ಕನ್ನಡ ಸುದ್ದಿ  /  ಜೀವನಶೈಲಿ  /  Cyber Crime: ಸೈಬರ್‌ ವಂಚಕರ ಬ್ಲ್ಯಾಕ್‌ಮೇಲ್‌ಗೇಕೆ ಅಂಜಿಕೆ, ಸುರಕ್ಷತೆಯ ಕೀಲಿಕೈ ನಮ್ಮ ಕೈಯಲ್ಲೇ ಇದೆ; ರಂಗಸ್ವಾಮಿ ಮೂಕನಹಳ್ಳಿ ಬರಹ

Cyber Crime: ಸೈಬರ್‌ ವಂಚಕರ ಬ್ಲ್ಯಾಕ್‌ಮೇಲ್‌ಗೇಕೆ ಅಂಜಿಕೆ, ಸುರಕ್ಷತೆಯ ಕೀಲಿಕೈ ನಮ್ಮ ಕೈಯಲ್ಲೇ ಇದೆ; ರಂಗಸ್ವಾಮಿ ಮೂಕನಹಳ್ಳಿ ಬರಹ

ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಸ್ನೇಹಿತರು ಸೈಬರ್ ಕ್ರೈಮ್‌ಗೆ ತುತ್ತಾಗುತ್ತಿರುವುದು ಸಾಮಾನ್ಯವಾಗಿದೆ. ವಿಡಿಯೊ ಕರೆ ಮಾಡಿ ಬ್ಲ್ಯಾಕ್‌ಮೇಲ್‌ ಮಾಡುವವರು ಹೆಚ್ಚಿದ್ದಾರೆ. ಆದರೆ ಇದಕ್ಕೆ ಭಯ ಬೀಳುವುದು ಬೇಡ, ಸುರಕ್ಷತೆಯ ಮಾರ್ಗವನ್ನು ಅನುಸರಿಸಿ, ನಮ್ಮ ಎಚ್ಚರದಲ್ಲಿ ನಾವಿರೋಣ ಎಂದು ಫೇಸ್‌ಬುಕ್‌ ಬರಹದ ಮೂಲಕ ತಿಳಿಸಿದ್ದಾರೆ ರಂಗಸ್ವಾಮಿ ಮೂಕನಹಳ್ಳಿ.

ಸೈಬರ್‌ ವಂಚನೆ
ಸೈಬರ್‌ ವಂಚನೆ

ಸೈಬರ್‌ ಕ್ರೈಮ್‌ ಇಂದಿನ ಜಗತ್ತಿನಲ್ಲಿ ಹೆಚ್ಚು ಕೇಳಿ ಬರುತ್ತಿರುವ ಶಬ್ದ, ಪ್ರತಿ ಗಲ್ಲಿಗೆ ಒಬ್ಬರಂತೆ ಸೈಬರ್‌ ವಂಚಕರು ಹುಟ್ಟಿಕೊಳ್ಳುತ್ತಿದ್ದಾರೆ, ಮಾತ್ರವಲ್ಲ ಇದೊಂದು ಹಣ ಗಳಿಸುವ ತಂತ್ರವಾಗಿ ಮಾರ್ಪಾಡಾಗಿದೆ. ಬ್ಯಾಂಕ್‌ ಖಾತೆಗೆ ಕನ್ನ ಹಾಕುವುದರ ಜೊತೆಗೆ ವಿಡಿಯೊ ಕರೆ, ಅಶ್ಲೀಲ ವಿಡಿಯೊಗಳನ್ನು ಕಳುಹಿಸುವುದು ಈ ಮೂಲಕವೂ ಬೆದರಿಕೆ ಹಾಕಿ ಹಣ ಕೀಳುವ ವಂಚಕರ ಸಂಖ್ಯೆ ಹೆಚ್ಚಾಗಿದೆ. ಹಾಗಂತ ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಸುರಕ್ಷತೆಯ ಕೀಲಿಕೈ ನಮ್ಮ ಕೈಯಲ್ಲೇ ಇದೆ ಎನ್ನುತ್ತಾರೆ ರಂಗಸ್ವಾಮಿ ಮೂಕನಹಳ್ಳಿ.

