IFS Officer Suspend: ಅಕ್ಬರ್, ಸೀತಾ ಸಿಂಹ ಜೋಡಿ ಹೆಸರಿನ ವಿವಾದ, ಹಿರಿಯ ಐಎಫ್‌ಎಸ್ ಅಧಿಕಾರಿ ಸಸ್ಪೆಂಡ್
Wildlife news: ಪಶ್ಚಿಮ ಬಂಗಾಲದ ಸಿಲಿಗುರಿ ಅರಣ್ಯ ಸಫಾರಿಯಲ್ಲಿ ಸಿಂಹ ಜೋಡಿಗೆ ವಿವಾದಾತ್ಮಕ ಹೆಸರು ನೀಡಿದ್ದ ಕಾರಣಕ್ಕೆ ತ್ರಿಪುರದ ಹಿರಿಯ ಐಎಫ್‌ಎಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಅಗರ್ತಲಾ: ತೀವ್ರ ವಿವಾದ ಸೃಷ್ಟಿಸಿದ್ದ ಅಕ್ಬರ್ ಹಾಗೂ ಸೀತಾ ಸಿಂಹ ಜೋಡಿಯ ಹೆಸರಿನ ಪ್ರಕರಣದಲ್ಲಿ ತ್ರಿಪುರಾದ ಹಿರಿಯ ಐಎಫ್‌ಎಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಸಿಂಹಗಳಿಗೆ ವಿವಾದಾತ್ಮಕ ಹೆಸರನ್ನಿಟ್ಟು. ಅದನ್ನು ಬದಲಿಸುವ ವಿಚಾರದಲ್ಲೂ ಸರಿಯಾದ ನಿರ್ಣಯವನ್ನು ಕೈಗೊಳ್ಳದೇ ಇರುವ ಕಾರಣದಿಂದ ತ್ರಿಪುರಾ ಕೇಡರ್‌ನ ಐಎಫ್‌ಎಸ್ ಅಧಿಕಾರಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ( Apccf) ಪ್ರವೀಣ್ ಅಗರವಾಲ್ ಅವರನ್ನು ಅಮಾನತುಗೊಳಿಸಲಾಗಿದೆ.
ಸದ್ಯ ಪಶ್ಚಿಮ ಬಂಗಾಲದ ಸಿಲಿಗುರಿ ಸಫಾರಿ ಕೇಂದ್ರಕ್ಕೆ ತ್ರಿಪುರದ ಸೆಫಾಲಿಜಾಲ ಮೃಗಾಲಯದಿಂದ ಬಂದಿರುವ ಸಿಂಹ ಜೋಡಿಯ ಹೆಸರಿನ ವಿಚಾರದಲ್ಲಿ ವಿವಾದ ಏರ್ಪಟ್ಟಿತ್ತು. ಅಕ್ಬರ್ ಹಾಗೂ ಸೀತಾ ಹೆಸರಿನ ಸಿಂಹಗಳನ್ನು ಒಂದೇ ಕಡೆ ಬಿಡಲಾಗಿತ್ತು. ಇದನ್ನು ವಿಶ್ವ ಹಿಂದೂ ಪರಿಷತ್ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಅರಣ್ಯ ಇಲಾಖೆಯವರು ಹೆಸರು ಬದಲಿಸುವ ಇಲ್ಲವೇ ಸಿಂಹಗಳನ್ನು ಬೇರೆಡೆ ಇಟ್ಟಿರಲಿಲ್ಲ. ಇದನ್ನು ಪ್ರಶ್ನಿಸಿ ವಿಎಚ್‌ಪಿ ಕೋಲ್ಕತ್ತಾ ನ್ಯಾಯಪೀಠದ ಎದುರು ಪ್ರಕರಣ ದಾಖಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ಸುಗತಾ ಭಟ್ಟಾಚಾರ್ಯ ಅವರು ಪ್ರಾಣಿಗಳಿಗೆ ಹೆಸರು ಇಡಲು ನೋಬೆಲ್, ಇಲ್ಲವೇ ಜ್ಞಾನಪೀಠ ಪ್ರಶಸ್ತಿ ಪಡೆದ ಹಲವು ಸಾಧಕರು ಇದ್ದಾರೆ. ಅದನ್ನು ಬಿಟ್ಟು ಧರ್ಮದ ಹೆಸರಿನಲ್ಲಿ ಕೆರಳಿಸುವ ಹೆಸರುಗಳನ್ನು ಸಿಂಹಗಳಿಗೆ ಇಟ್ಟಿದ್ದು ಸರಿಯಲ್ಲ ಎಂದು ಹೇಳಿತ್ತು. ಆನಂತರ ಹೆಸರು ಬದಲಿಸಲು ಆದೇಶಿಸಿತ್ತು.
ಘಟನೆ ನಂತರ ತ್ರಿಪುರಾ ಸರ್ಕಾರ ಸಿಂಹಗಳಿಗೆ ಹೆಸರು ಇಟ್ಟವರು ಯಾರು ಎನ್ನುವ ವಿವರವಾದ ವರದಿ ನೀಡುವಂತೆ ಸೂಚಿಸಿತ್ತು. ಆಗ ತ್ರಿಪುರಾ ಮುಖ್ಯ ವನ್ಯಜೀವಿ ಪರಿಪಾಲಕರಾಗಿದ್ದ ಪ್ರವೀಣ್ ಅಗರವಾಲ್ ಅವರ ಹೆಸರು ಇದ್ದುದು ಕಂಡು ಬಂದಿತ್ತು. ಅವರ ವಿವರಣೆ ಕೇಳಿದರೆ ನಿರಾಕರಿಸಿದ್ದರು. ಆದರೆ ದಾಖಲೆಗಳನ್ನು ಪರಿಶೀಲಿಸಿದಾಗ ಆನಂತರ ಅಲ್ಲಿಂದ ಪಶ್ಚಿಮ ಬಂಗಾಲಕ್ಕೆ ಕಳುಹಿಸುವಾಗ ಹೆಸರನ್ನಿಟ್ಟಿದ್ದು ಬಯಲಾಗಿತ್ತು. ಈ ಹೆಸರನ್ನು ಪ್ರವೀಣ್ ಇಟ್ಟಿದ್ದು ಖಚಿತವಾಗಿದ್ದರಿಂದ ಅವರನ್ನು ಅಮಾನತುಗೊಳಿಸಲಾಗಿದೆ.
ಪ್ರವೀಣ್ ಅಗರವಾಲ್ ಅವರೇ ಸಿಂಹದ ಜೋಡಿಗಳನ್ನು ಸ್ಥಳಾಂತರಿಸುವಾಗ ಮುಖ್ಯ ವನ್ಯಜೀವಿ ಪರಿಪಾಲಕರಾಗಿದ್ದರು. ಆಗಲೇ ಹೆಸರು ಇಟ್ಟಿರುವುದು ಕಂಡು ಬಂದಿರುವುದರಿಂದ 1994 ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ಪ್ರವೀಣ್ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.