Travel: ಶ್ರೀಲಂಕಾಯಿಂದ ಥಾಯ್ಲೆಂಡ್‌ವರೆಗೆ; ವೀಸಾ ಚಿಂತೆ ಇಲ್ದೆ ಭಾರತೀಯರು ಯಾವೆಲ್ಲಾ ದೇಶ ಸುತ್ತಾಡಬಹುದು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Travel: ಶ್ರೀಲಂಕಾಯಿಂದ ಥಾಯ್ಲೆಂಡ್‌ವರೆಗೆ; ವೀಸಾ ಚಿಂತೆ ಇಲ್ದೆ ಭಾರತೀಯರು ಯಾವೆಲ್ಲಾ ದೇಶ ಸುತ್ತಾಡಬಹುದು ನೋಡಿ

Travel: ಶ್ರೀಲಂಕಾಯಿಂದ ಥಾಯ್ಲೆಂಡ್‌ವರೆಗೆ; ವೀಸಾ ಚಿಂತೆ ಇಲ್ದೆ ಭಾರತೀಯರು ಯಾವೆಲ್ಲಾ ದೇಶ ಸುತ್ತಾಡಬಹುದು ನೋಡಿ

ವಿದೇಶ ಪ್ರವಾಸ ಮಾಡಬೇಕು ಎನ್ನುವ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಇದು ಸುಸಂದರ್ಭ. ಈಗ ನೀವು ವೀಸಾ ಚಿಂತೆ ಇಲ್ಲದೆ ಒಂದಿಷ್ಟು ದೇಶಗಳಲ್ಲಿ ಸುತ್ತಾಡಬಹುದು. ಹಾಗಾದರೆ ವೀಸಾ ಚಿಂತೆ ಇಲ್ಲದೆ ಯಾವೆಲ್ಲಾ ದೇಶಗಳಲ್ಲಿ ತಿರುಗಾಡಬಹುದು, ಯಾವೆಲ್ಲಾ ಪ್ರದೇಶಕ್ಕೆ ಆನ್‌ ಅರೈವಲ್‌ ವೀಸಾ ಮೂಲಕ ಹೋಗಿ ಬರಬಹುದು ಎಂಬ ಮಾಹಿತಿ ಇಲ್ಲಿದೆ.

ಶ್ರೀಲಂಕಾಯಿಂದ ಥಾಯ್ಲೆಂಡ್‌ವರೆಗೆ ವೀಸಾ ಇಲ್ದೆ ಭಾರತೀಯರು ಸುತ್ತಾಡಬಹುದಾದ ದೇಶಗಳು
ಶ್ರೀಲಂಕಾಯಿಂದ ಥಾಯ್ಲೆಂಡ್‌ವರೆಗೆ ವೀಸಾ ಇಲ್ದೆ ಭಾರತೀಯರು ಸುತ್ತಾಡಬಹುದಾದ ದೇಶಗಳು

ಪ್ರವಾಸಕ್ಕೆ ಹೋಗೋದು ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ವಿದೇಶ ಪ್ರವಾಸ ಅಂದ್ರೆ ಹಿಂದೆ ಮುಂದೆ ಯೋಚಿಸದೇ ಹೊರಟು ಬಿಡೋಣ ಅನ್ಸುತ್ತೆ. ಆದ್ರೆ ಕೈಯಲ್ಲಿ ದುಡ್ಡಿರಬೇಕು ಅನ್ನೋದು ಮರಿಬಾರ್ದು. ಸರಿ ದುಡ್ಡಿದ್ರೆ ಸಾಕಾ, ಪ್ರವಾಸ ಆಗಿ ಬಿಡುತ್ತಾ ಕೇಳಿದ್ರೆ ಖಂಡಿತ ಇಲ್ಲ, ದುಡ್ಡಿನ ಜೊತೆ ವೀಸಾ, ಪಾಸ್‌ಪೋರ್ಟ್‌ ಕೂಡ ಬೇಕು. ಪಾಸ್‌ಪೋರ್ಟ್‌ ಏನೋ ಆಗಿ ಬಿಡುತ್ತೆ, ಆದ್ರೆ ವೀಸಾ ಹಾಗಲ್ಲ. ಹಾಗಂತ ಈ ವೀಸಗಾಗಿ ಚಿಂತಿಸುವ ಅಗತ್ಯವಿಲ್ಲ. ಒಂದಿಷ್ಟು ದೇಶಗಳಿಗೆ ವೀಸಾ ಇಲ್ಲದೆ ಹೋಗಿ ಬರಬಹುದು. ಹಾಗಂತ ನಿಮ್ಮ ಮನಸ್ಸಿಗೆ ಬಂದಾಗೆಲ್ಲಾ ಹೋಗೋ ಹಾಗಿಲ್ಲ. ಒಂದಿಷ್ಟು ದಿನಗಳ ಕಾಲ ವೀಸಾ ಇಲ್ದೆ ಪ್ರವಾಸ ಮಾಡಬಹುದು. ಹಾಗಾದರೆ ಯಾವೆಲ್ಲಾ ದೇಶಗಳಿಗೆ ವೀಸಾ ಇಲ್ದೆ ಹೋಗಬಹುದು, ಈ ಆಫರ್‌ ಎಷ್ಟು ದಿನಗಳವರೆಗೆ, ಏನಿದರ ವಿಶೇಷ ಎಂಬುದೆಲ್ಲಾ ತಿಳಿಬೇಕು ಅಂದ್ರೆ ಮುಂದೆ ಓದಿ.

