Closing Bell: ಸೆನ್ಸೆಕ್ಸ್ ಭಾರಿ ನೆಗೆತ, ಸಾರ್ವಕಾಲಿಕ ಎತ್ತರ ತಲುಪಿದ ನಿಫ್ಟಿ; ವಾರಾಂತ್ಯದಲ್ಲಿ ಭರ್ಜರಿ ವಹಿವಾಟು ನಡೆಸಿದ ಭಾರತದ ಷೇರುಪೇಟೆ
ಮಾರ್ಚ್ ತಿಂಗಳ ಮೊದಲ ದಿನ ಭಾರತದ ಷೇರು ಹೂಡಿಕೆದಾರರ ಅದೃಷ್ಟ ಖುಲಾಯಿಸಿದೆ. ಬಹುದಿನಗಳ ಬಳಿಕ ಇಂದು (ಮಾ.1) ಷೇರುಪೇಟೆ ಮತ್ತೆ ಸಾರ್ವಕಾಲಿಕ ದಾಖಲೆ ಗಳಿಸಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡೂ ದಾಖಲೆಯ ಏರಿಕೆ ಕಂಡಿವೆ. ನಿಫ್ಟಿ ಇದೇ ಮೊದಲ ಬಾರಿಗೆ 22,300ಕ್ಕೆ ತಲುಪಿದೆ.
ಬೆಂಗಳೂರು: 2023-24ರ ಆರ್ಥಿಕ ವರ್ಷದ ಕೊನೆಯ ತಿಂಗಳ ಮೊದಲ ದಿನವಾದ ಇಂದು (ಮಾ. 1) ಭಾರತದ ಷೇರುಪೇಟೆಯು ಹೊಸ ದಾಖಲೆ ಬರೆದಿದೆ. ಬಹುದಿನಗಳ ಬಳಿಕ ಸಾರ್ವಕಾಲಿಕ ದಾಖಲೆ ಗಳಿಸಿದ ಮಾರುಕಟ್ಟೆಯು ಹೂಡಿಕೆದಾರರ ಹರ್ಷಕ್ಕೆ ಕಾರಣವಾಗಿದೆ. ಭಾರತದ ಷೇರುಪೇಟೆಯ ಸಂವೇದಿ ಸೂಚ್ಯಂಕಗಳಲ್ಲಿ ಒಂದಾದ ನಿಫ್ಟಿಯು ಶೇ 2.5ರಷ್ಟು ಗಳಿಕೆ ಕಂಡಿದೆ.
ದಿನ ಆರಂಭದಲ್ಲೇ ಶುಭಸೂಚನೆ ನೀಡಿದ್ದ ಮಾರುಕಟ್ಟೆಯು ದಿನದ ವಹಿವಾಟುನಲ್ಲಿ ಸಾಕಷ್ಟು ಲಾಭಗಳಿಸಿತು. ಇಂದು ಬಹುತೇಕ ವಲಯಗಳು ಹಸಿರು ಬಣ್ಣಕ್ಕೆ ತಿರುಗುವ ಮೂಲಕ ಇಂದಿನ ವಹಿವಾಟು ಮುಗಿಸಿದೆ.
ಕಳೆದ ವಾರ 22,200 ಕ್ಕೆ ತಲುಪುವ ಮೂಲಕ ಹೊಸ ದಾಖಲೆ ಬರೆದ ನಿಫ್ಟಿಯು ಇಂದು ಮತ್ತೊಂದು ಹಂತಕ್ಕೆ ತಲುಪಿದೆ, ಅಂದರೆ 22,300ಕ್ಕೆ ತಲುಪುವ ಮೂಲಕ ಇಂದಿನ ವಹಿವಾಟು ಮುಗಿಸಿದೆ.
ಮಾರುಕಟ್ಟೆ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 1,245.05 ಅಂಕ ಅಥವಾ ಶೇ 1.72 ರಷ್ಟು ಏರಿಕೆಯಾಗಿ 73,745.35 ಕ್ಕೆ ತಲುಪಿದೆ. ನಿಫ್ಟಿ 356.00 ಅಂಕ ಅಥವಾ ಶೇ 1.62 ರಷ್ಟು ಏರಿಕೆಯಾಗಿ 22,338.80 ಕ್ಕೆ ತಲುಪಿದೆ. ಇಂದು ಸುಮಾರು 2079 ಷೇರುಗಳು ಲಾಭ ಗಳಿಸಿದವು. 1214 ಷೇರುಗಳು ನಷ್ಟ ಕಂಡರೆ, 77 ಷೇರುಗಳಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.
ಲಾಭ-ನಷ್ಟ ಗಳಿಸಿದ ಷೇರುಗಳ ವಿವರ
ನಿಫ್ಟಿಯಲ್ಲಿ ಟಾಟಾ ಸ್ಟೀಲ್, ಎಲ್ & ಟಿ, ಜೆಎಸ್‌ಡಬ್ಲ್ಯೂ ಸ್ಟೀಲ್, ಟೈಟಾನ್ ಕಂಪನಿ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಅತಿ ಹೆಚ್ಚು ಲಾಭ ಗಳಿಸಿದರೆ, ಡಾ ರೆಡ್ಡೀಸ್ ಲ್ಯಾಬೊರೇಟರೀಸ್, ಸನ್ ಫಾರ್ಮಾ, ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ನಷ್ಟವನ್ನು ಅನುಭವಿಸಿದವು.
ವಲಯವಾರು ಷೇರುಗಳ ಪೈಕಿ, ಲೋಹದ ಸೂಚ್ಯಂಕವು ಶೇ 4 ರಷ್ಟು ಏರಿಕೆಯಾಗಿದೆ. ಆಟೊ, ಬ್ಯಾಂಕ್, ಬಂಡವಾಳ ಸರಕು ಮತ್ತು ತೈಲ ಮತ್ತು ಅನಿಲವು ಪ್ರತಿ ಶೇ 2 ರಷ್ಟು ಏರಿಕೆಯಾಗಿದೆ. ಆದರೆ, ಆರೋಗ್ಯ ಸೂಚ್ಯಂಕವು ಶೇ 1 ರಷ್ಟು ಮತ್ತು ಮಾಹಿತಿ ತಂತ್ರಜ್ಞಾನ ಸೂಚ್ಯಂಕವು ಶೇ 0.5 ರಷ್ಟು ಕಡಿಮೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇ 0.5 ರಷ್ಟು ಏರಿಕೆಯಾಗಿದೆ.
ಇಂದು ಡಾಲರ್ ಎದುರು ರೂಪಾಯಿ ಮೌಲ್ಯವು 82.90ಕ್ಕೆ ತಲುಪಿದೆ.
ನಿಫ್ಟಿ ಬ್ಯಾಂಕ್ ಇಂದಿನ ವಹಿವಾಟಿನಲ್ಲಿ ಸಾಕಷ್ಟು ಲಾಭ ಗಳಿಸಿದ್ದು, ಇದು ಭಾರತದ ಷೇರುಪೇಟೆಯಲ್ಲಿ ಹೊಸ ಸಂಚಲನ ಉಂಟಾಗಲು ಕಾರಣವಾಗಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)