Adani Row: ಮೊದಲು ಅದಾನಿ ವಿಮಾನದಲ್ಲಿ ಮೋದಿ ಪ್ರಯಾಣಿಸುತ್ತಿದ್ದರು, ಆದ್ರೆ ಈಗ... : ಲೋಕಸಭೆಯಲ್ಲಿ ರಾಹುಲ್ ಹೇಳಿದ್ದಿಷ್ಟು
ಅದಾನಿ-ಹಿಂಡೆನ್‌ಬರ್ಗ್ ವಿವಾದದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ಅದಾನಿ-ಹಿಂಡೆನ್‌ಬರ್ಗ್ ವಿವಾದದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಮೊದಲು ಪ್ರಧಾನಿ ಮೋದಿಯವರು ಅದಾನಿಯವರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು, ಈಗ ಅದಾನಿಯವರು ಮೋದಿಜಿ ಅವರ ವಿಮಾನದಲ್ಲಿ ಪ್ರಯಾಣಿಸುತ್ತಾರೆ, ಈ ವಿಷಯವು ಮೊದಲು ಗುಜರಾತ್ಗೆ ಸೀಮಿತ ಆಗಿತ್ತು, ನಂತರ ಭಾರತಕ್ಕಾಯಿತು, ಮತ್ತು ಈಗ ಅಂತರರಾಷ್ಟ್ರೀಯವಾಗಿದೆ. ಕಳೆದ 20 ವರ್ಷಗಳಲ್ಲಿ ಅದಾನಿ ಬಿಜೆಪಿಗೆ ಎಷ್ಟು ಹಣ ನೀಡಿದ್ದಾರೆ" ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
"ಅನೇಕ ವರ್ಷಗಳ ಹಿಂದೆ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಇವರ ಸಂಬಂಧಗಳು ಪ್ರಾರಂಭವಾದವು. ಒಬ್ಬ ವ್ಯಕ್ತಿ (ಅದಾನಿ) ಪಿಎಂ ಮೋದಿಯೊಂದಿಗೆ ಭುಜಕ್ಕೆ ಭುಜಕೊಟ್ಟು ನಿಂತರು, ಅವರು ಪ್ರಧಾನಿಗೆ ನಿಷ್ಠರಾಗಿದ್ದರು ಮತ್ತು ಮೋದಿಯವರಿಗೆ 'ಪುನರುತ್ಥಾನ ಗುಜರಾತ್' ಕಲ್ಪನೆಯನ್ನು ನಿರ್ಮಿಸಲು ಸಹಾಯ ಮಾಡಿದರು. 2014ರಲ್ಲಿ ಪ್ರಧಾನಿ ಮೋದಿ ರಾಷ್ಟ್ರ ರಾಜಧಾನಿ ತಲುಪಿದಾಗ ನಿಜವಾದ ಮ್ಯಾಜಿಕ್ ಪ್ರಾರಂಭವಾಯಿತು '' ಎಂದು ಲೋಕಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಹೇಳಿದರು.
"ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ನಾನು ವಿವಿಧ ವಯೋಮಾನದ ಜನರೊಂದಿಗೆ ಮಾತನಾಡಿದ್ದೇನೆ ಮತ್ತು ಜನರು 'ಅದಾನಿ' ಹೆಸರನ್ನು ಎತ್ತುತ್ತಿದ್ದಾರೆ. ದೇಶದೆಲ್ಲೆಡೆ ಬರೀ ‘ಅದಾನಿ, ಅದಾನಿ, ಅದಾನಿ’. ಅದಾನಿ ಯಾವುದೇ ಉದ್ಯಮಕ್ಕೆ ಕೈ ಹಾಕಿದರೂ ಅವರು ಅಲ್ಲಿ ಫೇಲ್ ಆಗುವುದಿಲ್ಲ ಅಲ್ಲವೇ ಎಂದು ಜನರು ನನ್ನನ್ನು ಕೇಳುತ್ತಿದ್ದರು. ಈಗ ಎಂಟರಿಂದ ಹತ್ತು ವಲಯದಲ್ಲಿರುವ ಅದಾನಿ ಅವರ ನಿವ್ವಳ ಸಂಪತ್ತು 2014 ರಲ್ಲಿ 8 ಬಿಲಿಯನ್ ಯುಎಸ್‌ಡಿಯಿಂದ 2022 ರಲ್ಲಿ 140 ಬಿಲಿಯನ್ ಯುಎಸ್‌ಡಿಗೆ ಏರಿದ್ದು ಹೇಗೆ ಎಂದು ಯುವಕರು ನಮ್ಮನ್ನು ಕೇಳುತ್ತಿದ್ದಾರೆ" ಎಂದರು.
ವಿಮಾನ ನಿಲ್ದಾಣ ಅಭಿವೃದ್ಧಿಯಲ್ಲಿ ಈ ಹಿಂದೆ ಅನುಭವಿ ಸಂಸ್ಥೆಗಳಿಗೆ ಮಾತ್ರ ಅವಕಾಶ ಕಲ್ಪಿಸುವ ನಿಯಮಗಳನ್ನು ಮೋದಿ ಸರ್ಕಾರ ಬದಲಾಯಿಸಿದೆ ಎಂದು ಗಾಂಧಿ ಆರೋಪಿಸಿದರು. " ಅನುಭವವಿಲ್ಲದವರು ವಿಮಾನ ನಿಲ್ದಾಣಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬಾರದು ಎಂಬ ನಿಯಮವಿದೆ. ಈ ನಿಯಮವನ್ನು ಭಾರತ ಸರ್ಕಾರ ಬದಲಾಯಿಸಿದೆ ಮತ್ತು ಅದಾನಿಗೆ ಆರು ವಿಮಾನ ನಿಲ್ದಾಣಗಳನ್ನು ನೀಡಲಾಗಿದೆ," ಎಂದರು.
