ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಬಳಸುವುದ್ಯಾಕೆ ? ಚಾಲಕನಿಗೆ ಇದರಿಂದಾಗುವ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಬಳಸುವುದ್ಯಾಕೆ ? ಚಾಲಕನಿಗೆ ಇದರಿಂದಾಗುವ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಬಳಸುವುದ್ಯಾಕೆ ? ಚಾಲಕನಿಗೆ ಇದರಿಂದಾಗುವ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Dashboard Camera in Car: ಸುರಕ್ಷಿತವಾಗಿ ವಾಹನ ಕಾರು ಚಾಲನೆ ಮಾಡಲು ಯಾವುದೇ ಚಾಲಕನಿಗೆ ಡ್ಯಾಶ್‌ಬೋರ್ಡ್ ಕ್ಯಾಮೆರಾ ಅತ್ಯಗತ್ಯ ಸಾಧನವಾಗಿದೆ. ದುಬಾರಿಯೆನ್ನಿಸಿದರೂ ಗುಣಮಟ್ಟದ ಡ್ಯಾಶ್‌ ಕ್ಯಾಮರಾವನ್ನು ಕಾರುಗಳಲ್ಲಿ ಅಳವಡಿಸುವ ಮೂಲಕ ಚಾಲಕನು ತನ್ನ ಹಾಗೂ ಕಾರಿನ ಸುರಕ್ಷತೆಯನ್ನ ಕಾಯ್ದುಕೊಳ್ಳಬಹುದು.

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ (freepik)
ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ (freepik)

ಬೆಂಗಳೂರಿನಂತಹ ಮೆಟ್ರೋಪಾಲಿಟನ್‌ ಸಿಟಿಯಲ್ಲಿ ನಾವೇ ಸರಿಯಾಗಿ ಡ್ರೈವ್‌ ಮಾಡಿದರೂ ಮುಂದಿನಿಂದ ಬರುವ ವಾಹನಗಳೋ, ಹಿಂದಿನಿಂದ ಬರುವ ವಾಹನಗಳೋ ಅಥವಾ ಪಕ್ಕದಲ್ಲೇ ಹಾದು ಹೋದುವ ವಾಹನ ಸವಾರನ ನಿರ್ಲಕ್ಷ್ಯದಿಂದ ಕಣ್ಣುಮುಚ್ಚಿ ತೆರೆಯುವುದಕ್ಕೂ ಮುನ್ನವೇ ಅಪಘಾತಗಳು ಸಂಭವಿಸಿ ಬಿಡುತ್ತವೆ. ಆದರೆ ಅಲ್ಲಿ ಯಾರದು ತಪ್ಪು ಎಂಬ ಪ್ರಶ್ನೆ ಬಂದಾಗ, ನಮ್ಮ ಬಳಿ ಉತ್ತರ ನೀಡಲು ಸಾಕ್ಷಿ ಬೇಕಲ್ಲ. ಅಪಘಾತಗಳನ್ನು ನೋಡಿದ ಪ್ರತ್ಯಕ್ಷದರ್ಶಿಗಳಿದ್ದರೆ ಸರಿ, ಒಂದು ವೇಳೆ ಇಲ್ಲವೆಂದಾದರೆ? ಇಂಥಹ ಸಂದರ್ಭಗಳಲ್ಲಿ ಡ್ಯಾಶ್‌ಬೋರ್ಡ್‌ ಕ್ಯಾಮರಾಗಳ ಬಳಕೆ ಬಹಳ ಮುಖ್ಯವಾಗುತ್ತದೆ.

ಈಗಂತೂ ಹೆಚ್ಚಿನ ವಾಹನ ಸವಾರರು ತಮ್ಮ ಕಾರಿನಲ್ಲಿ ಡ್ಯಾಶ್‌ಬೋರ್ಡ್‌ ಕ್ಯಾಮರಾಗಳ ಬಳಕೆಯನ್ನು ಮಾಡುತ್ತಾರೆ. ಹಾಗಾದರೆ ಇದು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಇದರ ಬಳಕೆಯಿಂದಾಗುವ ಪ್ರಯೋಜನಗಳೇನು ಎಂಬುದರ ಬಗ್ಗೆ ಗಮನಹರಿಸೋಣ.

