Apple: ಆ್ಯಪಲ್ ಕಂಪನಿಯೆಂಬ ಮಾಯಾ ಬಜಾರ್; ಅರ್ಧ ಕಚ್ಚಿದ ಸೇಬು ಗುರುತಿರುವ ಈ ಪ್ರಾಡಕ್ಟ್‌ಗಳು ನಾವು ಅಂದುಕೊಂಡಂಗಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  Apple: ಆ್ಯಪಲ್ ಕಂಪನಿಯೆಂಬ ಮಾಯಾ ಬಜಾರ್; ಅರ್ಧ ಕಚ್ಚಿದ ಸೇಬು ಗುರುತಿರುವ ಈ ಪ್ರಾಡಕ್ಟ್‌ಗಳು ನಾವು ಅಂದುಕೊಂಡಂಗಲ್ಲ

Apple: ಆ್ಯಪಲ್ ಕಂಪನಿಯೆಂಬ ಮಾಯಾ ಬಜಾರ್; ಅರ್ಧ ಕಚ್ಚಿದ ಸೇಬು ಗುರುತಿರುವ ಈ ಪ್ರಾಡಕ್ಟ್‌ಗಳು ನಾವು ಅಂದುಕೊಂಡಂಗಲ್ಲ

Apple Products: ಬ್ರಾಂಡ್ ಲಾಯಲ್ಟಿ ವಿಚಾರಕ್ಕೆ ಬಂದರೆ ಆ್ಯಪಲ್ ಕಂಪನಿಯ ಸಾಧನೆ ಬಹುದೊಡ್ಡದು. ಒಮ್ಮೆ ಆ್ಯಪಲ್ ಕಂಪನಿಯ ಉತ್ಪನ್ನಗಳನ್ನು ಖರೀದಿಸಿ, ಬಳಸಲು ಅರಂಭಿಸಿದವರು ಬೇರೆ ಉತ್ಪನ್ನಗಳಿಗೆ ಹೊರಳುವುದು ಕಡಿಮೆ. ಆ್ಯಪಲ್ ಉತ್ಪನ್ನಗಳ ಬಗೆಗಿನ ಬಳಕೆದಾರರ ಮೋಹಕ್ಕೆ ಈ ಬರಹದಲ್ಲಿ ಅಕ್ಷರ ರೂಪ ಕೊಟ್ಟಿದ್ದಾರೆ ಪತ್ರಕರ್ತ ಎಂ.ಶ್ರೀನಿವಾಸ.

ಆಪಲ್ ಅಭಿಮಾನಿಗಳು (ಸಂಗ್ರಹ ಚಿತ್ರ)
ಆಪಲ್ ಅಭಿಮಾನಿಗಳು (ಸಂಗ್ರಹ ಚಿತ್ರ)

Apple WWDC 2023: ಮಧ್ಯದ ಬೆರಳು ಹಾಗೂ ಉಂಗುರದ ಬೆರಳು ಹೀಗೆ ಎರಡು ಬೆರಳನ್ನು ಒಟ್ಟಿಗೆ ಮಾಡಿ ಹಿಡಿದರೆ ಅದರ ಅರ್ಧದಷ್ಟು ಅಗಲದ, ಆ ಬೆರಳುಗಳ ಗಾತ್ರಕ್ಕಿಂತ ತೆಳುವಾದ ಸಾಧನವೊಂದನ್ನು ಆಪಲ್ ಕಂಪನಿ ಬಿಡುಗಡೆ ಮಾಡಿತ್ತು. ಹದಿನೇಳು ವರ್ಷದ ಹಿಂದಿನ ಮಾತು ಇದು. ಅದರಲ್ಲಿ ಸಂಗೀತ, ಉಪನ್ಯಾಸ, ಭಾಷಣವನ್ನು ಲೋಡ್ ಮಾಡಿಟ್ಟುಕೊಂಡು ಕೇಳಬಹುದಿತ್ತು. ಅದಕ್ಕೆ ಆಪಲ್ ಕೊಟ್ಟಿದ್ದ ಹೆಸರು 'ಐಪಾಡ್' (Apple i-Pod). ವಿವಿಧ ಮೆಮೋರಿ ಸಾಮರ್ಥ್ಯದ ಆ ಡಿವೈಸ್ ಅವತ್ತಿಗೇ ದುಬಾರಿ. ಒಂದು-ಎರಡು ಜಿಬಿ ಸಾಮರ್ಥ್ಯದ್ದಕ್ಕೆ ನಾಲ್ಕೂವರೆ ಸಾವಿರ ರೂಪಾಯಿ. ವಾಕ್‌ಮನ್ ಇನ್ನೂ ಬಳಕೆಯಲ್ಲಿ ಇದ್ದಾಗಲೇ ಆಪಲ್ ಇಂಥದ್ದೊಂದು ಗ್ಯಾಜೆಟ್ ತಂದಿತ್ತು. ಅದರಲ್ಲಿ ಹಾಡು ಕೇಳುವುದೇ ಅದ್ಭುತವಾದ ಅನುಭವ. ಆ ಪುಟ್ಟ ಗ್ಯಾಜೆಟ್ ಹಿಂಭಾಗದಲ್ಲಿ ಅರ್ಧ ಕಚ್ಚಿದ ಸೇಬಿನ ಗುರುತು.

