ಕನ್ನಡ ಸುದ್ದಿ  /  Nation And-world  /  India News Arvind Kejriwal Arrested What We Know About Liquor Case And Charges Against Delhi Cm 6 Points Explained Uks

ಅರವಿಂದ್ ಕೇಜ್ರಿವಾಲ್ ಬಂಧನ; ಏನಿದು ದೆಹಲಿ ಅಬಕಾರಿ ಹಗರಣ, ಕೇಸ್‌ ಬಗ್ಗೆ ತಿಳಿದುಕೊಳ್ಳಬೇಕಾದ 6 ಅಂಶಗಳು

ದೆಹಲಿ ಅಬಕಾರಿ ನೀತಿ 2021-22 ಅಕ್ರಮ (ದೆಹಲಿ ಅಬಕಾರಿ ಹಗರಣ)ಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವಾಗಿದೆ. ಈ ಕೇಸ್‌ನಲ್ಲಿ ಬಂಧಿತರಾದ ನಾಲ್ಕನೇ ಅತಿಗಣ್ಯ ವ್ಯಕ್ತಿ ಕೇಜ್ರಿವಾಲ್. ಏನಿದು ದೆಹಲಿ ಅಬಕಾರಿ ಹಗರಣ, ಕೇಸ್‌ ಬಗ್ಗೆ ತಿಳಿದುಕೊಳ್ಳಬೇಕಾದ 6 ಅಂಶಗಳ ವಿವರ ಇಲ್ಲಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ (ಎಡ ಚಿತ್ರ); ದೆಹಲಿ ಅಬಕಾರಿ ಹಗರಣ ಸಂಬಂಧ ದೆಹಲಿ ಮುಖ್ಯಮಂತ್ರಿ ನಿವಾಸದ ಎದುರು ಪೊಲೀಸ್ ಭದ್ರತೆ (ಬಲ ಚಿತ್ರ)
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ (ಎಡ ಚಿತ್ರ); ದೆಹಲಿ ಅಬಕಾರಿ ಹಗರಣ ಸಂಬಂಧ ದೆಹಲಿ ಮುಖ್ಯಮಂತ್ರಿ ನಿವಾಸದ ಎದುರು ಪೊಲೀಸ್ ಭದ್ರತೆ (ಬಲ ಚಿತ್ರ)

ನವದೆಹಲಿ: ದೆಹಲಿ ಅಬಕಾರಿ ನೀತಿ ಅಕ್ರಮ ತನಿಖೆಗೆ ಸಂಬಂಧಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ (ಮಾರ್ಚ್‌ 21) ಸಂಜೆ ಬಂಧಿಸಿದೆ. ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಪಾವತಿಸಿದ 100 ಕೋಟಿ ರೂಪಾಯಿ ಲಂಚಕ್ಕೆ ಬದಲಾಗಿ ಈಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿ 2021-22 ರ ಮೂಲಕ ದಕ್ಷಿಣದ ಕೆಲವು ಉದ್ಯಮಿಗಳು ಮತ್ತು ರಾಜಕಾರಣಿಗಳ ಗುಂಪು ಲಾಭ ಪಡೆದಿದೆ ಎಂಬುದನ್ನು ಜಾರಿ ನಿರ್ದೇಶನಾಲಯ ನಿರೂಪಿಸಿದೆ. ಹೀಗಾಗಿ ಕೇಜ್ರಿವಾಲ್ ಅವರ ಬಂಧನವಾಗಿದೆ.

ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಂಸದ ಸಂಜಯ್ ಸಿಂಗ್ ಮತ್ತು ಬಿಆರ್‌ಎಸ್‌ ನಾಯಕಿ ಕೆ ಕವಿತಾ ನಂತರ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಾಲ್ಕನೇ ಹೈಪ್ರೊಫೈಲ್ ರಾಜಕಾರಣಿ ಅರವಿಂದ್ ಕೇಜ್ರಿವಾಲ್‌.

