ಕನ್ನಡ ಸುದ್ದಿ  /  Nation And-world  /  Crime News 10 Year Girl Died After Consuming Birt Day Celebrations Cake In Patiala Case Booked Against Bake Owner Kub

Crime News: ಜನುಮ ದಿನದ ಖುಷಿಯಲ್ಲಿದ್ದ ಬಾಲಕಿ ವಿಶೇಷ ಕೇಕ್‌ ಸೇವಿಸಿ ಸಾವು, ಬೇಕರಿ ಮಾಲೀಕನ ವಿರುದ್ದ ಪ್ರಕರಣ

ಹುಟ್ಟು ಹಬ್ಬದ ದಿನದಂದು ಕತ್ತರಿಸಿದ ಕೇಕ್‌ ಸೇವಿಸಿ ಬಾಲಕಿ ಮೃತಪಟ್ಟಿರುವ ಘಟನೆ ಪಂಜಾಬ್‌ನ ಪಾಟೀಯಾಲದಲ್ಲಿ ನಡೆದಿದೆ.

ಕೇಕ್‌ ಸೇವಿಸಿ ಮೃತಪಟ್ಟ ಬಾಲಕಿ ಮಾನ್ವಿ.
ಕೇಕ್‌ ಸೇವಿಸಿ ಮೃತಪಟ್ಟ ಬಾಲಕಿ ಮಾನ್ವಿ.

ಚಂಡೀಗಢ: ಆ ಬಾಲಕಿ ತನ್ನ ಹುಟ್ಟುಹಬ್ಬವನ್ನು ಖುಷಿಯಿಂದಲೇ ಆಚರಿಸಿಕೊಂಡಿದ್ದಳು. ಕುಟುಂಬದವರು, ಸ್ನೇಹಿತರು ಹಾಗೂ ಪ್ರೀತಿಪಾತ್ರರ ಸಮ್ಮುಖದಲ್ಲಿ ಕೇಕ್‌ ಅನ್ನು ಕತ್ತರಿಸಿದ್ದಳು. ಎಲ್ಲರಿಗೂ ಕೇಕ್‌ ತಿನ್ನಿಸಿ ತಾನೂ ಕೇಕ್‌ ಅನ್ನು ಸೇವಿಸಿದ್ದಳು. ಜನುಮ ದಿನದ ಖುಷಿಯ ಕೆಲವೇ ಹೊತ್ತಿನಲ್ಲಿ ಬಾಲಕಿಯೂ ಸೇರಿದಂತೆ ಎಲ್ಲರೂ ವಾಂತಿ ಮಾಡಿಕೊಂಡರು. ತೀವ್ರವಾಗಿ ಅಸ್ವಸ್ಥಳಾದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಗ ಮೃತಪಟ್ಟಳು. ಜನುಮ ದಿನದ ಖುಷಿ ಇಡೀ ಕುಟುಂಬದಲ್ಲಿ ಸೂತಕದ ವಾತಾವರಣ ನಿರ್ಮಿಸಿತು.

ಇದು ನಡೆದಿದ್ದು ಪಂಜಾಬ್‌ನ ಪಾಟಿಯಾಲ ನಗರದಲ್ಲಿ. ಘಟನೆ ನಡೆದು ಐದು ದಿನಗಳಾಗಿವೆ. ಕೇಕ್‌ ನಲ್ಲಿ ವಿಷವಿತ್ತು ಎನ್ನುವ ಆತಂಕಕಾರಿ ಮಾಹಿತಿ ಆಧರಿಸಿ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