ಇಯರ್ ಫೋನ್ ಕಾಣುತ್ತಿತ್ತೇ ವಿನಾ ಐಪಾಡ್ ಹುಡುಕಾಡಬೇಕಿತ್ತು; ಅಷ್ಟು ಪುಟ್ಟದಾದ, ದಿರಿಸಿನ ಬದಿಯಲ್ಲಿ ಹಲ್ಲು ಕಚ್ಚಿ ಅಂಟಿಕೊಂಡ ಹಲ್ಲಿಯಂತೆ ಇದ್ದುಬಿಡುತ್ತಿತ್ತು. ಐಟ್ಯೂನ್ಸ್ ಎಂಬ ಸಾಫ್ಟ್‌ವೇರ್ ಅನ್ನು ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ಗೆ ಗೋ ಡೌನ್ ಲೋಡ್ ಮಾಡಿಕೊಂಡು, ಅದರ ಮೂಲಕ ಹಾಡುಗಳನ್ನು ಐಪಾಡ್ ಗೆ ಹಾಕಿಕೊಳ್ಳಬೇಕಿತ್ತು. ಇದೊಂದು ಬಗೆಯಲ್ಲಿ ಹಿಂಸೆ ಎನಿಸುತ್ತಿತ್ತಾದರೂ ಐಪಾಡ್ ನಲ್ಲಿ ಸಂಗೀತ ಕೇಳುವ ಅನುಭವಕ್ಕೆ ಮನಸ್ಸು ಶರಣು ಶರಣಾರ್ಥಿ ಆಗಿಬಿಡುತ್ತಿತ್ತು. ಅದು ನಾನು ಮೊದಲ ಬಾರಿಗೆ ಬಳಸಿದ ಆಪಲ್ ಕಂಪನಿಯ ಪ್ರಾಡಕ್ಟ್.

ಆ ನಂತರ ಐಪಾಡ್‌ನಲ್ಲೇ ನೂರಾ ಅರವತ್ತು ಜಿಬಿಯ ಸಾಮರ್ಥ್ಯದ್ದು, ಟಚ್‌ಸ್ಕ್ರೀನ್ ಇರುವಂಥ ಐಪಾಡ್ ಹೀಗೆ ಏನೇನೋ ಸಂಗೀತ ಕೇಳುವ, ವಿಡಿಯೋ ನೋಡುವ ಡಿವೈಸ್ ಅನ್ನು ಆಪಲ್ ತಂದಿತು. ಕೆಲವು ಹಿಟ್, ಮತ್ತೆ ಕೆಲವು ಪಟ್. ಏಕೆಂದರೆ ಆಪಲ್ ಕಂಪನಿ ಪ್ರಾಡಕ್ಟ್ ಗಳು ಭಾರತದ ಗ್ರಾಹಕರು, ಮಾರುಕಟ್ಟೆಗೆ ಪರಮ ದುಬಾರಿ ಆಗಿದ್ದವು. ಅವು ದೊರೆಯುತ್ತಿದ್ದ ಸ್ಟೋರ್‌ಗಳು ಬಹಳ ಕಡಿಮೆ ಇದ್ದವು. ನಿಜವಾದ ಗೇಮ್ ಚೇಂಜರ್ ಆಗಿ ಬಂದದ್ದು ಆಪಲ್ ಐಫೋನ್. ಟಚ್‌ಸ್ಕ್ರೀನ್ ಅನ್ನು ಈ ಮೂಲಕ ಆಪಲ್ ಪರಿಚಯಿಸಿತು.

