ಕಿಡ್ನಿ ಆರೋಗ್ಯ ಸುಧಾರಿಸುವ 6 ಯೋಗಾಸನಗಳಿವು; ಈ ಯೋಗಭಂಗಿಗಳ ನಿತ್ಯ ಅಭ್ಯಾಸದಿಂದ ಮೂತ್ರಪಿಂಡದ ಸಮಸ್ಯೆ ಹತ್ತಿರಕ್ಕೂ ಸುಳಿಯುವುದಿಲ್ಲ
ಪ್ರತಿನಿತ್ಯ ಯೋಗ ಮಾಡುವುದರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಇದರಿಂದ ಕಿಡ್ನಿ ಆರೋಗ್ಯವೂ ಸುಧಾರಿಸುತ್ತದೆ. ಕೆಲವು ಯೋಗಭಂಗಿಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಮೂತ್ರಪಿಂಡದ ಆರೋಗ್ಯ ಸುಧಾರಿಸುವ ಜೊತೆಗೆ ಇತರ ಸಮಸ್ಯೆಗಳೂ ನಿವಾರಣೆಯಾಗುತ್ತದೆ. ಅಂತಹ ಯೋಗಾಸನಗಳು ಯಾವುವು ನೋಡಿ.
ಮೂತ್ರಪಿಂಡ ಅಥವಾ ಕಿಡ್ನಿ ದೇಹದ ಪ್ರಮುಖ ಭಾಗಗಳಲ್ಲಿ ಒಂದು. ಇದು ಮೂತ್ರದ ರೂಪದಲ್ಲಿ ದೇಹದಿಂದ ಕಲ್ಮಶಗಳು ಹೊರ ಹೋಗುವಂತೆ ನೋಡಿಕೊಳ್ಳುತ್ತದೆ. ಒಟ್ಟಾರೆ ದೈಹಿಕ ಕಾರ್ಯಕ್ಷಮತೆ ಸುಸ್ಥಿರವಾಗಿರಲು ಮೂತ್ರಪಿಂಡಗಳು ಆರೋಗ್ಯವಾಗಿರುವುದು ಬಹಳ ಮುಖ್ಯ. ಕಿಡ್ನಿ ಆರೋಗ್ಯ ರಕ್ಷಣೆಗೆ ಸಾಕಷ್ಟು ನೀರು ಕುಡಿಯಬೇಕು, ಅತಿಯಾದ ಸಕ್ಕರೆ ಅಂಶ ಇರುವ ಆಹಾರ, ಕೆಫಿನ್ ಸೇವನೆಯನ್ನು ಮಿತಿಗೊಳಿಸಬೇಕು. ಹಣ್ಣು, ತರಕಾರಿ, ಧಾನ್ಯಗಳು, ಲೀನ್ ಪ್ರೊಟೀನ್‌ನಂತಹ ಸಮತೋಲಿತ ಆಹಾರಗಳ ಸೇವನೆಯ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಕೂಡ ಮುಖ್ಯವಾಗುತ್ತದೆ. ಈ ಕೆಲವು ಯೋಗಾಸನಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಕಿಡ್ನಿ ಸಮಸ್ಯೆಗಳಿಂದ ಶಾಶ್ವತವಾಗಿ ದೂರ ಇರಬಹುದು.
ಅರ್ಧ ಮತ್ಸ್ಯೇಂದ್ರಾಸನ
ನೆಲದ ಮೇಲೆ ಕುಳಿತು ಒಂದು ಕಾಲನ್ನು ಮಡಿಸಿ ಇನ್ನೊಂದು ಕಾಲನ್ನು ಅರ್ಧ ಮಡಿಸಿ ದೇಹವನ್ನು 60 ಡಿಗ್ರಿ ತಿರುಗಿಸುವುದು ಅರ್ಧ ಮತ್ಸ್ಯೇಂದ್ರಾಸನ. ಈ ಆಸನವು ಮೂತ್ರಪಿಂಡಗಳ ಕಾರ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಆ ಆಸನಗಳನ್ನು ಮಾಡುವುದರಿಂದ ಮೂತ್ರಪಿಂಡಗಳಿಗೆ ಮಸಾಜ್ ಸಿಗುತ್ತದೆ. ಇದು ನಿರ್ವಿಷೀಕರಣ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ಮೂತ್ರಪಿಂಡದ ಕಾರ್ಯ ಸುಧಾರಣೆಗೆ ಸಹಾಯ ಮಾಡುತ್ತದೆ.
ಭುಜಂಗಾಸನ
ಭುಜಂಗಾಸನವು ಬೆನ್ನುಮೂಳೆಯನ್ನು ವಿಸ್ತರಿಸುತ್ತದೆ. ಇದು ಮೂತ್ರಪಿಂಡಗಳು ಮತ್ತು ಮೂತ್ರಜನಕಾಂಗದ ಗ್ರಂಥಿಗಳಿಗೆ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಭುಜಂಗಾಸನವು ಮೂತ್ರಪಿಂಡಗಳನ್ನು ಉತ್ತೇಜಿಸುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೆಲದ ಮೇಲೆ ಉಲ್ಟಾ ಮಲಗಿ ಕೈಗಳನ್ನು ಮುಂದಕ್ಕೆ ಚಾಚಿ ಹೊಟ್ಟೆಯ ಭಾಗದಿಂದ ಮೇಲ್ಭಾಗವನ್ನು ಮೇಲಕ್ಕೆ ಎತ್ತುವುದು ಭುಜಂಗಾಸನದ ಭಂಗಿಯಾಗಿದೆ.