ಡ್ಯಾಶ್‌ಬೋರ್ಡ್ ಕ್ಯಾಮೆರಾ ಎಂದರೇನು?

ನಿಮ್ಮ ಕಾರಿನ ಡ್ಯಾಶ್‌ಬೋರ್ಡ್​ನಲ್ಲಿ ಅಳವಡಿಸಲಾಗುವ ಚಿಕ್ಕದಾದ ವಿಡಿಯೋ ಕ್ಯಾಮೆರಾವನ್ನು ಡ್ಯಾಶ್‌ಬೋರ್ಡ್ ಕ್ಯಾಮ್ ಎನ್ನಲಾಗುತ್ತದೆ. ನೀವು ವಾಹನ ಚಾಲನೆ ಮಾಡುವಾಗ ನಿಮ್ಮ ವಾಹನದ ಮುಂದೆ ನಡೆಯುವ ಎಲ್ಲವನ್ನೂ ರೆಕಾರ್ಡ್ ಮಾಡುವುದು ಇದರ ಕೆಲಸ.

ಭಾರತದಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಕಳೆದ ಕೆಲವು ವರ್ಷಗಳಿಂದ ಡ್ಯಾಶ್ ಕ್ಯಾಮ್‌ಗಳು ಹೆಚ್ಚು ಜನಪ್ರಿಯವಾಗಿವೆ. ಈ ಕ್ಯಾಮೆರಾಗಳು ನಮ್ಮ ದೇಶದ ಅದೆಷ್ಟೋ ರಸ್ತೆ ಅಪಘಾತಗಳ ದೃಶ್ಯವನ್ನು ಸೆರೆಹಿಡಿದು, ವಾಹನ ಚಾಲಕರಿಗೆ ಹೆಚ್ಚಿನ ಭದ್ರೆತೆಯ ಜೊತೆಗೆ ಮನಸ್ಸಿಗೆ ನೆಮ್ಮದಿಯನ್ನೂ ಉಂಟುಮಾಡಿದೆ. ಅಪಘಾತದ ತುಣುಕುಗಳನ್ನು ಸೆರೆಹಿಡಿಯುವ ಮೂಲಕ ಯಾವ ಚಾಲಕ ತಪ್ಪು ಮಾಡಿದ್ದಾನೆಂಬುದರ ವಿಡಿಯೋ ಸಾಕ್ಷಿಯನ್ನು ನೀಡುತ್ತದೆ. ಅಲ್ಲದೆ ಕಾರು ಕಳ್ಳರು ಮತ್ತು ದುಷ್ಕರ್ಮಿಗಳನ್ನು ಕಂಡುಹಿಡಿಯುವಲ್ಲಿ ಡ್ಯಾಶ್‌ ಕ್ಯಾಮ್‌ ಪಾತ್ರ ಪ್ರಮುಖವಾಗಿದೆ.

ಈಗಂತೂ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಡ್ಯಾಶ್ ಕ್ಯಾಮ್‌ಗಳು ಇನ್‌ ಬಿಲ್ಟ್‌ ಜಿಪಿಎಸ್‌ ವ್ಯವಸ್ಥೆಯನ್ನು ಹೊಂದಿದ್ದು, ನೀವು ಇರುವಂತಹ ಸ್ಥಳ ಹಾಗೂ ವೇಗವನ್ನೂ ಸುಲಭವಾಗಿ ಟ್ಯ್ರಾಕ್‌ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ವೇಗದ ಮಿತಿಯ ಬಗೆಗಿನ ಗೊಂದಲಗಳನ್ನು ಸರಿಪಡಿಸಿಕೊಳ್ಳಬಹುದು. ಆದ್ದರಿಂದ, ಡ್ಯಾಶ್ ಕ್ಯಾಮ್ ನ ಮೇಲೆ ಹೂಡಿಕೆ ಮಾಡುವುದು ಉಪಯುಕ್ತವಾಗಿದೆ.

ಡ್ಯಾಶ್ ಕ್ಯಾಮೆರಾ ಹೇಗೆ ಕೆಲಸ ಮಾಡುತ್ತದೆ?

