Spiritual News: ಇಂದು ಅಖುರ್ತ ಸಂಕಷ್ಟಹರ ಚತುರ್ಥಿ; ಏನು ಹಾಗಂದ್ರೆ , ಪೂಜೆಯ ಮಹತ್ವ, ಆಚರಣೆಯ ವಿಧಾನ ಹೇಗೆ? ಇಲ್ಲಿದೆ ವಿವರ
Akhuratha Sankashti Chaturthi 2023: ಇಂದು (ಡಿ 30) ಅಖುರ್ತ ಸಂಕಷ್ಟಹರ ಚತುರ್ಥಿ ಇದೆ. ಗಣೇಶನನ್ನು ಪೂಜಿಸುವ ಭಕ್ತರು ಈ ದಿನ ಉಪವಾಸ ಇದ್ದು ವ್ರತ ಕೈಗೊಳ್ಳುತ್ತಾರೆ. ಅಖುರ್ತ ಮಹಾ ಗಣಪತಿಯು ದುರ್ಗಾ ಪೀಠಕ್ಕೆ ಸಂಬಂಧಿಸಿದೆ
Akhuratha Sankashti Chaturthi 2023: ಪ್ರತಿ ತಿಂಗಳು ಹುಣ್ಣಿಮೆ ನಂತರ 4ನೇ ದಿನ ಸಂಕಷ್ಟಹರ ಚತುರ್ಥಿ ಆಚರಿಸಲಾಗುತ್ತದೆ. ವ್ರತ ಕೈಗೊಳ್ಳುವವರು ಅಂದು ವಿಘ್ನ ನಿವಾರಕನನ್ನು ಸ್ತುತಿಸುತ್ತಾ, ಪೂಜಿಸುತ್ತಾ, ಉಪವಾಸವಿದ್ದು ರಾತ್ರಿ ಚಂದ್ರನನ್ನು ನೋಡಿದ ನಂತರ ಉಪಹಾರ ಸೇವಿಸುತ್ತಾರೆ. ಇದೇ ರೀತಿ ವರ್ಷಕ್ಕೆ ಒಮ್ಮೆ ವಿಶೇಷ ಚತುರ್ಥಿಗಳಿರುತ್ತವೆ. ಅದರಲ್ಲಿ ಅಕುರ್ತ ಸಂಕಷ್ಟ ಚತುರ್ಥಿ ಕೂಡಾ ಒಂದು.
ಹಿಂದೂ ಧರ್ಮದಲ್ಲಿ ಅಕುರ್ತ ಸಂಕಷ್ಟಹರ ಚತುರ್ಥಿಗೆ ಬಹಳ ಮಹತ್ವವಿದೆ. ಈ ದಿನವನ್ನು ಗಣೇಶನನ್ನು ಪೂಜಿಸಲು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಇಂದು ( ಡಿ.30) ಅಕುರ್ತ ಸಂಕಷ್ಟಹರ ಚತುರ್ಥಿ ತಿಥಿ ಇದೆ. ಇಂದು ಬೆಳಗ್ಗೆ 09:43 ರಿಂದ ಚತುರ್ಥಿ ತಿಥಿ ಆರಂಭವಾಗಲಿದ್ದು ನಾಳೆ (ಡಿ 31) ಬೆಳಗ್ಗೆ 11.55 ವರೆಗೆ ಅಖುರತ ಸಂಕಷ್ಟಹರ ಚತುರ್ಥಿ ತಿಥಿ ಇರಲಿದೆ. ಇಂದು ರಾತ್ರಿ 08:16ಕ್ಕೆ ಚಂದ್ರೋದಯವಾಗಲಿದೆ.
