Rice Papad Recipe: ವರ್ಷವಾದ್ರೂ ಕೆಡೊಲ್ಲ ಈ ಹಪ್ಪಳ, ಒಣಗಿಸಲು ಬಿಸಿಲೂ ಬೇಡ..ಇದರ ರುಚಿಗಂತೂ ಸರಿಸಾಟಿ ಇಲ್ಲ..ರೆಸಿಪಿ ಇಲ್ಲಿದೆ
ಹಪ್ಪಳ ತಯಾರಿಸುವ ದಿನ ಅಕ್ಕಪಕ್ಕದ ಮನೆಯವರ ಸಹಾಯ ಪಡೆದು, ಎಲ್ಲರೂ ಒಟ್ಟಾಗಿ ಕುಳಿತು, ಕಷ್ಟ-ಸುಖ ಮಾತನಾಡುತ್ತಾ ತಯಾರಿಸುತ್ತಿದ್ದರು. ಆದರೆ ಈಗ ಏನು ಬೇಕೆಂದರೂ ಬಹಳಷ್ಟು ಜನರು ಅಂಗಡಿಗೆ ಹೋಗುತ್ತಾರೆ. ಅಂಗಡಿಯಲ್ಲಿ ದೊರೆಯುವ ಕೆಲವೊಂದು ವಸ್ತುಗಳು ನಾಲಿಗೆ ರುಚಿ ಎನಿಸಿದರೂ, ಅದಕ್ಕೆ ಬಳಸುವ ಪ್ರಿಸರ್ವೇಟಿವ್ಸ್, ಕೃತಕ ಬಣ್ಣಗಳು, ಶುಚಿತ್ವ ಇಲ್ಲದಿರುವುದು ಆರೋಗ್ಯಕ್ಕೆ ಸಮಸ್ಯೆ ಉಂಟು ಮಾಡಬಹುದು.
ಉಪ್ಪಿನಕಾಯಿ, ಹಪ್ಪಳ, ಚಟ್ನಿಪುಡಿ, ಪಲ್ಯ ಹೀಗೆ ಪ್ರತಿದಿನ ಊಟದ ಜೊತೆಗೆ ತಿನ್ನಲು ಏನಾದರೂ ಇರಲೇಬೇಕು. ಆದರೆ ಈಗ ಎಲ್ಲವೂ ಅಂಗಡಿಮಯವಾಗಿದೆ. ಜೊತೆಗೆ ಇನ್‌ಸ್ಟಂಟ್ ಫುಡ್ ಕಾಲ ಆಗಿ ಬದಲಾಗಿದೆ.
ಮೊದಲೆಲ್ಲಾಇವೆಲ್ಲವನ್ನೂ ಮನೆಯಲ್ಲೇ ತಯಾರಿಸುತ್ತಿದ್ದರು. ಹಪ್ಪಳ ತಯಾರಿಸುವ ದಿನ ಅಕ್ಕಪಕ್ಕದ ಮನೆಯವರ ಸಹಾಯ ಪಡೆದು, ಎಲ್ಲರೂ ಒಟ್ಟಾಗಿ ಕುಳಿತು, ಕಷ್ಟ-ಸುಖ ಮಾತನಾಡುತ್ತಾ ತಯಾರಿಸುತ್ತಿದ್ದರು. ಆದರೆ ಈಗ ಏನು ಬೇಕೆಂದರೂ ಬಹಳಷ್ಟು ಜನರು ಅಂಗಡಿಗೆ ಹೋಗುತ್ತಾರೆ. ಅಂಗಡಿಯಲ್ಲಿ ದೊರೆಯುವ ಕೆಲವೊಂದು ವಸ್ತುಗಳು ನಾಲಿಗೆ ರುಚಿ ಎನಿಸಿದರೂ, ಅದಕ್ಕೆ ಬಳಸುವ ಪ್ರಿಸರ್ವೇಟಿವ್ಸ್, ಕೃತಕ ಬಣ್ಣಗಳು, ಶುಚಿತ್ವ ಇಲ್ಲದಿರುವುದು ಆರೋಗ್ಯಕ್ಕೆ ಸಮಸ್ಯೆ ಉಂಟು ಮಾಡಬಹುದು. ಇನ್ನೂ ಕೆಲವರು ಹೇಗೆ ಮಾಡುವುದು ಎಂದು ತಿಳಿಯದೆ ಎಲ್ಲವನ್ನೂ ಶಾಪ್‌ನಲ್ಲಿ ಕೊಂಡು ತರುತ್ತಾರೆ. ನಿಮಗೆ 3-4 ಗಂಟೆ ಸಮಯ ಇದ್ದರೆ ಸಾಕು ಹಪ್ಪಳ ತಯಾರಿಸಬಹುದು. ನಾನಾ ರೀತಿಯ ಹಪ್ಪಳಗಳನ್ನು ಮಾಡಬಹುದು. ಇಲ್ಲಿ ಅಕ್ಕಿ ಹಪ್ಪಳದ ಒಂದು ವಿಧಾನವನ್ನು ತಿಳಿಸಲಾಗಿದೆ.