ಉತ್ತನಾಸನ
ನೆಲದ ಮೇಲೆ ನೇರವಾಗಿ ನಿಂತು ದೇಹವನ್ನು ನೆಲಕ್ಕೆ ಬಾಗಿಸಿ. ಎರಡೂ ಕೈಗಳನ್ನು ಕಾಲಿನ ಪಕ್ಕದಲ್ಲಿ ಇರಿಸಿ ಅಂದರೆ ಹಸ್ತವನ್ನು ನೆಲಕ್ಕೆ ಊರಿ. ಈ ಭಂಗಿಯು ರಕ್ತ ಪರಿಚಲನೆ ಸುಧಾರಿಸುತ್ತದೆ, ಜೊತೆಗೆ ಮೂತ್ರಪಿಂಡಗಳಿಗೆ ವಿಶ್ರಾಂತಿ ನೀಡುತ್ತದೆ. ಉತ್ತಾನಾಸನವು ಮೂತ್ರಪಿಂಡಗಳಿಗೆ ರಕ್ತದ ಹರಿವನ್ನು ಉತ್ತೇಜಿಸುತ್ತದೆ, ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡದ ಆರೋಗ್ಯವನ್ನು ಉತ್ತೇಜಿಸುತ್ತದೆ.ʼ
ಸೇತು ಬಂಧಾಸನ
ಇದು ನೆಲದ ಮೇಲೆ ಮಲಗಿ ಕಾಲುಗಳನ್ನು ಅರ್ಧಕ್ಕೆ ಮಡಿಸಿ ಬೆನ್ನನ್ನು ಮೇಲಕ್ಕೆ ಎತ್ತಿ ತಲೆಯನ್ನು ನೆಲಕ್ಕೆ ಊರಿ ಕಾಲುಗಳನ್ನು ಕೈಗಳಿಂದ ಹಿಡಿದುಕೊಳ್ಳುವ ಭಂಗಿಯಾಗಿದೆ. ಈ ಭಂಗಿಯು ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಮೂತ್ರಪಿಂಡಗಳು ಸೇರಿದಂತೆ ಕಿಬ್ಬೊಟ್ಟೆಯ ಅಂಗಳನ್ನು ಉತ್ತೇಜಿಸುತ್ತದೆ. ಈ ಆಸನವು ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ಹಾಗೂ ಬೆನ್ನಿನ ಕೆಳಭಾಗದಲ್ಲಿ ಒತ್ತಡವನ್ನು ನಿವಾರಿಸುವ ಮೂಲಕ ನಿಮ್ಮ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ.
ಬಾಲಾಸನ
ಇದು ನೆಲದ ಮೇಲೆ ಕುಳಿತು ಕಾಲನ್ನು ಹಿಂದಕ್ಕೆ ಮಡಿಸಿ, ದೇಹವನ್ನು ಮುಂದಕ್ಕೆ ಚಾಚಿ ಹಣೆಯನ್ನು ನೆಲಕ್ಕೆ ತಾಗಿಸಿ, ಕೈಗಳನ್ನು ಹಿಂದಕ್ಕೆ ಚಾಚುವ ಆಸನವಾಗಿದೆ. ಈ ಭಂಗಿಯು ಕೆಳಬೆನ್ನನ್ನು ವಿಸ್ತರಿಸುತ್ತದೆ ಮತ್ತು ಕಿಡ್ನಿ ಸೇರಿದಂತೆ ಕಿಬ್ಬೊಟ್ಟೆಯ ಅಂಗಗಳಿಗೆ ಮಸಾಜ್ ಮಾಡುತ್ತದೆ. ಈ ಆಸನವು ಮೂತ್ರಪಿಂಡಗಳಲ್ಲಿ ಒತ್ತಡವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ, ಒಟ್ಟಾರೆ ಮೂತ್ರಪಿಂಡದ ಆರೋಗ್ಯವನ್ನು ಬೆಂಬಲಿಸುತ್ತದೆ.
ಅರ್ಧ ಚಂದ್ರಾಸನ
ಇದು ಒಂದು ಕೈ ಹಾಗೂ ಒಂದು ಕಾಲನ್ನು ನೆಲಕ್ಕೆ ಊರಿ ಇನ್ನೊಂದು ಕೈ ಕಾಲನ್ನು ಮೇಲಕ್ಕೆ ಎತ್ತುವ ಆಸನವಾಗಿದೆ. ಇದು ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಸಮತೋಲನವನ್ನು ಸುಧಾರಿಸುತ್ತದೆ. ಹಾಗೆಯೇ ಮೂತ್ರಪಿಂಡಗಳು ಮತ್ತು ಮೂತ್ರಜನಕಾಂಗದ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ಈ ಭಂಗಿಯು ರಕ್ತಪರಿಚಲನೆಯನ್ನು ಹೆಚ್ಚಿಸುವ ಮತ್ತು ದೇಹವನ್ನು ಶಕ್ತಿಯುತಗೊಳಿಸುವ ಮೂಲಕ ಮೂತ್ರಪಿಂಡದ ಕಾರ್ಯವನ್ನು ಹೆಚ್ಚಿಸುತ್ತದೆ.
ಈ ಯೋಗಾಸನಗಳ ನಿರಂತರ ಅಭ್ಯಾಸದಿಂದ ಕಿಡ್ನಿ ಸಮಸ್ಯೆಗಳಿಗೆ ದೂರ ಉಳಿಯಬಹುದು. ಆದರೆ ಯಾವುದೇ ಯೋಗಾಭಂಗಿಯನ್ನು ಅಭ್ಯಾಸ ಮಾಡುವ ಮೊದಲು ತಜ್ಞರಿಂದ ಸೂಕ್ತ ತರಬೇತಿ ಪಡೆಯುವುದು ಉತ್ತಮ.
ವಿಭಾಗ