ಉಳಿದ ಕಂಪನಿ ಫೋನ್‌ಗಳ ಬೆಲೆ ಬಹಳ ಹೆಚ್ಚೆಂದರೆ ಹತ್ತು- ಹದಿಮೂರು ಸಾವಿರ ರೂಪಾಯಿ ಇದ್ದ ದಿನಮಾನಗಳವು. ಆಗ ಐಫೋನ್ ಬೆಲೆ ನಲವತ್ತೈದು ಸಾವಿರ ರೂಪಾಯಿ. ಟಚ್ ಸ್ಕ್ರೀನ್, ವಾಹ್ ಅನಿಸುವಂಥ ಫೋಟೋಗಳು, ಅದರಲ್ಲಿ ಸಂಗೀತ ಕೇಳುವುದರ ಅನುಭವವೇ ಬೇರೆ. ಉಳಿದೆಲ್ಲ ಫೋನ್‌ಗಳಲ್ಲಿ ರೇಡಿಯೋ ಇರುತ್ತಿತ್ತು; ಆದರೆ ಆಪಲ್‌ನಲ್ಲಿ ಇಲ್ಲ. ಆದರೆ ನೋಡಿದ ತಕ್ಷಣ ಇದು ಬೇರೆ ಫೋನ್‌ನಂಥಲ್ಲ ಎಂಬ ಭಾವ. ಆಪಲ್ ಫೋನ್ ಹ್ಯಾಂಗ್ ಆಗುತ್ತಿರಲಿಲ್ಲ. ಅದರಲ್ಲಿ ವಿಡಿಯೋ ನೋಡುವುದರ ಮಜವೇ ಬೇರೆ. ಒಟ್ಟಿನಲ್ಲಿ ಆಪಲ್ ಕಂಪನಿ ಏನಾದರೂ ಹೊಸತನ್ನೇ ಗ್ರಾಹಕರಿಗೆ ನೀಡುತ್ತದೆ; ಉಳಿದವರು ಅನುಸರಿಸುತ್ತಾರೆ ಎಂಬಂತೆ ಇತ್ತು ಪರಿಸ್ಥಿತಿ. ಅಲ್ಲಿಯ ತನಕ ಬ್ಲ್ಯಾಕ್ ಬೆರಿ ಫೋನ್ ಬಗ್ಗೆ ಅಂಥದ್ದೊಂದು ಹೆಮ್ಮೆ ಬಳಕೆ ಮಾಡುವವರಲ್ಲಿ ಇತ್ತು. ಆ ಸ್ಥಾನದಲ್ಲಿ ಆಪಲ್ ಬಂದು ಕೂತಿತು.

ಆ ಸಮಯದಲ್ಲಿ ನಾನು ಹಾಯ್ ಬೆಂಗಳೂರ್ ವಾರಪತ್ರಿಕೆಯಲ್ಲಿ ಕೆಲಸದಲ್ಲಿ ಇದ್ದೆ. ರವಿ ಬೆಳಗೆರೆ ಸಂಪಾದಕರು. ಆಗ ಆ ಐಫೋನ್ ಖರೀದಿಸಿ ಎಂದು ಬಹಳ ಸಲ ಅವರಿಗೆ ಹೇಳುತ್ತಿದ್ದೆ. ಏಯ್, ನೀನು ಕೆಲಸ ನೋಡು ಹೋಗು ಎಂಬಂತೆ ಗದರುತ್ತಿದ್ದರು. ಆದರೆ ಅದಾಗಲೇ ಆಪಲ್ ಪ್ರಾಡಕ್ಟ್‌ಗಳಿಗೆ ಅಭಿಮಾನಿ ಆಗಿಹೋಗಿದ್ದ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಇದರ ಬಗ್ಗೆ ಬಹಳ ಬರೆಯುತ್ತಿದ್ದರು. ಆಗ ಅವರು ರವಿ ಬೆಳಗೆರೆಯವರಿಗೆ ಬಹಳ ಹತ್ತಿರದ ಸ್ನೇಹಿತರೂ ಆಗಿದ್ದರು. ಪ್ರಾಯಶಃ ಅವರೇ ಈ ಐಫೋನ್ ಖರೀದಿಗೆ ಒಪ್ಪಿಸಿ, ಕೊಡಿಸಿಯೂ ಬಿಟ್ಟರು ಅನ್ನಿಸುತ್ತದೆ.

