ವೈ-ಫೈ ಬುಲೆಟ್‌ ವೇಗದಲ್ಲಿ ಕೆಲಸ ಮಾಡುತ್ತದೆ: ನಿಧಾನಗತಿಯ ಸಮಸ್ಯೆಯನ್ನು ನಿಮಿಷಗಳಲ್ಲಿ ಬಗೆಹರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ವೈ-ಫೈ ಬುಲೆಟ್‌ ವೇಗದಲ್ಲಿ ಕೆಲಸ ಮಾಡುತ್ತದೆ: ನಿಧಾನಗತಿಯ ಸಮಸ್ಯೆಯನ್ನು ನಿಮಿಷಗಳಲ್ಲಿ ಬಗೆಹರಿಸಿ

ವೈ-ಫೈ ಬುಲೆಟ್‌ ವೇಗದಲ್ಲಿ ಕೆಲಸ ಮಾಡುತ್ತದೆ: ನಿಧಾನಗತಿಯ ಸಮಸ್ಯೆಯನ್ನು ನಿಮಿಷಗಳಲ್ಲಿ ಬಗೆಹರಿಸಿ

ನಾವು ಮಾಡುವ ಕೆಲವು ಸಣ್ಣ ತಪ್ಪಿಂದ ವೈ-ಫೈ ವೇಗವು ತುಂಬಾ ನಿಧಾನವಾಗುತ್ತದೆ. ಈ ಬಗ್ಗೆ ಅನೇಕರು ಆಗಾಗ್ಗೆ ದೂರುತ್ತಾರೆ. ಎಲ್ಲಾದರು ನಿಮ್ಮ ವೈ-ಫೈ ಕೂಡ ನಿಧಾನವಾಗಿದ್ದರೆ ಇದರ ವೇಗ ಹೆಚ್ಚಿಸಲು ಇಲ್ಲಿ ಕೆಲವೊಂದು ಸಲಹೆ ನೀಡಲಾಗಿದೆ. (ಬರಹ: ವಿನಯ್‌ ಭಟ್‌)

ವೈ-ಫೈ ನಿಧಾನವಾಗಿದ್ದರೆ ಇದರ ವೇಗ ಹೆಚ್ಚಿಸಲು ಇಲ್ಲಿದೆ ಸಲಹೆ..
ವೈ-ಫೈ ನಿಧಾನವಾಗಿದ್ದರೆ ಇದರ ವೇಗ ಹೆಚ್ಚಿಸಲು ಇಲ್ಲಿದೆ ಸಲಹೆ..

ಇಂದಿನ ಡಿಜಿಟಲ್ ಯುಗದಲ್ಲಿ, ಸ್ಮಾರ್ಟ್‌ಫೋನ್​ನಿಂದಾಗಿ ಇಂಟರ್ನೆಟ್‌ನ ಅಗತ್ಯವು ಗಮನಾರ್ಹವಾಗಿ ಹೆಚ್ಚಾಗಿದೆ. ಸ್ಮಾರ್ಟ್‌ಫೋನ್ ಮತ್ತು ಇಂಟರ್‌ನೆಟ್ ಎರಡೂ ಇಲ್ಲದೆ ಕೆಲಸ ಮಾಡುವುದು ಕಷ್ಟವಾಗುತ್ತದೆ. ಟೆಲಿಕಾಂ ಕಂಪನಿಗಳ ರೀಚಾರ್ಜ್‌ ದರ ಹೆಚ್ಚಳ ಮತ್ತು ಲಭ್ಯವಿರುವ ಇಂಟರ್ನೆಟ್ ಡೇಟಾ ಕೆಲವೊಮ್ಮೆ ಕಡಿಮೆಯಾಗುವ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ವೈ-ಫೈ ಅನ್ನು ಬಳಸುತ್ತಿದ್ದಾರೆ. ಇದರಿಂದ ಅವರು ಇಂಟರ್ನೆಟ್ ಸಮಸ್ಯೆ ಎದುರಿಸುವುದಿಲ್ಲ, ಆದರೆ ಅವರು ಮಾಡುವ ಕೆಲವು ಸಣ್ಣ ತಪ್ಪಿಂದ ವೈ-ಫೈ ವೇಗವು ತುಂಬಾ ನಿಧಾನವಾಗುತ್ತದೆ. ಈ ಬಗ್ಗೆ ಜನರು ಆಗಾಗ್ಗೆ ದೂರುತ್ತಾರೆ. ಎಲ್ಲಾದರು ನಿಮ್ಮ ವೈ-ಫೈ ಕೂಡ ನಿಧಾನವಾಗಿದ್ದರೆ ಇದರ ವೇಗ ಹೆಚ್ಚಿಸಲು ಇಲ್ಲಿ ಕೆಲವೊಂದು ಸಲಹೆ ನೀಡಲಾಗಿದೆ.

