ಕನ್ನಡ ಸುದ್ದಿ  /  ಜೀವನಶೈಲಿ  /  ಬೇರೊಂದು ಭಾಷೆಯ ಲೇಖಕರನ್ನೂ ಆಹ್ವಾನಿಸಿ, ಪುಸ್ತಕ ಮಾರುವವರಿಗೆ ಶುಲ್ಕ ಬೇಡ; ಸಾಹಿತ್ಯ ಸಮ್ಮೇಳನಗಳ ಕಾಯಕಲ್ಪಕ್ಕೆ ವೈಎನ್ ಮಧು ಕೊಟ್ಟ ಸಲಹೆಗಳಿವು

ಬೇರೊಂದು ಭಾಷೆಯ ಲೇಖಕರನ್ನೂ ಆಹ್ವಾನಿಸಿ, ಪುಸ್ತಕ ಮಾರುವವರಿಗೆ ಶುಲ್ಕ ಬೇಡ; ಸಾಹಿತ್ಯ ಸಮ್ಮೇಳನಗಳ ಕಾಯಕಲ್ಪಕ್ಕೆ ವೈಎನ್ ಮಧು ಕೊಟ್ಟ ಸಲಹೆಗಳಿವು

ಬರಹಗಾರ ವೈ ಎನ್​ ಮಧು ಅವರು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಒಂದಿಷ್ಟು ಬದಲಾವಣೆಗಳನ್ನು ಬಯಸಿದ್ದಾರೆ. ಅವರ ಫೇಸ್​ಬುಕ್​ ಪೋಸ್ಟ್ ಅನ್ನು ಎಚ್​ಟಿ ಕನ್ನಡದಲ್ಲಿ ಮರುಪ್ರಕಟಿಸಲಾಗಿದೆ.

ವೈಎನ್ ಮಧು (ಬಲಚಿತ್ರ)
ವೈಎನ್ ಮಧು (ಬಲಚಿತ್ರ)

ಸಾಹಿತ್ಯ ಸಮ್ಮೇಳನಗಳ ರೂಪುರೇಷೆಯಲ್ಲಿ ಅಮೂಲಾಗ್ರ ಬದಲಾವಣೆಗಳು ಆಗಬೇಕಿದೆ. ಯಾರನ್ನೂ ದೂರದೇ ಅತ್ಯಂತ ವಿನಮ್ರತೆಯಿಂದ ಕೆಲವು ಸಲಹೆಗಳು.

ಟ್ರೆಂಡಿಂಗ್​ ಸುದ್ದಿ

1. ಅಧ್ಯಕ್ಷರ ಮೆರವಣಿಗೆಗಳನ್ನು ನಿಲ್ಲಿಸಿ. ಮತ್ತು ಅಧ್ಯಕ್ಷರಾಗುವವರು ಹೊಸ ಹೊಸ ಐಡಿಯಾಗಳನ್ನು ಅಳವಡಿಸಿಕೊಳ್ಳಲು ತಮ್ಮ ಅಧಿಕಾರ ಮತ್ತು ಪ್ರಭಾವ ಬಳಸಿ. ಸಮ್ಮೇಳನ‌ ಹೇಗಾಗಬೇಕು ಎಂಬ ಕಲ್ಪನೆ ನಿಮ್ಮದಿರಲಿ.

2. ಇನ್ನೊಂದು ಭಾಷೆಯ (ತುಳು ಕೊಂಕಣಿ, ನೆರೆರಾಜ್ಯಗಳ) ಹಿರಿಯ ಲೇಖಕರನ್ನು ಅತಿಥಿಗಳನ್ನಾಗಿ ಆಹ್ವಾನಿಸಿ.

3. ಪೌರಾಣಿಕದಿಂದ ಹಿಡಿದು ವೈಜ್ಞಾನಿಕದವರೆಗೆ, ಜ್ವಲಂತ ಸಮಸ್ಯೆಗಳಿಂದ‌ ಹಿಡಿದು ಮುಂಬರಲಿರುವ ಸಾಮಾಜಿಕ ಬದಲಾವಣೆಗಳ ಬಗ್ಗೆ ಚರ್ಚಿಸುವ, ವಿವಿಧ ಪ್ರಕಾರಗಳ ಗೋಷ್ಠಿ ‌ಏರ್ಪಡಿಸಿ.

