ಮುಟ್ಟಿನ ರಕ್ತ ಅಶುದ್ಧವೇ, ಇದು ನಿಜಕ್ಕೂ ಕೆಟ್ಟ ರಕ್ತವೇ; ಮುಟ್ಟಿನ ರಕ್ತಸ್ರಾವದ ಕುರಿತು ಪ್ರತಿಯೊಬ್ಬರು ತಿಳಿಯಬೇಕಾದ ಸತ್ಯವಿದು
ಪ್ರಾಚೀನ ಕಾಲದಿಂದಲೂ ಮುಟ್ಟಿನ ಬಗ್ಗೆ ಜನರಲ್ಲಿ ಹಲವು ಅಪನಂಬಿಕೆಗಳಿವೆ, ಮಾತ್ರವಲ್ಲ ಇಂದಿಗೂ ಆ ನಂಬಿಕೆಗಳು ಮುಂದುವರಿದುಕೊಂಡು ಬಂದಿದೆ. ಮುಟ್ಟಿನ ರಕ್ತವನ್ನು ಕೆಟ್ಟ ರಕ್ತ, ಅದು ಅಶುದ್ಧ ಎಂದು ಪರಿಗಣಿಸಲಾಗುತ್ತದೆ. ಇದು ನಿಜಕ್ಕೂ ಅಶುದ್ಧ, ಇದನ್ನು ಕೆಟ್ಟ ಎಂದುಕೊಳ್ಳಲು ಕಾರಣವೇನು ಈ ಬಗ್ಗೆ ಸ್ತ್ರೀರೋಗ ತಜ್ಞರು ನೀಡಿದ ಸ್ಪಷನೆ ಇಲ್ಲಿದೆ.
ಮುಟ್ಟು ಹೆಣ್ಣುಮಕ್ಕಳ ಬದುಕಿನ ಭಾಗ. ಹರೆಯಕ್ಕೆ ಬಂದಾಗ ಹೆಣ್ಣುಮಕ್ಕಳು ಋತುಮತಿಯಾಗುತ್ತಾರೆ. ಆ ನಂತರ ಪ್ರತಿ ತಿಂಗಳು ಮುಟ್ಟಾಗುತ್ತಾರೆ. ಈ ಮುಟ್ಟಿನ ಅವಧಿಯು ಮೂರರಿಂದ 5 ದಿನಗಳವರೆಗೆ ಇರುತ್ತದೆ. ಕ್ರಮವಾದ ಮುಟ್ಟು ಹೆಣ್ಣುಮಕ್ಕಳ ಸಂತಾನೋತ್ಪತ್ತಿ ವ್ಯವಸ್ಥೆಯು ಆರೋಗ್ಯಕರವಾಗಿರುವುದರ ಸಂಕೇತವಾಗಿದೆ. ಪ್ರತಿ ತಿಂಗಳು ಪಿರಿಯಡ್ಸ್ ಆಗುವುದು ಮಹಿಳೆಯ ದೇಹವು ಗರ್ಭಧರಿಸಲು ಸಿದ್ಧವಾಗಿದೆ ಎಂಬುದರ ಸಂಕೇತವಾಗಿದೆ.
ಮಹಿಳೆಯ ಅಂಡಾಶಯವು ಫಲೀಕರಣಕ್ಕಾಗಿ ಪ್ರತಿ ತಿಂಗಳು ಅಂಡಾಣುವನ್ನು ಉತ್ಪಾದಿಸುತ್ತದೆ. ಅಲ್ಲದೆ ಗರ್ಭಕೋಶದ ಒಳಪದರ ಕೂಡ ಗಟ್ಟಿಯಾಗುತ್ತದೆ. ಪ್ರತಿ ತಿಂಗಳು ಮುಟ್ಟಿನ ಅವಧಿಯಲ್ಲಿ ಅಂಡಾಣುಗಳು ಬಿಡುಗಡೆಯಾಗತ್ತವೆ. ಆ ಸಂದರ್ಭದಲ್ಲಿ ಗರ್ಭಾಶಯದ ಒಳಪದರವು ತುಂಡು ತುಂಡುಗಳಾಗಿ ಬಿದ್ದು ರಕ್ತಸ್ರಾವದೊಂದಿಗೆ ಬೆರೆತುಹೋಗುತ್ತದೆ. ಫಲವಂತಿಕೆಗೆ ಅಸಮರ್ಥವಾದ ಅಂಡಾಟುಗಳನ್ನು ಹೊರ ಹಾಕುವ ಪ್ರಕ್ರಿಯೆಯ ಮುಟ್ಟಿನ ಸಮಯದಲ್ಲಿ ಸಂಭವಿಸುತ್ತದೆ. ಹೆಚ್ಚಿನ ಮಹಿಳೆಯರು ಮೂರರಿಂದ ಐದು ದಿನಗಳವರೆಗೆ ರಕ್ತಸ್ರಾವ ಅನುಭವಿಸುತ್ತಾರೆ. ಕೆಲವರಿಗೆ 7 ದಿನಗಳ ಕಾಲ ಮುಟ್ಟಿನ ಸ್ರಾವವಿರುತ್ತದೆ.
