ಚಿಕ್ಕ-ಪುಟ್ಟ ವಿಚಾರಕ್ಕೂ ಒತ್ತಡಕ್ಕೆ ಒಳಗಾಗುತ್ತಿದ್ದೀರಾ: ಸಮಸ್ಯೆಯನ್ನು ಪರಿಹರಿಸಲು ಈ ಯೋಗಾಸನಗಳನ್ನು ಪ್ರಯತ್ನಿಸಿ-yoga stress relief yoga poses how does yoga reduce stress and anxiety yoga for stress and depression prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಚಿಕ್ಕ-ಪುಟ್ಟ ವಿಚಾರಕ್ಕೂ ಒತ್ತಡಕ್ಕೆ ಒಳಗಾಗುತ್ತಿದ್ದೀರಾ: ಸಮಸ್ಯೆಯನ್ನು ಪರಿಹರಿಸಲು ಈ ಯೋಗಾಸನಗಳನ್ನು ಪ್ರಯತ್ನಿಸಿ

ಚಿಕ್ಕ-ಪುಟ್ಟ ವಿಚಾರಕ್ಕೂ ಒತ್ತಡಕ್ಕೆ ಒಳಗಾಗುತ್ತಿದ್ದೀರಾ: ಸಮಸ್ಯೆಯನ್ನು ಪರಿಹರಿಸಲು ಈ ಯೋಗಾಸನಗಳನ್ನು ಪ್ರಯತ್ನಿಸಿ

ದಿನನಿತ್ಯ ಒತ್ತಡದ ಜಂಜಾಟದಲ್ಲಿ ಬದುಕುತ್ತಿದ್ದೀರಾ? ಚಿಕ್ಕ-ಪುಟ್ಟ ವಿಚಾರಕ್ಕೂ ಒತ್ತಡಕ್ಕೆ ಒಳಗಾಗುತ್ತಿದ್ದೀರಾ? ಒತ್ತಡ ಮತ್ತು ಆತಂಕದ ಸಮಸ್ಯೆಯನ್ನು ತೊಡೆದುಹಾಕಲು ಬಯಸಿದರೆ,ಇಲ್ಲಿ ತಿಳಿಸಲಾಗಿರುವ ಕೆಲವು ಯೋಗ ಭಂಗಿಗಳನ್ನು ಅಭ್ಯಾಸ ಮಾಡಬಹುದು. ಇದರಿಂದ ಮಾನಸಿಕ ಆರೋಗ್ಯ ವೃದ್ಧಿ ಹಾಗೂ ಒತ್ತಡ ನಿರ್ವಹಣೆಗೆ ಸಹಾಯಕವಾಗಿದೆ.

ಒತ್ತಡದಿಂದ ಪಾರಾಗುವ ಯೋಗಾಸನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಒತ್ತಡದಿಂದ ಪಾರಾಗುವ ಯೋಗಾಸನಗಳ ಬಗ್ಗೆ ಇಲ್ಲಿದೆ ಮಾಹಿತಿ. (Shutterstock)

ಮನೆಕೆಲಸ, ಕಚೇರಿ ಕೆಲಸ ಅಂತೆಲ್ಲಾ ಇಂದು ಜನರು ಒತ್ತಡದ ಜೀವನದಲ್ಲಿ ಬದುಕುತ್ತಿದ್ದಾರೆ. ಒತ್ತಡ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಬಲಿಯಾಗಬಹುದು. ಕೆಲವರಂತೂ ಸಣ್ಣ-ಸಣ್ಣ ವಿಚಾರಕ್ಕೂ ಅತಿಯಾದ ಒತ್ತಡಕ್ಕೆ ಒಳಗಾಗುತ್ತಾರೆ. ಆದರೆ, ಅತಿಯಾದ ಒತ್ತಡವು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಒತ್ತಡವನ್ನು ನಿಭಾಯಿಸಲು ಯೋಗಾಸನದ ಮೊರೆ ಹೋಗುವುದರಿಂದ ಸಮಸ್ಯೆಯನ್ನು ಪರಿಹರಿಸಬಹುದು. ಕೆಲವು ಯೋಗಾಸನಗಳನ್ನು ಮಾಡುವುದರಿಂದ ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಂದ ಪಾರಾಗಬಹುದು. ಹಾಗಿದ್ದರೆ ಒತ್ತಡದಿಂದ ಪಾರಾಗುವ ಯೋಗಾಸನಗಳು ಯಾವ್ಯಾವು ಇಲ್ಲಿ ತಿಳಿಯಿರಿ.

