ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದರೆ ಧೈರ್ಯಗೆಡಬೇಡಿ; ಚಿಕಿತ್ಸೆ ಯಶಸ್ವಿಯಾಗಿರೋದಕ್ಕೆ ಇಲ್ಲಿದೆ ನಿದರ್ಶನ ಎಂದ ವೈದ್ಯರು
ಕನ್ನಡ ಸುದ್ದಿ  /  ಜೀವನಶೈಲಿ  /  ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದರೆ ಧೈರ್ಯಗೆಡಬೇಡಿ; ಚಿಕಿತ್ಸೆ ಯಶಸ್ವಿಯಾಗಿರೋದಕ್ಕೆ ಇಲ್ಲಿದೆ ನಿದರ್ಶನ ಎಂದ ವೈದ್ಯರು

ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದರೆ ಧೈರ್ಯಗೆಡಬೇಡಿ; ಚಿಕಿತ್ಸೆ ಯಶಸ್ವಿಯಾಗಿರೋದಕ್ಕೆ ಇಲ್ಲಿದೆ ನಿದರ್ಶನ ಎಂದ ವೈದ್ಯರು

ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್‌ ಪತ್ತೆಯಾದರೆ ಗಾಬರಿಯಾಗಬೇಕಾಗಿಲ್ಲ, ಎದೆಗುಂದ ಬೇಕಾಗಿಯೂ ಇಲ್ಲ. ಚಿಕಿತ್ಸೆ ಯಶಸ್ವಿಯಾಗುತ್ತೆ ಎಂದು ಬೆಂಗಳೂರಿನ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್‌ಗೆ ಒಳಗಾಗಿದ್ದ ಮಹಿಳೆಗೆ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದ್ದು, ಅದರ ವಿವರ ಇಲ್ಲಿದೆ.

ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದರೆ ಧೈರ್ಯಗೆಡಬೇಡಿ; ಚಿಕಿತ್ಸೆ ಯಶಸ್ವಿಯಾಗಿರೋದಕ್ಕೆ ನಿದರ್ಶನ ಇದೆ ಎಂದು ಬೆಂಗಳೂರು ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಹೇಳಿದೆ. (ಸಾಂಕೇತಿಕ ಚಿತ್ರ)
ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದರೆ ಧೈರ್ಯಗೆಡಬೇಡಿ; ಚಿಕಿತ್ಸೆ ಯಶಸ್ವಿಯಾಗಿರೋದಕ್ಕೆ ನಿದರ್ಶನ ಇದೆ ಎಂದು ಬೆಂಗಳೂರು ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಹೇಳಿದೆ. (ಸಾಂಕೇತಿಕ ಚಿತ್ರ) (Pexels)

ಸ್ತನ ಕ್ಯಾನ್ಸರ್ ಬಂದಾಗ ಧೈರ್ಯಗೆಡಬೇಡಿ. ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದರೆ ಖಂಡಿತವಾಗಿಯೂ ಗಾಬರಿಯಾಗಬೇಡಿ. ಚಿಕಿತ್ಸೆ ಯಶಸ್ವಿಯಾಗುತ್ತೆ. ಆರೋಗ್ಯವಾಗಿಯೂ ಇರಬಹುದು ಎಂಬುದನ್ನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರ ತಂಡ ನಿರೂಪಿಸಿದೆ. ಅವಳಿ ಶಿಶುಗಳ ಗರ್ಭಾವಸ್ಥೆಯಲ್ಲೇ ಸ್ತನ ಕ್ಯಾನ್ಸರ್‌ಗೆ ಒಳಗಾಗಿದ್ದ 37 ವರ್ಷದ ಗರ್ಭಿಣಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಬನ್ನೇರುಘಟ್ಟ ರಸ್ತೆ ಫೋರ್ಟಿಸ್‌ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಆಂಕೊಲಾಜಿ ಸಲಹೆಗಾರರಾದ ಡಾ ಭರತ್ ಜಿ, ಮೆಡಿಕಲ್‌ ಆಂಕೊಲಾಜಿಯ ಹಿರಿಯ ಸಲಹೆಗಾರ ಡಾ ವಿವೇಕ್ ಬೆಳತ್ತೂರ್ ಹಾಗೂ ಸರ್ಜಿಕಲ್ ಆಂಕೊಲಾಜಿ ಮತ್ತು ರೊಬೊಟಿಕ್ ವಿಭಾಗದ ನಿರ್ದೇಶಕ ಡಾ ಸಂದೀಪ್ ನಾಯಕ್ ಪಿ ನೇತೃತ್ವದ ತಂಡ ಈ ಚಿಕಿತ್ಸೆ ನಡೆಸಿದ್ದಾರೆ.

ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್‌ಗೆ ಏನು ಚಿಕಿತ್ಸೆ

ಶಸ್ತ್ರಚಿಕಿತ್ಸಕ ಆಂಕೊಲಾಜಿಯ ಸಲಹೆಗಾರ ಡಾ ಭರತ್ ಜಿ ಅವರು ಗರ್ಭಾವಸ್ಥೆಯ ಸ್ತನ ಕ್ಯಾನ್ಸರ್ ಚಿಕಿತ್ಸೆ ಕುರಿತು ವಿವರಿಸುತ್ತ, ಒಂದು ನಿದರ್ಶನವನ್ನು ಮುಂದಿಟ್ಟರು. "18 ನೇ ವಾರ ತುಂಬಿದ್ದ ಪ್ರಿಯಾ (ಹೆಸರು ಬದಲಿಸಲಾಗಿದೆ) ಎಂಬ ಗರ್ಭಿಣಿಯು ತನ್ನ ಬಲ ಸ್ತನದಲ್ಲಿ ಗಡ್ಡೆ ಇರುವುದನ್ನು ಗಮನಿಸಿ ಆಸ್ಪತ್ರೆಗೆ ಭೇಟಿ ನೀಡಿ ಎಂಆರ್‌ಐ ಸ್ಕ್ಯಾನ್‌ ಮಾಡಿಸಿಕೊಂಡರು. ಆಗ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿತು. ಆದರೆ, ಈ ಸೋಂಕು ಸುತ್ತಲಿನ ಸ್ನಾಯುಗಳಿಗೆ ಇನ್ನೂ ಹರಡಿರಲಿಲ್ಲ. ಅಲ್ಲದೆ ಎದೆಯ ಜಾಗದಲ್ಲಿ ದುಗ್ಧರಸ ಗ್ರಂಥಿಗಳು (ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಸಣ್ಣ, ಹುರುಳಿ-ಆಕಾರದ ರಚನೆಗಳು) ಕಂಡು ಬಂದಿತ್ತು.

