ಆನುವಂಶಿಕ ಬೊಕ್ಕತಲೆಯಲ್ಲಿ ಸೊಂಪಾಗಿ ಬೆಳೆದ ಕೇಶರಾಶಿ; ಬ್ರಿಯಾನ್ ಜಾನ್ಸನ್ ಸ್ವಯಂ ಪ್ರಯೋಗಕ್ಕೆ ಅಚ್ಚರಿಯ ಫಲಿತಾಂಶ
ಕೂದಲು ಉದುರುವಿಕೆಗೆ ಪರಿಹಾರ ಹುಡುಕುತ್ತಿರುವ, ವಿಶೇಷವಾಗಿ ಆನುವಂಶಿಕ ಬೊಕ್ಕ ತಲೆಯಿಂದ ಪರಿತಪಿಸುವವರಿಗೆ ಖುಷಿಯಾಗುವಂತಹ ಸುದ್ದಿಯೊಂದು ಬಂದಿದೆ. 46 ವರ್ಷ ವಯಸ್ಸಿನ ಟೆಕ್ ಮಿಲಿಯನೇರ್ ಬ್ರಿಯಾನ್ ಜಾನ್ಸನ್ ಎಂಬಾತ ತನ್ನ ಮೇಲೆಯೇ ಪ್ರಯೋಗ ಮಾಡಿಕೊಂಡು ಕೂದಲು ಬರಿಸಿಕೊಂಡಿದ್ದಾನೆ.
ಬೊಕ್ಕತಲೆ ಸಾಕಷ್ಟು ಜನರ ಸಮಸ್ಯೆ. ಪುರುಷರು ಮಾತ್ರವಲ್ಲದೆ ಮಹಿಳೆಯರು ತಲೆ ಕೂದಲು ಉದುರುವಿಕೆಯಿಂದ ಪರಿತಪಿಸುವುದುಂಟು. ಪುರುಷರಿಗೆ ಹೆಚ್ಚಾಗಿ ವಂಶಪಾರಂಪರಿಕ ಅಥವಾ ಆನುವಂಶಿಕ ಬೊಕ್ಕತಲೆ ಸಮಸ್ಯೆ ಇರುತ್ತದೆ. ಆನುವಂಶಿ ಬೊಕ್ಕತಲೆ ಇದ್ರೆ ಏನೇ ಮಸಾಜ್, ಔಷಧ ಹಾಕಿದ್ರೂ ಪ್ರಯೋಜನವಾಗುವುದಿಲ್ಲ. ಕೂದಲ ಕಸಿ ಅಥವಾ ಹೇರ್ ಫಿಕ್ಸಿಂಗ್ ಮುಂತಾದ ದಾರಿಗಳ ಮೂಲಕ ತಲೆ ಕೂದಲು ಹೊಂದಬೇಕಷ್ಟೇ. ಆದರೆ, ಆನುವಂಶಿಕ ಬೊಕ್ಕತಲೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಖುಷಿಯಾಗುವಂತೆ ಬ್ರಿಯಾನ್ ಜಾನ್ಸನ್ ಎಂಬಾತ ಪರಿಹಾರ ಸೂಚಿಸಿದ್ದಾನೆ. ತನ್ನ ತಲೆಗೆ ತಾನೇ ಈ ವಿಧಾನ ಅನುಸರಿಸಿಕೊಂಡು ಸೊಂಪಾದ ಕೂದಲು ಬರಿಸಿಕೊಂಡಿದ್ದಾನೆ. ತನ್ನ ಬೋಳು ತಲೆಯಲ್ಲಿ ಹೇಗೆ ಕೂದಲು ಮತ್ತೆ ಚಿಗುರೋಡೆಯಿತು ಎಂಬ ರಹಸ್ಯವನ್ನೂ ಸೋಷಿಯಲ್ ಮೀಡಿಯಾಲ್ಲಿ ಹಂಚಿಕೊಂಡಿದ್ದಾನೆ.
ಕೂದಲು ಉದುರುವಿಕೆಗೆ ಪರಿಹಾರ
46 ವರ್ಷ ವಯಸ್ಸಿನ ಟೆಕ್ ಮಿಲಿಯನೇರ್ ಬ್ರಿಯಾನ್ ಜಾನ್ಸನ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ವಿವರ ಹಂಚಿಕೊಂಡಿದ್ದಾರೆ. ಇವರು ಆಂಟಿ ಏಜಿಂಗ್ ರಿಸರ್ಚ್‌ನಲ್ಲೂ ಸಾಕಷ್ಟು ತೊಡಗಿಸಿಕೊಂಡವರು. ತನ್ನ ಬೊಕ್ಕತಲೆಯಲ್ಲಿ ಮತ್ತೆ ಹೇಗೆ ಕೂದಲು ಬರುವಂತೆ ಮಾಡಿದರು ಮತ್ತು ಒಂದು ವರ್ಷದೊಳಗೆ ತನ್ನ ಕೂದಲಿಗೆ ನೈಸರ್ಗಿಕ ಬಣ್ಣ ಹೇಗೆ ಬರಿಸಿಕೊಂಡರು ಎಂದು ವಿವರಿಸಿದ್ದಾರೆ. ತಲೆಯಲ್ಲಿ ಸೊಂಪಾದ, ಆರೋಗ್ಯಕರ ಕೂದಲು ಬರಲು ಇವರು ತಮ್ಮದೇ ಕ್ರಮ ಅನುಸರಿಸಿದರು. ತಲೆಯಲ್ಲಿ ಕೂದಲು ಬರಲು ಇವರು ಪೌಷ್ಟಿಕಾಂಶ, ಲಘು ಚಿಕಿತ್ಸೆಗಳ ಮೊರೆ ಹೋಗಿದ್ದಾರೆ. ನೀವು ನಿಮ್ಮ 40 ವರ್ಷದವರೆಗೆ ಮತ್ತು ಅದಕ್ಕಿಂತಲೂ ಹೆಚ್ಚು ವಯಸ್ಸಿನವರೆಗೆ ತಲೆಯಲ್ಲಿ ಕೂದಲು ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
"ನನ್ನದು ಆನುವಂಶಿಕ ಬೋಳುತಲೆ. 20ರ ವಯಸ್ಸಿನಿಂದಲೇ ತಲೆಯಲ್ಲಿ ಕೂದಲು ಉದುರುವಿಕೆ ಸ್ವಲ್ಪ ಸ್ವಲ್ಪ ಆರಂಭವಾಗಿತ್ತು. ಬಳಿಕ ಬಕ್ಕತಲೆ ಜತೆಯಾಯಿತು. ಈಗ ನೋಡಿ ನನ್ನ 47ನೇ ವಯಸ್ಸಿನಲ್ಲಿ ಸಂಪೂರ್ಣ ಕೂದಲು ಪಡೆದಿದ್ದೇನೆ. ನನ್ನ ತಲೆಯ ಕೂದಲು ನೈಸರ್ಗಿಕ ಬಣ್ಣಕ್ಕೆ ಹಿಂತುರುಗಿದ್ದಾರೆ" ಎಂದು ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್) ಬರೆದಿದ್ದಾರೆ.
