Donald Trump Backs to Twitter: "ಜನರ ಧ್ವನಿ ದೇವರ ಧ್ವನಿ.": ಟ್ವಿಟ್ಟರ್‌ಗೆ ಮರಳಿದ ರಿಪಬ್ಲಿಕನ್ನರ ಧಣಿ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Donald Trump Backs To Twitter: "ಜನರ ಧ್ವನಿ ದೇವರ ಧ್ವನಿ.": ಟ್ವಿಟ್ಟರ್‌ಗೆ ಮರಳಿದ ರಿಪಬ್ಲಿಕನ್ನರ ಧಣಿ!

Donald Trump Backs to Twitter: "ಜನರ ಧ್ವನಿ ದೇವರ ಧ್ವನಿ.": ಟ್ವಿಟ್ಟರ್‌ಗೆ ಮರಳಿದ ರಿಪಬ್ಲಿಕನ್ನರ ಧಣಿ!

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೊನೆಗೂ ಟ್ವಿಟ್ಟರ್‌ಗೆ ಮರಳಿದ್ದಾರೆ. ಟ್ವಿಟ್ಟರ್‌ ನೂತನ ಮಾಲೀಕ ಎಲಾನ್‌ ಮಸ್ಕ್‌ ನಡೆಸಿದ ಜನಮತ ಗಣನೆ ಬಳಿಕ, ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟ್ಟರ್‌ ಖಾತೆಯನ್ನು ಪುನರ್‌ ಸ್ಥಾಪಿಸಲಾಗಿದೆ. ಈ ಕುರಿತು ಖುದ್ದು ಮಾಹಿತಿ ನೀಡಿರುವ ಎಲಾನ್‌ ಮಸ್ಕ್‌, ಸಮೀಕ್ಷೆಯ ಫಲಿತಾಂಶವನ್ನು ಪರಿಗಣಿಸಿ ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟ್ಟರ್‌ ಖಾತೆಯನ್ನು ಮರು ಸ್ಥಾಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (AFP)

ಸ್ಯಾನ್‌ಫ್ರಾನ್ಸಿಸ್ಕೋ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೊನೆಗೂ ಟ್ವಿಟ್ಟರ್‌ಗೆ ಮರಳಿದ್ದಾರೆ. ಟ್ವಿಟ್ಟರ್‌ ನೂತನ ಮಾಲೀಕ ಎಲಾನ್‌ ಮಸ್ಕ್‌ ನಡೆಸಿದ ಜನಮತ ಗಣನೆ ಬಳಿಕ, ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟ್ಟರ್‌ ಖಾತೆಯನ್ನು ಪುನರ್‌ ಸ್ಥಾಪಿಸಲಾಗಿದೆ.

ಈ ಕುರಿತು ಖುದ್ದು ಮಾಹಿತಿ ನೀಡಿರುವ ಎಲಾನ್‌ ಮಸ್ಕ್‌, ಸಮೀಕ್ಷೆಯ ಫಲಿತಾಂಶವನ್ನು ಪರಿಗಣಿಸಿ ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟ್ಟರ್‌ ಖಾತೆಯನ್ನು ಮರು ಸ್ಥಾಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. "ವೋಕ್ಸ್ ಪಾಪುಲಿ, ವೋಕ್ಸ್ ಡೀ,"("ಜನರ ಧ್ವನಿ ದೇವರ ಧ್ವನಿ.") ಎಂಬ ಲ್ಯಾಟಿನ್ ಗಾದೆಯೊಂದನ್ನು ಉಲ್ಲೇಖಿಸಿರುವ ಮಸ್ಕ್‌, ಜನರ ಅಭಿಲಾಷೆಯಂತೆ ಟ್ರಂಪ್‌ ಖಾತೆಯನ್ನು ಮರುಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.

2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಟ್ರಂಪ್‌ ಘೋಷಿಸಿದ ಕೆಲವೇ ದಿನಗಳಲ್ಲಿ, ಅವರ ಟ್ವಿಟ್ಟರ್‌ ಖಾತೆಯನ್ನು ಮರುಸ್ಥಾಪಿಸಿರುವುದು ಜಗತ್ತಿನ ಗಮನ ಸೆಳೆದಿದೆ.

ಟ್ರಂಪ್ ಅವರ ಟ್ವಿಟ್ಟರ್‌ ಖಾತೆ ಮರು ಸ್ಥಾಪನೆಗೊಂಡಿರುವುದನ್ನು ಬಹುಪಾಲು ಜನರು ಸ್ವಾಗತಿಸಿದ್ದು, ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಖಾಡ ರಂಗೇರಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಟ್ರಂಪ್‌ ಅವರ ಟ್ವಿಟ್ಟರ್‌ ಖಾತೆ ಮರುಸ್ಥಾಪಿಸುವ ಕುರಿತು ಎಲಾನ್‌ ಮಸ್ಕ್‌ ನಡೆಸಿದ ಜನಮತ ಗಣನೆಯಲ್ಲಿ, ಒಟ್ಟು 15 ದಶಲಕ್ಷಕ್ಕೂ ಹೆಚ್ಚು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಶೇ.51.8ರಷ್ಟು ಜನ ಪರವಾಗಿ ಮತ್ತು ಶೇ.48.2ರಷ್ಟು ಜನ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.