ಎಲ್ಲಾ ತಪಾಸಣೆಗಳ ಬಳಿಕ ಆಕೆಯ ಕ್ಯಾನ್ಸರ್ ಹಂತ 3 ತಲುಪಿರುವುದು ಖಚಿತವಾಯಿತು. ಜೊತೆಗೆ, HER2-ಪಾಸಿಟಿವ್ ಎಂದು ವರ್ಗೀಕರಿಸಲಾಯಿತು. ಅಂದರೆ ಅವರ ಕ್ಯಾನ್ಸರ್ ಕೋಶಗಳು HER2 ಎಂಬ ಪ್ರೋಟೀನ್‌ನನ್ನು ಅಧಿಕವಾಗಿ ಹೊಂದಿದ್ದವು, ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ವರ್ಗೀಕರಣವು ಆಕೆಯ ಕ್ಯಾನ್ಸರ್, ಹಾರ್ಮೋನ್ ಚಿಕಿತ್ಸೆಗಳಿಗೆ ಸ್ಪಂದಿಸುವುದಿಲ್ಲ ಎಂದು ಸೂಚಿಸಿತು, ಇದರಿಂದ ಆಕೆಯ ಚಿಕಿತ್ಸೆ ಇನ್ನಷ್ಟು ಜಟಿಲಗೊಂಡಿತ್ತು ಎಂದು ಡಾಕ್ಟರ್ ಭರತ್ ವಿವರಿಸಿದರು.

ಕಿಮೋ ಥೆರಪಿ ಚಿಕಿತ್ಸೆ

ಆಂಕೊಲಾಜಿ ತಜ್ಞರು ಮತ್ತು ಪ್ರಸೂತಿ ತಜ್ಞರ ಸಮ್ಮುಖದಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಆರೈಕೆಗೆ ಮುಂದಾದೆವು. ಅವಳಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಆಕೆಗೆ ಕಿಮೋಥೆರಪಿಯನ್ನು ಪ್ರಾರಂಭಿಸಿದೆವು. ಆಕೆಯು ಉತ್ತಮವಾಗಿ ಸ್ಪಂದಿಸಲು ಪ್ರಾರಂಭಿಸಿದರು. 34 ವಾರಗಳಲ್ಲಿ ಆಕೆಗೆ ಸಿಸೇರಿಯನ್‌ ಮೂಲಕ ಅವಳಿ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದು, ಎನ್‌ಐಸಿಯು ಮೂಲಕ ಮಕ್ಕಳ ಆರೈಕೆಯನ್ನು ಮುಂದುವರೆಸಿದೆವು. ಇತ್ತ ತಾಯಿಗೂ ಕಿಮೋಥೆರಪಿ ಮುಂದುವರಿಸಿದೆವು ಎಂದು ಡಾಕ್ಟರ್ ಭರತ್ ಹೇಳಿದರು.

"ಅವಳಿ ಮಕ್ಕಳ ಹೆರಿಗೆಯ ನಂತರ, ಪೀಡಿತ ಸ್ತನವನ್ನು ತೆಗೆದುಹಾಕಲು ಪ್ರಿಯಾ ಸ್ತನಛೇದನ ಶಸ್ತ್ರಚಿಕಿತ್ಸೆಗೆ ಒಳಗಾದರು. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಈ ಹಂತವು ನಿರ್ಣಾಯಕವಾಗಿತ್ತು. ಆಕೆಯ ಮೂಳೆಗಳನ್ನು ಬಲಪಡಿಸಲು ಮತ್ತು ದೇಹದ ಇತರ ಭಾಗಗಳಿಗೆ ಕ್ಯಾನ್ಸರ್ ಹರಡುವ ಅಪಾಯವನ್ನು ಕಡಿಮೆ ಮಾಡಲು ಮೂಳೆ ಆರೋಗ್ಯದ ಔಷಧಿಗಳ ಜೊತೆಗೆ, HER2-ಪಾಸಿಟಿವ್ ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಟ್ಟುಕೊಂಡು ಅವರಿಗೆ ಚಿಕಿತ್ಸೆ ನೀಡಲಾಯಿತು. ಆಕೆ ಉತ್ತಮವಾಗಿ ಚಿಕಿತ್ಸೆಗೆ ಸ್ಪಂದಿಸಿದ್ದು, ಕ್ಯಾನ್ಸರ್‌ ವಿರುದ್ಧ ಆಕೆ ಗೆಲುವು ಸಾಧಿಸಿದ್ದು, ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ವೈದ್ಯಕೀಯ ಆಂಕೊಲಾಜಿಯ ಹಿರಿಯ ಸಲಹೆಗಾರ ಡಾ ವಿವೇಕ್ ಬೆಳತ್ತೂರ್ ವಿವರಿಸಿದರು.

Whats_app_banner