ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ, ಸಪ್ತರಾತ್ರೋತ್ಸವವೂ ಶುರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ, ಸಪ್ತರಾತ್ರೋತ್ಸವವೂ ಶುರು

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ, ಸಪ್ತರಾತ್ರೋತ್ಸವವೂ ಶುರು

ಮಂತ್ರಾಲಯದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 352ನೇ ಆರಾಧಾನ ಮಹೋತ್ಸವಕ್ಕೆ ಮಂಗಳವಾರ (ಆ.29) ಚಾಲನೆ ಸಿಕ್ಕಿದೆ. ಸಪ್ತರಾತ್ರೋತ್ಸವ ಕೂಡ ಶುರುವಾಗಿದ್ದು, ರಾಯರ ಮಠದಲ್ಲಿ ಸಂಭ್ರಮಾಚರಣೆ ಕಂಡುಬಂದಿದೆ.

ಮಂತ್ರಾಲಯದ ಶ್ರೀ ರಾಘವೇಂದ್ರ ತೀರ್ಥ ಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಇಂದು (ಆ.29) ಶುರುವಾಗಿದೆ. ಶ್ರೀ ಸುಬುಧೇಂದ್ರ ತೀರ್ಥಶ್ರೀಗಳು ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಮಂತ್ರಾಲಯದ ಶ್ರೀ ರಾಘವೇಂದ್ರ ತೀರ್ಥ ಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಇಂದು (ಆ.29) ಶುರುವಾಗಿದೆ. ಶ್ರೀ ಸುಬುಧೇಂದ್ರ ತೀರ್ಥಶ್ರೀಗಳು ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥಶ್ರೀಗಳು ಧ್ವಜಾರೋಹಣ ನೆರವೇರಿಸುವ ಮೂಲಕ ಬುಧವಾರ ಸಂಜೆ ಚಾಲನೆ ನೀಡಿದರು.

ಸಪ್ತರಾತ್ರೋತ್ಸವ ಮತ್ತು ರಾಯರ ಆರಾಧನಾ ಮಹೋತ್ಸವದಅಂಗವಾಗಿ ರಾಯರ ಮೂಲ ಬೃಂದಾವನಕ್ಕೆವಿಶೇಷ ಪೂಜೆ ನೆರವೇರಿಸಿ ಶ್ರೀಮಠದ ಆವರಣದಲ್ಲಿ ಬುಧವಾರ ಸಂಜೆ ಗೋ, ಅಶ್ವ, ಧಾನ್ಯ ಪೂಜೆಗಳನ್ನೂ ಶ್ರೀಗಳು ನೆರವೇರಿಸಿದರು. ಬೆಳಿಗ್ಗೆಯಿಂದಲೇ ಶ್ರೀಮಠದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನದ ಮೂಲಕ ಪೂಜಾ ಕೈಂಕರ್ಯಗಳು ಆರಂಭಗೊಂಡು ರಾಯರ ಬೃಂದಾವನಕ್ಕೆೆ ವಿಶೇಷ ಪೂಜೆ ಮಹಾಮಂಗಳಾರತಿ ನೆರವೇರಿದವು.

ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆಯ ಸಪ್ತ ರಾತ್ರೋತ್ಸವ ಕಾರ್ಯಕ್ರಮಕ್ಕೆಅನೇಕ ಗಣ್ಯರು, ಅತಿಥಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಆಗಮಿಸಲಿದ್ದು, ಯಾವುದೇ ಸಮಸ್ಯೆಯಾಗದಂತೆ ದರ್ಶನ, ವಸತಿ, ತೀರ್ಥಪ್ರಸಾದ ಹಾಗೂ ಚಿಕಿತ್ಸಾ ವ್ಯವಸ್ಥೆಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಇದನ್ನೂ ಓದಿ| ರಾಯರ ಆರಾಧನಾ ಸಪ್ತಾಹ ಮಹೋತ್ಸವದ ಮೊದಲ ದಿನ ಏನೇನು ನಡೆಯಿತು, ಇಲ್ಲಿದೆ ಸಚಿತ್ರ ವರದಿ

