ದೀಪಾವಳಿ ಖುಷಿ: ಇಪಿಎಫ್‌ಒದಿಂದ ಹಿಡಿದು ಉದ್ಯೋಗ ನೇಮಕಾತಿ ಪತ್ರ ವಿತರಣೆ ಸೇರಿ 5 ಒಳ್ಳೆ ಸುದ್ದಿ ಓದುತ್ತ ದಿನ ಶುರುಮಾಡೋಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೀಪಾವಳಿ ಖುಷಿ: ಇಪಿಎಫ್‌ಒದಿಂದ ಹಿಡಿದು ಉದ್ಯೋಗ ನೇಮಕಾತಿ ಪತ್ರ ವಿತರಣೆ ಸೇರಿ 5 ಒಳ್ಳೆ ಸುದ್ದಿ ಓದುತ್ತ ದಿನ ಶುರುಮಾಡೋಣ

ದೀಪಾವಳಿ ಖುಷಿ: ಇಪಿಎಫ್‌ಒದಿಂದ ಹಿಡಿದು ಉದ್ಯೋಗ ನೇಮಕಾತಿ ಪತ್ರ ವಿತರಣೆ ಸೇರಿ 5 ಒಳ್ಳೆ ಸುದ್ದಿ ಓದುತ್ತ ದಿನ ಶುರುಮಾಡೋಣ

ದೀಪಾವಳಿ ಖುಷಿ ಸುದ್ದಿ. ಇಂದು ಇಪಿಎಫ್‌ಒ ಪಿಂಚಣಿ ಜಮೆಯಿಂದ ಹಿಡಿದು ಉದ್ಯೋಗ ನೇಮಕಾತಿ ಪತ್ರ ವಿತರಣೆ ಸೇರಿ 5 ಒಳ್ಳೆ ಸುದ್ದಿಗಳಿವೆ. ಬೆಳ್ ಬೆಳಗ್ಗೆ ಈ 5 ಶುಭ ಸುದ್ದಿಗಳನ್ನು ಓದುತ್ತ ದಿನ ಶುರುಮಾಡೋಣ. ಇದರಲ್ಲಿ ಅಕ್ಕಿ ಗಿರಣಿ ಮಾಲೀಕರು, ಡಿಟಿಡಿಸಿ ನೌಕರರಿಗೂ ಖುಷಿಯಾಗುವ ಸುದ್ದಿ ಇದೆ.

ದೀಪಾವಳಿ ಖುಷಿ: ಇಪಿಎಫ್‌ಒ ಪಿಂಚಣಿದಾರರಿಗೆ ದೀಪಾವಳಿಗೆ ಮೊದಲೇ ಪಿಂಚಣಿ ವಿತರಿಸಲಿದೆ. (ಸಾಂಕೇತಿಕ ಚಿತ್ರ)
ದೀಪಾವಳಿ ಖುಷಿ: ಇಪಿಎಫ್‌ಒ ಪಿಂಚಣಿದಾರರಿಗೆ ದೀಪಾವಳಿಗೆ ಮೊದಲೇ ಪಿಂಚಣಿ ವಿತರಿಸಲಿದೆ. (ಸಾಂಕೇತಿಕ ಚಿತ್ರ) (HT News)

ನವದೆಹಲಿ: ಉದ್ಯೋಗ ಮೇಳದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಅಕ್ಟೋಬರ್ 29) 51,000 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ನೇಮಕ ಪತ್ರ ವಿತರಿಸಲಿದ್ದಾರೆ. ಅದೇ ರೀತಿ ಇಪಿಎಫ್‌ಒ ಸದಸ್ಯರಿಗೆ ಖಾತೆಗೆ ಪಿಂಚಣಿ ಜಮೆ ಕೂಡ ಆಗಲಿದೆ. ಅಕ್ಕಿ ಗಿರಣಿ ಮಾಲೀಕರ ಕುಂದು ಕೊರತೆಗಳನ್ನು, ಅಹವಾಲುಗಳಿಗೆ ಸ್ಪಂದಿಸುವುದಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಅನ್ನು ಇಂದು ಪರಿಚಯಿಸಲಾಗುತ್ತಿದೆ. ಇದಲ್ಲದೆ, ವಿಮಾನ ಯಾನ ಕ್ಷೇತ್ರದಲ್ಲಿ ಸ್ಪೈಸ್ ಜೆಟ್‌ 32 ಹೊಸ ವಿಮಾನ ಯಾನ ಸೇವೆಗಳನ್ನು ಪರಿಚಯಿಸಲಿದೆ. ಹೀಗೆ ಒಂದರ ಮೇಲೊಂದು ಒಂದು ಒಳ್ಳೆ ಸುದ್ದಿಗಳೇ ಇವೆ. ಅವುಗಳನ್ನು ಓದುತ್ತ ದಿನವನ್ನು ಶುರುಮಾಡೋಣ.

ದೇಶದಾದ್ಯಂತ 40 ಉದ್ಯೋಗ ಮೇಳ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಧನತ್ರಯೋದಶಿ ಸಂದರ್ಭದಲ್ಲಿ ದೇಶದ 40 ಕಡೆ ನಡೆಯುವ ಉದ್ಯೋಗ ಮೇಳದಲ್ಲಿ ವಿವಿಧ ಸರ್ಕಾರಿ ಸಚಿವಾಲಯ, ಇಲಾಖೆಗಳಿಗೆ ಹೊಸದಾಗಿ ನೇಮಕವಾಗಿರುವ 51,000 ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಪತ್ರ ವಿತರಿಸುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ.

ದೇಶದಾದ್ಯಂತ 40 ಸ್ಥಳಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು ಮತ್ತು ದೇಶದಾದ್ಯಂತ ಆಯ್ಕೆಯಾದ ಹೊಸದಾಗಿ ನೇಮಕಗೊಂಡ ಯುವಕರನ್ನು ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ನೇಮಿಸಲಾಗುವುದು. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಪ್ರಧಾನ ಮಂತ್ರಿಯವರ ಬದ್ಧತೆಯನ್ನು ಉದ್ಯೋಗ ಮೇಳ ಒತ್ತಿಹೇಳುತ್ತದೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವ ಮೂಲಕ ಯುವಕರನ್ನು ಸಬಲೀಕರಣಗೊಳಿಸುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿದೆ.

ಮುಂಚಿತವಾಗಿ ಪಿಂಚಣಿ ನೀಡಲಿದೆ ಇಪಿಎಫ್‌ಒ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಪಿಂಚಣಿ ಯೋಜನೆಗೆ ಸೇರ್ಪಡೆಗೊಂಡಿದ್ದು, ಪಿಂಚಣಿ ಪಡೆಯುತ್ತಿರುವ ಸದಸ್ಯರಿಗೆ ಒಂದು ಒಳ್ಳೆ ಸುದ್ದಿ ಇದೆ. ಅವರಿಗೆ ಈ ಬಾರಿ ದೀಪಾವಳಿಯಕಾರಣ ನಿಗದಿತ ದಿನಾಂಕಕ್ಕೆ ಮೊದಲೇ ಅಂದರೆ ಒಂದು ಅಥವಾ ಎರಡು ದಿನ ಮೊದಲೇ ಪಿಂಚಣಿ ಸ್ವೀಕರಿಸಲಿದ್ದಾರೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಇಪಿಎಫ್‌ಒ, ದೀಪಾವಳಿ ಹಬ್ಬ ಮತ್ತು ಸಂಬಂಧಿತ ಸಾರ್ವಜನಿಕ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ ತಿಂಗಳ ಪಿಂಚಣಿಯನ್ನು 29 ರಂದು ಅಂದರೆ ಇಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಡಿಟಿಡಿಸಿ ನೌಕರರಿಗೆ ಅಪಘಾತ ವಿಮಾ ರಕ್ಷಣೆ 400 ಪ್ರತಿಶತ ಹೆಚ್ಚಳ

ಇದು ಲಾಜಿಸ್ಟಿಕ್ಸ್ ಕಂಪನಿ ಡಿಟಿಡಿಸಿ ಎಕ್ಸ್‌ಪ್ರೆಸ್‌ ಕಂಪನಿ ನೌಕರರಿಗೆ ಖುಷಿ ಸುದ್ದಿ. ಲಾಜಿಸ್ಟಿಕ್ಸ್ ಕಂಪನಿ ಡಿಟಿಡಿಸಿ ಎಕ್ಸ್‌ಪ್ರೆಸ್ ಲಿಮಿಟೆಡ್ ಸೋಮವಾರ ತನ್ನ ಕಾರ್ಯಾಚರಣೆಯ ಸಿಬ್ಬಂದಿ ಮತ್ತು ವಿತರಣಾ ಸಹವರ್ತಿಗಳಿಗೆ ಹಬ್ಬದ ಸೀಸನ್‌ನಲ್ಲಿ ಗುಂಪು ಅಪಘಾತ ವಿಮಾ ರಕ್ಷಣೆಯಲ್ಲಿ ಶೇಕಡಾ 400 ರಷ್ಟು ಹೆಚ್ಚಳವನ್ನು ಘೋಷಿಸಿದೆ. ಆರ್ಥಿಕ ಭದ್ರತೆ, ಆರೋಗ್ಯ ಮತ್ತು ಕ್ಷೇಮ ಮತ್ತು ಪ್ರತಿಫಲಗಳು ಮತ್ತು ಉದ್ಯೋಗಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉಪಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಿರುವುದಾಗಿ ಕಂಪನಿ ಹೇಳಿದೆ.