ಒತ್ತಡ ನಿವಾರಿಸುವ ಯೋಗಾಸನಗಳು ಇಲ್ಲಿವೆ

ಬಾಲಾಸನ: ಬಾಲಾಸನವು ಒತ್ತಡ ಮತ್ತು ಖಿನ್ನತೆಯಂತಹ ಸಮಸ್ಯೆಗಳ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಇದೊಂದು ವಿಶ್ರಾಂತಿಯ ಭಂಗಿಯಾಗಿದ್ದು, ಒತ್ತಡವನ್ನು ಕಡಿಮೆ ಮಾಡಿ ದೇಹಕ್ಕೆ ವಿಶ್ರಾಂತಿ ನೀಡುವಲ್ಲಿ ಸಹಾಯಕವಾಗಿದೆ. ಇದನ್ನು ಮಾಡಲು ವಜ್ರಾಸನದಲ್ಲಿ ಕುಳಿತು ಮುಂದಕ್ಕೆ ಬಾಗಬೇಕು. ಆಳವಾಗಿ ಉಸಿರು ತೆಗೆದುಕೊಳ್ಳುತ್ತಾ ಎರಡೂ ಕೈಗಳನ್ನೂ ಮೇಲಕ್ಕೆತ್ತಿ ಸಂಪೂರ್ಣವಾಗಿ ಮುಂದಕ್ಕೆ ಬಾಗಿ. ಇದೇ ರೀತಿ ನಾಲ್ಕರಿಂದ ಐದು ಸಲ ಮಾಡಬಹುದು.

ಅಧೋಮುಖ ಶ್ವಾನಾಸನ: ಮಾನಸಿಕ ಆರೋಗ್ಯಕ್ಕಾಗಿ ಪ್ರತಿದಿನ ಅಧೋಮುಖ ಶ್ವಾನಾಸನವನ್ನು ಅಭ್ಯಾಸ ಮಾಡಬಹುದು. ಮನಸ್ಸನ್ನು ಶಾಂತಗೊಳಿಸುವುದರಿಂದ ಹಿಡಿದು ಒತ್ತಡವನ್ನು ನಿವಾರಿಸುವವರೆಗೆ, ಈ ಯೋಗಾಸನವು ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಶ್ವಾನಾಸನ ಹೆಸರೇ ಹೇಳುವಂತೆ ಶ್ವಾನ ಅಂದರೆ ನಾಯಿ. ಅಧೋಮುಖ ಶ್ವಾನಾಸನ ಅಂದರೆ ನಾಯಿಭಂಗಿ ಎಂದು ಕರೆಯುತ್ತಾರೆ. ಈ ಆಸನವನ್ನು ಅಭ್ಯಾಸ ಮಾಡಲು, ನಾಯಿಯಂತೆ ಮೊಣಕಾಲನ್ನು ಊರಿ ನಿಂತುಕೊಳ್ಳಬೇಕು. ನಿಧಾನವಾಗಿ ಉಸಿರುಬಿಡುತ್ತಾ ಸೊಂಟವನ್ನು ಮೇಲಕ್ಕೆತ್ತಬೇಕು. ಮೊಣಕೈ ಮತ್ತು ಮೊಣಕಾಲನ್ನು ನೇರವಾಗಿಸಬೇಕು. ನಾಯಿ ಮುಂದೆ ಬಾಗಿದಾಗ ಹೇಗೆ ಕಾಣಿಸುತ್ತದೆಯೋ ಅದೇ ರೀತಿಯಲ್ಲಿ ಈ ಭಂಗಿಯನ್ನು ಮಾಡಬೇಕಾಗುತ್ತದೆ.

