ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯ ಕಸಿದುಕೊಳ್ಳುತ್ತಿವೆ; ಯುಎಸ್ ಸರ್ಜನ್ ಜನರಲ್ ವಿವೇಕ್ ಮೂರ್ತಿ ಕಳವಳ
ಕನ್ನಡ ಸುದ್ದಿ  /  ಜೀವನಶೈಲಿ  /  ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯ ಕಸಿದುಕೊಳ್ಳುತ್ತಿವೆ; ಯುಎಸ್ ಸರ್ಜನ್ ಜನರಲ್ ವಿವೇಕ್ ಮೂರ್ತಿ ಕಳವಳ

ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯ ಕಸಿದುಕೊಳ್ಳುತ್ತಿವೆ; ಯುಎಸ್ ಸರ್ಜನ್ ಜನರಲ್ ವಿವೇಕ್ ಮೂರ್ತಿ ಕಳವಳ

World Mental Health Day: ಯುವ ಜನರು ದಿನದ ಹೆಚ್ಚು ಸೋಷಿಯಲ್‌ ಮೀಡಿಯಾ ಬಳಸುತ್ತಿರುವುದು ಅವರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅಮೆರಿಕದ ಸರ್ಜನ್ ಜನರಲ್ ವಿವೇಕ್ ಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಸಲಹೆಗಳು ಇಲ್ಲಿವೆ.

ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯ ಕಸಿದುಕೊಳ್ಳುತ್ತಿವೆ; ಅಮೆರಿಕ ವೈದ್ಯ ವಿವೇಕ್ ಮೂರ್ತಿ
ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯ ಕಸಿದುಕೊಳ್ಳುತ್ತಿವೆ; ಅಮೆರಿಕ ವೈದ್ಯ ವಿವೇಕ್ ಮೂರ್ತಿ (Pixabay, Instagram)

ಬೆಂಗಳೂರು: ಯುವ ಜನತೆ ಹೆಚ್ಚಾಗಿ ಸಮಯ ಕಳೆಯುವ ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಹೀಗಾಗಿ ಯುವ ಸಮುದಾಯ ಮಾನಸಿಕ ಆರೋಗ್ಯದ ಕುರಿತು ಹೆಚ್ಚು ಗಮನಹರಿಸಬೇಕಾದ ಅಗತ್ಯವಿದೆ ಎಂದು ಯುಎಸ್ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಸಲಹೆ ನೀಡಿದ್ದಾರೆ. ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸವನ್ನು ಬೆಂಗಳೂರಿನಲ್ಲಿ ಅಂತ್ಯಗೊಳಿಸಿದ ಅವರು, ಮಾನಸಿಕ ಆರೋಗ್ಯದ ಕುರಿತು ಕಾಳಜಿ ವಹಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅವರು ಈ ವಾರ ದೆಹಲಿ, ಮುಂಬೈ ಮತ್ತು ಬೆಂಗಳೂರಿಗೆ ಭೇಟಿ ನೀಡಿದರು.

ಬೆಂಗಳೂರಿನಲ್ಲಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಾತನಾಡಿದ ಡಾ.ಮೂರ್ತಿ, ನನ್ನ ಪೂರ್ವಜರ ನಾಡು, ನನ್ನ ತಂದೆ ತಾಯಿಯರು ಬಾಲ್ಯದಲ್ಲೇ ನನ್ನಲ್ಲಿ ಬಿತ್ತಿದ ಅನೇಕ ಮೌಲ್ಯಗಳ ತವರಾದ ಭಾರತಕ್ಕೆ ಬರುವ ಅವಕಾಶ‌ ದೊರೆತಿದ್ದಕ್ಕೆ ಆಭಾರಿಯಾಗಿದ್ದೇನೆ. ಸಂಬಂಧಗಳ ಪ್ರಾಮುಖ್ಯತೆ, ಸಮುದಾಯದ ಭಾಗವಾಗಿರುವುದರಿಂದ ದೊರೆಯುವ ಬಲ, ಸೇವೆ ಸಲ್ಲಿಸುವುದರಿಂದ ದೊರಕುವ ಆಳವಾದ ತೃಪ್ತಿಯನ್ನು ಅವರು ನನಗೆ ಕಲಿಸಿಕೊಟ್ಟರು ಎಂದರು.

ಆರೋಗ್ಯ ವಲಯದಲ್ಲಿ ಅಮೆರಿಕ ಮತ್ತು ಭಾರತ ವಿಶೇಷವಾದ ಸುದೀರ್ಘ ಪಾಲುದಾರಿಕೆಯನ್ನು ಹೊಂದಿವೆ. ಮಾನಸಿಕ ಸ್ವಾಸ್ಥ್ಯದ ಬಗ್ಗೆ ಕಲಿಯಲು ಮತ್ತು ಆ ಬಗ್ಗೆ ಮಾತನಾಡಲು ಭಾರತಕ್ಕೆ ಬಂದಿದ್ದೇನೆ. ಎರಡೂ ದೇಶಗಳಿಗೆ ಇಲ್ಲಿ ಹಲವು ಅಗತ್ಯಗಳು ಮತ್ತು ಕೂಡಿ ಕಲಿಯುವ ಅವಕಾಶಗಳಿವೆ. ಮಾನಸಿಕ ಆರೋಗ್ಯದ ಬಗ್ಗೆ ಇರುವ ಕಳಂಕವನ್ನು ನಿವಾರಿಸಲು ಕೆಲಸ ಮಾಡುತ್ತಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಭೇಟಿಯಾಗಿದ್ದೇನೆ. 

