Yoga Mudra: ದೇಹದ ಉಷ್ಣಾಂಶ ಕಡಿಮೆ ಮಾಡುತ್ತವೆ ಈ ಯೋಗ ಮುದ್ರೆಗಳು; ಬೇಸಿಗೆಗೆ ಬಹಳ ಉಪಯುಕ್ತ, ಒಮ್ಮೆ ಪ್ರಯತ್ನಿಸಿ-yoga mudra to reduce high temperature in body including jala mudra prithi mudra summer health tips prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Yoga Mudra: ದೇಹದ ಉಷ್ಣಾಂಶ ಕಡಿಮೆ ಮಾಡುತ್ತವೆ ಈ ಯೋಗ ಮುದ್ರೆಗಳು; ಬೇಸಿಗೆಗೆ ಬಹಳ ಉಪಯುಕ್ತ, ಒಮ್ಮೆ ಪ್ರಯತ್ನಿಸಿ

Yoga Mudra: ದೇಹದ ಉಷ್ಣಾಂಶ ಕಡಿಮೆ ಮಾಡುತ್ತವೆ ಈ ಯೋಗ ಮುದ್ರೆಗಳು; ಬೇಸಿಗೆಗೆ ಬಹಳ ಉಪಯುಕ್ತ, ಒಮ್ಮೆ ಪ್ರಯತ್ನಿಸಿ

Yoga Mudra: ಬೇಸಿಗೆಯಲ್ಲಿ ದೇಹಕ್ಕೆ ತಂಪು ಕೊಡುವ ಆಹಾರಗಳಿಂದ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ. ದೇಹಕ್ಕೆ ತಂಪು ಕೊಡುವ ಕೆಲವೊಂದು ಯೋಗ ಮುದ್ರೆಗಳನ್ನು ಕೂಡಾ ನೀವು ಪ್ರಯತ್ನಿಸಬೇಕು. ಜಲಮುದ್ರೆ, ಪೃಥ್ವಿ ಮುದ್ರೆ ಸೇರಿದಂತೆ ಇನ್ನಿತರ ಮುದ್ರೆಗಳಿಂದ ನಿಮ್ಮ ದೇಹದ ಶಾಖ ಕಡಿಮೆ ಆಗುತ್ತದೆ.

ದೇಹದ ಶಾಖ ಕಡಿಮೆ ಮಾಡಲಿದೆ ಯೋಗ ಮುದ್ರೆಗಳು
ದೇಹದ ಶಾಖ ಕಡಿಮೆ ಮಾಡಲಿದೆ ಯೋಗ ಮುದ್ರೆಗಳು (PC: Pixaby)

ಯೋಗ ಮುದ್ರೆಗಳು: ಈ ಬಾರಿಯ ಬೇಸಿಗೆಯ ಬಿಸಿಲಿನ ತಾಪ ಜನರನ್ನು ಹೈರಾಣಾಗಿಸಿದೆ. ಸೂರ್ಯನ ಶಾಖಕ್ಕೆ ಜನತೆ ಕಂಗೆಟ್ಟುಹೋಗಿದ್ದಾರೆ. ಎಷ್ಟೇ ನೀರು ಕುಡಿದರೂ ದೇಹಕ್ಕೆ ಸಾಕಾಗುತ್ತಿಲ್ಲ ಅನ್ನೋ ಪರಿಸ್ಥಿತಿಯಿದೆ. ಸನ್ ಸ್ಟ್ರೋಕ್ ಎದುರಾಗುವ ಭೀತಿಯೂ ಇದ್ದು, ಜನತೆ ಮುನ್ನೆಚ್ಚರಿಕೆ ವಹಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಇನ್ನೂ ಇಂಥ ತಾಪಮಾನದಲ್ಲಿ ದೇಹದಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ದೇಹವನ್ನು ತಂಪಾಗಿಸಲು ಮಜ್ಜಿಗೆ, ಸೌತೆಕಾಯಿ ಸೇವನೆ ಮುಂತಾದವುಗಳಿಗೆ ಜನರು ಮೊರೆ ಹೋಗುತ್ತಿದ್ದಾರೆ. ಕೇವಲ ಆಹಾರ ಸೇವನೆಯಿಂದ ಮಾತ್ರವಲ್ಲ, ಯೋಗ ಮುದ್ರೆಗಳಿಂದಲೂ ನಿಮ್ಮ ದೇಹವನ್ನು ತಂಪಾಗಿಸಬಹುದು.