"ಅದಾನಿ ರಕ್ಷಣಾ ಕ್ಷೇತ್ರದಲ್ಲಿ ಶೂನ್ಯ ಅನುಭವ ಹೊಂದಿದ್ದಾರೆ. ಆದರೆ ಪ್ರಧಾನಿ ಮೋದಿ ಇಸ್ರೇಲ್‌ಗೆ ತೆರಳಿದ ನಂತರ ಡ್ರೋನ್ ಉತ್ಪಾದನೆಯ ಗುತ್ತಿಗೆಯನ್ನು ಅದಾನಿಗೆ ನೀಡಲಾಯಿತು. ಅದಾನಿ ಎಂದಿಗೂ ಡ್ರೋನ್‌ಗಳನ್ನು ತಯಾರಿಸಿಲ್ಲ ಆದರೆ ಎಚ್‌ಎಎಲ್ ಮತ್ತು ಭಾರತದ ಇತರ ಕಂಪನಿಗಳು ಅದನ್ನು ಮಾಡುತ್ತವೆ. ಅದರ ಹೊರತಾಗಿಯೂ ಪ್ರಧಾನಿ ಮೋದಿ ಇಸ್ರೇಲ್‌ಗೆ ಹೋಗುತ್ತಾರೆ ಮತ್ತು ಅದಾನಿಗೆ ನೀಡುವ ಒಪ್ಪಂದಕ್ಕೆ ಸಹಿ ಹಾಕುತ್ತಾರೆ" ಎಂದು ಕಿಡಿಕಾರಿದರು.
ನಿನ್ನೆ ಕೂಡ ಅದಾನಿ ವಿವಾದದ ಕುರಿತು ಮಾತನಾಡಿದ್ದ ರಾಹುಲ್ ಗಾಂಧಿ, "ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿ ವಿವಾದದ ಕುರಿತಾಗಿ ಸಂಸತ್ತಿನಲ್ಲಿ ಚರ್ಚೆಯನ್ನು ತಪ್ಪಿಸಲು ಕೈಲಾದ ಪ್ರಯತ್ನಿಸುತ್ತಿದ್ದಾರೆ. ನಡೆದಿರುವ ಲಕ್ಷ ಕೋಟಿ ಭ್ರಷ್ಟಾಚಾರ ಹೊರಬರಬೇಕು. ಬಿಲಿಯನೇರ್ ಉದ್ಯಮಿ (ಅದಾನಿ) ಹಿಂದೆ ಯಾವ ಶಕ್ತಿ ಇದೆ ಎಂದು ದೇಶವು ತಿಳಿದುಕೊಳ್ಳಬೇಕು" ಎಂದು ಹೇಳಿದ್ದರು.
ಏನಿದು ಅದಾನಿ-ಎಲ್ಐಸಿ ವಿಚಾರ?
ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆಯಾದ ಹಿಂಡೆನ್‌ಬರ್ಗ್ ರಿಸರ್ಚ್, ಅದಾನಿ ಗ್ರೂಪ್‌ನ ಆರ್ಥಿಕ ಸ್ಥಿತಿಗತಿಗಳ ಕುರಿತು ಸಂಚಲನ ಮೂಡಿಸುವ ವರದಿಯನ್ನು ಬಿಡುಗಡೆ ಮಾಡಿತ್ತು. ಅದಾನಿ ಸಮೂಹದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿತ್ತು. ಈ ವರದಿ ಹೊರ ಬೀಳುತ್ತಿದ್ದಂತೆಯೇ ಅದಾನಿ ಷೇರು ಸಾಮ್ರಾಜ್ಯ ಎರಡೇ ದಿನಗಳಲ್ಲಿ ನಾಲ್ಕು ಲಕ್ಷ ಕೋಟಿಗೂ ಅಧಿಕ ಅಧಿಕ ನಷ್ಟ ಅನುಭವಿಸಿದ್ದು, ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿರುವ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ)ಗೂ ನಷ್ಟದ ಬಿಸಿ ತಟ್ಟಿದೆ.
ಅದಾನಿ ಗ್ರೂಪ್‌ನ ರಿಟೇಲ್ ಮತ್ತು ಸಾಂಸ್ಥಿಕ ಹೂಡಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ. ಅದಾನಿ ಗ್ರೂಪ್‌ನ ಐದು ಅತೀ ದೊಡ್ಡ ಹೂಡಿಕೆದಾರರಲ್ಲಿ ಎಲ್‌ಐಸಿ ಕೂಡ ಒಂದಾಗಿದ್ದು, ಎರಡೇ ದಿನಗಳಲ್ಲಿ ಎಲ್‌ಐಸಿಗೆ 16,580 ಕೋಟಿ ರೂ. ನಷ್ಟವಾಗಿದೆ. ಈ ಹದಿನಾರುವರೆ ಸಾವಿರ ಕೋಟಿ ರೂ.ಗಳಲ್ಲಿ ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಮಾಡಿರುವ ಹೂಡಿಕೆಯಿಂದಲೇ ಎಲ್‌ಐಸಿಯು 6,232 ಕೋಟಿ ರೂ. ನಷ್ಟ ಅನುಭವಿಸಿದೆ. ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಎಲ್‌ಐಸಿಯು ಶೇಕಡ 5.96ರಷ್ಟು ಷೇರು ಹೊಂದಿದೆ.