ಹೆನ್ಲಿ ಹಾಗೂ ಪಾರ್ಟ್‌ನರ್ಸ್‌ 2023 ಇವರ ಇತ್ತೀಚಿನ ಪಾಸ್‌ಪೋರ್ಟ್‌ ಇಂಡೆಕ್ಸ್‌ ಸೂಚ್ಯಂಕದ ಪ್ರಕಾರ ಭಾರತದ ಪಾಸ್‌ಪೋರ್ಟ್‌ ಹೊಂದಿರುವವರು ಈಗ 57 ದೇಶಗಳಲ್ಲಿ ವೀಸಾ ತೊಂದರೆಯಿಲ್ಲದೆ ಪ್ರಯಾಣಿಸುವ ಅವಕಾಶ ಹೊಂದಿದ್ದಾರೆ. ಈ ಪಟ್ಟಿಯು ವೀಸಾ ಫ್ರಿ ಟ್ರಾವೆಲ್‌, ವೀಸಾ ಆನ್‌ ಆರೈವಲ್‌ ಫೆಸಿಲಿಟಿ ಮತ್ತು ಎಲೆಕ್ಟ್ರಾನಿಕ್‌ ಟ್ರಾವೆಲ್‌ ಅಥೊರೈಜೇಷನ್‌ ನೀಡುವ ರಾಷ್ಟ್ರಗಳನ್ನು ಒಳಗೊಂಡಿದೆ. ನವೆಂಬರ್‌, ಡಿಸೆಂಬರ್‌ನಲ್ಲಿ ನೀವು ವಿದೇಶ ಪ್ರವಾಸ ಪ್ಲಾನ್‌ ಮಾಡುವ ಹಾಗಿದ್ದರೆ ಈ ದೇಶಗಳನ್ನು ಗಮನಿಸಿ.

ವೀಸಾ ಮುಕ್ತ ಪ್ರವೇಶ ಮಾಡಬಹುದಾದ ಐದು ಪ್ರಸಿದ್ಧ ದೇಶಗಳಿವು

ಕುಕ್‌ ಐಲ್ಯಾಂಡ್‌: ನ್ಯೂಜಿಲೆಂಡ್‌ ಸಾರ್ವಭೌಮತ್ವದ ಅಡಿಯಲ್ಲಿ ಫೆಸಿಫಿಕ್‌ ಮಹಾಸಾಗರದಲ್ಲಿ ಇರುವ ಕುಕ್‌ ಐಲ್ಯಾಂಡ್‌ ಅದ್ಭುತ ಹಸಿರ ಸೌಂದರ್ಯ, ಸುಂದರ ಸಮುದ್ರತೀರಗಳು, ಸ್ಥಳೀಯ ಭಿನ್ನ ಸಂಸ್ಕೃತಿಯಿಂದ ಸುತ್ತುವರಿದಿದೆ. ಇಲ್ಲಿ ನೀವು ವೀಸಾ ಇಲ್ಲದೆ 30 ದಿನಗಳ ಕಾಲ ಇರಬಹುದು. ಆದರೆ ನೀವು ಹೊರಡುವ ಮುನ್ನ ಕನಿಷ್ಠ ಆರು ತಿಂಗಳವರೆಗೆ ನಿಮ್ಮ ಪಾಸ್‌ಪೋರ್ಟ್‌ ಮಾನ್ಯವಾಗಿರುತ್ತದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.