1. ವಿದ್ಯುತ್ ಮೂಲ: ಡ್ಯಾಶ್ ಕ್ಯಾಮೆರಾ ಸಾಮಾನ್ಯವಾಗಿ ನಿಮ್ಮ ಕಾರಿನ ಯುಎಸ್‌ಬಿ ಪೋರ್ಟ್‌ನ ಮೂಲಕ ಕಾರ್ಯನಿರ್ವಹಿಸುತ್ತದೆ. ಕೆಲವು ಡ್ಯಾಶ್‌ ಕ್ಯಾಮ್​​​ಗಳು ನಿಮ್ಮ ಕಾರಿನ ಎಲೆಕ್ಟ್ರಿಕಲ್ ಸಿಸ್ಟಮ್‌ಗೆ ನೇರ ಸಂಪರ್ಕವನ್ನು ಪಡೆಯುತ್ತದೆ.

2. ರೆಕಾರ್ಡಿಂಗ್ ಮಾಡುವ ವಿಧಾನ: ಒಂದುಬಾರಿ ಡ್ಯಾಶ್ ಕ್ಯಾಮ್ ಕಾರ್ಯನಿರ್ವಹಿಸಲು ಪ್ರಾರಂಭಿಸಿದರೆ, ಅದು ಕಾರಿನ ಮುಂದಿರುವ ರಸ್ತೆಯ ವಿಡಿಯೋ ತುಣುಕನ್ನು ನಿರಂತರವಾಗಿ ರೆಕಾರ್ಡ್ ಮಾಡಲು ಪ್ರಾರಂಭಿಸುತ್ತದೆ. ಮೆಮೊರಿ ಕಾರ್ಡ್ ತುಂಬಿದ ನಂತರ ಹಳೆಯ ತುಣುಕುಗಳನ್ನು ಅಳಿಸಿಹಾಕಿ ಹೊಸ ವಿಡಿಯೋ ಸೇವ್​ ಆಗುತ್ತದೆ.

3. ಇನ್‌ ಬಿಲ್ಟ್‌ ಸೆನ್ಸಾರ್‌: ಅನೇಕ ಡ್ಯಾಶ್ ಕ್ಯಾಮ್‌ಗಳು ಇನ್‌ ಬಿಲ್ಟ್‌ ಸೆನ್ಸಾರ್‌ ಹೊಂದಿದ್ದು, ಅದು ಅನಿರೀಕ್ಷಿತ ಚಲನೆಗಳನ್ನು ಅತಿ ವೇಗವಾಗಿ ಪತ್ತೆ ಮಾಡುತ್ತದೆ. ಅಲ್ಲದೆ ರೆಕಾರ್ಡ್‌ ಮಾಡಲಾದ ವಿಡಿಯೋವನ್ನು ತಾನಾಗಿಯೇ ಪ್ರತ್ಯೇಕ ಫೈಲ್ ಮಾಡಿ ಅದರಲ್ಲಿ ಉಳಿಸಿಕೊಳ್ಳುತ್ತದೆ.

4. ಸಂಗ್ರಹಣೆ: ಮೆಮೊರಿ ಕಾರ್ಡ್ ಬಳಸಿಕೊಂಡು ಡ್ಯಾಶ್ ಕ್ಯಾಮೆರಾಗಳು ರೆಕಾರ್ಡ್ ಮಾಡಿದ ದೃಶ್ಯಗಳನ್ನು ಸಂಗ್ರಹಿಸುತ್ತವೆ. ಮೆಮೊರಿ ಕಾರ್ಡ್‌ ಸಾಮರ್ಥ್ಯದ ಅನುಸಾರವಾಗಿ ವಿಡಿಯೋ ತುಣುಕುಗಳನ್ನು ಉಳಿಸಿಕೊಳ್ಳುತ್ತದೆ.