4. ಮಕ್ಕಳ/ವಿದ್ಯಾರ್ಥಿಗಳ ಆಸಕ್ತಿಗೆಂದೇ ಪ್ರತ್ಯೇಕ ವೇದಿಕೆ/ಗೋಷ್ಠಿ ಇಡಿ. ಕನಿಷ್ಠ ಆ ಊರಿನ ಮಕ್ಕಳಾದರೂ ಬಂದು ನಲಿದು ಕೈಲಿ ಪುಸ್ತಕ ಹಿಡಿದು ಮನೆಗೆ ಹೋಗುವಂತಿರಬೇಕು.

5. ಸ್ಥಳೀಯ ಸಾಹಿತಿಗಳಿಗೆಂದೇ ಪ್ರತ್ಯೇಕ ಸಮಯ ಮೀಸಲಿಡಿ. ಅಲ್ಲಲ್ಲಿ ಅವರ ಪುಸ್ತಕಗಳ ದೊಡ್ಡ ಪೋಸ್ಟರುಗಳನ್ನು ಲಗತ್ತಿಸಿ. ಕೆಳಗೆ ವಿವರ ಬರೆಯಿರಿ. ಅದೇ ಒಂದು ಜನ ನಿಂತು ಓದುವ ಕುತೂಹಲದ ವಸ್ತುವಾಗಿರಬೇಕು.

6. ಕಾರ್ಪೊರೇಟರುಗಳು, ಎಮ್ಮೆಲ್ಲೆಗಳು, ಸ್ವಾಮೀಜಿಗಳು, ಬ್ಯಾಂಕು, ಅದು ಇದು ಅಧ್ಯಕ್ಷರುಗಳು- ಇವರೆಲ್ಲ ಆಹ್ವಾನಿತರಿರಲಿ. ಖಂಡಿತ ಅವರ ಬೆಂಬಲ ಬೇಕು. ಆದರೆ ಅವರೇ ವೇದಿಕೆ‌ ತುಂಬ ಆಕ್ರಮಿಸಿಕೊಳ್ಳುವುದರಿಂದ ಸಾಹಿತ್ಯಕ್ಕಾಗಲಿ ಜನಸಾಮಾನ್ಯರಿಗಾಗಲಿ ಯಾವ ಉಪಯೋಗವಿಲ್ಲ.

6.1 . ವೇದಿಕೆಯನ್ನು ಅತ್ಯಂತ ಎತ್ತರದಲ್ಲಿ ಅತಿದೂರಲ್ಲಿಡುವ ಬದಲು ಪುಟ್ಟ ಪುಟ್ಟ ಹಲವು ವೇದಿಕೆಗಳನ್ನು‌ ನಿರ್ಮಿಸಿ. ಈಗಿರುವ ವ್ಯವಸ್ಥೆಯಲ್ಲಿ ನಿಮಗೇನೊ ಎಲ್ಲರೂ ಒಟ್ಟಿಗೇ ಕಾಣಿಸಬಹುದು. ನೀವು ಕಾಣಿಸ್ತಿಲ್ಲ, ನೀವು ಆಡುವುದಂತೂ ಯಾರಿಗೂ ಕೇಳಿಸ್ತಿಲ್ಲ.

7. ಏನನ್ನು ಮಾಡಿದರೂ ಆಸಕ್ತಿಯಿಂದ ಉತ್ಸಾಹದಿಂದ ಕನ್ನಡಕ್ಕಾಗಿ ಮತ್ತು ಕನ್ನಡಕ್ಕಾಗಿ ಮಾತ್ರವೇ ಮಾಡಿರಿ. ವೈಯುಕ್ತಿಕ ಹೆಸರು ಸನ್ಮಾನ ಶ್ರೇಯಸ್ಸು..ಎಲ್ಲವನ್ನು ಬದಿಗಿರಿಸಿ. ಫಂಡ್ ಬಳಕೆ ಮಾತ್ರವೇ ಉದ್ದೇಶವಾಗದಿರಲಿ.