ನನ್ನನ್ನು ಕರೆದು, ಐಫೋನ್ ತಗೊಂಡೆ, ಹೇಗಿದೆ ನೋಡು ಎಂದು ತಮ್ಮ ಐಫೋನ್ ತೋರಿಸಿದ್ದರು ಆರ್‌ಬಿ. ಆಪಲ್ ಕಂಪನಿಯ ಫೋನ್ ಮೊದಲ ಬಾರಿಗೆ ನೋಡಿದ್ದು, ಅದರ ಅನುಭವ ಆಗಿದ್ದು ಆಗಲೇ. ಅಲ್ಲಿಂದ ಕೆಲ ಸಮಯದ ಒಳಗೆ ಆಪಲ್ ಮ್ಯಾಕ್ (ಡೆಸ್ಕ್ ಟಾಪ್) ಖರೀದಿಸಿದರು ಬೆಳಗೆರೆ. ಐಪ್ಯಾಡ್, ಐಪಾಡ್ ಹೀಗೆ ಆಪಲ್‌ನಿಂದ ಏನೇ ಬಿಡುಗಡೆಯಾದರೂ ಅದು ಅವರ ಟೇಬಲ್ ಮೇಲಿರುತ್ತಿತ್ತು. ಅವರಿಗೆ ಬಹಳ ಇಷ್ಟವಾದದ್ದು ಐಪ್ಯಾಡ್. ಅದನ್ನು ಬಹಳ ಹೆಚ್ಚಾಗಿ ಬಳಸುತ್ತಿದ್ದರು. ಅದರಲ್ಲಿ ಪುಸ್ತಕಗಳನ್ನು ಓದುವುದು ಅವರಿಗೆ ಖುಷಿ ಕೊಡುತ್ತಿತ್ತು. ಯೂಟ್ಯೂಬ್ ನೋಡುವುದಕ್ಕೆ, ಹಾಡು ಕೇಳುವುದಕ್ಕೆ ಎಲ್ಲಕ್ಕೂ ಐಪ್ಯಾಡ್- ಐಮ್ಯಾಕ್ ಬೆಳಗೆರೆ ಬಳಸುತ್ತಿದ್ದರು.

ಇದನ್ನು ಏಕೆ ಹೇಳಬೇಕಾಯಿತು ಅಂದರೆ, ಆಪಲ್‌ನ ಒಂದು ಪ್ರಾಡಕ್ಟ್ ಮನೆಯೊಳಗೆ ಬಂದರೆ ಅದು ಒಂದಕ್ಕೇ ನಿಲ್ಲುವುದಿಲ್ಲ. ಇನ್ನೊಂದು ಅದರ ಐಒಎಸ್ ಬಳಸಿದ ನಂತರ, ಅದಕ್ಕೆ ಹೊಂದಿಕೊಂಡ ಮೇಲೆ ಉಳಿದದ್ದು ಬಳಸುವುದಿಲ್ಲ ಎನ್ನುತ್ತಾರೆ. ಈ ಮಾತು ಕೆಲವು ಸಲ ಅತಿಶಯೋಕ್ತಿ ಅಲ್ಲ ಎನಿಸುತ್ತದೆ. ಆಪಲ್ ಯಾವುದೇ ಪ್ರಾಡಕ್ಟ್ ತಯಾರಿಸಲಿ, ಅದು ಪ್ರೀಮಿಯಂ ಆಗಿರುತ್ತದೆ. ಪ್ಲಾಸ್ಟಿಕ್ ಬಳಸಿ ಕೆಲವು ಪ್ರಾಡಕ್ಟ್ ಮಾಡಿದ್ದಿದೆ, ಆದರೆ ಅದರಲ್ಲಿ ಗೆದ್ದಿಲ್ಲ. ಬೆಲೆಯ ವಿಚಾರಕ್ಕೆ ಯಾವಾಗಲೂ ಹೆಚ್ಚಾಗಿಯೇ ಇರುತ್ತದೆ; ಆದರೆ ಇದರಿಂದ ಮಾರಾಟಕ್ಕೆ ಹಿನ್ನಡೆ ಆಗಿಲ್ಲ.