ಶವಾಸನ: ಶವಾಸನವನ್ನು ಅಭ್ಯಾಸ ಮಾಡುವುದು ತುಂಬಾನೇ ಸುಲಭ. ಈ ಆಸನವನ್ನು ಅಭ್ಯಾಸ ಮಾಡಲು ನಿಮಗೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಈ ಯೋಗಾಸನದಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಕೇವಲ 5 ರಿಂದ 10 ನಿಮಿಷಗಳ ಕಾಲ ಶವಾಸನ ಮಾಡಬಹುದು. ಇದನ್ನು ಮಾಡಲು ಅಂಗಾತ ಮಲಗಬೇಕು. ಕೈಗಳನ್ನು ಸಡಿಲವಾಗಿ ಬಿಟ್ಟು ಆಳವಾದ ಉಸಿರನ್ನು ತೆಗೆದುಕೊಳ್ಳಬೇಕು.

ವಿಪರೀತ ಕರಣಿ ಆಸನ: ಈ ಆಸನವನ್ನು ಮಾಡಲು ಅಂಗಾತ ಮಲಗಿ, ಎರಡೂ ಕಾಲುಗಳನ್ನು ಮೇಲಕ್ಕೆತ್ತಿ. ದೇಹವನ್ನು ಗೋಡೆಗೆ 90 ಡಿಗ್ರಿ ಕೋನದಂತೆ ಮಾಡಬೇಕು. ಕಣ್ಣುಗಳನ್ನು ಮುಚ್ಚಿ, ಕೈಗಳನ್ನು ಎರಡೂ ಬದಿಗಳಲ್ಲಿ ಇರಿಸಿ. 15 ನಿಮಿಷ ಕಾಲ ಆಳವಾಗಿ ಉಸಿರಾಡಿ. ಈ ಆಸನವನ್ನು ಮಾಡುವುದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಹೀಗಾಗಿ ಪ್ರತಿದಿನ ಇದನ್ನು ಪ್ರಯತ್ನಿಸುವುದರಿಂದ ಒತ್ತಡವನ್ನು ನಿವಾರಿಸಲು ಸಹಾಯಕವಾಗಿದೆ.

ಸೇತು ಬಂಧಾಸನ: ಸೇತು ಅಂದರೆ ಸೇತುವೆ ಎಂದರ್ಥ. ಈ ಆಸನವನ್ನು ಅಭ್ಯಾಸ ಮಾಡಲು ಮೊದಲಿಗೆ ಎರಡು ಕಾಲುಗಳನ್ನು ಮಡಿಚಬೇಕು. ಹೊಟ್ಟೆಯನ್ನು ಒಳಗಡೆ ಎಳೆದು ಎದೆಯನ್ನು ಮೇಲಕ್ಕೆ ಎತ್ತಿ ನೆತ್ತಿಯ ಭಾಗಕ್ಕೆ ನೆಲಕ್ಕೆ ತಾಗಿರಬೇಕು. ಎರಡರಿಂದ ಮೂರು ನಿಮಿಷ ಕಾಲ ಹೀಗೆಯೇ ಇದ್ದು, ನಂತರ ನಿಧಾನವಾಗಿ ಸೊಂಟವನ್ನು ಕೆಳಗಿಳಿಸಿ, ಕೈಗಳನ್ನು ಸಡಿಲವಾಗಿ ಬಿಟ್ಟು ಕಾಲುಗಳನ್ನು ಮುಂದಕ್ಕೆ ಚಾಚಿ ವಿಶ್ರಾಂತಿ ಪಡೆಯಬೇಕು.

ಇವೆಲ್ಲವೂ ಒತ್ತಡವನ್ನು ನಿಭಾಯಿಸುವಲ್ಲಿ ಪರಿಣಾಮಕಾರಿ ಯೋಗ ತಂತ್ರವಾಗಿದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು, ಈ ಯೋಗಾಸನಗಳನ್ನು ಕೇವಲ ಒಂದು ತಿಂಗಳ ಕಾಲ ಪ್ರತಿದಿನ ಅಭ್ಯಾಸ ಮಾಡಬೇಕು. ಖಂಡಿತಾ ಧನಾತ್ಮಕ ಫಲಿತಾಂಶ ಪಡೆಯುವಿರಿ.

mysore-dasara_Entry_Point