ಜಾಗತಿಕ ಸವಾಲುಗಳನ್ನು ಎದುರಿಸಲು ಕಲಿಸುತ್ತದೆ

ಮಾನಸಿಕ ಆರೋಗ್ಯ, ಶುಶ್ರೂಷೆ ಸೇವೆ, ಮಾನಸಿಕ ಆರೋಗ್ಯ ಬಿಕ್ಕಟ್ಟು ನಿವಾರಣೆ ಕೆಲಸದಲ್ಲಿ ತೊಡಗಿರುವವರು ಹಾಗೂ ನೆರವು ಕೇಳುವುದು ಅವಮಾನವಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ನಾವೆಲ್ಲಾ ಜತೆಯಾಗಿ ಕೆಲಸಮಾಡುವುದು ಅಗತ್ಯವಾಗಿದೆ. ವಿಶ್ವ ಮಾನಸಿಕ ಆರೋಗ್ಯ ದಿನವು ನಮಗೆ ಪರಸ್ಪರ ಕಲಿಯುವುದು ಮತ್ತು ಈ ಜಾಗತಿಕ ಸವಾಲುಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುವುದು ಸಾಧ್ಯ ಎಂಬುದನ್ನು ನೆನಪಿಸುವ ಸಾಧನವಾಗಿದೆ, ಎಂದು ವಿವೇಕ್‌ ಮೂರ್ತಿ ಹೇಳಿದರು.

ಡಾ.ವಿವೇಕ್‌ ಮೂರ್ತಿ ಅವರು ಬೆಂಗಳೂರಿನಲ್ಲಿ ಮಾನಸಿಕ ಆರೋಗ್ಯದ ಕುರಿತು ಗಮನಹರಿಸಬೇಕಾದ ತುರ್ತು ಅಗತ್ಯ, ಎಲ್ಲರಿಗೂ ಅದೇಕೆ ಬೇಕು ಮತ್ತು ಈ ವಿಷಯದಲ್ಲಿ ಸ್ನೇಹಿತರ ದಂಡು ಕಟ್ಟಲು, ಸಮುದಾಯವನ್ನು ಒಟ್ಟುಗೂಡಿಸಲು, ಭರವಸೆ ಮತ್ತು ಬೆಂಬಲ ಒಟ್ಟುಗೂಡಿಸಲು ಅರ್ಥಪೂರ್ಣ ಸಂಬಂಧಗಳು ಹಾಗೂ ಸಾಮಾಜಿಕ ಸಂಪರ್ಕಗಳು ನೆರವು ನೀಡುತ್ತವೆ ಎಂಬುದರ ಕುರಿತು ಮಾತನಾಡುತ್ತಿರುವುದು ಸಂತಸ ತಂದಿದೆ ಎಂದು ಯುಎಸ್‌ ಕಾನ್ಸಲೇಟ್ ಜನರಲ್‌ ಚೆನ್ನೈ ಕ್ರಿಸ್‌ ಹಾಡ್ಜಸ್‌ ಹೇಳಿದರು.

ಡಾ.ಮೂರ್ತಿ ಅವರು ನೇರವಾಗಿ ಯುವಜನರನ್ನು ಭೇಟಿಯಾಗಿ ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕೇಳಿದರು. ನಿತಾ ಮುಖೇಶ್ ಅಂಬಾನಿ ಜೂನಿಯರ್ ಸ್ಕೂಲ್‌, ಅಮೆರಿಕನ್ ಸ್ಕೂಲ್‌ ಮುಂಬೈ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ 'ಒಂಟಿತನ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಜಾಲತಾಣಗಳ ಸಮಸ್ಯೆ'ಗಳ ಕುರಿತು ಚರ್ಚೆ ನಡೆಸಿದರು. ಜಯದೇವ ಹೃದ್ರೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ ಅವರು, ಸಾಮಾಜಿಕ ಒಂಟಿತನ (ಸೋಷಿಯಲ್‌ ಐಸೋಲೇಷನ್‌) ಸಮಸ್ಯೆಯನ್ನು ಪರಿಹರಿಸಲು ನೂರಾ ಹೆಲ್ತ್‌ ಅಭಿವೃದ್ಧಿ ಪಡಿಸಿರುವ ಕುಟುಂಬ-ಕೇಂದ್ರಿತ ಕಾರ್ಯಕ್ರಮದ ಮಾದರಿಯನ್ನು ವೀಕ್ಷಿಸಿದರು.

Whats_app_banner