ಹೌದು, ಯೋಗದ ಮುದ್ರೆಗಳು ದೇಹದಲ್ಲಿನ ಉಷ್ಣಾಂಶವನ್ನು ಕಡಿಮೆಗೊಳಿಸಿ ತಂಪಾಗಿಸುವ ಶಕ್ತಿಯನ್ನು ಹೊಂದಿದೆ. ಧ್ಯಾನ ಸ್ಥಿತಿಯಲ್ಲಿ ಅಥವಾ ಪದ್ಮಾಸನದಲ್ಲಿ ಕುಳಿತುಕೊಂಡು ಕೈಗಳನ್ನು ನೇರವಾಗಿರಿಸಿ ಮುದ್ರಾಯೋಗ ಮಾಡಿದರೆ ಉತ್ತಮ. ಹಾಗಿದ್ದರೆ ಶಾಖವನ್ನು ನಿಭಾಯಿಸುವ 5 ಮುದ್ರೆಗಳು ಯಾವ್ಯಾವು ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

1. ಜಲ ಮುದ್ರೆ

ಈ ಮುದ್ರೆಯ ಪ್ರಕಾರ, ಹೆಬ್ಬೆರಳಿನ ತುದಿಯಿಂದ ಕಿರುಬೆರಳಿನ ತುದಿಗೆ ಸ್ಪರ್ಶಿಸಬೇಕು. ಇದನ್ನು ಕೆಲ ಸಮಯಗಳವರೆಗೆ ಮಾಡಬೇಕು. ಧ್ಯಾನ ಮಾಡಲು ಕುಳಿತುಕೊಂಡಾಗ ಈ ಮುದ್ರೆ ಮಾಡುವುದನ್ನು ಪ್ರಯತ್ನಿಸಬಹುದು. ಮುಖ್ಯವಾಗಿ ಪದ್ಮಾಸನದಲ್ಲಿ ಕುಳಿತುಕೊಂಡು ಮುದ್ರಾಭ್ಯಾಸ ಮಾಡಬೇಕು. ಧ್ಯಾನವು ಮನಃಶಾಂತಿ ನೀಡಿದ್ರೆ, ಜಲ ಮುದ್ರೆಯು ದೇಹವನ್ನು ತಂಪಾಗಿಸುವಲ್ಲಿ ಪ್ರಯೋಜನಕಾರಿಯಾಗಿದೆ.

ಈ ಮುದ್ರೆಯು ತೇವಾಂಶದ ಮಟ್ಟವನ್ನು ಹೆಚ್ಚಿಸುವ ಮೂಲಕ ದೇಹದೊಳಗಿನ ಶಾಖವನ್ನು ಕಡಿಮೆ ಮಾಡುತ್ತದೆ. ನಿರ್ಜಲೀಕರಣ, ಮಲಬದ್ಧತೆ, ಒಣ ಚರ್ಮ, ಚರ್ಮ ಸುಕ್ಕಾಗುವಿಕೆ, ಸಂಧಿವಾತವನ್ನು ನಿಯಂತ್ರಿಸಲು ಸಹಾಯಕವಾಗಿದೆ.

2. ಪೃಥ್ವಿ ಮುದ್ರೆ

ಈ ಮುದ್ರೆಯನ್ನು ಅಭ್ಯಾಸ ಮಾಡಲು, ಉಂಗುರದ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ಸ್ಪರ್ಶಿಸಬೇಕು. ಎರಡೂ ಕೈಗಳ ಬೆರಳುಗಳನ್ನು ಈ ರೀತಿ ಮಾಡಬೇಕು. ಪೃಥ್ವಿ ಮುದ್ರೆಯನ್ನು ದಿನದ ಯಾವುದೇ ಸಮಯದಲ್ಲಿ ಮಾಡಬಹುದು. ಆದರೆ ಬೆಳಗ್ಗೆ ಮಾಡಿದರೆ ಉತ್ತಮ ಎಂದು ಪರಿಗಣಿಸಲಾಗಿದೆ. ಒತ್ತಡ ಮತ್ತು ವಿಶ್ರಾಂತಿಯ ಅಗತ್ಯವಿದ್ದಾಗ ಈ ಮುದ್ರೆಯನ್ನು ಮಾಡಿ. ಇದು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ಈ ಮುದ್ರೆಯನ್ನು ಮಾಡುವುದರಿಂದ ನೀರಿನ ಅಂಶವನ್ನು ಹೆಚ್ಚಿಸಿ, ತೇವಾಂಶವನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಕಡಿಮೆ ತೂಕ ಹೊಂದಿರುವ ಜನರಿಗೆ ತೂಕವನ್ನು ಹೆಚ್ಚಿಸಲು ಇದು ಬಹಳ ಸಹಾಯಕವಾಗಿದೆ. ಈ ಮುದ್ರೆಯನ್ನು ಮಾಡುವುದರಿಂದ ಆಯಾಸ ನಿಧಾನವಾಗಿ ಕಡಿಮೆಯಾಗುವುದು, ಆಮ್ಲೀಯತೆ, ಒಣ ಚರ್ಮ, ಉರಿಯೂತದ ಪರಿಸ್ಥಿತಿಗಳನ್ನು ನಿಯಂತ್ರಿಸಲು ಸಹಾಯಕವಾಗಿದೆ.

