World Population Day 2022: ಈ ದಿನದ ಮಹತ್ವ ಗೊತ್ತಾ? ಇಲ್ಲಿದೆ ಈ ವರ್ಷದ ಥೀಮ್
ಇಂದು ಭೂಮಿಯ ಮೇಲೆ ಸುಮಾರು 8 ಶತಕೋಟಿ ಜನರು ವಾಸಿಸುತ್ತಿದ್ದಾರೆ. ಆದರೆ ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳು ಲಭಿಸುತ್ತಿಲ್ಲ. ಅನೇಕ ಜನರು ತಮ್ಮ ಲೈಂಗಿಕ ದೃಷ್ಟಿಕೋನ, ಲಿಂಗ, ಜನಾಂಗೀಯತೆ, ವರ್ಗ, ಧರ್ಮ, ಅಂಗವೈಕಲ್ಯ, ಕಿರುಕುಳ, ತಾರತಮ್ಯ ಮತ್ತು ಹಿಂಸೆಯನ್ನು ಎದುರಿಸುತ್ತಾರೆ. ಇದನ್ನು ನಿರ್ಮೂಲನೆ ಮಾಡಿ ಉತ್ತಮ ಭವಿಷ್ಯದೆಡೆಗೆ ಚೇತರಿಸಿಕೊಳ್ಳುವುದು ಮತ್ತು ಪ್ರತಿಯೊಬ್ಬರಿಗೂ ಅವಕಾಶಗಳು ಸಿಗುವಂತೆ ಮಾಡುವುದು ಈ ದಿನದ ಉದ್ದೇಶವಾಗಿದೆ.
ಪ್ರತಿ ವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ (World Population Day)ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಜನಸಂಖ್ಯೆಯ ಸಮಸ್ಯೆಯ ಕುರಿತು ಗಮನಹರಿಸುವುದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಜನಸಂಖ್ಯಾ ಸ್ಫೋಟವನ್ನು ಎದುರಿಸುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಹೆಚ್ಚುತ್ತಿರುವ ಕೆಲ ಅಪರಾಧಗಳಿಗೆ ಜನಸಂಖ್ಯೆಯೆ ವಿಪರೀತ ಏರಿಕೆ ಕಾರಣವಾಗುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ದೇಶವನ್ನು ಎಲ್ಲಾ ರೀತಿಯಿಂದಲೂ ನಿಭಾಯಿಸುವುದು ಕಷ್ಟ. ಕೆಲ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವುದು ಆಡಳಿತಕ್ಕಿರುವ ಸವಾಲು. ಹೀಗಾಗಿ ಜನಸಂಖ್ಯೆ ನಿರ್ಮೂಲನೆಗೆ ಕ್ರಮ ಕೈಗೊಳ್ಳುವುದು ಅಗತ್ಯದ ಕೆಲಸ.
ವಿಶ್ವ ಜನಸಂಖ್ಯಾ ದಿನವನ್ನು ಆಚರಿಸುವ ಹಿಂದೆ ಹಲವು ಮಹತ್ವದ ಉದ್ದೇಶಗಳಿವೆ. ಬಾಲ್ಯವಿವಾಹ, ಲಿಂಗ ಸಮಾನತೆ, ಮಾನವ ಹಕ್ಕುಗಳು ಹಾಗೂ ಕುಟುಂಬ ಯೋಜನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇದರೊಂದಿಗೆ ಇತರ ವಿಷಯಗಳ ಬಗ್ಗೆಯೂ ಈ ದಿನ ಗಮನ ಹರಿಸಲಾಗುತ್ತದೆ.
ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ವಿಶ್ವದ ಜನಸಂಖ್ಯೆಯು 7.96 ಶತಕೋಟಿಯಷ್ಟಿದೆ. 2030ರ ವೇಳೆಗೆ ಇದು ಸುಮಾರು 8.5 ಶತಕೋಟಿಗೆ ಬೆಳೆಯುವ ನಿರೀಕ್ಷೆಯಿದೆ.