1) ಕೇಜ್ರಿವಾಲ್‌ಗೆ 9 ಸಮನ್ಸ್‌ ಯಾವಾಗ

ಅರವಿಂದ್ ಕೇಜ್ರಿವಾಲ್ ಅವರನ್ನು ಗುರುವಾರ (ಮಾರ್ಚ್ 21) ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಬಂಧಿಸುವ ಮೊದಲು ಒಂಬತ್ತು ಸಲ ಸಮನ್ಸ್ ಜಾರಿಗೊಳಿಸಿತ್ತು.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಅವರಿಗೆ ಜಾರಿ ನಿರ್ದೇಶನಾಲಯವು 2023ರ ನವೆಂಬರ್ 2, ಡಿಸೆಂಬರ್ 22, 2024ರ ಜನವರಿ 3, ಜನವರಿ 18, ಫೆಬ್ರವರಿ 2, ಫೆಬ್ರವರಿ 19, ಫೆಬ್ರವರಿ 27, ಮಾರ್ಚ್ 4 ಮತ್ತು ಮಾರ್ಚ್ 21 ರಂದು ಒಂಬತ್ತು ಸಮನ್ಸ್‌ಗಳನ್ನು ನೀಡಿತ್ತು. ಆದರೆ, ಅರವಿಂದ್ ಕೇಜ್ರಿವಾಲ್ ಯಾವ ಸಮನ್ಸ್‌ ಅನ್ನೂ ಸ್ವೀಕರಿಸಿಲ್ಲ. ನ್ಯಾಯಾಲಯದಿಂದ ತಡೆ ಪಡೆಯಲು ಪ್ರಯತ್ನಿಸಿದರು. ಅದು ವಿಫಲವಾಗಿತ್ತು.

2) ಏನಿದು ದೆಹಲಿ ಅಬಕಾರಿ ನೀತಿ ಹಗರಣ

ದೆಹಲಿ ಅಬಕಾರಿ ನೀತಿ 2021-22 ಜಾರಿಗೊಳಿಸುವಲ್ಲಿ ರಾಜಕೀಯ ನಾಯಕರಿಂದ ವ್ಯವಸ್ಥಿತ ಪಿತೂರಿ ನಡೆದಿದೆ. ಇದರಲ್ಲಿ ಅರವಿಂದ್ ಕೇಜ್ರಿವಾಲ್‌, ಮನಿಷ್ ಸಿಸೋಡಿಯಾ, ಕಳೆದ ವಾರ ಬಂಧನಕ್ಕೆ ಒಳಗಾದ ಕೆ.ಕವಿತಾ ಸೇರಿ ಅನೇಕರು ಇದ್ದಾರೆ ಎಂದು ಜಾರಿ ನಿರ್ದೇಶನಾಲಯ ಪ್ರತಿಪಾದಿಸಿದೆ.