3. ಶಂಖ ಮುದ್ರೆ

ಶಂಖ ಮುದ್ರೆಯು ಹಿಂದೂ ಧಾರ್ಮಿಕ ಶುದ್ಧೀಕರಣ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಬಳಸುವ ಮುದ್ರೆ. ಹೆಸರೇ ಹೇಳುವಂತೆ ಈ ಮುದ್ರೆಯನ್ನು ಮಾಡಲು ಕೈಗಳನ್ನು ಹಿಡಿದಿಟ್ಟುಕೊಳ್ಳಬೇಕು. ಬಲಗೈಯ ನಾಲ್ಕು ಬೆರಳುಗಳನ್ನು ಎಡಗೈಯ ಹೆಬ್ಬೆರಳಿನ ಸುತ್ತ ಸುತ್ತಿ ಬಲಗೈಯ ಹೆಬ್ಬೆರಳನ್ನು ಎಡ ತೋರು ಬೆರಳಿಗೆ ಸ್ಪರ್ಶಿಸಬೇಕು.

ಇದು ಉಷ್ಣಾಂಶವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಗಾಳಿ ಮತ್ತು ನೀರಿನ ಅಂಶವನ್ನು ಹೆಚ್ಚಿಸುತ್ತದೆ. ಅಲ್ಲದೆ, ಜ್ವರವನ್ನು ನಿಯಂತ್ರಿಸಲು, ಜೀರ್ಣಾಂಗವ್ಯೂಹ ಮತ್ತು ದೇಹದ ಉರಿಯೂತದ ಅಥವಾ ಶಾಖದ ಸ್ಥಿತಿಯನ್ನು ನಿಯಂತ್ರಿಸಲು ಬಳಸಲಾಗುತ್ತದೆ.

4. ಪ್ರಾಣ ಮುದ್ರೆ

ಯೋಗ ಮುದ್ರೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಪ್ರಾಣ ಮುದ್ರೆ ಎಂದು ಪರಿಗಣಿಸಲಾಗಿದೆ. ಹೆಬ್ಬೆರಳಿನ ತುದಿಯಿಂದ ಕಿರುಬೆರಳು ಮತ್ತು ಉಂಗುರ ಬೆರಳಿನ ತುದಿಗಳನ್ನು ಎರಡೂ ಕೈಗಳಲ್ಲಿ ಸ್ಪರ್ಶಿಸಿ. ದೇಹದಲ್ಲಿ ತಾಪಮಾನದ ಪರಿಸ್ಥಿತಿಗಳನ್ನು ನಿಯಂತ್ರಿಸಲು ಕೆಲ ಸಮಯದವರೆಗೆ ಹೀಗೆ ಮಾಡಿ. ಇದರಿಂದ ಕೋಪ, ದೈಹಿಕ ಶಾಖವನ್ನು ತಣ್ಣಗಾಗಿಸುವಲ್ಲಿ ಪ್ರಯೋಜನಕಾರಿಯಾಗಿದೆ. ನಿದ್ರಾಹೀನತೆ, ಕೀಲು ನೋವು, ಒಣ ಚರ್ಮವನ್ನು ನಿಯಂತ್ರಿಸಲು ಸಹ ಸಹಾಯಕವಾಗುತ್ತದೆ.

5. ಅಪಾನಾ ಮುದ್ರಾ

ಅಪಾನಾ ಮುದ್ರೆಯನ್ನು ಶಕ್ತಿ ಮುದ್ರೆ ಎಂದೂ ಹೇಳಲಾಗುತ್ತದೆ. ಈ ಮುದ್ರೆಯನ್ನು ಸುಖಾಸನ (ಸುಲಭ ಭಂಗಿ) ಅಥವಾ ಪದ್ಮಾಸನ (ಕಮಲ ಭಂಗಿ) ನಂತಹ ಯಾವುದೇ ಸ್ಥಿರವಾದ ಆಸನದ ಭಂಗಿಯಲ್ಲಿ ಅಭ್ಯಾಸ ಮಾಡಬಹುದು. ಉಂಗುರದ ಬೆರಳು ಮತ್ತು ಮಧ್ಯದ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ಸ್ಪರ್ಶಿಸಬೇಕು. ಇದು ಮಲಬದ್ಧತೆ, ನಿರ್ಜಲೀಕರಣ ಮತ್ತು ಉಷ್ಣಾಂಶದ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.

ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ದೇಹದಲ್ಲಿ ನಿರ್ಜಲೀಕರಣ ಮುಂತಾದ ಸಮಸ್ಯೆಯಾಗುವುದು ಸಹಜ. ಹೀಗಾಗಿ ಮೇಲೆ ತಿಳಿಸಿದಂತಹ ಮುದ್ರೆಗಳನ್ನು ಪ್ರಯತ್ನಿಸುವುದರಿಂದ ಉಷ್ಣಾಂಶ ತಗ್ಗಿಸಲು ಸಹಕಾರಿಯಾಗಿದೆ.