8. ಒಂದು‌ ತಿಂಗಳ ಹಿಂದಿನಿಂದ ವ್ಯಾಪಕ ಪ್ರಚಾರ ಮಾಡಿರಿ. ಮೊದಲಿಗೆ ಜನರಿಗೆ ಕಾರ್ಯಕ್ರಮ ನಡಿತಿದೆ ಅಂತ ಗೊತ್ತಾಗಬೇಕು. ಮತ್ತು ಏನೇನು ಇರತ್ತೆ ಅಂತ‌ ಗೊತ್ತಾಗಬೇಕು. ತಮ್ಮ ಆಸಕ್ತಿಗೆ ಅನುಗುಣವಾಗಿ ವಿಚಾರವನ್ನು ಆಲಿಸಲು, ಸಾಹಿತ್ಯವನ್ನು ಆಲಂಗಿಸಲು, ಸಂಭ್ರಮಿಸಲು ಬರುವಂತಿರಬೇಕು. ಜನರ ಆಸಕ್ತಿಗಳಿಗೆ ಸಮಸ್ಯೆಗಳಿಗೆ ಕಿವಿಗೊಡಿ.

9. ಸಾಮಾನ್ಯವಾಗಿ ಬರಹಗಾರರು ಉತ್ತಮ ಮಾತುಗಾರರಲ್ಲ. ದಯಮಾಡಿ ಇದನ್ನು ಅರ್ಥಮಾಡಿಕೊಳ್ಳಿ. ಬಂದವರ ಸಮಯಕ್ಕೆ ಬೆಲೆಕೊಡಿ. ಸಿಗುವುದೊಂದೇ ವೇದಿಕೆ ಹೌದು. ಹಾಗೆಂದು ಎಲ್ಲವನ್ನೂ ತಾವಷ್ಟೇ ಬಳಸಬಾರದು. ಯಾವತ್ತಿಗೂ ಕೇಳುಗರ ಮತ್ತು ನಿಮ್ಮ ನಂತರ ವಿಷಯ ಮಂಡಿಸಲಿರುವವರ ಬಗ್ಗೆ ಕಾಳಜಿಯಿರಲಿ.

10. ಬಂದವರೆಲ್ಲರ ಕೈಲಿ ಕೊಡುಗೆಯಾಗಿ ಒಂದೊಂದು ಪುಸ್ತಕ ಇಡಬಹುದೇ?(ಉಚಿತ ಎಂದು ಹೆಸರಿಸಬೇಡಿ). ಅದಕ್ಕಾಗಿ ಹಣ ಎತ್ತಿಡಿ ಅಥವಾ...ಲೈಬ್ರರಿಗೆಂದು ಕೊಂಡಿರುವ ಪುಸ್ತಕಗಳು ಇರಬೇಕಲ್ಲವೇ...ಅವನ್ನೇ ತಂದು ಹಂಚಿ. ಬೇಕಾದರೆ ಕಾರ್ಯಕ್ರಮಕ್ಕೆ ರೆಜಿಸ್ಟರ್ ಆಗುವ ವ್ಯವಸ್ಥೆ ಮಾಡಿ.

11. ಇಲ್ಲಿ ಕುಡಿಯುವ ನೀರು, ಇಲ್ಲಿ ಊಟ, ಇಲ್ಲಿ ಶೌಚಾಲಯ, ಇಲ್ಲಿ ಇಂತಿಂಥ ವೇದಿಕೆ/ಗೋಷ್ಠಿ ಎಂಬ ಫಲಕಗಳನ್ನು ಸಾಕಷ್ಟು ಕಡೆ ಹಾಕಿ. ನಾಮಕಾವಸ್ಥೆ ಅಲ್ಲ.