ಇದಲ್ಲದೆ, ಹೊಸ ದೆಹಲಿ ಅಬಕಾರಿ ನೀತಿ 2021-22 ಜಾರಿಗೊಳಿಸಿದಾಗ ಅದರ ಮೂಲಕ ದೆಹಲಿಯಲ್ಲಿ 32 ವಲಯಗಳ ಪೈಕಿ ಒಂಬತ್ತು ದಕ್ಷಿಣ ಭಾರತದ ಗುಂಪಿನ ಕೈಸೇರಿದೆ. ಈ ಗುಂಪಿನಲ್ಲಿ ಉದ್ಯಮಿ ಶರತ್ ರೆಡ್ಡಿ, ಮುಗುಂಟ ಶ್ರೀನಿವಾಸುಲು ರೆಡ್ಡಿ, ಕೆ. ಕವಿತಾ ಇದ್ದಾರೆ. ಈ ನೀತಿಯ ಮೂಲಕ ಸಗಟು ಮಾರಾಟಗಾರರಿಗೆ ಅತಿಹೆಚ್ಚು ಎನ್ನುವಂತಹ ಶೇಕಡ 12 ಲಾಭಾಂಶದ ಅಂಚನ್ನು ಒದಗಿಸಲಾಗಿದೆ. ಇದು ಚಿಲ್ಲರೆ ವ್ಯಾಪಾರಿಗಳಿಗೆ ನೀಡುವ ಲಾಭಾಂಶದ ಅಂಚಿಗಿಂತ ಶೇಕಡ 185 ಹೆಚ್ಚು. ಸಗಟು ಮಾರಾಟಗಾರರು ಪಡೆದ ಲಾಭಾಂಶದ ಹಣವನ್ನು ಕಿಕ್‌ಬ್ಯಾಕ್ ರೂಪದಲ್ಲಿ ಎಎಪಿ ನಾಯಕರು ವಾಪಸ್ ಪಡೆದುಕೊಂಡಿದ್ದಾರೆ ಎಂಬುದು ಜಾರಿ ನಿರ್ದೇಶನಾಲಯದ ಆರೋಪ.

"ಕವಿತಾ ಅವರು ಮೊದಲು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಗಿನ ಉಪಮುಖ್ಯಮಂತ್ರಿ, ಅಬಕಾರಿ ಸಚಿವ ಮನೀಶ್ ಸಿಸೋಡಿಯಾ ಅವರೊಂದಿಗೆ ಒಪ್ಪಂದ ಮಾಡಿಕೊಂಡರು, ಇದರಲ್ಲಿ ಅವರು ದಕ್ಷಿಣ ಗುಂಪಿನ ಇತರ ಸದಸ್ಯರೊಂದಿಗೆ ಮಧ್ಯವರ್ತಿಗಳ ಮೂಲಕ ಕಿಕ್‌ಬ್ಯಾಕ್‌ ನೀಡಿದರು. ಎಎಪಿ ನಾಯಕರಿಗೆ ನೀಡಿದ ಕಿಕ್‌ಬ್ಯಾಕ್‌ಗೆ ಪ್ರತಿಯಾಗಿ, ಕವಿತಾ ಅವರಿಗೆ ನೀತಿ ನಿರೂಪಣೆಗೆ ಪ್ರವೇಶವಿತ್ತು. ಅವರಿಗೆ ಅನುಕೂಲಕರ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ನಿಬಂಧನೆಗಳನ್ನು ಸೇರಿಸಲಾಗಿತ್ತು" ಎಂದು ಕವಿತಾ ಅವರನ್ನು ಬಂಧಿಸಿದ ನಂತರ ಇಡಿ ಕಳೆದ ವಾರ ತನ್ನ ರಿಮಾಂಡ್ ಟಿಪ್ಪಣಿಯಲ್ಲಿ ತಿಳಿಸಿದೆ.

3) ದೆಹಲಿ ಅಬಕಾರಿ ನೀತಿ ಹಗರಣದ ಪ್ರಮುಖ ವ್ಯಕ್ತಿ

ದೆಹಲಿ ಅಬಕಾರಿ ನೀತಿ ಹಗರಣವನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ವಿಜಯ್ ನಾಯರ್ (ಎಎಪಿಯ ಆಗಿನ ಸಂವಹನ ಉಸ್ತುವಾರಿ). ಅವರಿಗೆ 100 ಕೋಟಿ ರೂಪಾಯಿ ಕಿಕ್‌ಬ್ಯಾಕ್‌ ಅನ್ನು ಮುಂಚಿತವಾಗಿ ಪಾವತಿಯಾಗಿದೆ ಎಂದು ಇಡಿ ಆರೋಪಿಸಿದೆ.