ಅಖುರ್ತ ಸಂಕಷ್ಟಿ ಚತುರ್ಥಿಯ ಮಹತ್ವ
ಹಿಂದೂ ಧರ್ಮದಲ್ಲಿ ಅಖುರ್ತ ಸಂಕಷ್ಟಹರ ಚತುರ್ಥಿ ಉಪವಾಸಕ್ಕೆ ಮಹತ್ವವಿದೆ. ಅಖುರ್ತ ಮಹಾ ಗಣಪತಿಯು ದುರ್ಗಾ ಪೀಠಕ್ಕೆ ಸಂಬಂಧಿಸಿದೆ. ಸಂಕಷ್ಟ ಚತುರ್ಥಿಯ ಈ ಶುಭ ದಿನದಂದು ಗಣಪತಿಯನ್ನು ಪೂಜಿಸಲಾಗುತ್ತದೆ. ಒಮ್ಮೆ ಶುಕ್ಲ ಪಕ್ಷದಲ್ಲಿ ಮತ್ತು ಇನ್ನೊಂದು ಕೃಷ್ಣ ಪಕ್ಷದಲ್ಲಿ, ತಿಂಗಳಲ್ಲಿ ಎರಡು ಚತುರ್ಥಿಗಳು ಬರುತ್ತವೆ. ಭಕ್ತರು ಈ ದಿನ ಉಪವಾಸ ಆಚರಿಸಿ ಗಣೇಶನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಗಣೇಶನು ಭಕ್ತರ ಜೀವನದಿಂದ ಅಡೆತಡೆಗಳನ್ನು ನಿವಾರಿಸಲು ಹೆಸರುವಾಸಿಯಾಗಿದ್ದಾನೆ. ಆದ್ದರಿಂದಲೇ ಅವನನನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಗಣೇಶನನ್ನು ಮಂಗಳ ಮೂರ್ತಿ ಎಂದೂ ಕರೆಯಲಾಗುತ್ತದೆ, ಅದೃಷ್ಟದ ದೇವರು ಎಂದು ನಂಬಲಾಗಿದೆ. ಸಂಕಷ್ಟಹರ ಚತುರ್ಥಿ ವ್ರತವನ್ನು ಯಾರು ಅತ್ಯಂತ ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಆಚರಿಸುವರೋ ವಕ್ರತುಂಡನು ಅವರ ಜೀವನದಿಂದ ಎಲ್ಲಾ ದುಃಖಗಳನ್ನು ಮತ್ತು ದುರಾದೃಷ್ಟಗಳನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ. ಸಂತಾನವಿಲ್ಲದವರಿಗೆ ಗಣೇಶನು ಸಂತಾನಫಲ ನೀಡುತ್ತಾರೆ.
ಅಖುರ್ತ ಸಂಕಷ್ಟಹರ ಚತುರ್ಥಿಯ ಪೂಜಾ ವಿಧಿವಿಧಾನಗಳು
ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಮಡಿಯಾಗಬೇಕು. ನಂತರ ಮನೆ ಮತ್ತು ದೇವರಕೋಣೆಯನ್ನು ಸ್ವಚ್ಛಗೊಳಿಸಿ. ಗಣೇಶನ ವಿಗ್ರಹಕ್ಕೆ ಹೂವು, ಗರಿಕೆ, ಬಿಳಿ ಎಕ್ಕದ ಹೂಗಳಿಂದ ಅಲಂಕರಿಸಿ. ನೈವೇದ್ಯ ಇಟ್ಟು ಧೂಪ, ದೀಪಗಳಿಂದ ಪೂಜಿಸಿ. ಓಂ ಗಂ ಗಣಪತಯೇ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಗಣೇಶನ ವಿವಿಧ ಹೆಸರುಗಳನ್ನು ಪಠಿಸಿ. ನಂತರ ಗಣೇಶನಿಗೆ ಆರತಿ ಮಾಡಬೇಕು.
ಓಂ ವಕ್ರ ತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ….. ಮಂತ್ರವನ್ನು ಉಚ್ಛರಿಸುವ ಮೂಲಕ ಗಣೇಶನನ್ನು ಪೂಜೆ ಮಾಡಬೇಕು.
ಇಂದು ಉಪವಾಸ ಇರಬೇಕು. ಸಂಪೂರ್ಣ ಉಪವಾಸ ಇರಲು ಆಗದವರು ಹಾಲು, ಹಣ್ಣುಗಳನ್ನು ಸೇವಿಸಬಹುದು. ಸಂಜೆ ಕೂಡಾ ಗಣೇಶನನ್ನು ಪೂಜಿಸಿ ಸಾಧ್ಯವಾದರೆ ದೇವಸ್ಥಾನಕ್ಕೆ ಹೋಗಿ ಬನ್ನಿ. ರಾತ್ರಿ ಚಂದ್ರೋದಯದ ನಂತರ, ಮತ್ತೆ ಗಣೇಶನಿಗೆ ಆರತಿ ಬೆಳಗಿ, ಪ್ರಾರ್ಥಿಸಿ ಫಲಹಾರ ಸೇವಿಸಿ.