5. ವೀಕ್ಷಣೆ: ನಿಮ್ಮ ಡ್ಯಾಶ್ ಕ್ಯಾಮೆರಾನಿಂದ ಸೆರೆಹಿಡಿಯಲಾದ ವಿಡಿಯೋವನ್ನು ವೀಕ್ಷಿಸಲು, ಕ್ಯಾಮೆರಾಗೆ ಅಳವಡಿಸಲಾದ ಮೆಮೊರಿ ಕಾರ್ಡನ್ನು ತೆಗೆದು, ಅದನ್ನು ನಿಮ್ಮ ಕಂಪ್ಯೂಟರ್​​ಗೆ ಅಳವಡಿಸಿ ವೀಕ್ಷಿಸಬಹುದು. ಕೆಲವು ಡ್ಯಾಶ್ ಕ್ಯಾಮ್‌ಗಳು ಇನ್‌ ಬಿಲ್ಟ್‌ ಸ್ಕ್ರೀನ್ ಹೊಂದಿದ್ದು, ಅದರಲ್ಲಿಯೇ ನೇರವಾಗಿ ವಿಡಿಯೋ ವೀಕ್ಷಿಸಲು ಸಾಧ್ಯವಾಗುತ್ತದೆ.

ಡ್ಯಾಶ್ ಕ್ಯಾಮ್‌ನ ಕೆಲಸ ಕಾರ್ಯಗಳ ಬಗ್ಗೆ ನೀವು ತಿಳಿಯಲೇಬೇಕು:

1. ಅಪಘಾತಗಳಲ್ಲಿ ಮುಖ್ಯ ಸಾಕ್ಷಿ

ಅಪಘಾತದ ಸಂದರ್ಭದಲ್ಲಿ ಡ್ಯಾಶ್ ಕ್ಯಾಮೆರಾಗಳು ಮೌಲ್ಯಯುತವಾದ ಪುರಾವೆಗಳನ್ನು ಒದಗಿಸುತ್ತವೆ. ಚಾಲಕರು ಯಾರು ತಪ್ಪು ಮಾಡಿದ್ದಾರೆಂದು ಸಾಬೀತುಪಡಿಸಲು ಇದು ಸಹಾಯ ಮಾಡುತ್ತದೆ. ಕೆಲವು ಡ್ಯಾಶ್‌ಕ್ಯಾಮ್‌ಗಳು ಜಿಪಿಎಸ್ ಟ್ರ್ಯಾಕಿಂಗ್‌ನಂತಹ ಹೊಸ ತಂತ್ರಜ್ಞಾನವನ್ನು ಹೊಂದಿದ್ದು, ಅಪಘಾತದ ಸಮಯದಲ್ಲಿ ವಾಹನದ ಸ್ಥಳ ಮತ್ತು ವೇಗದ ಕುರಿತು ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ.

2. ವಂಚನೆಯ ವಿರುದ್ಧ ರಕ್ಷಣೆ

ವಿಮೆ ಹಕ್ಕುಗಳ ವಿಚಾರದಲ್ಲಿ ಮೋಸಮಾಡುವುದು ಈಗಂತೂ ಸಾಮಾನ್ಯವಾಗಿದೆ. ಡ್ಯಾಶ್ ಕ್ಯಾಮೆರಾ ಬಳಸುವುದರಿಂದ ಆ ಸಂದರ್ಭದಲ್ಲಿ ಅಪಘಾತದ ಸುತ್ತಮುತ್ತಲಿನ ಪುರಾವೆಯನ್ನು ಒದಗಿಸಿ, ಚಾಲಕರನ್ನು ರಕ್ಷಿಸುತ್ತದೆ. ಅಲ್ಲದೆ ಸುಳ್ಳು ಆರೋಪಗಳನ್ನು ಮಾಡುವ ಮುನ್ನ ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತದೆ

3. ಚಾಲಕನ ನಡವಳಿಕೆಯನ್ನು ಮೇಲ್ವಿಚಾರಣೆಗಿದು ಸೂಕ್ತ

ವೇಗವಾಗಿ ಕಾರು ಚಲಾಯಿಸುವುದು, ಅತಿಯಾಗಿ ಬ್ರೇಕ್‌ ಹಾಕುವುದು ಸೇರಿದಂತೆ ಅಪಾಯಕಾರಿ ಚಾಲನಾ ಅಭ್ಯಾಸಗಳ ಬಗ್ಗೆ ಚಾಲಕರನ್ನು ಎಚ್ಚರಿಸಲು ಡ್ಯಾಶ್‌ ಕ್ಯಾಮೆರಾ ಬಳಕೆ ಉತ್ತಮ ಆಯ್ಕೆ.