ಜಗತ್ತಿನಾದ್ಯಂತ ಇರುವ ಜಾತ್ಯತೀತವಾದ ರಾಯರ ಭಕ್ತರು ಹಬ್ಬದ ಸಂಭ್ರಮವನ್ನು ಏಳು ದಿನಗಳ ಕಾಲ ಆಚರಿಸಲಿದ್ದಾರೆ. ತುಂಗಭದ್ರಾ ನದಿಯಲ್ಲಿ ಸ್ವಲ್ಪ ನೀರನ್ನು ಬಿಟ್ಟಿದ್ದಾರೆಂಬ ಮಾಹಿತಿಯಿದ್ದು, ಆಂಧ್ರ ಹಾಗೂ ಕರ್ನಾಟಕದ ಉಭಯಸರಕಾರಗಳ ಜೊತೆ ನೀರಿನ ವಿಷಯವಾಗಿ ಮಾತನಾಡುತ್ತಿದ್ದೇವೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ. ಮೂಲ ರಾಮದೇವರ ಹೆಸರಿನಲ್ಲಿ 100 ರೂಮಿನ ವಸತಿ ಗೃಹ, ನರಹರಿತೀರ್ಥರ ವಸತಿ ಗೃಹ, ಎರಡು ಪಾರ್ಕಿಂಗ್ ವ್ಯವಸ್ಥೆ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಆರಾಧನೆ ಹಿನ್ನೆಲೆಯಲ್ಲಿ ಸಮರ್ಪಣೆ ಮಾಡಲಾಗಿದೆ ಎಂದು ಶ್ರೀಗಳು ಹೇಳಿದರು.

ಇದೇ ವೇಳೆ ಮಠದ ಆವರಣದಲ್ಲಿ ಇರುವ ವಿವಿಧ ಸೇವಾಕೇಂದ್ರಗಳ ಕಚೇರಿಗಳಲ್ಲೂ ಪೂಜೆಯನ್ನು ನೆರವೇರಿಸಲಾಯಿತು. ಮಠದ ಸಿಬ್ಬಂದಿ ಹಾಗೂಶ್ರೀ ಮಠದ ವಿದ್ಯಾರ್ಥಿಗಳಿಗೆ ವಸ್ತ್ರಗಳನ್ನು ವಿತರಿಸಲಾಯಿತು. ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ವಿಶೇಷ ಹೂವಿನ ಅಲಂಕಾರ, ವಿದ್ಯುದ್ದೀಪಗಳ ಅಲಂಕಾರ ಮಾಡಲಾಗಿದ್ದು ಆಕರ್ಷಣೀಯವಾಗಿತ್ತು.

ಆರಾಧನಾ ಮಹೋತ್ಸವದ ಅಂಗವಾಗಿ ಆ. 29ರಿಂದ ಸೆ. 4ರವರೆಗೆ ಒಟ್ಟು ಏಳು ದಿನಗಳ ಕಾಲ ಸಪ್ತರಾತ್ರೋತ್ಸವ‌ ನಡೆಯಲಿದ್ದು, ನಿತ್ಯ ರಾಯರ ಮೂಲ ಬೃಂದಾವನಕ್ಕೆವಿಶೇಷ ಪೂಜೆ, ಅಲಂಕಾರ, ಉಪನ್ಯಾಸ , ಮೂಲ ರಾಮದೇವರ ಪೂಜೆ, ರಾತ್ರಿ ಪ್ರಾಕಾರದಲ್ಲಿ ಶ್ರೀ ಪ್ರಹ್ಲಾದರಾಜರಿಗೆ ಪ್ರಭಾ ಉತ್ಸವ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.

ಆ. 31ರಂದು (ಗುರುವಾರ) ಪೂರ್ವಾರಾಧನೆ, ಸೆ. 1ರಂದು (ಶುಕ್ರವಾರ) ಮಧ್ಯಾರಾಧನೆ, 2ರಂದು (ಶನಿವಾರ) ಉತ್ತರ ಆರಾಧನೆ ಹಿನ್ನೆಲೆ ಮಠದ ರಥ ಬೀದಿಯಲ್ಲಿ ಮಹಾರಥೋತ್ಸವ ಜರುಗಲಿದೆ.

ವರದಿ - ಅಕ್ಷರ ಕಿರಣ್

--------------------

(India News, Andhra Pradesh News, Religious and festival News from Hindustan Times Kannada. ಭಾರತದ ಸುದ್ದಿ, ಧಾರ್ಮಿಕ ಸುದ್ದಿ, ಮಂತ್ರಾಲಯದ ಸುದ್ದಿಗಳ ಮತ್ತಷ್ಟು ಮಾಹಿತಿಗೆ kannada.hindustantimes.com ಜಾಲತಾಣ ನೋಡಿ)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.