ಮಾರಿಷಸ್‌: ಭಾರತೀಯ ಸಮುದ್ರ ತೀರಗಳ ಆಭರಣ ಎಂದು ಕರೆಯುವ ಮಾರಿಷಸ್‌ ಸುಂದರ ದೇಶ. ಪ್ರಾಚೀನ ಬಿಳಿ ಮರಳಿನ ಕಡಲ ತೀರಗಳು, ಆಕಾಶ ನೀಲಿ ಕೆರೆಗಳು, ರೋಮಾಂಚಕ ಹವಳದ ಬಂಡೆಗಳಿಗೆ ಇದು ಹೆಸರುವಾಸಿಯಾಗಿದೆ. ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳ ಪಾಸ್‌ಪೋರ್ಟ್‌ ಹೊಂದಿರುವವರು ಉದಾರವಾಗಿ 90 ದಿನಗಳವರೆಗೆ ವೀಸಾ ಮುಕ್ತ ವಾಸ್ತವ್ಯವನ್ನು ಆನಂದಿಸಬಹುದು.

ಭೂತಾನ್‌: ಭೂತಾನ್‌ ಭಾರತದ ಸಮೀಪವೇ ಇದ್ದು ಭೂತಾನ್‌ಗೆ ಪ್ರಯಾಣಿಸುವುದು ಸುಲಭ. ಏಳು ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಪ್ರವಾಸಕ್ಕೆ ವೀಸಾ ಅಗತ್ಯವಿಲ್ಲ. ಇಲ್ಲಿದೆ ಮಾನ್ಯವಿರುವ ಪಾಸ್‌ಪೋರ್ಟ್‌ ಹಾಗೂ ಇತರ ಗುರುತಿನ ಚೀಟಿಗಳು ಇದ್ದರೆ ಸಾಕು.

ಹಾಂಗ್‌ ಕಾಂಗ್‌: ಈ ದೇಶವು ನೈಸರ್ಗಿಕ ಸೌಂದರ್ಯ ಮತ್ತು ವಾಸ್ತುಶಿಲ್ಪದ ಅದ್ಭುತ ಸಂಯೋಜನೆಯಾಗಿದೆ. ಭಾರತದ ಪಾಸ್‌ಪೋರ್ಟ್‌ ಹೊಂದಿರುವವರು ವೀಸಾ ತೊಂದರೆಯಿಲ್ಲದೆ ಹಾಂಗ್‌ಕಾಂಗ್‌ಗೆ ಹೋಗಬಹುದು ಮತ್ತು ಅಲ್ಲಿ 14 ದಿನಗಳ ಕಾಲ ತಂಗಬಹುದು.

ಬಾರ್ಬಡೋಸ್‌: ಸಾಮಾನ್ಯವಾಗಿ ಜೆವೆಲ್‌ ಆಫ್‌ ದಿ ಕೆರಿಬಿಯನ್‌ ಎಂದು ಕರೆಯಲ್ಪಡುವ ಬಾರ್ಬಡೋಸ್‌ ದೇಶವು ಸುಂದರ ಕಡಲತೀರಗಳಿಂದ ವಿಶ್ವ ಪ್ರಸಿದ್ಧವಾಗಿದೆ. ಪ್ರವಾಸಿ ವೀಸಾದ ಅಗತ್ಯವಿಲ್ಲದೆ ಭಾರತೀಯರು ಬಾರ್ಬಡೋಸ್‌ಗೆ ಅಲ್ಲಿ 90 ದಿನಗಳ ಕಾಲ ಇರಬಹುದು.

ಈ ಹಿಂದೆ ಭಾರತೀಯ ನಾಗರಿಕರಿಗೆ ವೀಸಾ ಆನ್ ಅರೈವಲ್ ಸೌಲಭ್ಯಗಳನ್ನು ನೀಡುತ್ತಿದ್ದ ದೇಶಗಳ ಸಾಲಿಗೆ ಇತ್ತೀಚಿಗೆ ಶ್ರೀಲಂಕಾ ಮತ್ತು ಥಾಯ್ಲೆಂಡ್ ಸೇರಿಕೊಂಡಿದೆ.