ಟ್ರಂಪ್‌ ಅವರು ಟ್ವಿಟ್ಟರ್‌ ಖಾತೆಗೆ ಮರಳಿರುವುದು ಅಮೆರಿಕವೂ ಸೇರಿದಂತೆ ಇಡೀ ಜಗತ್ತಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಟ್ರಂಪ್‌ ಇನ್ನು ತಮ್ಮ ಧ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಟ್ರಂಪ್‌ ಅವರು ಟ್ಟಿಟ್ಟರ್‌ಗೆ ಮರಳಿರುವುದನ್ನು ಸ್ವಾಗತಿಸಿರುವ ಬಹುತೇಕರು, ಇದೊಂದು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದ್ದಾರೆ.

2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಿರಸ್ಕರಿಸಿದ್ದ ಡೊನಾಲ್ಡ್‌ ಟ್ರಂಪ್‌, ಇಡೀ ಚುನಾವಣಾ ಪ್ರಕ್ರಿಯೆಯನ್ನೇ ರದ್ದುಗೊಳಿಸುವಂತೆ ಒತ್ತಾಯಿಸಿದ್ದರು. ಕಳೆದ ಜನವರಿ 6ರಂದು ಟ್ರಂಪ್‌ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಮೇಲೆ ದಾಳಿ ನಡೆಸಿದ್ದರು. ಈ ದಾಲೀಗೆ ಟ್ರಂಪ್‌ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಕೇಳಿಬಂದ ಕಾರಣಕ್ಕೆ, ಟ್ರಂಪ್ ಅವರ ಟ್ವಿಟ್ಟರ್‌ ಖಾತೆಯನ್ನು ರದ್ದುಗೊಳಿಸಲಾಗಿತ್ತು.

ಇದಾದ ಬಳಿಕ ಟ್ರಂಪ್‌ ಅವರು "ಟ್ರೂಥ್"‌ ಎಂಬ ತಮ್ಮದೇ ಸ್ವಂತ ಸಾಮಾಜಿಕ ಜಾಲತಾಣವನ್ನು ರಚಿಸಿಕೊಂಡಿದ್ದರು. ಟ್ರಂಪ್‌ ಬೆಂಬಲಿಗರು ಟ್ರೂಥ್‌ ಖಾತೆಯಲ್ಲಿ ಸಕ್ರೀಯರಾಗಿದ್ದರು.

ತಮ್ಮ ಟಿಟ್ಟರ್‌ ಖಾತೆಯನ್ನು ರದ್ದುಗೊಳಿಸಿದ ಸಂದರ್ಭದಲ್ಲಿ, ಡೊನಾಲ್ಡ್‌ ಟ್ರಂಪ್‌ ಒಟ್ಟು 88 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದರು.

ಇನ್ನು ಟ್ರಂಪ್‌ ಅವರು ಈ ಜನಮತ ಗಣನೆಯನ್ನು ಸ್ವಾಗತಿಸಿದ್ದಾರಾದರೂ, ಟ್ವಿಟ್ಟರ್‌ಗೆ ಮರಳುವ ಇಂಗಿತವನ್ನು ವ್ಯಕ್ತಪಡಿಸಿಲ್ಲ. ಲಾಸ್‌ ವೆಗಾಸ್‌ನಲ್ಲಿ ನೆದ ರಿಪಬ್ಲಿಕನ್‌ ಪಕ್ಷದ ಯಹೂದಿ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್‌, ನಾನು ಮಸ್ಕ್‌ ಅವರು ನಡೆದ ಸಮೀಕ್ಷೆಯನ್ನು ಸ್ವಾಗತಿಸುತ್ತೇನೆ. ನಾನೂ ಕೂಡ ಮಸ್ಕ್‌ ಅವರ ಅಭಿಮಾನಿಯಾಗಿದ್ದೇನೆ. ಆದರೆ ಟ್ವಿಟ್ಟರ್‌ಗೆ ಮರಳುವ ಯಾವುದೇ ಇರಾದೆ ನನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಲಾನ್‌ ಮಸ್ಕ್‌ ಈ ಹಿಂದೆಯೂ ಹಲವು ಸಮೀಕ್ಷೆಗಳನ್ನು ನಡೆಸಿದ್ದರು. ಕಳೆದ ವರ್ಷ ತಮ್ಮ ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾದ ಷೇರುಗಳನ್ನು ಮಾರಾಟ ಮಾಡಬೇಕೆ ಎಂಬ ಕುರಿತು ಮಸ್ಕ್‌ ಸಮೀಕ್ಷೆ ನಸೆಸಿದ್ದರು. ಸಮೀಕ್ಷೆಯ ಬಳಿಕ ನಂತರ ಮಸ್ಕ್‌ 1 ಬಿಲಿಯನ್‌ ಅಮೆರಿಕನ್‌ ಡಾಲರ್‌ಗಿಂತಲೂ ಹೆಚ್ಚಿನ ಷೇರುಗಳನ್ನು ಮಾರಾಟ ಮಾಡಿದ್ದರು.

ಒಟ್ಟಿನಲ್ಲಿ ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟ್ಟರ್‌ ಖಾತೆಯನ್ನು ಮರು ಸ್ಥಾಪಿಸಿರುವುದು ಜಾಗತಿಕವಾಗಿ ಗಮನ ಸೆಳೆದಿದ್ದು, ಟ್ರಂಪ್‌ ಸದ್ಯಕ್ಕೆ ಟ್ವಿಟ್ಟರ್‌ಗೆ ಮರಳುವುದಿಲ್ಲ ಎಂದು ಹೇಳಿರುವುದು ಕೂಡ ಕುತೂಹಲ ಕೆರಳಿಸಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.