ಬೇಕಾಗುವ ಸಾಮಗ್ರಿಗಳು
ಅಕ್ಕಿ - 1 ಕಿಲೋ
ಸಬ್ಬಕ್ಕಿ - 1/4 ಕಿಲೋ
ಅಚ್ಚ ಖಾರದ ಪುಡಿ - 50 ಗ್ರಾಂ
ಕರಿಮೆಣಸು ಪುಡಿ - 20 ಗ್ರಾಂ
ಜೀರ್ಗೆ - 25 ಗ್ರಾಂ
ಹಪ್ಪಳದ ಖಾರ - 2 ಪ್ಯಾಕೆಟ್
ಉಪ್ಪು - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಅಕ್ಕಿಯನ್ನು 3-4 ಬಾರಿ ತೊಳೆದು ಶುದ್ಧವಾದ ಬಟ್ಟೆಯಲ್ಲಿ ಹರಡಿ ಬಿಸಿಲಿನಲ್ಲಿ ಒಣಗಿಸಿ, ಸಬ್ಬಕ್ಕಿ ಸೇರಿಸಿ ಮಿಲ್‌ನಲ್ಲಿ ಪುಡಿ ಮಾಡಿಸಿ.
ಒಂದು ದೊಡ್ಡ ಪಾತ್ರೆಗೆ 2 1/2 ಲೀಟರ್ ನೀರು ಸೇರಿಸಿ ಸ್ಟೋವ್ ಮೇಲಿಡಿ/ಅಥವಾ ಕಣ್ಣಳತೆ ಅಂದಾಜಿನ ಮೇಲೆ ನೀರು ಇಡಿ.
ನೀರು ಸ್ವಲ್ಪ ಬಿಸಿ ಆದಾಗ 3-4 ಟೇಬಲ್ ಸ್ಪೂನ್ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಗಂಟಿಲ್ಲದಂತೆ ಕಲಕಿ.
ನೀರು ಕುದಿ ಬಂದು ಗಂಜಿಯಂತೆ ಆದಾಗ ಅಚ್ಚ ಖಾರದ ಪುಡಿ, ಕರಿಮೆಣಸಿನ ಪುಡಿ, ಹಪ್ಪಳದ ಖಾರ (ಅಂಗಡಿಯಲ್ಲಿ ದೊರೆಯುತ್ತದೆ), ಜೀರ್ಗೆ ಸೇರಿಸಿ ತಿರುವಿ.
ನಂತರ ಮಧ್ಯಭಾಗಕ್ಕೆ ಅಕ್ಕಿಹಿಟ್ಟು ಸುರಿದು ಮಧ್ಯಮ ಉರಿಯಲ್ಲಿ 10-15 ನಿಮಿಷ ಕುದಿಯಲು ಬಿಡಿ.
ನಂತರ ತಿರುವು ಕೋಲಿನಿಂದ ಈ ಮಿಶ್ರಣವನ್ನು ತಿರುವಿ, ಮುದ್ದೆಯಂತೆ ಮಾಡಿಕೊಳ್ಳಿ
ಪಾತ್ರೆಯಿಂದ ಎಲ್ಲಾ ಮಿಶ್ರಣವನ್ನು ಹೊರ ತೆಗೆಯದೆ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಚೆನ್ನಾಗಿ ನಾದಿಕೊಳ್ಳಿ. ಉಳಿದ ಹಿಟ್ಟನ್ನು ಪಾತ್ರೆಯಲ್ಲೇ ಬಿಟ್ಟು ಮುಚ್ಚಳ ಮುಚ್ಚಿ ಇಡಿ.
ಇದರಿಂದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಸ್ವಲ್ಪ ಎಣ್ಣೆ ಸವರಿಕೊಂಡು ಪೂರಿ ಆಕಾರದಲ್ಲಿ ಒತ್ತಿಕೊಳ್ಳಿ.