ವೀಸಾ ಆನ್‌ ಅರೈವಲ್‌ ಸೌಲಭ್ಯ ಇರುವ 5 ಪ್ರಸಿದ್ಧ ತಾಣಗಳಿವು

ಸೆಶೆಲ್ಸ್‌: ಹಿಂದೂ ಮಹಾಸಾಗರದಲ್ಲಿರುವ ಈ ದ್ವೀಪಸಮೂಹವು ಪರಿಸರ ಪ್ರೇಮಿಗಳಿಗೆ ಸ್ವರ್ಗ ಎನ್ನಿಸುವುದರಲ್ಲಿ ಅನುಮಾನವಿಲ್ಲ. ಇದು ವೀಸಾ ಮುಕ್ತಾ ಪ್ರದೇಶವಾಗಿದ್ದರೂ 30 ದಿನಗಳ ಕಾಲ ಇಲ್ಲಿ ತಂಗಲು ಇಮಿಗ್ರೇಷನ್‌ ಡಿಪಾರ್ಟ್‌ಮೆಂಟ್‌ನಿಂದ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ.

ಮಾಲ್ಡೀವ್ಸ್‌: ಮಾಲ್ಡೀವ್ಸ್‌ ಪ್ರವಾಸಿಗರ ಸ್ವರ್ಗ. ಇಲ್ಲಿ 90 ದಿನಗಳ ಕಾಲ ವೀಸಾ ಇಲ್ಲದೆ ಇಲ್ಲಿನ ಐಷಾರಾಮಿ ರೆಸಾರ್ಟ್‌ಗಳಲ್ಲಿ ಎಂಜಾಯ್‌ ಮಾಡಬಹುದು.

ಇಂಡೋನೇಷ್ಯಾ: ಆಗ್ನೇಯ ಏಷ್ಯಾದಲ್ಲಿರುವ ಈ ದೇಶವು ಪಾರಂಪರಿಕ ತಾಣಗಳು ಮತ್ತು ವಿಸ್ತಾರವಾದ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಈ ದೇಶವು ಭಾರತೀಯ ಪ್ರಯಾಣಿಕರಿಗೆ ವೀಸಾ ಆನ್‌ ಅರೈವಲ್‌ ಅವಕಾಶ ನೀಡುತ್ತದೆ. ಇದು ಒಂದು ತಿಂಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ವೀಸಾ ಆನ್‌ ಅರೈವಲ್‌ ಅವಧಿ ಮುಗಿದ ನಂತರ ವಿಸ್ತರಿಸಬಹುದಾಗಿದೆ.

ಸಮೋವಾ: ಫೆಸಿಫಿಕ್‌ ಮಹಾಸಾಗರದಲ್ಲಿರುವ ಸಮೋವಾ ದ್ವೀಪವು ನೈಸರ್ಗಿಕ ಸೌಂದರ್ಯ, ಜ್ವಾಲಾಮುಖಿಗಳು, ಸಮುದ್ರತೀರಗಳು ಹಾಗೂ ಜಲಪಾತಗಳಿಂದ ಸುತ್ತುವರಿದಿದೆ. ಇಲ್ಲಿಗೂ ಭಾರತದ ಪ್ರವಾಸಿಗರು 60 ದಿನಗಳ ವೀಸಾ ಆನ್‌ ಅರೈವಲ್‌ ಪಡೆಯಬಹುದು.

ತಾಂಜಾನಿಯಾ: ಪೂರ್ವ ಆಫ್ರಿಕಾದ ವನ್ಯಜೀವಿಗಳ ಸ್ವರ್ಗವಾದ ತಾಂಜಾನಿಯಾವು ಕಿಲಿಮಂಜಾರೋ ರಾಷ್ಟ್ರೀಯ ಉದ್ಯಾನವನ ಮತ್ತು ಜಂಜಿಬಾರ್‌ನ ಸುಂದರವಾದ ಕಡಲತೀರಗಳಂತಹ ಸಾಂಪ್ರದಾಯಿಕ ತಾಣಗಳಿಗೆ ನೆಲೆಯಾಗಿದೆ. ಭಾರತೀಯ ನಾಗರಿಕರು ವೀಸಾ ಆನ್‌ ಅರೈವಲ್‌ ಮೂಲಕ 90 ದಿನಗಳ ಕಾಲ ಅಲ್ಲಿ ನೆಲೆಸಬಹುದು.

Whats_app_banner