"ವಿಜಯ್ ನಾಯರ್ ಎಎಪಿಯ ಸಾಮಾನ್ಯ ಕಾರ್ಯಕರ್ತನಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿಕಟ ಸಹವರ್ತಿ" ಎಂದು ಸಿಬಿಐ ಕಳೆದ ವರ್ಷ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಯಲ್ಲಿ ಹೇಳಿತ್ತು. ಇದಕ್ಕಾಗಿ ಉದ್ಯಮಿ ಸಮೀರ್ ಮಹೇಂದ್ರು ಅವರ ಹೇಳಿಕೆಯನ್ನು ಉಲ್ಲೇಖಿಸಿದ ಜಾರಿ ನಿರ್ದೇಶನಾಲಯವು, ದೆಹಲಿ ಅಬಕಾರಿ ನೀತಿ 2021-22 ಕೇಜ್ರಿವಾಲ್ ಅವರ "ಕನಸಿನ ಕೂಸು" ಎಂದು ಪ್ರತಿಪಾದಿಸಿದೆ.

ಉದ್ಯಮಿ ಸಮೀರ್ ಮಹೇಂದ್ರು ಅವರು ದೆಹಲಿ ಸರ್ಕಾರದಲ್ಲಿ ನಾಯರ್ ಅವರ ಪ್ರಭಾವವನ್ನು ಪರಿಶೀಲಿಸಲು, ಕೇಜ್ರಿವಾಲ್ ಅವರನ್ನು ಭೇಟಿಯಾಗಬೇಕು ಎಂದು ಕೇಳಿಕೊಂಡಿದ್ದರು. ಕೂಡಲೇ ಸ್ಪಂದಿಸಿದ ನಾಯರ್, ಸಿಎಂ ಕೇಜ್ರಿವಾಲ್‌ಗೆ ಫೇಸ್ ಟೈಮ್ ಕರೆ ಮಾಡಿ ಮಾತುಕತೆಗೆ ವೇದಿಕೆ ಒದಗಿಸಿದ್ದರು. ಈ ವಿಡಿಯೋ ಕರೆಯಲ್ಲಿ ಕೇಜ್ರಿವಾಲ್ ಅವರು ವಿಜಯ್ ನಾಯರ್‌ ತನ್ನ ಹುಡುಗ ಮತ್ತು ಅವನನ್ನು ನಂಬಬೇಕು ಎಂದು ಹೇಳಿದ್ದಾಗಿ ಮಹೇಂದ್ರು ವಿಚಾರಣೆ ವೇಳೇ ಇಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇದನ್ನು ಇಡಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

4) ಮನೀಶ್ ಸಿಸೋಡಿಯಾ ಕಾರ್ಯದರ್ಶಿ ಬಹಿರಂಗಪಡಿಸಿದ ವಿವರ

ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಅಂದಿನ ಕಾರ್ಯದರ್ಶಿ ಸಿ ಅರವಿಂದ್ ಅವರು 2022ರ ಡಿಸೆಂಬರ್ 7 ರಂದು ದಾಖಲಿಸಿದ ಹೇಳಿಕೆಯನ್ನು ಉಲ್ಲೇಖಿಸಿ, 2021ರ ಮಾರ್ಚ್‌ನಲ್ಲಿ ಕೇಜ್ರಿವಾಲ್ ಅವರ ನಿವಾಸದಲ್ಲಿ ಅಬಕಾರಿ ನೀತಿಯಲ್ಲಿ ಸಗಟು ಖಾಸಗಿ ಸಂಸ್ಥೆಗಳಿಗೆ ಶೇ 12 ರಷ್ಟು ಲಾಭಾಂಶವನ್ನು ರೂಪಿಸುವ ನಿರ್ಧಾರದ ಬಗ್ಗೆ ತಮಗೆ ತಿಳಿಸಲಾಗಿದೆ ಎಂದು ಹೇಳಿದ್ದರು.