ಟ್ರೆಂಡಿಂಗ್​ ಸುದ್ದಿ

ಸೈಬರ್‌ ವಂಚನೆಯ ಕುರಿತ ರಂಗಸ್ವಾಮಿ ಮೂಕನಹಳ್ಳಿ ಅವರ ಬರಹ

ಬಹಳ ಮುಖ್ಯವಾದ ವಿಷಯ ಎಲ್ಲರೂ ಮನನ ಮಾಡಿಕೊಳ್ಳಬೇಕಾದದ್ದು!

ನಿನ್ನೆ ರಾತ್ರಿ ನನ್ನ ಆಪ್ತಮಿತ್ರರೊಬ್ಬರಿಗೆ ಕಿಡಿಗೇಡಿಯೊಬ್ಬ ವಿಡಿಯೊ ಕಾಲ್ ಮಾಡಿದ್ದಾನೆ. ಇವರು ಅದನ್ನು ಸ್ವೀಕರಿಸಿದ್ದಾರೆ. ಅದಾದ ಸ್ವಲ್ಪ ಹೊತ್ತಿನಲ್ಲಿ ಇವರ ಮನೆಯ ಬ್ಯಾಕ್‌ಗ್ರೌಂಡ್‌ ಬಳಸಿಕೊಂಡು, ಅವರನ್ನು ಬಳಸಿಕೊಂಡು ಅಶ್ಲೀಲ ವಿಡಿಯೊ ತಯಾರಿಸಿ ಅವರಿಗೆ ಕಳಿಸಿದ್ದಾರೆ. ಅದು ಫೇಕ್, ಆದರೆ ಅದನ್ನು ಎಲ್ಲರಿಗೂ ಕಳಿಸುವುದಾಗಿ ಬೆದರಿಕೆ ಬೇರೆ ಹಾಕಿದ್ದಾರೆ. ಭಯಗೊಂಡ ಅವರು ಅವನು ಕೇಳಿದಷ್ಟು ಹಣ ತೆತ್ತಿದ್ದಾರೆ. ಮತ್ತೆ ಹಣದ ಬೇಡಿಕೆ ಇಟ್ಟಿದ್ದಾರೆ, ಇವರು ಕೊಟ್ಟಿದ್ದಾರೆ, ಮತ್ತೆ ಬೇಡಿಕೆ..., ಈ ಬಾರಿ ಇವರು ಕೈ ಚೆಲ್ಲಿ ಕೂತಿದ್ದಾರೆ.

ಪರಿಚಯದ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಅವರು ದುಡ್ಡು ಕೊಡಬಾರದಿತ್ತು, ಏನಾದರೂ ಮಾಡು ಎಂದು ಹೇಳಬೇಕಿತ್ತು ಎಂದಿದ್ದಾರೆ. ಬಂಧು ಮಿತ್ರರ ಮುಂದೆ 'ನಗ್ನ'ರಾಗಿ ನಿಲ್ಲುವುದು ಸಾವಿಗೆ ಸಮಾನ ಎಂದು ನಂಬಿರುವ ಅವರಿಗೆ ಆ ಸಮಯದಲ್ಲಿ ಏನು ಮಾಡಬೇಕು ತಿಳಿದಿಲ್ಲ. ಕೊನೆಗೆ ಪೊಲೀಸರ ಆದೇಶದ ಮೇರೆಗೆ ಫೇಕ್‌ ಅಕೌಂಟ್‌ನಿಂದ ಬಂದ ಎಲ್ಲವನ್ನೂ ಡಿಲೀಟ್ ಮಾಡಿ, ಅಕೌಂಟ್ ಬ್ಲಾಕ್ ಮಾಡಿಸಿ, ವಾಟ್ಸಪ್‌ಗೆ ಬಂದ ಸಂಖ್ಯೆಯನ್ನು ಕೂಡ ಬ್ಲಾಕ್ ಮಾಡಿಸಿದ್ದಾರೆ. ನನ್ನ ಅಕೌಂಟ್ ಹ್ಯಾಕ್ ಆಗಿದೆ ಎನ್ನುವ ಸಂದೇಶವನ್ನು ಫೇಸ್‌ಬುಕ್‌ನಲ್ಲಿ ಹಾಕಿಸಿ, ಪ್ರೊಫೈಲ್ ಲಾಕ್ ಮಾಡಿಸಿದ್ದಾರೆ. ಇದರಿಂದ ನಾವು ಕಲಿಯಬಹುದಾದ ಪಾಠ:

