಂಗೈ ತುರಿಗೆ ಬಳಸಲಾಗುತ್ತಿತ್ತಾದರೂ 1890 ರಲ್ಲಿ ಬ್ಯಾಕ್ಟೀರಿಯಾ ಶಾಸ್ತ್ರಜ್ಞ ರಾಬರ್ಟಕಾಕ್ ಕ್ಷಯ ರೋಗದ ವಿರುದ್ದ ಚಿನ್ನದ ಸೈನೈಡನ್ನು ಪೂರ್ತಿನಾಶಕವಾಗಿ ಬಳಸಬಹುದೆಂಬ ಅಂಶವನ್ನು ಬರ್ಲಿನ್‌ನಲ್ಲಿ ಮೊದಲ ಬಾರಿಗೆ ಪ್ರಕಟಿಸಿದ. ಅನಂತರ ಚಿನ್ನಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿರುವ ಪ್ರಾಮುಖ್ಯತೆಯ ಅರಿವಾಯಿತು. ನಂತರ 1924 ರಲ್ಲಿ ಡ್ಯಾನಿಶ್ ದೇಶದ ಪಶುವೈದ್ಯನೊಬ್ಬ ಸ್ಯಾನೋಕ್ರಿಸಿನ್ ಎಂಬ ಔಷಧಿಯನ್ನು (ಚಿನ್ನದ ಸೋಡಿಯಂ ಥಯೋಸಲ್ಪೇಟ್) ಹಸುವಿನಲ್ಲಿನ ಕ್ಷಯರೋಗದ ವಿರುದ್ದ ಪ್ರಯೋಗಿಸಿ ಬಹುತೇಕ ಯಶಸ್ವಿಯಾದ. ಆದರೆ ಇದನ್ನು ಮನುಷ್ಯರಲ್ಲಿ ಪ್ರಯೋಗಿಸಿದಾಗ ಪರಿಣಾಮ ಸೊನ್ನೆಯಾಗಿತ್ತು. ಏಕೆಂದರೆ ಆ ದಿನಗಳಲ್ಲಿ ಸಂಧಿವಾತ ರೋಗವನ್ನು ಕ್ಷಯರೋಗವೆಂದು ತಪ್ಪಾಗಿ ನಿರ್ಧರಿಸಲಾಗಿತ್ತು. ಈ ಅಂಶವನ್ನು ಜರ್ಮನಿಯ ಲಂಡೇ ಎಂಬಾತ ಪ್ರಚುರಪಡಿಸಿ ನಂತರ ಸಮರ್ಪಕ ಪ್ರಯೋಗಗಳ ಮೂಲಕ ಚಿನ್ನದಂಶದ ಔಷಧ ಸಂಧಿವಾತ ರೋಗಕ್ಕೆ ಹೆಚ್ಚು ಪರಿಣಾಮಕಾರಿಯೆಂದು ಸ್ಪಷ್ಟಪಡಿಸಿದ. ಅನಂತರ ಚಿನ್ನದ ಸಂಯುಕ್ತಗಳ ಚಿಕಿತ್ಸೆ ಇದ್ನ ಕ್ರಿಸೋಥೆರೆಪಿ ಆರಂಭವಾಯಿತು.

ನಂತರ ಸಂಯುಕ್ತಗಳುಳ್ಳ ಔಷಧಿಗಳನ್ನು ಕಣ್ಣಿನ ನ್ಯೂನತೆಗೂ ಬಳಸಿಕೊಳ್ಳಲಾಯಿತು. ಕಣ್ಣಿನ ರೆಪ್ಪೆ ತಾನೇತಾನಾಗಿ ಮುಚ್ಚಿಕೊಳ್ಳದ ಸ್ಥಿತಿ ಲ್ಯಾಗೋಪ್ತಾಲ್ಮಾಸ್ ಎಂಬ ಸ್ಥಿತಿಯನ್ನು ಸರಿಪಡಿಸಲು ಇದರ ಬಳಕೆ ಇತ್ತು ಇತ್ತೀಚಿನ ಬೆಳವಣಿಗೆಗಳಲ್ಲಿ ಚಿನ್ನವನ್ನು ಕೋಶದೊಳಗಿನ ಜೀನುಗಳ ಕಾರ್ಯ ಕ್ಷಮತೆಯನ್ನು ವೃದ್ದಿಸುವುದರಲ್ಲಿಯೂ ಉಪಯೋಗಿಸಲಾಗುತ್ತದೆ.

