ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಏನೇನಿದೆ; ಭೇಟಿ ನೀಡಲು ಚಳಿಗಾಲ ಬೆಸ್ಟ್ ಟೈಂ
Bandipur National Park: ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕೇವಲ ಪ್ರವಾಸಿ ತಾಣವಲ್ಲ, ಇದು ವನ್ಯಜೀವಿ ಸಂರಕ್ಷಣೆಗೆ ಭದ್ರಕೋಟೆಯಾಗಿದೆ. ಕರ್ನಾಟಕದಲ್ಲಿದ್ದು ಇನ್ನೂ ನೀವು ಭೇಟಿ ನೀಡಿಲ್ಲ ಅಂದ್ರೆ ಅಲ್ಲಿಗೆ ಹೋಗೋಕೆ ಈ ಚಳಿಗಾಲದ ಸಮಯ ಬೆಸ್ಟ್ ನೋಡಿ.
ಕರ್ನಾಟಕದ ಮೈಸೂರು-ಊಟಿ ಹೆದ್ದಾರಿಯಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನವು ನೀಲಗಿರಿ ರಿಸರ್ವ್ ಅರಣ್ಯ ಪ್ರದೇಶದ ಒಂದು ಭಾಗವಾಗಿದೆ. ಇದು ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ತಮಿಳುನಾಡಿನ ಮುದುಮಲೈ ವನ್ಯಜೀವಿ ಅಭಯಾರಣ್ಯ ಮತ್ತು ಕೇರಳದ ವಯನಾಡ್ ವನ್ಯಜೀವಿ ಅಭಯಾರಣ್ಯದೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಭಾರತದ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದ್ದು, ಕರ್ನಾಟಕ ರಾಜ್ಯದ ಅತಿದೊಡ್ಡ ನ್ಯಾಷನಲ್ ಪಾರ್ಕ್ ಆಗಿದೆ.
ಭೌಗೋಳಿಕವಾಗಿ, ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಒಟ್ಟು 872.24 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ. ಇದರ ಭಾಗಶಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಮತ್ತು ಭಾಗಶಃ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ಮತ್ತು ನಂಜನಗೂಡು ತಾಲೂಕುಗಳಲ್ಲಿ ಹರಡಿಕೊಂಡಿದೆ. ಚಳಿಗಾಲದ ವೇಳೆ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಮೈಸೂರು ಮಹಾರಾಜರ ಖಾಸಗಿ ಬೇಟೆಯ ಸ್ಥಳವಾಗಿತ್ತು. ಪ್ರಾಜೆಕ್ಟ್ ಟೈಗರ್‌ನ ಭಾಗವಾಗಿ 1973 ರಲ್ಲಿ ರಾಷ್ಟ್ರೀಯ ಉದ್ಯಾನವನ್ನು ಸ್ಥಾಪಿಸಲಾಯಿತು ಮತ್ತು ಇಂದು ಇದು ಭಾರತದ 12 UNESCO ಬಯೋಸ್ಫಿಯರ್ ರಿಸರ್ವ್‌ಗಳಲ್ಲಿ ಒಂದಾದ ನೀಲಗಿರಿ ಬಯೋಸ್ಫಿಯರ್ ರಿಸರ್ವ್‌ನ ಒಂದು ಭಾಗವಾಗಿದೆ. ಬಂಡೀಪುರ ಇದೀಗ ಭಾರತದ ಅತಿದೊಡ್ಡ ಮತ್ತು ವೈವಿಧ್ಯಮಯ ಸಂರಕ್ಷಣಾ ಪ್ರದೇಶಗಳಲ್ಲಿ ಒಂದಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಪತನಶೀಲ ಮತ್ತು ನಿತ್ಯಹರಿದ್ವರ್ಣ ಕಾಡುಗಳ ಮಿಶ್ರಣದಿಂದ ಕೂಡಿದ್ದು, ವಿವಿಧ ವನ್ಯಜೀವಿ ಪ್ರಭೇದಗಳಿಗೆ ವಿಶಿಷ್ಟವಾದ ಆವಾಸಸ್ಥಾನವಾಗಿದೆ. ಹುಲಿ, ಚಿರತೆ, ಕಾಡು ನಾಯಿ ಮತ್ತು ಕರಡಿಯಂತಹ ಪ್ರಾಣಿಗಳನ್ನು ನೋಡಲು ಹಾಗೂ ಏಷಿಯಾನ್ ಆನೆಗಳನ್ನು ನೋಡಲು ಈ ಉದ್ಯಾನವನವು ಭಾರತದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.