1. ಓಪನ್ ಅಕೌಂಟ್ ಇಟ್ಟುಕೊಂಡ ನಮ್ಮಂತವರು ಫೋಟೊ ಶೇರ್ ಮಾಡಬಾರದು.

2. ಸಾಧ್ಯವಾದರೆ ಪ್ರೊಫೈಲ್ ಲಾಕ್ ಮಾಡಿಕೊಳ್ಳುವುದು.

3. ಅಪರಿಚರಿಂದ ಬರುವ ವಿಡಿಯೊ ಕಾಲ್ ಸ್ವೀಕರಿಸದೆ ಇರುವುದು, ಅದ್ಯಾರೇ ಆಗಿರಲಿ ಮೆಸ್ಸೆಂಜರ್ ವಿಡಿಯೊ ಕಾಲ್ ಮಾತ್ರ ತೆಗೆದುಕೊಳ್ಳುವುದು ಬೇಡ. ಏಕೆಂದರೆ ಅವರು ನಮ್ಮ ಬ್ಯಾಕ್‌ಗ್ರಾಂಡ್‌ ಬಳಸಿಕೊಳ್ಳಲು ಕರೆ ಮಾಡಿರುತ್ತಾರೆ. ಎಚ್ಚರ!

4. ಇಷ್ಟೆಲ್ಲಾ ಆಗಿಯೂ ಯಾರಾದರೂ ಬ್ಲ್ಯಾಕ್‌ಮೇಲ್‌ ಮಾಡಿದರೆ, ಹೆದರದೆ 'ಹೌದ ಸ್ವಾಮಿ, ಕಳುಹಿಸಿ, ಎಲ್ಲರಿಗೂ ಕಳುಹಿಸಿ' ಎನ್ನುವುದು. ಹಣವನ್ನು ಕೊಡದಿರುವುದು. ನಾವ್ಯಾರು ಎನ್ನುವುದು ಗೊತ್ತಿರುವವರರಿಗೆ ನಾವು ಸಫಾಯಿ ನೀಡುವ ಅವಶ್ಯಕತೆ ಇಲ್ಲ. ನಾವ್ಯಾರು ಎಂದು ಗೊತ್ತಿಲ್ಲದವರಿಗೆ ಸಫಾಯಿ ಕೊಡುವ ಅವಶ್ಯಕತೆಯಿಲ್ಲ ಅಂದಮೇಲೆ ಹೆದರಿಕೆಯೇಕೆ?

4. ಮಕ್ಕಳಿಗೆ ಯಾವುದೇ ಕಾರಣಕ್ಕೂ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ಟ್ವಿಟರ್‌, ಯೌಟ್ಯೂಬ್ ಖಾತೆ ತೆಗೆಯಲು ಬಿಡಬೇಡಿ. ಟೈಮ್ ವೇಸ್ಟ್. ಬದುಕಿನ ಕಡೆಗೆ, ಭವಿಷ್ಯದ ಕಡೆಗೆ ಗಮನ ಹರಿಸಲು ಸಹಾಯ ಮಾಡಿ.

ಕೊನೆಗೆ: ನಿತ್ಯವೂ ಒಬ್ಬರಲ್ಲ ಒಬ್ಬರು ಸ್ನೇಹಿತರು ಈ ಸೈಬರ್ ಕ್ರೈಮ್‌ಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಇದನ್ನು ಹೇಳಬೇಕೆನಿಸಿತು. ಯಾವುದಕ್ಕೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋಣ.

ವಿಭಾಗ