12. ಮಾತಾಡುವ ಚಟ ಇರುವವರಿಗೆ, ಉತ್ತಮ ಮಾತುಗಾರಿಕೆ ಇರುವವರಿಗೆ...ಅಹೋರಾತ್ರಿ ಕಾರ್ಯಕ್ರಮ ಏರ್ಪಡಿಸಿ. ನಗಿಸಿ, ಕುತೂಹಲ ಕೆರಳಿಸಿ...ಜನರನ್ನು ಇನ್ನೊಂದು ‌ಲೋಕಕ್ಕೆ ಕೊಂಡೊಯ್ಯಬಲ್ಲ ಮಾತುಗಾರರಿರ್ತಾರೆ. ಸಂಜೆ ಎಷ್ಟಾದರೂ ಮಾತಾಡಿಕೊಳ್ಳಲಿ.

13. ಟೂತ್ಪೇಸ್ಟು ಚಟ್ನಿಪುಡಿಗಳಿಗೆ ಹೊರಗೆ ಅವಕಾಶ‌ ಮಾಡಿಕೊಡಿ. ಒಳಗೆ ಪುಸ್ತಕದಂಗಡಿಗಳು ಇರಲಿ. ಪುಸ್ತಕ ಮಾರುವವರಿಂದ ಶುಲ್ಕ ಪಡೆಯಬೇಡಿ. ಇನ್ನು ಜಾಗ ಮಿಕ್ಕಿದ್ದರೆ ವಿದ್ಯಾರ್ಥಿಗಳ ಕಲಾಪ್ರದರ್ಶನಕ್ಕೆ ಅವಕಾಶ ಮಾಡಿಕೊಡಿ. ಆ ಮೂಲಕ ಶಾಲೆಗಳು ಭಾಗಿಯಾದಂತಾಗುತ್ತದೆ.

ಸಣ್ಣುಡುಗ ಜಾಸ್ತಿ ಮಾತಾಡ್ತಾನೆ ಅಂದ್ಕೊಬೇಡಿ, ಇದೆಲ್ಲದರಿಂದ ಎಲ್ಲರಿಗೂ ಒಳ್ಳೆಯದೇ ಆಗ್ತದೆ ಎಂಬ ದೃಷ್ಟಿಯಿಂದ ‌ಹೇಳಿದೆ.

-ವೈ ಎನ್​ ಮಧು

ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ:

ಸಾಹಿತ್ಯ ಜನರಿಗೆ ತಲುಪಬೇಕಾದರೆ ಸಾಹಿತ್ಯ ಗೊತ್ತಿರುವವರು ಮತ್ತು ಗೊತ್ತಿಲ್ಲದವರು ಎನ್ನುವ ಶ್ರೇಷ್ಟತೆಯ ಭ್ರಮೆಯಿಂದ ಹೊರಗೆ ಬರಬೇಕು. ಸಾಹಿತ್ಯ ಗೊತ್ತಿಲ್ಲದಿರುವವರು ಏನನ್ನು ಓದಲು ಬಯಸುತ್ತಾರೆ ಎನ್ನುವುದರ ಕುರಿತು ನಮ್ಮ ಸಾಹಿತಿಗಳು ಗಮನಿಸದಿದ್ದರೆ ಅವರು ದಂತಗೋಪುರದಲ್ಲಿರುತ್ತಾರೆ. ಕೊನೆಗೆ ತಮ್ಮದೇ ವಿಷಯಗಳನ್ನು ನಿರೂಪಿಸುವ ಹೊಸ ಮಾರ್ಗಗಳಾದರೂ ಸಾಹಿತಿಗಳಿಗೆ ತಿಳಿಯುವುದು ಹೇಗೆ? ಈಗ ಸುಮ್ಮನೆ ಬರೆದು ಬಿಸಾಕಿ "ಓದುವ ಹವ್ಯಾಸ ಕಡಿಮೆಯಾಗಿದೆ" ಎಂದು ಎಲ್ಲರನ್ನೂ ಹಳಿಯುತ್ತಾ ಕೂರುತ್ತಿದ್ದಾರೆ ಎಂದು ಒಬ್ಬರು ಕಾಮಂಟ್​ ಮಾಡಿದ್ದಾರೆ.