ಹಬ್ಬದ ಬೇಡಿಕೆ ಮತ್ತು ಅನಿರೀಕ್ಷಿತ ಘಟನೆಗಳ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈ ಕ್ರಮ ಕೈಗೊಂಡಿದೆ. ಇದಲ್ಲದೆ, ಕಂಪನಿಯು ತನ್ನ ಉದ್ಯೋಗಿಗಳಿಗೆ ದೀಪಾವಳಿಯಂದು ಅನೇಕ ಸವಲತ್ತುಗಳನ್ನೂ ಒದಗಿಸಲಾರಂಭಸಿದೆ. ಈ ಪೈಕಿ, ವಾರ್ಷಿಕ ಬೋನಸ್‌ ಮತ್ತು ಕಾರ್ಯಕ್ಷಮತೆ ಆಧಾರಿತ ವಿತರಣಾ ಪ್ರೋತ್ಸಾಹ ಕೊಡುಗೆ ಸೇರಿವೆ. "ಈ ದೀಪಾವಳಿಯಲ್ಲಿ, ಪ್ರತಿಯೊಬ್ಬ ಉದ್ಯೋಗಿ ಸುರಕ್ಷಿತ, ಮಾನ್ಯ ಮತ್ತು ಮೆಚ್ಚುಗೆಯ ಖುಷಿ ಅನುಭವಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಬದ್ಧತೆಯನ್ನು ಬಲಪಡಿಸುತ್ತಿದ್ದೇವೆ" ಎಂದು ಡಿಟಿಡಿಸಿ ಎಕ್ಸ್‌ಪ್ರೆಸ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶುಭಾಶಿಶ್ ಚಕ್ರವರ್ತಿ ಹೇಳಿದರು.

ಸ್ಪೈಸ್‌ ಜೆಟ್‌ನಿಂದ 32 ಹೊಸ ವಿಮಾನ

ಸ್ಪೈಸ್ ಜೆಟ್ ಸೋಮವಾರ ತನ್ನ ಚಳಿಗಾಲದ ವೇಳಾಪಟ್ಟಿ ನಿರ್ವಹಣೆಗಾಗಿ ಈ ವಾರದಿಂದ 32 ಹೊಸ ವಿಮಾನಗಳನ್ನು ಪ್ರಾರಂಭಿಸಿರುವುದಾಗಿ ಹೇಳಿದೆ. ಈ ಪೈಕಿ 30 ದೇಶೀಯ ವಿಮಾನ ಹಾರಾಟಗಳು, ದೆಹಲಿ ಮತ್ತು ಥೈಲ್ಯಾಂಡ್‌ನ ಫುಕೆಟ್‌ ನಡುವೆ ಎರಡು ದೈನಂದಿನ ನೇರ ಸೇವೆಗಳು ಸೇರಿವೆ ಎಂದು ಕಂಪನಿ ವಿವರಿಸಿದೆ. ಚಳಿಗಾಲದ ವೇಳಾಪಟ್ಟಿಯಲ್ಲಿ ಮುಂಬೈನಿಂದ ಪಾಟ್ನಾ, ಗೋರಖ್‌ಪುರ, ವಾರಣಾಸಿ ಮತ್ತು ಗೋವಾಕ್ಕೆ ನಾಲ್ಕು ಹೊಸ ವಿಮಾನಗಳನ್ನು ಒಳಗೊಂಡಿದೆ. ಚಳಿಗಾಲದ ವೇಳಾಪಟ್ಟಿ ಎಂದರೆ 2024ರ ಅಕ್ಟೋಬರ್ 27 ರಿಂದ 2025 ರ ಮಾರ್ಚ್ 29ರ ವರೆಗಿನ ವಿಮಾನ ಹಾರಾಟ ವೇಳಾಪಟ್ಟಿಯಾಗಿರುತ್ತದೆ.

ಅಕ್ಕಿ ಗಿರಣಿ ಮಾಲೀಕರ ದೂರು ಪರಿಹರಿಸಲು ಮೊಬೈಲ್ ಅಪ್ಲಿಕೇಶನ್

ಭಾರತದ ಅಕ್ಕಿ ಗಿರಣಿಗಳಿಗಾಗಿ ಎಫ್‌ಸಿಐ ಕುಂದುಕೊರತೆ ನಿವಾರಣಾ ವ್ಯವಸ್ಥೆಯ (ಎಫ್‌ಸಿಐ-ಜಿಆರ್‌ಎಸ್) ಮೊಬೈಲ್ ಅಪ್ಲಿಕೇಶನ್ ಅನ್ನು ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಸೋಮವಾರ ಬಿಡುಗಡೆ ಮಾಡಿದರು. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಪಾಲುದಾರರ ತೃಪ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು. ಸಾರ್ವಜನಿಕ ವಲಯದ ಆಹಾರ ನಿಗಮ ಆಫ್ ಇಂಡಿಯಾ (ಎಫ್‌ಸಿಐ) ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ವಿತರಣೆಯ ಪ್ರಮುಖ ಸಂಸ್ಥೆಯಾಗಿದ್ದು, ಆಂಡ್ರಾಯ್ಡ್ ಫೋನ್ ಬಳಕೆದಾರರು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.