ಐಫೋನ್, ವಾಚ್, ಆಪಲ್ ಟಿವಿ, ಐಮ್ಯಾಕ್, ಐಪ್ಯಾಡ್, ಮ್ಯಾಕ್ ಬುಕ್, ಏರ್ ಪಾಡ್, ಹೋಂ ಪಾಡ್ ಹೀಗೆ ಹಲವು ಉತ್ಪನ್ನಗಳನ್ನು ಆಪಲ್ ಮಾರಾಟ ಮಾಡುತ್ತದೆ. ಎಲ್ಲ ಉತ್ಪನ್ನಗಳು ಪರಸ್ಪರ ಇತರ ಪ್ರಾಡಕ್ಟ್‌ಗಳ ಜತೆಗೆ ಬಹಳ ಚೆನ್ನಾಗಿ ಕೆಲಸ ಮಾಡುತ್ತವೆ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ, ಆಪಲ್ ಮಾತನಾಡುವುದು ಇನ್ನೊಂದು ಆಪಲ್ ಜತೆಗೆ ಮಾತ್ರ. ಇದು ತಾರೀಫು ಕೂಡ ಹೌದು, ಆಕ್ಷೇಪವೂ ಹೌದು. ಆಂಡ್ರಾಯಿಡ್ ಉತ್ಪನ್ನಗಳನ್ನು ನೀವು ಬಳಸುತ್ತಿದ್ದರೆ ಯಾವುದೇ ಕಂಪನಿಯ ಆಂಡ್ರಾಯಿಡ್ ಉತ್ಪನ್ನದ ಜತೆಗೆ ಬಳಕೆಗೆ ಸಲೀಸು. ಆದರೆ ಆಪಲ್ ಕಂಪನಿಯ ಐಒಎಸ್‌ಗೆ ಮತ್ತೊಂದು ಐಒಎಸ್ ಡಿವೈಸ್ ಆಗಬೇಕು.

ಆಪಲ್ ಪ್ರಾಡಕ್ಟ್ ಗಳು ತುಂಬ ಕಸ್ಟಮೈಸ್ಡ್ ಅಲ್ಲ. ಹೊಸ ಸಾಫ್ಟ್‌ವೇರ್ ಅಥವಾ ಬೇರೆ ಏನನ್ನಾದರೂ ಅದರೊಳಗೆ ಇನ್ ಸ್ಟಾಲ್ ಮಾಡುವುದಕ್ಕೆ ಆಗಲ್ಲ. ಆಪಲ್‌ನ ಆಪ್‌ಗಳು, ಸಾಫ್ಟ್‌ವೇರ್ ಆಗಿರಬೇಕು ಮತ್ತು ಅದು ಒರಿಜಿನಲ್ ಆಗಿರಲೇ ಬೇಕು. ಕೆಲವು ಬಾರಿ ಅದಕ್ಕೂ ಹಣ ಕೊಡಬೇಕಾಗುತ್ತದೆ. ಅದೇ ಸಮಯಕ್ಕೆ ಐಫೋನ್ ಹ್ಯಾಕ್ ಮಾಡುವುದಾಗಲೀ ಅಥವಾ ಪಾಸ್‌ವರ್ಡ್, ಫೇಸ್ ಐಡಿ ಇವುಗಳನ್ನು ಕಳ್ಳದಾರಿಗಳಿಂದ ಮುರಿದು ಒಳಹೋಗುವುದಾಗಲೀ ಸಲೀಸು ಅಲ್ಲವೇ ಅಲ್ಲ.

