Why market is falling?: ಷೇರುಪೇಟೆ ಕುಸಿಯುತ್ತಿರುವುದೇಕೆ? ಇಂದು ಒಂದೇ ದಿನ 9 ಲಕ್ಷ ಕೋಟಿ ರೂ ಕಳೆದುಕೊಂಡ ಹೂಡಿಕೆದಾರರು
ಷೇರು ಹೂಡಿಕೆದಾರರು Why market is falling? ಎಂದು ಕಂಗಲಾಗಿದ್ದಾರೆ. ಇಂದು ಸೆನ್ಸೆಕ್ಸ್ 930.55 ಅಂಕ ಇಳಿಕೆ ಕಂಡು 80,220.72ಕ್ಕೆ ತಲುಪಿದೆ. ನಿಫ್ಟಿ ಕೂಡ 309 ಅಂಕ ಕಳೆದುಕೊಂಡು 24,472.10ಕ್ಕೆ ತಲುಪಿದೆ. ಎಫ್‌ಐಐ ಮಾರಾಟ ಸೇರಿದಂತೆ ಹಲವು ಅಂಶಗಳು ಇಂದಿನ ಕುಸಿತಕ್ಕೆ ಕಾರಣವಾಗಿವೆ.
Why market is falling?: ಬುಧವಾರ (ಅಕ್ಟೋಬರ್ 22) ಸಾಕಷ್ಟು ಷೇರು ಹೂಡಿಕೆದಾರರು ಗೊಂದಲಕ್ಕೆ ಈಡಾಗಿದ್ದಾರೆ. ಹೊರಗೆ ಮಳೆಯ ವಾತಾವರಣ, ಷೇರು ಪೇಟೆಯಲ್ಲೂ ಕೆಂಪು ಕೆಂಪು ಕಾಣಿಸುತ್ತಿದೆ. ಇಂತಹ ಸಮಯದಲ್ಲಿ ಇವತ್ತಿನ ಷೇರುಪೇಟೆ ಕುಸಿತಕ್ಕೆ ಕಾರಣ ಏನೆಂದು ತಿಳಿಯೋಣ. ಇಂದಿನ ಕ್ಲೋಸಿಂಗ್ ಬೆಲ್ ಸಮಯದಲ್ಲಿ ಸೆನ್ಸೆಕ್ಸ್ 930.55 ಪಾಯಿಂಟ್‌ಗಳ ಕುಸಿತದೊಂದಿಗೆ 80,220.72 ಕ್ಕೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 309 ಪಾಯಿಂಟ್‌ಗಳ ಕುಸಿತದೊಂದಿಗೆ 24,472.10 ಕ್ಕೆ ತಲುಪಿದೆ. ಇಂದು ಮುಂಬೈ ಷೇರು ಪೇಟೆಯ ಮಾರುಕಟ್ಟೆಯಲ್ಲಿ ಇಂದು ಒಂದೇ ದಿನ 9 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಇದರಿಂದ ಅನೇಕ ಹೂಡಿಕೆದಾರರು ತತ್ತರಿಸಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಭಾರತದ ಷೇರುಪೇಟೆ ಚಟುವಟಿಕೆ ಉತ್ತಮವಾಗಿತ್ತು. ಇದೇ ಕಾರಣಕ್ಕೆ ಇದು ಲಾಭ ಮಾಡಿಕೊಳ್ಳಲು ಸೂಕ್ತ ಸಮಯ ಎಂದುಕೊಂಡು ತಮ್ಮ ಪೋರ್ಟ್‌ಪೋಲಿಯೋದಲ್ಲಿದ್ದ ಒಂದಿಷ್ಟು ಷೇರುಗಳನ್ನು ಮಾರಾಟ ಮಾಡಲು ಮುಂದಾಗಿರುವಂತೆ ಕಾಣಿಸಿದೆ. ಸಂಭಾವ್ಯ ಆರ್ಥಿಕ ಕುಸಿತದ ಆತಂಕಗಳು ಕೂಡ ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಿವೆ. ಇಂದಿನ ಷೇರುಪೇಟೆಯ ಕುಸಿತಕ್ಕೆ ಪ್ರೇರಣೆಯಾದ ಅಂಶಗಳು ಯಾವುದೆಂದು ತಿಳಿಯೋಣ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮಾರಾಟದ ಭರಾಟೆ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಈ ತಿಂಗಳು ಮಾರಾಟದ ಭರಾಟೆಯಲ್ಲಿದ್ದಾರೆ. ಈ ತಿಂಗಳು ದಾಖಲೆ ಪ್ರಮಾಣದಲ್ಲಿ ಷೇರು ಮಾರಾಟ ಮಾಡಿದ್ದಾರೆ. ಎನ್‌ಎಸ್‌ಡಿಎಲ್ ಅಂಕಿಅಂಶದ ಆಧಾರದಲ್ಲಿ ಹೇಳುವುದಾದರೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 88,244 ಕೋಟಿ ರೂ.ಗಳ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದೇ ಸಮಯದಲ್ಲಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐಗಳು) 3,225.91 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಒಂಥರ ದೇಶ ಮತ್ತು ವಿದೇಶದ ಹೂಡಿಕೆದಾರರು ಹಗ್ಗ ಜಗ್ಗಾಟ ಮಾಡಿದಂತೆ ಇದೆ.
ಜಾಗತಿಕ ಪ್ರಭಾವ- ಕರಡಿಯದ್ದೇ ಪ್ರಭಾವ
ಷೇರು ಇಳಿಕೆಗೆ ಕರಡಿಯನ್ನು ಸೂಚಿಸಲಾಗುತ್ತದೆ. ಷೇರುಪೇಟೆ ಇಳಿಕೆ ಭಾವನೆ ಭಾರತಕ್ಕೆ ಸೀಮಿತವಾಗಿಲ್ಲ. ಏಷ್ಯಾದಾದ್ಯಂತ ಇದೇ ರೀತಿ ಇತ್ತು. ಜಪಾನ್‌ನ ನಿಕ್ಕಿ ಶೇಕಡ 1.39 ರಷ್ಟು ಕುಸಿಯಿತು ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕ ಶೇಕಡ 1.31ರಷ್ಟು ಕುಸಿಯಿತು. ಇದು ಕೂಡ ಭಾರತದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.
ವಲಯವಾರು ಪ್ರಭಾವ
ಇಂದು ಬಹುತೇಕ ಎಲ್ಲಾ ವಲಯಗಳು ಕುಸಿತದತ್ತ ಮುಖ ಮಾಡಿದ್ದವು. ರಿಲಯೆನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಟಿಸಿಎಸ್ ಈ ಕುಸಿತಕ್ಕೆ ಪ್ರಮುಖ ಕೊಡುಗೆ ನೀಡಿವೆ. ಮಧ್ಯಮ ಮತ್ತು ಸಣ್ಣ ಕ್ಯಾಪಿಟಲ್ ವಿಭಾಗವು ಕ್ರಮವಾಗಿ ಶೇಕಡ 2.61 ಮತ್ತು 3.92ರಷ್ಟು ಕುಸಿದಿವೆ.
ಷೇರುಪೇಟೆ ವಿಶ್ಲೇಷಕರ ಪ್ರಕಾರ ಮಾರುಕಟ್ಟೆಯ ಈ ಚಂಚಲ ಸ್ಥಿತಿ ತಾತ್ಕಾಲಿಕ. ಸದ್ಯದಲ್ಲಿಯೇ ಮಾರುಕಟ್ಟೆಯ ಭಾವನೆ ಬದಲಾಗಲಿದೆ ಎಂದಿದ್ದಾರೆ.