10 ವರ್ಷ ಮಾನ್ವಿಯ ಜನುಮ ದಿನ ಮಾರ್ಚ್‌ 24ರಂದು ಇತ್ತು. ಆಕೆಗೆ ಹೊಸ ಬಟ್ಟೆ, ಉಡುಗೊರೆಯನ್ನು ಕೊಟ್ಟು ಮನೆಯವರು ಬೆಳಿಗ್ಗೆಯೇ ಶುಭಾಶಯ ಕೋರಿದ್ದರು. ಸಂಜೆ ಸ್ನೇಹಿತರು, ಕುಟುಂಬದವರು ಹಾಗೂ ಮಾನ್ವಿಯ ಆತ್ಮೀಯರೊಂದಿಗೆ ಕೇಕ್‌ ಕತ್ತರಿಸುವ ಕಾರ್ಯಕ್ರಮವಿತ್ತು. ಅಂದು ರಾತ್ರಿ ಮಾನ್ವಿ ಎಲ್ಲರ ಸಮ್ಮುಖದಲ್ಲಿ ಕೇಕ್‌ ಅನ್ನು ಕತ್ತರಿಸಿದ್ದಳು. ಇದಕ್ಕಾಗಿ ಕೇಕ್‌ ಅನ್ನು ಆನ್‌ಲೈನ್‌ ಮೂಲಕ ಪಾಟಿಯಾಲದ ಕೇಕ್‌ ಕಾನ್ಹಾ ಎನ್ನುವ ಬೇಕರಿಯಲ್ಲಿ ತರಿಸಲಾಗಿತ್ತು. ಕತ್ತರಿಸಿದ ಕೇಕ್‌ ಅನ್ನು ಇತರೆ ತಿಂಡಿಗಳೊಂದಿಗೆ ನೀಡಲಾಗಿತ್ತು. ಆದರೆ ಕೇಕ್‌ ತಿಂದ ಮಾನ್ವಿ, ಆಕೆಯ ಸಹೋದರಿ ವಾಂತಿ ಮಾಡಿಕೊಂಡಿದ್ದರು. ರಾತ್ರಿ ಹೊತ್ತಿಗೆ ಇಡೀ ಕುಟುಂಬ ಅಸ್ವಸ್ಥಗೊಂಡಿತ್ತು.ಇತರಿಗೂ ವಾಂತಿಯಾಗಿತ್ತು. ಆದರೆ ಬಾಲಕಿ ಬಾಯಾರಿಕೆಯಿಂದ ನೀರು ಕುಡಿದು ಆನಂತರ ಮಲಗಲು ಹೋಗಿದ್ದಳು. ಬೆಳಿಗ್ಗೆ ಹೊತ್ತಿಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದರಿಂದ ಮಾನ್ವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೃತಕ ಆಮ್ಲಜನಕ ವ್ಯವಸ್ಥೆಯೊಂದಿಗೆ ಇಸಿಜಿ ಮಾಡಲಾಗಿತ್ತು ಎಂದು ಆಕೆಯ ತಾತ ಹರ್ಬನ್‌ ಲಾಲ್‌ ಹೇಳುತ್ತಾರೆ.

ಚಿಕಿತ್ಸೆ ಫಲಕಾರಿಯಾಗದೇ ಮಾನ್ವಿ ಕೊನೆಯುಸಿರೆಳೆದಿದ್ದಾಳೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಧ್ಯಾಹ್ನದ ಹೊತ್ತಿಗೆ ಪ್ರಕಟಿಸಿದ್ದರು. ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿತ್ತು.

ನಾನು ಕೇಕ್‌ ಕಾನ್ಹಾದಿಂದ ಆರ್ಡರ್‌ ಮಾಡಿದ್ದ ಚಾಕೊಲೇಟ್‌ ಕೇಕ್‌ ನಲ್ಲಿ ವಿಷಕಾರಿ ವಸ್ತು ಇರುವ ಅನುಮಾನವಿದ್ದು, ತನಿಖೆಗೆ ಒಳಪಡಿಸಬೇಕು ಎಂದು ಕುಟುಂಬ ಆರೋಪಿಸಿತ್ತು. ಈ ಬಗ್ಗೆ ಪಾಟೀಯಾಲ ನಗರ ಪೊಲೀಸರು ಮಾನ್ವಿ ಕುಟುಂಬದವರ ದೂರು ಆಧರಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಬೇಕರಿ ಮಾಲೀಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು. ವರದಿಗಾಗಿ ಕಾಯಲಾಗುತ್ತಿದೆ. ಕೇಕ್‌ನ ತುಣುಕನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

IPL_Entry_Point

ವಿಭಾಗ