ಸಿಸೋಡಿಯಾ, ಸತ್ಯೇಂದರ್ ಜೈನ್ ಮತ್ತು ಕೈಲಾಶ್ ಗೆಹ್ಲೋಟ್ ಅವರನ್ನು ಒಳಗೊಂಡ ಸಚಿವರ ಗುಂಪು (ಜಿಒಎಂ) ನಡೆಸಿದ ಸಭೆಗಳಲ್ಲಿ 2021 ರ ಮಾರ್ಚ್ ಮಧ್ಯದ ಮೊದಲು ಸಗಟು ಮದ್ಯ ವ್ಯವಹಾರವನ್ನು ಖಾಸಗಿಯವರಿಗೆ ಹಸ್ತಾಂತರಿಸುವ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸಿ ಅರವಿಂದ್ ತಿಳಿಸಿದ್ದಾಗಿ ಇಡಿ ಹೇಳಿದೆ.

ಆದಾಗ್ಯೂ, ಮಾರ್ಚ್ 2021 ರ ಮಧ್ಯ ಭಾಗದಲ್ಲಿ, ಸಿ ಅರವಿಂದ್ ಅವರನ್ನು ಸಿಸೋಡಿಯಾ ಅವರು ಕೇಜ್ರಿವಾಲ್ ಅವರ ನಿವಾಸಕ್ಕೆ ಕರೆದರು (ಅಲ್ಲಿ ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಕೂಡ ಹಾಜರಿದ್ದರು) ಮತ್ತು ಸಿಸೋಡಿಯಾ ಅವರು ಸಿ ಅರವಿಂದ್ ಅವರಿಗೆ ದಾಖಲೆಯನ್ನು ಹಸ್ತಾಂತರಿಸಿದರು. ಇದು ಸಗಟು (ವ್ಯವಹಾರ) ಖಾಸಗಿ ಸಂಸ್ಥೆಗಳಿಗೆ ಹೋಗಬೇಕು ಎಂದು ಪ್ರಸ್ತಾಪಿಸುವ ಕರಡು ಜಿಒಎಂ ವರದಿಯಾಗಿದೆ. ಈ ದಾಖಲೆಯ ಆಧಾರದ ಮೇಲೆ ಕರಡು ಜಿಒಎಂ ವರದಿಯನ್ನು ಸಿದ್ಧಪಡಿಸುವಂತೆ ಸಿ ಅರವಿಂದ್‌ಗೆ ಸೂಚಿಸಿದರು. ಯಾವುದೇ ಜಿಒಎಂ ಸಭೆಗಳಲ್ಲಿ ಈ ಪ್ರಸ್ತಾಪವನ್ನು ಚರ್ಚಿಸದ ಕಾರಣ ಸಿ ಅರವಿಂದ್ ಅವರು ಈ ಪ್ರಸ್ತಾಪವನ್ನು ಮೊದಲ ಬಾರಿಗೆ ನೋಡಿದ್ದಾರೆ" ಎಂದು ಸಂಸ್ಥೆ ತನ್ನ ತನಿಖಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

5) ಗೋವಾ ವಿಧಾನಸಭಾ ಚುನಾವಣೆಗೆ 45 ಕೋಟಿ ಲಂಚ

ಎಎಪಿ ನಾಯಕ ಸಂಜಯ್ ಸಿಂಗ್ ವಿರುದ್ಧ 2023 ರ ಡಿಸೆಂಬರ್‌ನಲ್ಲಿ ಸಲ್ಲಿಸಿದ ಆರನೇ ಆರೋಪಪಟ್ಟಿಯಲ್ಲಿ ದೆಹಲಿ ಅಬಕಾರಿ ನೀತಿಯಲ್ಲಿ ಉತ್ಪತ್ತಿಯಾದ 45 ಕೋಟಿ ರೂಪಾಯಿ ಕಿಕ್‌ಬ್ಯಾಕ್ ಅನ್ನು 2022 ರಲ್ಲಿ ಗೋವಾ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಎಎಪಿ ಬಳಸಿದೆ ಎಂದು ಇಡಿ ಹೇಳಿದೆ.