ಸಾವನ್ನೂ ತರುತ್ತದೆ ಚಿನ್ನ

ಚಿನ್ನದ ಬಗ್ಗೆ ತಿಳಿಯಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ದೇಹದಲ್ಲಿ ಇನ್ನದ ಅಂಶ ಹೆಚ್ಚಾದರೆ ಮಾರಕ ಪರಿಣಾಮವುಂಟಾಗುತ್ತದೆ. ಚಿನ್ನ ಸಾವನ್ನೂ ತರುತ್ತದೆ. ವಯಸ್ಕರೊಬ್ಬರ ದೇಹದಲ್ಲಿ ಸುಮಾರು 2.45 ಮಿಲಿಗ್ರಾಂಗಳಷ್ಟು ಚಿನ್ನದ ಅಂಶ ಇರಬಹುದು. ಆದರೆ ದೇಹದ ತೂಕದಲ್ಲಿ ಒಂದು ಕೆಜಿ ಗೆ 500 ಮಿಲಿಗ್ರಾಂಗಳಿಗಿಂತ ಹೆಚ್ಚಿನ ಅಂಶದ ಚಿನ್ನ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತದೆ. ಮೂತ್ರ ಜನಕಾಂಗಗಳ ಕೆಲಸಕ್ಕೂ ಅಡಚಣೆ ಉಂಟಾಗುತ್ತದೆ. ಗೋಲ್ಡಾರ್, ರಿಢೋರಾ ಮುಂತಾದ ಚಿನ್ನದಂಶದ ಮಾತ್ರೆಗಳು, ಸೋಲ್ಗಾನೆಲ್, ಮೈಕೋಕ್ರೈಸಿನ್ ಮುಂತಾದ ಇಂಜೆಕ್ಷನ್‌ಗಳೂ ಔಷಧದ ರೂಪದಲ್ಲಿ ಬಳಕೆಯಲ್ಲಿವೆ. ಕೆಲವೊಮ್ಮೆ ಆಕಸ್ಮಿಕ ಸಾವುಗಳು ಸಂಭವಿಸಿದಾಗ, ಅದರಲ್ಲೂ ವಿಷ ಸೇವನೆಯ ಪ್ರಕರಣಗಳಾದಲ್ಲಿ ವೈದ್ಯರು ಮರಣೋತ್ತರ ಶವ ಪರೀಕ್ಷೆಯಲ್ಲಿ ಈ ಚಿನ್ನದ ಅಂಶವಿದೆಯೇ ಇಲ್ಲವೇ ಎಂಬುದನ್ನು ಗಮನಿಸುತ್ತಾರೆ. ಚಿನ್ನವು ಎಷ್ಟು ಅಪ್ಯಾಯಮಾನವೋ ಅಷ್ಟೇ ಅಪಾಯಕಾರಿಯೂ ಹೌದು.