ಲಟ್ಟಣಿಗೆಗಿಂತ ಹಪ್ಪಳವನ್ನು ಮಾಡಲು ಪ್ರೆಸ್ಸಿಂಗ್ ಮೆಷೀನ್ ಬಹಳ ಒಳ್ಳೆಯದು.
ಒಂದು ಶುದ್ಧವಾದ ಬಟ್ಟೆ ಮೇಲೆ ಹಪ್ಪಳವನ್ನು ಹರಡಿ, ಚೆನ್ನಾಗಿ ಗಾಳಿ ಆಡುವ ಜಾಗದಲ್ಲಿ ನೆರಳಿನಲ್ಲ ಇಟ್ಟು 4-5 ದಿನಗಳ ಕಾಲ ಒಣಗಿಸಿ ನಂತರ ಬಿಸಿಲಿನಲ್ಲಿ 2 ಗಂಟೆ ಒಣಗಿಸಿ.
ಒಣಗಿದ ಹಪ್ಪಳವನ್ನು ಒಂದು ಡಬ್ಬದಲ್ಲಿ ಮುಚ್ಚಳ ಮುಚ್ಚಿ ಶೇಖರಿಸಿದರೆ 1 ವರ್ಷವಾದರೂ ಕೆಡುವುದಿಲ್ಲ.
ನಿಮಗೆ ಬೇಕಾದಾಗ ಈ ಹಪ್ಪಳವನ್ನು ಎಣ್ಣೆಯಲ್ಲಿ ಕರಿದು ತಿನ್ನಬಹುದು. ಹೆಚ್ಚಿಗೆ ಎಣ್ಣೆ ಬಳಸಲು ಇಷ್ಟವಿಲ್ಲದಿದ್ದರೆ ಕಡಿಮೆ ಉರಿಯಲ್ಲಿ ಹಿಕ್ಕಳದ ಸಹಾಯದಿಂದ ಸುಟ್ಟು ಕೂಡಾ ತಿನ್ನಬಹುದು.
ಒಂದು ದಿನ ಟೈಮ್ ತೆಗೆದುಕೊಂಡು ಹಪ್ಪಳ ಮಾಡಿದರೆ ವರ್ಷಕ್ಕೆ ಸಾಕಾಗುವಷ್ಟು ಮಾಡಿಟ್ಟುಕೊಳ್ಳಬಹುದು. ಮನೆಯಲ್ಲೇ ತಯಾರಿಸಿದ ಈ ಹಪ್ಪಳ ತಿನ್ನಲು ಬಹಳ ರುಚಿ ಇರುತ್ತದೆ.
ಗಮನಿಸಿ: ಮಿಶ್ರಣವನ್ನು ತಿರುವಿದಾಗ ಅದು ಮುದ್ದೆಯಂತೆ ಗಟ್ಟಿಯಾಗಿರಬೇಕು, ಇಲ್ಲವಾದರೆ ಹಪ್ಪಳ ಒತ್ತಲು ಆಗುವುದಿಲ್ಲ. ಒಂದು ವೇಳೆ ಮಿಶ್ರಣ ತೆಳುವಾದರೆ, ಸ್ವಲ್ಪ ಅಕ್ಕಿಹಿಟ್ಟು ಸೇರಿಸಿ, ಪಾತ್ರೆಯ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬಿಟ್ಟು ನಂತರ ತಿರುವಿ.
ಹಪ್ಪಳ ಒತ್ತುವಾಗ ಹೆಚ್ಚು ಎಣ್ಣೆ ಬಳಸಬೇಡಿ, ಇಲ್ಲವಾದರೆ ಹಪ್ಪಳ ಬೇಗ ಕೆಡುತ್ತದೆ.
ಮೊದಲು ಸ್ವಲ್ಪ ಪ್ರಮಾಣದಲ್ಲಿ ಹಪ್ಪಳ ತಯಾರಿಸಿ ನಂತರ ಹೆಚ್ಚಾಗಿ ತಯಾರಿಸಿ.
ಕೆಲವರು ಹಪ್ಪಳಕ್ಕೆ ಈರುಳ್ಳಿ ಬಳಸುತ್ತಾರೆ. ಆದರೆ ಇದರಿಂದ ಹಪ್ಪಳ ಬೇಗ ಹಾಳಾಗುತ್ತದೆ.
ವಿಭಾಗ