ತೂಕ ಇಳಿಕೆಗೆ ಸಹಕಾರಿಯಾಗುತ್ತಾ ಕಾಫಿ: ಯಾರು ಕಾಫಿ ಸೇವಿಸಬಾರದು, ಯಾರು ಸೇವಿಸಬೇಕು- ಇಲ್ಲಿದೆ ಮಾಹಿತಿ
ಕಾಫಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಆದರೆ, ಇದನ್ನು ಮಿತವಾಗಿ ಸೇವಿಸುವುದರಿಂದ ಇದು ತೂಕ ಇಳಿಕೆಗೆ ಸಹಕಾರಿಯಾಗಿದೆ. ಕಾಫಿ ಯಾರು ಸೇವಿಸಬೇಕು, ಯಾರು ಸೇವಿಸಬಾರದು ಎಂಬಿತ್ಯಾದಿ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
ಬೆಳಗೆದ್ದ ಕೂಡಲೇ ಕಾಫಿ ಸೇವಿಸುವುದರಿಂದ ದಿನ ಪ್ರಾರಂಭಿಸುವುದು ಬಹುತೇಕ ದಿನಚರಿ. ಕೆಲವರು ಬೆಡ್ ಕಾಫಿ ಕುಡಿದರೆ, ಇನ್ನೂ ಕೆಲವರು ದಿನಪತ್ರಿಕೆ ಓದುತ್ತಾ ಅಥವಾ ಟಿವಿ ನೋಡುತ್ತಾ ಕಾಫಿ ಕುಡಿಯುತ್ತಾರೆ. ಇನ್ನು ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಂತೂ ಇದಕ್ಕೆ ಪೂರಕವಾಗಿರುವ ಪಾನೀಯಗಳನ್ನು ಸೇವಿಸುತ್ತಾರೆ. ಆದರೆ ನಿಮಗೆ ಗೊತ್ತಾ? ಕಾಫಿಯನ್ನು ಮಿತವಾಗಿ ಸೇವಿಸುವುದರಿಂದ ಇದು ಕೂಡ ತೂಕ ಇಳಿಕೆಗೆ ಸಹಕಾರಿಯಾಗಿದೆ. ಕಾಫಿಯಲ್ಲಿ ಕೆಫೀನ್ ಅಂಶ ಇರುವುದರಿಂದ ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕೊಬ್ಬನ್ನು ಕರಗಿಸುವಲ್ಲೂ ಸಹಕಾರಿಯಾಗಿದೆ. ಮೊದಲಿಗೆ ಗಮನಿಸಬೇಕಾದ ಅಂಶವೆಂದರೆ ಇದನ್ನು ಮಿತವಾಗಿ ಬಳಸುವುದು. ಮಿತವಾಗಿ ಬಳಸುವುದರಿಂದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎಂದು ಕೆಲವೊಂದು ಅಧ್ಯಯನಗಳಿಂದ ತಿಳಿದು ಬಂದಿದೆ.
ತೂಕ ಇಳಿಕೆಗೆ ಕಾಫಿಯ ಪ್ರಯೋಜನಗಳು
ಚಯಾಪಚಯವನ್ನು ಹೆಚ್ಚಿಸುತ್ತದೆ: ಕೇಂದ್ರ ನರಮಂಡಲವು ಕೆಫೀನ್‌ನಿಂದ ಉತ್ತೇಜಿಸಲ್ಪಟ್ಟಿದೆ. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಹಾಗೂ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.
ಹಸಿವು ನಿವಾರಕ: ಕಾಫಿಯು ಹಸಿವನ್ನು ತಾತ್ಕಾಲಿಕವಾಗಿ ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಕಡಿಮೆ ಕ್ಯಾಲೊರಿಗಳನ್ನು ಸೇವಿಸಲು ಇದು ಅನುವು ಮಾಡಿಕೊಡುತ್ತದೆ.
ದೈಹಿಕ ಕಾರ್ಯಕ್ಷಮತೆ ಸುಧಾರಿಸುತ್ತದೆ: ಕಾಫಿಯ ಕೆಫೀನ್ ಅಂಶವು ದೈಹಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಜೀವನಕ್ರಮದ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ.
ಯಾರು ಕಾಫಿ ಕುಡಿಯಬೇಕು?
- ಆರೋಗ್ಯಕರ ವಯಸ್ಕರು ಮಧ್ಯಮ ಕಾಫಿ ಸೇವನೆಯಿಂದ ಪ್ರಯೋಜನ ಪಡೆಯಬಹುದು.