ಮುಟ್ಟಿನ ರಕ್ತ ಅಶುದ್ಧವೇ?
ಪಿರಿಯಡ್ಸ್ ಅಥವಾ ಮುಟ್ಟಾಗುವ ಬಗ್ಗೆ ಜನರಲ್ಲಿ ಕೆಲವು ತಪ್ಪು ಕಲ್ಪನೆಗಳಿವೆ. ಈಗಲೂ ಅವುಗಳನ್ನು ನಿಜವೆಂದು ನಂಬುವವರೂ ಇದ್ದಾರೆ. ಅವುಗಳಲ್ಲಿ ಪ್ರಮುಖವಾದದ್ದು ಮುಟ್ಟಿನ ಸಮಯದಲ್ಲಿ ಹೊರಬರುವ ರಕ್ತವು ಸಂಪೂರ್ಣವಾಗಿ ಅಶುದ್ಧವಾಗಿದೆ ಮತ್ತು ಅದು ಕೆಟ್ಟ ರಕ್ತ, ಆ ಕಾರಣಕ್ಕೆ ಅದು ದೇಹದಿಂದ ಹೊರಬರುತ್ತದೆ ಎನ್ನುವುದು. ಆದರೆ ಸ್ತ್ರೀರೋಗ ತಜ್ಞರು ಹೇಳುವಂತೆ ಇದು ಶುದ್ಧ ಸುಳ್ಳು ಹಾಗೂ ಜನರಲ್ಲಿರುವ ಅಪನಂಬಿಕೆ. ತಜ್ಞರ ಪ್ರಕಾರ ನಮ್ಮ ದೇಹದಲ್ಲಿ ಕೆಟ್ಟ ರಕ್ತವಿಲ್ಲ. ಎಲ್ಲರೂ ಒಂದೇ ರೀತಿಯ ರಕ್ತವನ್ನು ಹೊಂದಿರುತ್ತಾರೆ. ಮುಟ್ಟಿನ ರಕ್ತಸ್ರಾವದಲ್ಲಿ ಕೆಲವರಿಗೆ ಕೆಂಪು ರಕ್ತ ಹೊರ ಹೋದರೆ, ಇನ್ನೂ ಕೆಲವರಿಗೆ ಕಂದು ಬಣ್ಣ ರಕ್ತಸ್ರಾವವಾಗುತ್ತದೆ. ಕೆಂಪು ರಕ್ತ ಎಂದರೆ ತಾಜಾ ರಕ್ತ ಬಿಡುಗಡೆಯಾಗಿದೆ ಎಂದರ್ಥ. ಕಂದು ಬಣ್ಣದ ರಕ್ತ ಎಂದರೆ ಅದು ಆಕ್ಸಿಡೀಕರಣಗೊಂಡಿದೆ ಮತ್ತು ರಕ್ತವು ಗರ್ಭಾಶಯದಿಂದ ಹೊರಬರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಸೂಚಿಸುತ್ತದೆ.
ಮುಟ್ಟಿನ ರಕ್ತದ ಜೊತೆ ಹೊರ ಬರುವ ಅಂಶಗಳು
ಮುಟ್ಟಿನ ರಕ್ತದ ಜೊತೆಗೆ, ಫಲವತ್ತಾಗದ ಅಂಡಾಣು ಮತ್ತು ಗರ್ಭಾಶಯದ ಅಂಗಾಂಶಗಳು ಸಹ ಹೊರ ಬರುತ್ತವೆ. ಆ ಸಮಯದಲ್ಲಿ, ಸಣ್ಣ ಉಂಡೆಗಳು ಮತ್ತು ಜಿಗುಟಾದ ವಸ್ತುಗಳು ಕಾಣಿಸಿಕೊಳ್ಳುತ್ತವೆ. ಇವು ರಕ್ತದ ಹರಿವಿನೊಂದಿಗೆ ಹೊರಬರುತ್ತವೆ, ಖಂಡಿತ ಹೊರತು ಅದು ಕೆಟ್ಟ ರಕ್ತವಲ್ಲ.