ತನ್ನ ತಲೆಕೂದಲಿನ ಮರುಹುಟ್ಟಿಗೆ ಬಯೋಹ್ಯಾಕರ್ ಕಾರಣ ಎಂದಿದ್ದಾರೆ. ಇದಕ್ಕಾಗಿ ಬಹುಮುಖಿ ವಿಧಾನ ಅನುಸರಿಸಿರುವೆ ಎಂದಿದ್ದಾರೆ. ವಿಟಮಿನ್‌ಗಳು, ಪೋಷಕಾಂಶಗಳ ಕಾರ್ಯತಂತ್ರವನ್ನು ಅನುಸರಿಸಿದ್ದೇನೆ. ವಿಶೇಷವಾಗಿ ಪ್ರೋಟೀನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ತಲೆಕೂದಲು ಮರುಸ್ಥಾಪಿಸಲು ನಿರ್ಣಾಯಕ ಪಾತ್ರವಹಿಸಿವೆ" ಎಂದು ಅವರು ಬರೆದಿದ್ದಾರೆ. ದರೊಂದಿಗೆ ಇವರ ಜೆನೆಟಿಕ್ಸ್‌ಗೆ ತಕ್ಕಂತೆ ಮೆಲಟೋನಿನ್, ಕೆಫೀನ್ ಮತ್ತು ವಿಟಮಿನ್ D3 ಒಳಗೊಂಡ ಫಾರ್ಮುಲಾ ಬಳಸಿರುವುದಾಗಿ ತಿಳಿಸಿದ್ದಾರೆ.
ಪ್ರಮುಖ ಕೇಶ ಪುನರುತ್ಥಾನ ಚಿಕಿತ್ಸೆ ಅಭಿವೃದ್ಧಿಪಡಿಸುತ್ತಿರುವ ಹಲವು ಕಂಪನಿಗಳೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ ಎಂದು ಅವರು ಹೇಳಿದ್ದಾರೆ. ಆನುವಂಶಿಕ ಅಥವಾ ಇತರೆ ಬೊಕ್ಕತಲೆ ಇನ್ನು ಮುಂದೆ ಚಿಂತಿಸಬೇಕಾದ ವಿಚಾರವಲ್ಲ. ಇನ್ನು ಹಲವು ವರ್ಷಗಳ ಬಳಿಕ ಕೂದಲು ಉದುರುವುದು ನಾವು ಯೋಚಿಸಬೇಕಾದ ವಿಷಯವಲ್ಲ" ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಸುದ್ದಿ ಕೇಳಿ ಬೊಕ್ಕತಲೆಯವರ ಮನಸ್ಸಲ್ಲಿ ತಂಗಾಳಿ ಮೂಡಿದೆ.
ಇವರು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಸಲುವಾಗಿ ರಿಸರ್ಚ್ ಮಾಡುತ್ತಿದ್ದಾರೆ. ದೇಹದ ಏಜಿಂಗ್‌ಗಾಗಿ ತಿನ್ನುವುದು, ಮಲಗುವುದು, ವ್ಯಾಯಾಮ ಇತ್ಯಾದಿ ಸೂಕ್ಷ್ಮ ಕಟ್ಟುಪಾಡುಗಳನ್ನು ಒಳಗೊಂಡ ಚಿಕಿತ್ಸೆಗಾಗಿ ವರ್ಷಕ್ಕೆ 2 ದಶಲಕ್ಷ ಡಾಲರ್ ಖರ್ಚು ಮಾಡುತ್ತಾರೆ. ಕೆಲವು ದಿನಗಳ ಹಿಂದೆ ದೇಹದಿಂದ ವಿಷಕಾರಿ ಅಂಶಗಳನ್ನು ಶುದ್ಧೀಕರಿಸುವ ಗುರಿಯನ್ನು ಸಾಧಿಸಲು ಒಟ್ಟು ಪ್ಲಾಸ್ಮಾ ವಿನಿಮಯಕ್ಕೆ ಒಳಗಾಗಿದ್ದೇನೆ ಎಂಬ ಅಂಶವನ್ನೂ ಅವರು ಬಹಿರಂಗಪಡಿಸಿದ್ದಾರೆ.