4. ಪಾರ್ಕಿಂಗ್ ವೇಳೆ ಭದ್ರತೆ

ಕಾರು ನಿಲ್ಲಿಸಿದಾಗ ಮತ್ತು ಎಂಜಿನ್ ಆಫ್ ಆಗಿರುವಾಗಲೂ ರೆಕಾರ್ಡಿಂಗ್ ವ್ಯವಸ್ಥೆ ಹೊಂದಿರುವ ಡ್ಯಾಶ್‌ ಕ್ಯಾಮೆರಾಗಳು ಕಳ್ಳತನದಂತಹ ಪ್ರಕರಣ ಬೇಧಿಸಲು ಸಹಕಾರಿ. ಯಾಕೆಂದರೆ ಡ್ಯಾಶ್ ಕ್ಯಾಮ್ ಸೆರೆಹಿಡಿಯಲಾದ ದೃಶ್ಯಾವಳಿಗಳನ್ನು ಅಪರಾಧಿಗಳನ್ನು ಗುರುತಿಸಲು ಮತ್ತು ಕಾನೂನು ಕ್ರಮ ಜರಗಿಸಲು ನೆರವಾಗುತ್ತದೆ.

5. ರೋಡ್ ಟ್ರಿಪ್‌ಗಳನ್ನು ಸೆರೆಹಿಡಿಯಲು

ಅಪಘಾತಗಳು ಮತ್ತು ಭದ್ರತೆಗಾಗಿ ಮಾತ್ರವಲ್ಲದೆ ಪ್ರವಾಸಗಳ ವೇಳೆಯಲ್ಲೂ ದೃಶ್ಯಗಳನ್ನು ಸೆರೆಹಿಡಿಯಲು ಡ್ಯಾಶ್‌ ಕ್ಯಾಮ್‌ ಉಪಯುಕ್ತವಾಗಿದೆ. ಕೆಲವು ಡ್ಯಾಶ್ ಕ್ಯಾಮ್‌ಗಳು ಉತ್ತಮ-ಗುಣಮಟ್ಟದ ಕ್ಯಾಮೆರಾಗಳನ್ನು ಹೊಂದಿದ್ದು, ಅದ್ಭುತವಾದ ದೃಶ್ಯಗಳನ್ನು ಸೆರೆಹಿಡಿಯಲು ಸಹಾಯಕವಾಗಿದೆ.

ಅತ್ಯುತ್ತಮ ಡ್ಯಾಶ್ ಕ್ಯಾಮೆರಾ ಆಯ್ಕೆ ಹೇಗೆ ?

ಅತ್ಯುತ್ತಮ ಡ್ಯಾಶ್ ಕ್ಯಾಮ್ ಅನ್ನು ಆಯ್ಕೆ ಮಾಡುವುದು ಕಷ್ಟಕರ ವಿಚಾರ. ಯಾಕೆಂದರೆ ಮಾರುಕಟ್ಟೆಯಲ್ಲಿ ನಿಮಗೆ ಅನೇಕ ಆಯ್ಕೆಗಳಿರುತ್ತವೆ. ಆದರೂ ನಿಮ್ಮ ಗೊಂದಲವನ್ನು ಪರಿಹರಿಸಲು ಸಹಾಯ ಮಾಡುವ ಕೆಲವು ಅಂಶಗಳು ಇಲ್ಲಿದೆ.

1. ವಿಡಿಯೊ ಗುಣಮಟ್ಟ: ಡ್ಯಾಶ್ ಕ್ಯಾಮ್ ಅನ್ನು ಆಯ್ಕೆಮಾಡುವಾಗ ವಿಡಿಯೋದ ಗುಣಮಟ್ಟವನ್ನು ತಿಳಿದುಕೊಳ್ಳಬೇಕು. ರಸ್ತೆಯ ಸ್ಪಷ್ಟ ಮತ್ತು ಸಮಗ್ರ ನೋಟವನ್ನು ಸೆರೆಹಿಡಿಯಲು ಕನಿಷ್ಠ 1080p ರೆಸಲ್ಯೂಶನ್ ಮತ್ತು ವೈಡ್-ಆಂಗಲ್ ಲೆನ್ಸ್ ಹೊಂದಿರುವ ಕ್ಯಾಮರಾವನ್ನು ಆರಿಸಿಕೊಳ್ಳಿ.