ಗೋವಾದಲ್ಲಿ ತನ್ನ ಚುನಾವಣಾ ಪ್ರಚಾರದಲ್ಲಿ ಪಿಒಸಿಯ (ಅಪರಾಧದ ಆದಾಯ) ಭಾಗವನ್ನು ಸುಮಾರು 45 ಕೋಟಿ ರೂ ಬಳಸುವ ಮೂಲಕ ಎಎಪಿ ನೇರವಾಗಿ ಲಾಭ ಪಡೆದಿದೆ ಎಂದು ಅದು ಆರೋಪಿಸಿದೆ.

ಪಕ್ಷದ ಹೊರತಾಗಿ, "ಕೆಲವು ಎಎಪಿ ನಾಯಕರು ಅಪರಾಧದ ಆದಾಯದಿಂದ ವೈಯಕ್ತಿಕವಾಗಿ ಲಾಭ ಪಡೆದಿದ್ದಾರೆ" ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ. ಇದರಂತೆ, ಸಿಸೋಡಿಯಾ 2.2 ಕೋಟಿ ರೂ., ಸಂಜಯ್ ಸಿಂಗ್ 2 ಕೋಟಿ ರೂ., ನಾಯರ್ 1.5 ಕೋಟಿ ರೂ.ಲಂಚ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ದೃಢಪಡಿಸಿದೆ. ಆದಾಗ್ಯೂ, ಇಡಿ ಅಥವಾ ಕೇಂದ್ರ ತನಿಖಾ ದಳ (ಸಿಬಿಐ) ಇನ್ನೂ ಅಪರಾಧದ ಯಾವುದೇ ಆದಾಯವನ್ನು ಕೇಜ್ರಿವಾಲ್ ಪಡೆದಿರುವುದನ್ನು ಖಚಿತಪಡಿಸಿಲ್ಲ.

6) ದೆಹಲಿ ಅಬಕಾರಿ ನೀತಿ ಹಗರಣ; ತನಿಖೆಯ ಪ್ರಗತಿ ಪಥ

ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಎಎಪಿ ಸಂಸದ ಸಂಜಯ್ ಸಿಂಗ್ ಸೇರಿ 31 ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಅಬಕಾರಿ ನೀತಿ ತನಿಖೆಯಲ್ಲಿ ಹಣಕಾಸು ಅಪರಾಧಗಳ ತನಿಖಾ ಸಂಸ್ಥೆ ಇದುವರೆಗೆ ಆರು ಆರೋಪ ಪಟ್ಟಿಗಳನ್ನು ಕೋರ್ಟಿಗೆ ಸಲ್ಲಿಸಿದೆ. ಸಿಸೋಡಿಯಾ ಮತ್ತು ಸಿಂಗ್ ಇಬ್ಬರೂ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ 32ನೇ ಆರೋಪಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್.

ಇಲ್ಲಿಯವರೆಗೆ, ದೆಹಲಿ, ಹೈದರಾಬಾದ್, ಚೆನ್ನೈ, ಮುಂಬೈ ಮತ್ತು ಇತರ ಸ್ಥಳಗಳು ಸೇರಿದಂತೆ ದೇಶಾದ್ಯಂತ 245 ಸ್ಥಳಗಳಲ್ಲಿ ಇಡಿ ಶೋಧ ನಡೆಸಿದೆ. ಈ ಪ್ರಕರಣದಲ್ಲಿ ಪಿಎಂಎಲ್ಎ ಅಡಿಯಲ್ಲಿ 128.79 ಕೋಟಿ ರೂ.ಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಬಕಾರಿ ನೀತಿಯ ಅಕ್ರಮಗಳಲ್ಲಿ 2,873 ಕೋಟಿ ರೂಪಾಯಿ ನಷ್ಟ ಎಂದು ಏಜೆನ್ಸಿ ಅಂದಾಜಿಸಿದೆ.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

IPL_Entry_Point