- ದೈಹಿಕವಾಗಿ ಸಕ್ರಿಯವಾಗಿರುವವರು ಕಾಫಿ ಕುಡಿಯುವುದರಿಂದ ಕೊಬ್ಬನ್ನು ಕರಗಿಸಲು ಸಹಕಾರಿಯಾಗಿದೆ.
- ನಿಧಾನಗತಿಯ ಚಯಾಪಚಯ ಹೊಂದಿರುವವರು ಕೂಡ ಕಾಫಿ ಸೇವನೆಯಿಂದ ಪ್ರಯೋಜನ ಪಡೆಯಬಹುದು.
ಕಾಫಿಯನ್ನು ಯಾರು ಸೇವಿಸಬಾರದು?
ಗರ್ಭಿಣಿಯರು: ಕೆಫೀನ್ ಸೇವನೆಯನ್ನು ಮಿತಿಗೊಳಿಸುವುದು ಮುಖ್ಯ. ಏಕೆಂದರೆ ಹೆಚ್ಚಿನ ಮಟ್ಟದ ಕೆಫೀನ್ ಗರ್ಭಧಾರಣೆಯ ತೊಡಕುಗಳಿಗೆ ಕಾರಣವಾಗಬಹುದು.
ನಿದ್ರಾಹೀನತೆ ಸಮಸ್ಯೆ ಇರುವವರು: ಕಾಫಿಯು ಆತಂಕ, ಮತ್ತು ಭಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ನಿದ್ದೆಗೆ ಅಡ್ಡಿಪಡಿಸುತ್ತದೆ. ಹೀಗಾಗಿ ನಿದ್ರಾಹೀನತೆ ಸಮಸ್ಯೆ ಹೊಂದಿರುವವರು ಕಾಫಿ ಸೇವನೆ ಮಾಡುವುದು ಒಳಿತಲ್ಲ.
ಅಧಿಕ ರಕ್ತದೊತ್ತಡ ಇರುವವರು: ಕೆಫೀನ್ ರಕ್ತದೊತ್ತಡವನ್ನು ತಾತ್ಕಾಲಿಕವಾಗಿ ಹೆಚ್ಚಿಸಬಹುದು. ಹೀಗಾಗಿ ಹೃದಯ ಸಮಸ್ಯೆ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವವರು ಕಾಫಿ ಸೇವನೆಯನ್ನು ಮಿತಿಗೊಳಿಸಬೇಕು.
ಜೀರ್ಣಕಾರಿ ಸಮಸ್ಯೆಗಳಿರುವ ವ್ಯಕ್ತಿಗಳು: ಕಾಫಿ ಆಮ್ಲೀಯ ಗುಣಗಳನ್ನು ಹೊಂದಿದ್ದು, ಇದು ಜಠರಗರುಳಿನ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ಹೀಗಾಗಿ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ಕಾಫಿ ಸೇವಿಸುವುದು ಉತ್ತಮವಲ್ಲ.
ಕಾಫಿ ಎಷ್ಟು ಪ್ರಮಾಣದಲ್ಲಿ ಸೇವಿಸುವುದು ಉತ್ತಮ?
- ದಿನಕ್ಕೆ 2 ರಿಂದ 3 ಕಪ್‍ಗಳ ಕಾಫಿ ಸೇವನೆಯನ್ನು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ.
- ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ಕಪ್ಪು (ಬ್ಲ್ಯಾಕ್) ಕಾಫಿ ಅಥವಾ ಕಡಿಮೆ ಹಾಲು ಬೆರೆಸಿ, ಸ್ವಲ್ಪವೂ ಸಕ್ಕರೆ ಹಾಕದೆ ಕುಡಿಯಬಹುದು. ಹಾಲು ಮತ್ತು ಸಕ್ಕರೆಗಳಲ್ಲಿ ಕ್ಯಾಲೋರಿ ಪ್ರಮಾಣ ಹೆಚ್ಚಿರುವುದರಿಂದ ಇದು ತೂಕ ಹೆಚ್ಚಲು ಕಾರಣವಾಗಬಹುದು. ಆದರೂ, ತೂಕ ಇಳಿಕೆಯ ಮೇಲೆ ಕಾಫಿ ಪರಿಣಾಮ ಬೀರುತ್ತದೆಯೇ ಎಂಬ ಬಗ್ಗೆ ಸಂಶೋಧನಗೆಳು ನಡೆಯುತ್ತಿವೆ,
ಗರ್ಭಿಣಿಯರು ಕಾಫಿ ಕುಡಿಯದೇ ಇರುವುದು ಒಳ್ಳೆಯದು. ಒಂದು ವೇಳೆ ಸೇವಿಸಿದರೂ 1 ಕಪ್‍ಗಿಂತ ಹೆಚ್ಚು ಕುಡಿಯುವುದು ಉತ್ತಮವಲ್ಲ.