ITR Filing: ಇನ್ನಷ್ಟು ಸುಲಭವಾಗಲಿದೆ ಐಟಿಆರ್ ಸಲ್ಲಿಕೆ, ಹೊಸ ಐಟಿಆರ್ ಇ-ಫೈಲಿಂಗ್ ಪೋರ್ಟಲ್ 3.0 ಬಗ್ಗೆ ತಿಳಿಯೋಣ
ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆ ಇನ್ನಷ್ಟು ಸುಲಭವಾಗಲಿದೆ. ಆದಾಯ ತೆರಿಗೆ ಇಲಾಖೆಯು ಹೊಸ ಐಟಿಆರ್ ಇ-ಫೈಲಿಂಗ್ ಪೋರ್ಟಲ್ 3.0 ಅನ್ನು ಪರಿಚಯಿಸಲು ಮುಂದಾಗಿದೆ. ಇದರ ಬಗ್ಗೆಇನ್ನಷ್ಟು ವಿವರಗಳು ಇಲ್ಲಿವೆ.
ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವುದು ಸ್ವಲ್ಪ ಸಾಹಸದ ಕೆಲಸವೇ ಸರಿ. ಆದರೆ ಇದನ್ನು ಸರಳಗೊಳಿಸುವ ಕೆಲಸ ನಿರಂತರವಾಗಿ ಆಗುತ್ತಿದ್ದು, ಐಟಿಆರ್ ಇ ಫೈಲಿಂಗ್‌ಗೆ ಈಗಾಗಲೇ ಅವಕಾಶ ನೀಡಲಾಗಿದೆ. ಆದಾಗ್ಯೂ, ಈಗ ಐಟಿಆರ್ ಇ-ಫೈಲಿಂಗ್ ಅನ್ನು ಕೂಡ ಇನ್ನಷ್ಟು ಸರಳಗೊಳಿಸಲು ಆದಾಯ ತೆರಿಗೆ ಇಲಾಖೆ ಪ್ರಯತ್ನಿಸಿದ್ದು, ಶೀಘ್ರವೇ ಹೊಸ ಐಟಿಆರ್ ಇ-ಫೈಲಿಂಗ್ ಪೋರ್ಟಲ್ 3.0 ಅನ್ನು ಪರಿಚಯಿಸಲು ಸಿದ್ಧವಾಗಿದೆ. ಇದರಲ್ಲಿ ತೆರಿಗೆದಾರರ ಅನುಕೂಲ ಗಮನದಲ್ಲಿಟ್ಟುಕೊಂಡು ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಲಾಗಿದ್ದು, ಪೋರ್ಟಲ್ ಬಳಕೆ ಸುಲಭವಾಗಲಿದೆ. ಅದೂ ಅಲ್ಲದೆ, ಅತ್ಯಂತ ಕಡಿಮೆ ಸಮಯದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದು ಸಾಧ್ಯವಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಹೊಸ ಐಟಿಆರ್ ಇ-ಫೈಲಿಂಗ್ ಪೋರ್ಟಲ್ 3.0
ಪ್ರಸ್ತುತ, ಇ-ಫೈಲಿಂಗ್ ಪೋರ್ಟಲ್ ಅನ್ನು ಕೇಂದ್ರೀಕೃತ ಸಂಸ್ಕರಣಾ ಕೇಂದ್ರ (ಐಇಸಿ) 2.0 ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ. ಐಇಸಿ 3.0 ಅನ್ನು ಹೊಸ ಯೋಜನೆಯಾಗಿ ಅಳವಡಿಸಲಾಗುವುದು. ಐಟಿ ಇಲಾಖೆಯು ಹೈಸ್ಪೀಡ್ ಐಟಿ ತಂತ್ರಜ್ಞಾನವನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ . ಇದು ಐಟಿಆರ್‌ಗಳ ಪರಿಶೀಲನೆ, ಪ್ರಕ್ರಿಯೆ ಮತ್ತು ವಿತರಣೆಯ ಪ್ರಕ್ರಿಯೆಗೆ ವೇಗ ನೀಡುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಆದಾಯ ತೆರಿಗೆ ಇಲಾಖೆಯು ಹೊಸ ಐಟಿಆರ್ ಇ-ಫೈಲಿಂಗ್ ಪೋರ್ಟಲ್ ಅನ್ನು ಹೆಚ್ಚು ತೆರಿಗೆದಾರ-ಸ್ನೇಹಿಯನ್ನಾಗಿ ಮಾಡಲು ಪ್ರಾರಂಭಿಸುವ ಮೊದಲು ತೆರಿಗೆದಾರರಿಂದ ಸಲಹೆ, ಸೂಚನೆ ಮತ್ತು ಪ್ರತಿಕ್ರಿಯೆಯನ್ನು ಸ್ವೀಕರಿಸಿ ಪರಿಶೀಲಿಸುತ್ತಿದೆ. ಎಲ್ಲಾ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಪಟ್ಟಿ ಮಾಡಲು ಇಲಾಖೆಯು ಈಗಾಗಲೇ ಸಮಿತಿಯನ್ನು ಸಹ ರಚಿಸಿದೆ. ಸಮಿತಿ ನೀಡುವ ಶಿಫಾರಸಿನ ಅದರ ಆಧಾರದ ಮೇಲೆ ಪೋರ್ಟಲ್‌ನಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಹಾಲಿ ಐಟಿಆರ್ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆ
ಪ್ರಸ್ತುತ ಚಾಲ್ತಿಯಲ್ಲಿರುವ ಐಇಸಿ 2.0 ಪೋರ್ಟಲ್‌ನಲ್ಲಿರುವ ಕಾರ್ಯವಿಧಾನದಲ್ಲಿ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳು ಕಾಣುತ್ತಿವೆ. ಈ ಪೋರ್ಟಲ್‌ನಲ್ಲಿ ದಟ್ಟಣೆ ಹೆಚ್ಚಾದಂತೆ ಅದರ ಕಾರ್ಯಕ್ಷಮತೆ ಕುಸಿಯುತ್ತದೆ. ಕೆಲವೊಮ್ಮೆ ಸೈಟ್ ಕ್ರ್ಯಾಶ್ ಆಗುತ್ತದೆ. ಇದರಿಂದಾಗಿ ತೆರಿಗೆ ಪಾವತಿದಾರರು ತಮ್ಮ ತೆರಿಗೆ ರಿಟರ್ನ್ಸ್ ಸಲ್ಲಿಸವುದು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ಧಾರೆ. ಅನೇಕ ತೆರಿಗೆದಾರರಿಗೆ ಸಮಯಕ್ಕೆ ತೆರಿಗೆ ರಿಟರ್ನ್ಸ್ ಸಲ್ಲಿಸುವುದ ಸಾಧ್ಯವಾಗುವುದಿಲ್ಲ ಎಂಬುದದನ್ನು ತಜ್ಞರು ಹೇಳುತ್ತಿದ್ದಾರೆ.
ಹೊಸ ಐಟಿಆರ್ ಇ-ಫೈಲಿಂಗ್ ಪೋರ್ಟಲ್ 3.0 ಮೂಲಕ ತೆರಿಗೆ ಪಾವತಿದಾರರಿಗೆ ಇ- ಫೈಲಿಂಘ್ ಪ್ರಕ್ರಿಯೆ ಸುಲಭವಾಗುವ ನಿರೀಕ್ಷೆ ಇದೆ. ತೆರಿಗೆ ಪಾವತಿದಾರರೇ ಯಾರ ನೆರವೂ ಇಲ್ಲದೇ ಸ್ವತಃ ಐಟಿಆರ್ ಫೈಲಿಂಗ್ ಮಾಡುವುದು ಸಾಧ್ಯವಾಗಲಿದೆ. ಎಲ್ಲಿಂದ ಬೇಕಾದರೂ ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಸುವುದು ಸಾಧ್ಯವಾಗಲಿದೆ. ತೆರಿಗೆ ವಿಷಯಗಳಿಗೆ ಸಂಬಂಧಿಸಿದ ಇತರ ಫಾರ್ಮ್‌ಗಳನ್ನು ಡೌನ್‌ಲೋಡ್ ಮಾಡಲು ಮತ್ತು ಇತರ ಸೇವೆಗಳನ್ನು ಪಡೆಯುವುದು ಕೂಡ ಸುಲಭವಾಗಲಿದೆ. ತೆರಿಗೆದಾರರು ತಮ್ಮ ಹಳೆಯ ಐಟಿಆರ್ ಫಾರ್ಮ್‌ಗಳನ್ನು ಡೌನ್‌ಲೋಡ್ ಮಾಡಬಹುದು ಎಂಬ ನಿರೀಕ್ಷೆ ಇದೆ.