ಈ ರಕ್ತದಲ್ಲಿ ದ್ರವಾಂಶ, ನೀರು, ಪೊಟ್ಯಾಸಿಯಮ್ ಮತ್ತು ಸೋಡಿಯಂ ಕೂಡ ಇರುತ್ತದೆ. ಈ ರಕ್ತ ಖಂಡಿತ ಹಾನಿಕಾರಕವೂ ಅಲ್ಲ ವಿಷಕಾರಿಯೂ ಅಲ್ಲ. ಮುಟ್ಟಿನ ರಕ್ತವು ಶುದ್ಧವಾಗಿರುತ್ತದೆ. ಇಲ್ಲದಿದ್ದರೆ, ಇದು ದೇಹದಾದ್ಯಂತ ಪರಿಚಲನೆಯಾಗುವ ರಕ್ತದಿಂದ ಸ್ವಲ್ಪ ಭಿನ್ನವಾಗಿರುತ್ತದೆ. ಕೆಲವು ಅಂಗಾಂಶಗಳು, ಲೋಳೆಯ ಮತ್ತು ಗರ್ಭಾಶಯದ ಒಳಪದರಗಳು ಪಿರಿಯಡ್ಸ್ ಸಮಯದಲ್ಲಿ ರಕ್ತದಲ್ಲಿ ಒಟ್ಟಿಗೆ ಹೊರಬರುತ್ತವೆ. ಹಾಗಾಗಿ ಸ್ವಲ್ಪ ದಪ್ಪ ಮತ್ತು ಮುದ್ದೆಯಾಗುವ ಸಾಧ್ಯತೆ ಇದೆ. ಇದಲ್ಲದೆ, ಮಹಿಳೆಯ ದೇಹದಲ್ಲಿ ಯಾವುದೇ ಕೆಟ್ಟ ರಕ್ತವಿಲ್ಲ. ಮಹಿಳೆಯ ದೇಹದಲ್ಲಿ ಮಾತ್ರವಲ್ಲ, ಯಾವುದೇ ಮನುಷ್ಯನ ದೇಹದಲ್ಲಿ ಒಳ್ಳೆಯ ರಕ್ತ ಮತ್ತು ಕೆಟ್ಟ ರಕ್ತ ಎಂಬ ಎರಡು ವಿಧಗಳಿಲ್ಲ, ಎಲ್ಲರಿಗೂ ಇರುವುದು ಒಂದೇ ರಕ್ತ ಅದು ಕೆಂಬಣ್ಣದ ಶುದ್ಧ ರಕ್ತ.
ತಿಂಗಳಿಗೆ ಸರಿಯಾಗಿ ಮುಟ್ಟಾಗಿಲ್ಲ ಅಂದ್ರೆ ಏನರ್ಥ
ಕೆಲವರಿಗೆ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಮುಟ್ಟಾಗುವುದಿಲ್ಲ. ಇದು ಹಾರ್ಮೋನ್ ಅಸಮತೋಲನ, ಅನಾರೋಗ್ಯಕರ ಆಹಾರ, ಪಾಲಿಸಿಸ್ಟಿಕ್ ಓವರ್ ಇನ್ ಸಿಂಡ್ರೋಮ್ (ಪಿಸಿಓಎಸ್)ನಂತಹ ಕಾಯಿಲೆಗಳು, ತೀವ್ರ ಒತ್ತಡ, ಅನಾರೋಗ್ಯ, ಹಠಾತ್ ತೂಕ ಹೆಚ್ಚಾಗುವುದು ಅಥವಾ ನಷ್ಟದಿಂದ ಕೂಡ ಉಂಟಾಗಬಹುದು. ಕೆಲವು ಸಂದರ್ಭದಲ್ಲಿ ಗರ್ಭ ಧರಿಸಿದಾಗ ಮುಟ್ಟಾಗುವುದನ್ನು ನಿಲ್ಲಿಸುತ್ತಾರೆ. ಪ್ರತಿ ತಿಂಗಳು ನಿಮಗೆ ಪಿರಿಯಡ್ಸ್ ಆಗದೇ ಇರಲು ಕಾರಣವೇನು ಎಂಬುದನ್ನು ಕಂಡುಹಿಡಿಯಲು ವೈದ್ಯರನ್ನು ಸಂಪರ್ಕಿಸುವುದು ಅವಶ್ಯ. ಪ್ರತಿ ತಿಂಗಳು ನಿಯಮಿತವಾಗಿ ಮುಟ್ಟಾಗುತ್ತಿದ್ದರೆ ನೀವು ಆರೋಗ್ಯವಂತರಾಗಿದ್ದೀರಿ ಎಂದರ್ಥ. ಅದೂ ಅಲ್ಲದೆ ಒಂದು ತಿಂಗಳು ಋತುಸ್ರಾವ ಬಂದು ಮುಂದಿನ ತಿಂಗಳು ನಿಂತರೆ ಯಾವುದೋ ಮೂಲ ಸಮಸ್ಯೆ ಇದೆ ಎಂದು ತಿಳಿಯಬೇಕು. ಸಮಸ್ಯೆಯಿಂದ ಮುಕ್ತಿ ಹೊಂದಲು ತಜ್ಞರಿಂದ ಸಲಹೆ ಪಡೆದು ಸೂಕ್ತ ಔಷಧಗಳನ್ನು ಸೇವಿಸಬೇಕು. ವಿಶೇಷವಾಗಿ ಆರೋಗ್ಯಕರ ಆಹಾರ ಸೇವನೆ ಮತ್ತು ವ್ಯಾಯಾಮಕ್ಕೆ ಒತ್ತು ನೀಡಿ. ಇವೆರಡೂ ಮುಟ್ಟಿನ ಆರೋಗ್ಯದ ಜೊತೆಗೆ ಒಟ್ಟಾರೆ ಆರೋಗ್ಯಕ್ಕೂ ಬಹಳ ಮುಖ್ಯ.