ಜ್ಞಾನ-ವಿಜ್ಞಾನ ಅಂಕಣ
ಜ್ಞಾನ-ವಿಜ್ಞಾನ ಅಂಕಣ

ತುಣುಕು ಮಿಣುಕು; ಇವು ವಿಜ್ಞಾನ ಲೋಕದ ಅಚ್ಚರಿ

1) ಧ್ರುವ ಪ್ರದೇಶದಲ್ಲಿ ತೂಕದ ವ್ಯತ್ಯಾಸವಾಗುವುದು ಏಕೆ?
ಯಾವುದಾದರೂ ಒಂದು ವಸ್ತುವನ್ನು ಭೂಮಧ್ಯ ರೇಖೆ ಹಾಗೂ ದಕ್ಷಿಣ ಧ್ರುವದಲ್ಲಿ ತೂಗಿ ನೋಡಿದರೆ ಅದರ ತೂಕವು ಭೂಮಧ್ಯ ರೇಖೆಯದಕ್ಕಿಂತಲೂ ದಕ್ಷಿಣ ಧ್ರುವದಲ್ಲಿ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಎರಡು ವಸ್ತುಗಳು ಅವುಗಳ ದ್ರವ್ಯರಾಶಿಯಿಂದಾಗಿ ಪರಸ್ಪರ ಆಕರ್ಷಣೆಗೆ ಒಳಗಾಗುತ್ತವೆ. ಭೂಮಿಗೂ ದ್ರವ್ಯರಾಶಿ ಇರುವುದರಿಂದ ತಮ್ಮ ದೇಹಕ್ಕೂ ತೂಕವಿದೆ. ಅದೇರೀತಿ ವಸ್ತು ಭೂಮಿಯಿಂದ ದೂರ ಹೋದಂತೆ ಅದರ ತೂಕವೂ ಕಡಿಮೆಯಾಗುತ್ತಾ ಹೋಗುತ್ತದೆ. ಭೂಮಿಯ ಧ್ರುವ ತ್ರಿಜ್ಯವು ಭೂ ಮಧ್ಯರೇಖೆಯ ತ್ರಿಜ್ಯಕ್ಕಿಂತಲೂ ಕಡಿಮೆಯಾಗುವುದರಿಂದ ಧ್ರುವ ಪ್ರದೇಶಗಳಲ್ಲಿ ತೂಕ ಹೆಚ್ಚಿರುತ್ತದೆ.

ಭೂಮಿಯ ಮೇಲೆ ವಸ್ತುವಿಗೆ ಗುರುತ್ವಾರ್ಷಣ ಬಲದಿಂದಾಗಿಯೂ ತೂಕವಿದೆ. ಆದರೆ ಗುರುತ್ವಾಕರ್ಷಣೆಯಿಲ್ಲದ ಶೂನ್ಯ ಪ್ರದೇಶದಲ್ಲಿ ವಸ್ತುವು ತೂಕ ರಹಿತವಾಗಿರುತ್ತದೆ. ತೇಲಾಡುವಂತಹ ಸ್ಥಿತಿಯುಂಟಾಗುತ್ತದೆ. ನೀರನ್ನು ಒಂದು ಲೋಟದಿಂದ ಮತ್ತೊಂದು ಲೋಟಕ್ಕೆ ಸುರಿಯುವುದೂ ಅಲ್ಲಿ ಸಾಧ್ಯವಿಲ್ಲ . ಆದ್ದರಿಂದಲೇ ಅಂತರಿಕ್ಷ ನೌಕೆಯಲ್ಲಿ ನೀರು ಚಂಡಿನಂತೆ ತೇಲಬಹುದಾಗಿದೆ.

2) ಮೊದಲ ಟಿವಿ ಎಲ್ಲಿ ಕಾರ್ಯಾರಂಭ ಮಾಡಿತು?
ಯುನೈಟೆಡ್ ಕಿಂಗ್‌ಡಂ (ಗ್ರೇಟ್ ಬ್ರಿಟನ್) ವಿಶ್ವದಲ್ಲಿ ಮೊದಲ ಬಾರಿಗೆ ಟಿವಿ ಹೊಂದಿದ ದೇಶ ಎನಿಸಿತು. 1936 ರಲ್ಲಿ ಬ್ರಿಟನ್‌ನಲ್ಲಿ ಟೆಲಿವಿಷನ್ ಕಾರ್ಯಾರಂಭ ಮಾಡಿತು.