ಒಂದು ಪ್ರಾಡಕ್ಟ್ ಬಹಳ ದುಬಾರಿ ಆದ ಹೊರತಾಗಿಯೂ ಅದನ್ನು ಬಳಸುವುದು ಪ್ರತಿಷ್ಠೆ ಎಂಬಂತೆ ಭಾವನೆ ಮೂಡಿಸುವಲ್ಲಿ ಆಪಲ್ ಗೆದ್ದಿದೆ. ಮತ್ತು ಕೊಡುವ ದುಡ್ಡಿಗೆ ಗ್ರಾಹಕರಿಗೆ ಪ್ರೀಮಿಯಂ ಆದ ವಸ್ತುವನ್ನೇ ನೀಡುತ್ತಾ ಬಂದಿದೆ. ಆಪಲ್‌ನ ಯಾವುದೇ ಉತ್ಪನ್ನಗಳು ಅತ್ಯಂತ ಸುಂದರವಾಗಿ ಎಂಬಂತೆಯೇ ವಿನ್ಯಾಸ ಮಾಡಲಾಗುತ್ತದೆ. ಅದರ ಮಾರಾಟ ನಂತರದ ಸೇವೆ ಕೂಡ ಅತ್ಯುತ್ತಮವಾಗಿದೆ. ಹಣದ ವಿಚಾರದಲ್ಲಿ ಪರಮ ದುಬಾರಿ ಎಂಬುದು ಖಂಡಿತಾ ಸತ್ಯ. ಆದರೆ ಅದನ್ನು ಮರೆಸುವಂಥ ಬಳಕೆ ಅನುಭವವನ್ನು ಖಂಡಿತಾ ಅವು ನೀಡುತ್ತವೆ.

ಅಂದ ಹಾಗೆ, ಇತ್ತೀಚೆಗೆ ಆಪಲ್‌ನಿಂದ ಪಾಲಿಷಿಂಗ್ ಕ್ಲಾಥ್ ಅಂತ ಬಿಡುಗಡೆ ಮಾಡಲಾಗಿದೆ. ಅಂಗೈ ಅಗಲ ಇರಬಹುದು, ಭಾರತದಲ್ಲಿ ಅದ ಬೆಲೆ 1900 ರೂಪಾಯಿ. ಇದರ ಬೆಲೆಯನ್ನು ಜಗತ್ತಿನ ಅತ್ಯಂತ ಶ್ರೀಮಂತ ಎಲಾನ್ ಮಸ್ಕ್ ಟ್ರೋಲ್ ಕೂಡ ಮಾಡಿದ್ದರು. ಆದರೆ ಇದನ್ನೂ ಆಪಲ್ ಕೊಳ್ಳುವಂತೆ ಮಾಡುತ್ತದೆ. ಏಕೆಂದರೆ ಅದು ಆಪಲ್. ಇವತ್ತಿನ ಈ ಪ್ರಾಡಕ್ಟ್‌ಗಳೆಲ್ಲದರ ಮೂಲ ಕನಸನ್ನು ಕಂಡ ವ್ಯಕ್ತಿ ಸ್ಟೀವ್ ಜಾಬ್ಸ್. ಆತನ ನಂಬಿಕೆಯೇ ಹಾಗಿತ್ತು. ಗ್ರಾಹಕರಿಗೆ ಏನು ಬೇಕು ಎಂಬುದು ಅವರಿಗಿಂತ ನಮಗೆ ಗೊತ್ತಿರಬೇಕು ಅನ್ನುವ ಜಾಯಮಾನದವ ಆತ. ಈಗ ಆತ ಬದುಕಿಲ್ಲ. ಆದರೆ ಜಾಬ್ಸ್ ಹಾಕಿಕೊಟ್ಟ ಹಾದಿಯಲ್ಲಿ ಆಪಲ್ ಸಾಗುತ್ತಿದೆ.

ಬರಹ: ಎಂ.ಶ್ರೀನಿವಾಸ

Whats_app_banner