2022ರ ವಿಶ್ವ ಜನಸಂಖ್ಯಾ ದಿನದ ಥೀಮ್ ಅಥವಾ ವಿಷಯ
2022ರ ವಿಶ್ವ ಜನಸಂಖ್ಯಾ ದಿನದ ವಿಷಯವು ತುಂಬಾ ವಿಭಿನ್ನವಾಗಿದೆ. '8 ಶತಕೋಟಿಯ ಪ್ರಪಂಚ: ಎಲ್ಲರಿಗೂ ಚೇತರಿಸಿಕೊಳ್ಳುವ ಭವಿಷ್ಯದ ಕಡೆಗೆ - ಅವಕಾಶಗಳನ್ನು ಬಳಸಿಕೊಳ್ಳುವುದು ಮತ್ತು ಎಲ್ಲರಿಗೂ ಹಕ್ಕುಗಳು ಮತ್ತು ಆಯ್ಕೆಗಳನ್ನು ಖಾತರಿಪಡಿಸುವುದುʼ. ಇದು ಈ ಬಾರಿ ಜನಸಂಖ್ಯಾ ದಿನಾಚರಣೆಯ ಥೀಮ್.
ಇದರ ಅರ್ಥ, ಇಂದು ಭೂಮಿಯ ಮೇಲೆ ಸುಮಾರು 8 ಶತಕೋಟಿ ಜನರು ವಾಸಿಸುತ್ತಿದ್ದಾರೆ. ಆದರೆ ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳು ಇಲ್ಲ. ಅನೇಕ ಜನರು ತಮ್ಮ ಲೈಂಗಿಕ ದೃಷ್ಟಿಕೋನ, ಲಿಂಗ, ಜನಾಂಗೀಯತೆ, ವರ್ಗ, ಧರ್ಮ, ಅಂಗವೈಕಲ್ಯ, ಕಿರುಕುಳ, ತಾರತಮ್ಯ ಮತ್ತು ಹಿಂಸೆಯನ್ನು ಎದುರಿಸುತ್ತಾರೆ. ಇದನ್ನು ನಿರ್ಮೂಲನೆ ಮಾಡಿ ಉತ್ತಮ ಭವಿಷ್ಯದೆಡೆಗೆ ಚೇತರಿಸಿಕೊಳ್ಳುವುದು ಮತ್ತು ಪ್ರತಿಯೊಬ್ಬರಿಗೂ ಅವಕಾಶಗಳು ಸಿಗುವಂತೆ ಮಾಡುವುದು ಈ ದಿನದ ಉದ್ದೇಶವಾಗಿದೆ.
ಅಧಿಕ ಜನಸಂಖ್ಯೆಯ ಸಮಸ್ಯೆ ಎಂದಿಗಿಂತಲೂ ಹೆಚ್ಚು ಗಂಭೀರವಾಗಿದೆ. ವಿಪರ್ಯಾಸವೆಂದರೆ, ಕೆಲವೊಂದು ಉದಯೋನ್ಮುಖ ರಾಷ್ಟ್ರಗಳು ಕೂಡಾ ಈಗ ಲಿಂಗ ಅಸಮಾನತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಸಮಸ್ಯೆಗಳ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ.
ವಿಶ್ವ ಜನಸಂಖ್ಯಾ ದಿನದ ಇತಿಹಾಸ
ವಿಶ್ವ ಜನಸಂಖ್ಯಾ ದಿನವನ್ನು 1989ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಾರಂಭಿಸಲಾಯಿತು. 1987ರ ಜುಲೈ 11ರಂದು ವಿಶ್ವದ ಜನಸಂಖ್ಯೆಯು 5 ಶತಕೋಟಿಯನ್ನು ದಾಟಿತ್ತು. ಈ ವೇಳೆ ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಜಾಗತಿಕ ಮಟ್ಟದಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ನಂತರ 1990ರಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 45/26 ನಿರ್ಣಯದೊಂದಿಗೆ ಆಚರಿಸಲಾಯಿತು.
ವಿಶ್ವ ಜನಸಂಖ್ಯಾ ದಿನದ ಮಹತ್ವ
ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲು ಮುಖ್ಯ ಕಾರಣವೆಂದರೆ ಹೆಚ್ಚುತ್ತಿರುವ ಜನಸಂಖ್ಯೆಯ ಜೊತೆಗೆ ಹೆಚ್ಚಾಗಬಹುದಾದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು. ಮಿತಿಮೀರಿದ ಜನಸಂಖ್ಯೆಯು ಪರಿಸರ ವ್ಯವಸ್ಥೆಗೆ ಹೇಗೆ ಹಾನಿ ಮಾಡುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಈ ದಿನದಂದು ಕುಟುಂಬ ಯೋಜನೆ, ಬಡತನ, ಲೈಂಗಿಕ ಸಮಾನತೆ, ನಾಗರಿಕ ಹಕ್ಕುಗಳು, ತಾಯಿಯ ಆರೋಗ್ಯ, ಇತ್ಯಾದಿ ಕುರಿತು ಚರ್ಚಿಸಲಾಗುತ್ತದೆ.