2. ಜಿಪಿಎಸ್ ಅಳವಡಿಕೆ: ಈಗಂತೂ ಜಿಪಿಎಸ್‌ ಅಳವಡಿಕೆಯಿಲ್ಲದಿದ್ದರೆ ಯಾವ ಕೆಲಸವೂ ನಡೆಯುವುದೇ ಇಲ್ಲ. ಜಿಪಿಎಸ್‌ ಹೊಂದಿದ ಡ್ಯಾಶ್ ಕ್ಯಾಮ್ ಇದ್ದರೆ ನಿಮ್ಮ ಸ್ಥಳ ಮತ್ತು ವೇಗದ ಬಗ್ಗೆ ಮೌಲ್ಯಯುತ ಮಾಹಿತಿಯನ್ನು ನೀಡುತ್ತದೆ. ಇದು ಅನೇಕ ಬಾರಿ ನಿಮ್ಮ ನೆರವಿಗೆ ಬರುತ್ತದೆ.

3. ಸಂಗ್ರಹಣಾ ಸಾಮರ್ಥ್ಯ: ಡ್ಯಾಶ್‌ಕ್ಯಾಮ್‌ನ ಸಂಗ್ರಹಣಾ ಸಾಮರ್ಥ್ಯವು, ಎಷ್ಟು ವಿಡಿಯೋ ತುಣುಕನ್ನು ಸಂಗ್ರಹಿಸಬಹುದು ಎಂಬುದನ್ನು ನಿರ್ಧರಿಸುತ್ತದೆ. ಹೆಚ್ಚು ಶೇಖರಣಾ ಸಾಮರ್ಥ್ಯದ ಮೆಮೊರಿ ಕಾರ್ಡ್ ಇರುವ ಅಥವಾ ಕ್ಲೌಡ್‌ನಲ್ಲಿ ತುಣುಕನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಕ್ಯಾಮರಾ ನಿಮ್ಮ ಆಯ್ಕೆಯಾಗಿರಲಿ.

4. ಬ್ಯಾಟರಿ ಬಾಳಿಕೆ: ಡ್ಯಾಶ್‌ ಕ್ಯಾಮ್‌ ಆಯ್ಕೆಯ ವೇಳೆ ದೀರ್ಘ ಬ್ಯಾಟರಿ ಬಾಳಿಕೆ ಹೊಂದಿದೆಯೇ ಎಂದು ಸ್ಪಷ್ಟವಾಗಿ ಕೇಳಿ ತಿಳಿದುಕೊಳ್ಳಿ.

5. ಹೆಚ್ಚುವರಿ ವೈಶಿಷ್ಟ್ಯ: ಕೆಲವು ಡ್ಯಾಶ್ ಕ್ಯಾಮ್‌ಗಳು ಕೆಲವು ಎಚ್ಚರಿಕೆಯ ಮಾಹಿತಿಯನ್ನು ಖುಡ ನೀಡುತ್ತದೆ. ಇಂತಹ ಹೆಚ್ಚುವರಿ ವೈಶಿಷ್ಟ್ಯಗಳಿದ್ದರೆ ಮೊದಲೇ ಕೇಳಿ ತಿಳಿದುಕೊಳ್ಳಿ.

ಒಟ್ಟಿನಲ್ಲಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡಲು ಯಾವುದೇ ಕಾರು ಚಾಲಕನಿಗೆ ಡ್ಯಾಶ್‌ಬೋರ್ಡ್ ಕ್ಯಾಮೆರಾ ಅತ್ಯಗತ್ಯ ಸಾಧನವಾಗಿದೆ. ನಿಮ್ಮ ಕಾರಿಗೆ ಡ್ಯಾಶ್‌ ಕ್ಯಾಮ್‌ ಅಳವಡಿಸಿಲ್ಲವಾದರೆ, ಇಂದೇ ಇದರ ಬಗ್ಗೆ ಮತ್ತೊಮ್ಮೆ ಯೋಚಿಸಿ, ನಿಮ್ಮ ಸುರಕ್ಷತೆ ನಿಮ್ಮದೇ ಕೈಯಲ್ಲಿದೆ.

ಬರಹ: ಭಾಗ್ಯಾ ದಿವಾಣ

Whats_app_banner