ರೂಟರ್‌ ಪಾತ್ರ ಮುಖ್ಯ

ಮೊದಲನೆಯದಾಗಿ ಉತ್ತಮ ಮತ್ತು ವೇಗದ ಇಂಟರ್ನೆಟ್ ಪ್ರವೇಶಕ್ಕಾಗಿ ಸರಿಯಾದ ವೈ-ಫೈ ಸಂಪರ್ಕದ ಅಗತ್ಯವಿದೆ. ಅಲ್ಲದೆ, ರೂಟರ್ ಇರುವ ಸ್ಥಳವೂ ಸರಿಯಾಗಿರಬೇಕು, ರೂಟರ್ ಅನ್ನು ಸರಿಯಾದ ಸ್ಥಳದಲ್ಲಿ ಇರಿಸದಿದ್ದರೆ ವೇಗವು ಕಡಿಮೆಯಾಗುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಹೀಗಾಗಿ, ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಈ ತಂತ್ರಗಳನ್ನು ಬಳಸಿ

ವೈ-ಫೈ ರೂಟರ್ ಅನ್ನು ಎಲ್ಲಾ ಕಡೆ ಗೋಡೆಗಳು ಮಾತ್ರ ಇರುವ ಸ್ಥಳದಲ್ಲಿ ಇಡಬೇಡಿ, ಇದರಿಂದಾಗಿ ವೇಗವು ಕುಂಠಿತಗೊಳ್ಳುತ್ತದೆ.

ರೂಟರ್ ಮತ್ತು ಅದಕ್ಕೆ ಸಂಪರ್ಕಗೊಂಡಿರುವ ಸಾಧನವನ್ನು ದೂರ ಇಟ್ಟರೂ ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ. ಅಂದರೆ ಪ್ರತಿಯೊಂದು ವೈ-ಫೈ ಸಾಧನವು ನಿರ್ದಿಷ್ಟ ಶ್ರೇಣಿಯನ್ನು ಹೊಂದಿರುತ್ತದೆ. ನೀವು ಅದರ ವ್ಯಾಪ್ತಿಯಿಂದ ಹೊರಗಿದ್ದರೆ ನಿಮಗೆ ಉತ್ತಮ ಸಿಗ್ನಲ್ ಸಿಗುವುದಿಲ್ಲ.

ರೂಟರ್‌ನ ಆಂಟೆನಾದ ದಿಕ್ಕು ಕೂಡ ಸರಿಯಾಗಿರಬೇಕು. ಅದು ತಪ್ಪಾಗಿದ್ದರೆ ಅನೇಕ ಬಾರಿ ವೇಗವು ಕಡಿಮೆಯಾಗುತ್ತದೆ. ಹಾಗೆಯೆ ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಬಳಿ ರೂಟರ್ ಅನ್ನು ಸ್ಥಾಪಿಸಿದರೆ, ಸಿಗ್ನಲ್ ಪಡೆಯುವಲ್ಲಿ ಸಮಸ್ಯೆ ಉಂಟಾಗುತ್ತದೆ.

ವೈ-ಫೈ ಕಡಿಮೆ ವೇಗವನ್ನು ನೀಡುತ್ತಿದ್ದರೆ, ಎಷ್ಟು ಮೊಬೈಲ್ ಅಥವಾ ಲ್ಯಾಪ್​ಟಾಪ್ ಸಂಪರ್ಕಗೊಂಡಿವೆ ಎಂಬುದನ್ನು ಪರಿಶೀಲಿಸಿ, ಕೆಲವೊಮ್ಮೆ ಅನೇಕ ಸಾಧನಗಳು ಸಂಪರ್ಕಗೊಂಡಿದ್ದರೆ ವೇಗವೂ ಕಡಿಮೆಯಾಗುತ್ತದೆ.

ಹಾಗೆಯೆ ಪ್ರತಿ 24 ರಿಂದ 48 ಗಂಟೆಗಳಿಗೊಮ್ಮೆ ರೂಟರ್ ಅನ್ನು ಸ್ವಿಚ್ ಆಫ್ ಮಾಡುವುದು ಅವಶ್ಯಕ. ಇಲ್ಲದಿದ್ದರೆ ಅದರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವೈ-ಫೈ ವೇಗವು ನಿಧಾನವಾಗುತ್ತದೆ.

ವಿಪಿಎನ್ ಸಮಸ್ಯೆ

ವಿಪಿಎನ್‌ನಿಂದಾಗಿ ನಿಮ್ಮ ಇಂಟರ್ನೆಟ್ ವೇಗ ಕಡಿಮೆ ಆಗಬಹುದು. ಹೀಗಾಗಿ ಕಛೇರಿಯ ಕೆಲಸಗಳಿಗೆ ತೊಂದರೆಯಾಗುತ್ತದೆ. ಝೂಮ್​ನಂತಹ ಅಪ್ಲಿಕೇಶನ್‌ಗಳು ಇಂಟರ್ನೆಟ್ ಅನ್ನು ಹೆಚ್ಚು ನಿಧಾನಗೊಳಿಸುತ್ತದೆ. ನಿಮಗೆ ಅಗತ್ಯವಿಲ್ಲದಿದ್ದರೆ ಅದನ್ನು ಬಳಸಬೇಡಿ. ಇದರಿಂದಾಗಿ ಇಂಟರ್ನೆಟ್ ಸಂಪರ್ಕವೂ ದುರ್ಬಲವಾಗುತ್ತದೆ. VPN ಮೂಲಕ ಇಂಟರ್ನೆಟ್ ಬಳಸುವುದರಿಂದ ಇಂಟರ್ನೆಟ್ ನಿಧಾನವಾಗುತ್ತದೆ ಎಂಬುದು ನೆನಪಿರಲಿ.

Whats_app_banner