3) ಮನುಷ್ಯನ ಹೃದಯ ಬಡಿತದ ಲೆಕ್ಕಾಚಾರಗಳೇನು?
ಮನುಷ್ಯನ ಹೃದಯವು ವರ್ಷಕ್ಕೆ 37 ಮಿಲಿಯನ್ (3.7 ಕೋಟಿ) ಬಾರಿ ಮಿಡಿಯುತ್ತದೆ. ಒಂದು ನಿಮಿಷಕ್ಕೆ 60 ರಿಂದ 100 ಬಾರಿ, ಒಂದು ದಿನಕ್ಕೆ ಸುಮಾರು 1 ಲಕ್ಷ ಬಾರಿ ಮಿಡಿಯುತ್ತದೆ. ನೀವು ವಿಶ್ವಾಂತಿಯಲ್ಲಿದ್ದಾಗ ಹೃದಯದ ಬಡಿತವು ಕಡಿಮೆ ವೇಗದಲ್ಲಿರುತ್ತದೆ, ವ್ಯಾಯಾಮ ಅಥವಾ ಕಷ್ಟಕರ ದೈಹಿಕ ಚಟುವಟಿಕೆ ನಡೆಸುವ ಸಂದರ್ಭದಲ್ಲಿ ಹೃದಯದ ಬಡಿತ ಹೆಚ್ಚಾಗುತ್ತದೆ.

4) ಸಮತೋಲಿತ ಆಹಾರ ಎಂದರೇನು?
ಸಮತೋಲಿತ ಆಹಾರದಲ್ಲಿ ಶೇ 55 ರಷ್ಟು ಕಾರ್ಬೋಹೈಡ್ರೇಟ್, ಶೇ 30 ರಷ್ಟು ಕೊಬ್ಬು ಹಾಗೂ ಶೇ 10 ರಷ್ಟು ಪ್ರೋಟೀನ್ ಇರಬೇಕು.

ಬರಹ: ಎಚ್‌.ಎ.ಪುರುಷೋತ್ತಮ ರಾವ್

---

ಎಚ್‌ಎ ಪುರುಷೋತ್ತಮ ರಾವ್ ಪರಿಚಯ

ಅರಣ್ಯ ಇಲಾಖೆಯಲ್ಲಿ ಆಡಳಿತ ವಿಭಾಗದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಕೋಲಾರದ ಎಚ್‌.ಎ.ಪುರುಷೋತ್ತಮ ರಾವ್ ವಿಜ್ಞಾನ ಬರಹಗಾರರಾಗಿ ಪ್ರಸಿದ್ಧರು. ಕಿವುಡನ ಮಾಡಯ್ಯ ತಂದೆ (ವಿಜ್ಞಾನ ವಿದ್ಯಮಾನಗಳು), ಭೂರಮೆಗೆ ಸ್ಪೆಥೋಸ್ಕೋಪ್ (ವಿಜ್ಞಾನ ಲೇಖನಗಳು), ಕಾಡು ಪ್ರತಿಭೆ ಮಾರಪ್ಪ (ಅರಣ್ಯಾಧಿಕಾರಿಯ ಬದುಕು-ಸಾಧನೆ), ಗಾಳಿಬೇರುಗಳು (ವಿಜ್ಞಾನ ಮತ್ತು ಪರಿಸರ ಲೇಖನಗಳು), ಅರಣ್ಯ ತಜ್ಞ ಅಜ್ಜಂಪುರ ಕೃಷ್ಣಸ್ವಾಮಿ (ವ್ಯಕ್ತಿ ಚಿತ್ರ) ಇವರ ಪ್ರಕಟಿತ ಕೃತಿಗಳು. ಕೋಲಾರ ಪತ್ರಿಕೆ, ಪ್ರಜಾವಾಣಿ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಸಂಪರ್ಕ ಸಂಖ್ಯೆ: 99723 39974