ಬಂಡೀಪುರ ನ್ಯಾಷನಲ್ ಪಾರ್ಕ್ನಲ್ಲಿ ನೀವು ಏನೇನು ಮಾಡಬಹುದು?
1) ಸಫಾರಿ: ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಪ್ರವಾಸಿಗರಿಗೆ ಜೀಪ್ ಮತ್ತು ಕ್ಯಾಂಟರ್ ಸಫಾರಿಗಳ ಮೂಲಕ ತನ್ನ ಅರಣ್ಯವನ್ನು ಅನ್ವೇಷಿಸಲು ಅವಕಾಶವನ್ನು ನೀಡುತ್ತದೆ.
2) ಪಕ್ಷಿ ವೀಕ್ಷಣೆ: ಬಂಡೀಪುರದಲ್ಲಿ 200 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಕಂಡುಬರುತ್ತಿದ್ದು, ಇದು ಪಕ್ಷಿಪ್ರೇಮಿಗಳಿಗೆ ಸ್ವರ್ಗದ ಭಾವನೆ ನೀಡುತ್ತದೆ. ಹಾರ್ನ್‌ಬಿಲ್ (ಮಂಗಟ್ಟೆ) ಹಕ್ಕಿಗಳನ್ನೂ ನೀವಿಲ್ಲಿ ಕಾಣಬಹುದಾಗಿದೆ.
3) ಶೈಕ್ಷಣಿಕ ಮತ್ತು ಪರಿಸರ ವ್ಯವಸ್ಥೆಯ ಆಳವಾದ ತಿಳುವಳಿಕೆಯನ್ನು ಪಡೆಯಲು ಪ್ರಕೃತಿಯ ನಡುವೆ ನಡೆಯುತ್ತಾ ಮಾರ್ಗದರ್ಶನ ಪಡೆಯಬಹುದಾಗಿದೆ.
4) ಬಿಳಿಗಿರಿರಂಗನ ಬೆಟ್ಟ: ಪ್ರವಾಸಿಗರು ಹತ್ತಿರದ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಬಹುದು. ಸಾಹಸ ಪ್ರಿಯರಿಗೆ ಇದು ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕೇವಲ ಪ್ರವಾಸಿ ತಾಣವಲ್ಲ, ಇದು ವನ್ಯಜೀವಿ ಸಂರಕ್ಷಣೆಗೆ ಭದ್ರಕೋಟೆಯಾಗಿದೆ. ಹಿಂದಿನ ರಾಯಲ್ ಹಂಟಿಂಗ್ ಗ್ರೌಂಡ್ ಈಗ ರಾಜ್ಯದ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ. ತನ್ನ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ರಾಷ್ಟ್ರೀಯ ಉದ್ಯಾನವನದ ಬದ್ಧತೆಯು ಈ ಪ್ರದೇಶದಲ್ಲಿ ಹುಲಿಗಳ ರಕ್ಷಣೆಗೆ ಕಾರಣವಾಗಿದೆ. ಆದರೆ ಮಾನವ-ವನ್ಯಜೀವಿ ಸಂಘರ್ಷ, ಮಾನವ ಅತಿಕ್ರಮಣ ಮತ್ತು ಬೇಟೆಯಂತಹ ಸವಾಲುಗಳನ್ನು ಎದುರಿಸುತ್ತಿದೆ.