ಅಧ್ಯಕ್ಷರ ಭಾಷಣ ಮುಗಿದ ನಂತರ ಬರೋರು ಇದ್ದಾರೆ. ಅದೇ ಹಳೆಯ ವಿಷಯಕ್ಕೆ ಹೊಸತಾಗಿ ಪದಗಳ ಸೇರಿಸಿದ ತರಹ ಇರುತ್ತೆ . ಆ ಆಲೋಚನೆ ಸಹ ಬದಲಾಗಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣಿಗಳು, ಅಧಿಕಾರಿವರ್ಗದವರು , ವಿವಿಧ ಸಂಘಟನೆಗಳನ್ನು ಓಲೈಸಿ ತೃಪ್ತಿಪಡಿಸಿದರೆ ಸಾಕು ಎಂಬಂತಿರುತ್ತದೆ ಪದಾಧಿಕಾರಿಗಳ ಧೋರಣೆ. ಇದರ ಜೊತೆಗೆ ಸ್ವಜನ ಪಕ್ಷಪಾತವೂ ಇರುತ್ತದೆ. ಇವರ ಮೇಲಾಟವನ್ನು ಕಂಡು ನಿಜವಾದ ಕಲಾವಿದರು , ಸೃಜನಶೀಲ ಸಾಹಿತಿಗಳು ಅಸಹ್ಯಪಟ್ಟು ದೂರ ಸರಿಯುತ್ತಿದ್ದಾರೆ ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮ ಸಮಯಕೊಟ್ಟು, ಬಹಳ ಸೂಕ್ಷ್ಮವಾಗಿ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸಿ ಬರೆದಿದ್ದಕ್ಕಾಗಿ ಧನ್ಯವಾದಗಳು ಸರ್...ಈ ಯಾವ ಅಂಶಗಳೂ ಕಾಣದೇ ಇರುವುದರಿಂದಲೇ ಸಾಹಿತ್ಯ ಸಮ್ಮೇಳನಗಳಿಗೆ ಹೋಗುವ ಆಸಕ್ತಿಯೇ ಇಲ್ಲವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಗೋಷ್ಠಿಗಳನ್ನು ಹೇಗೆ ವೈವಿಧ್ಯಮಯ ವಸ್ತು ವಿಷಯಗಳಿಂದ, ಅನವಶ್ಯಕ ಸ್ವಾಗತ ವಂದನೆ,ನಿರೂಪಣೆಯ ಒಜ್ಜೆಯಿಲ್ಲದೆ,ಕಟ್ಟು ನಿಟ್ಟಿನ ಸಮಯಪಾಲನೆಯೊಂದಿಗೆ ಹೇಗೆ ಸಂಯೋಜಿಸಬಹುದೆಂಬುದನ್ನು, ಜೈಪುರ/ಬೆಂಗಳೂರು ಲಿಟ್ ಫೆಸ್ಟ್ ಗಳಿಂದ ಕಲಿಯಬೇಕು.ಆ ಫೆಸ್ಟ್ ಗಳಲ್ಲಿ ಜಾಗತಿಕ ವಸ್ತು ವಿಷಯಗಳಿರಬಹುದು.ಆದರೆ,ನಮ್ಮ ಸಾಹಿತ್ಯ ಸಮ್ಮೇಳನಗಳಲ್ಲಿ ನಮ್ಮದೇ ನಾಡು ನುಡಿ ನೆಲ ಜಲ ಪರಿಸರ ಕೃಷಿ ಕೈಗಾರಿಕೆ ಇತ್ಯಾದಿ ವಿಷಯಗಳಿಗೆ ಪ್ರಾಧಾನ್ಯತೆಯನ್ನು ಕೊಡಬೇಕು. ಮಹಾರಾಷ್ಟ್ರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ನೋಡಿದ್ದೇನೆ.ಅಲ್ಲಿ ಯಾವ ರಾಜಕಾರಣಿಗಳನ್ನೂ ವೇದಿಕೆಗೆ ಕರೆಯುವುದಿಲ್ಲ.ಅಲ್ಲಿ ವೇದಿಕೆಯಲ್ಲಿ ಕಲಾವಿದರು ಸಾಹಿತಿಗಳಷ್ಟೇ ಇರುತ್ತಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ.