Caste Census; ಮೂರು ಜಾತಿ ಇದ್ರೆ ಸಾಕು ನೋಡಿ; ಜಾತಿ ಗಣತಿ ಬಗ್ಗೆ ಕಂಗನಾ ರನೌತ್ ಸ್ಪಷ್ಟ ನುಡಿ, ಟಾಂಗ್ ಕೊಟ್ಟ ಕಾಂಗ್ರೆಸ್
Kangana Ranaut on caste census; ಜಾತಿ ಗಣತಿ ಬಗ್ಗೆ ಮಂಡಿ ಸಂಸದೆ ಕಂಗನಾ ರನೌತ್ ಅವರು ನೀಡಿದ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮೂರು ಜಾತಿ ಇದ್ರೆ ಸಾಕು ನೋಡಿ ಎಂದು ಜಾತಿ ಗಣತಿ ಬಗ್ಗೆ ಕಂಗನಾ ರನೌತ್ ಅವರ ಸ್ಪಷ್ಟ ನುಡಿಯ ಬಗ್ಗೆ ಕಾಂಗ್ರೆಸ್ ಟಾಂಗ್ ಕೊಟ್ಟಿದೆ.
ನವದೆಹಲಿ: ದೇಶದ ಉದ್ದಗಲಕ್ಕೂ ಪದೇಪದೆ ಜಾತಿಗಣತಿ ವಿಚಾರ ಚರ್ಚೆಗೆ ಒಳಗಾಗುತ್ತಿದ್ದು, ಅನೇಕ ನಾಯಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಈಗ ಗಮನಸೆಳೆದಿರುವುದು ಲೋಕಸಭಾ ಸದಸ್ಯೆ, ನಟಿ ಕಂಗನಾ ರನೌತ್ ಅವರ ಹೇಳಿಕೆ. ಜಾತಿ ಗಣತಿ ವಿರೋಧಿಸಿ ಅವರು ನೀಡಿದ ಹೇಳಿಕೆಗೆ ಕಾಂಗ್ರೆಸ್ ಪಕ್ಷ ಟಾಂಗ್ ಕೊಟ್ಟಿದ್ದು, ಹಿಮಾಚಲ ಪ್ರದೇಶದ ಮಂಡಿಯ ಲೋಕಸಭಾ ಸಂಸದರು ಮೇಲ್ಜಾತಿಯವರಾಗಿದ್ದಾರೆ. ಅವರಿಗೆ ಹಿಂದುಳಿದ ಸಮುದಾಯಗಳ ಜನರು ಎದುರಿಸುತ್ತಿರುವ ಪರಿಸ್ಥಿತಿಗಳ ಬಗ್ಗೆ ತಿಳಿವಳಿಕೆ ಇಲ್ಲ ಎಂದು ಟೀಕಿಸಿದೆ.
ಅಲ್ಲದೆ, ನಟಿಯ ಅಭಿಪ್ರಾಯಗಳನ್ನು ಬಿಜೆಪಿಯ ಅಧಿಕೃತ ನಿಲುವು ಎಂದು ಪರಿಗಣಿಸಬೇಕು. ಅದರಲ್ಲೂ ವಿಶೇಷವಾಗಿ ರೈತರ ಸಮಸ್ಯೆಯ ಕುರಿತು ಇತ್ತೀಚೆಗೆ ಪಕ್ಷದ ಪ್ರಧಾನ ಕಚೇರಿಯಿಂದ ವಾಗ್ದಂಡನೆಯಿಂದ ಪ್ರಭಾವಿತವಾಗಿಲ್ಲ ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಟ್ವೀಟ್‌ನಲ್ಲೇನಿದೆ
ಕಂಗನಾ ರನೌತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್, "ಇಂದು, ಬಿಜೆಪಿ ಸಂಸದೆ ಕಂಗನಾ ಮತ್ತೆ "ಯಾವುದೇ ಜಾತಿ ಗಣತಿ ಬೇಡ" ಎಂದು ಹೇಳಿದ್ದಾರೆ. “ಯಾಕೆ ಒಂದು ಇರಬೇಕು? ಜಾತಿಯನ್ನು ಏಕೆ ನಿರ್ಧರಿಸಬೇಕು? ನನ್ನ ಸುತ್ತ ಜಾತಿ ಎಂಬುದೇ ಇಲ್ಲ. ಮೇಡಂ, ನೀವು ಮೇಲ್ಜಾತಿ, ಶ್ರೀಮಂತ, ಸ್ಟಾರ್ ನಟಿ ಮತ್ತು ಸಂಸದೆ. ದಲಿತ, ಹಿಂದುಳಿದ, ಬುಡಕಟ್ಟು ಅಥವಾ ಬಡ ಸಾಮಾನ್ಯ ಜಾತಿಯ ವ್ಯಕ್ತಿಯ ಸ್ಥಿತಿಯನ್ನು ನೀವು ಹೇಗೆ ತಿಳಿಯುತ್ತೀರಿ? ಕಂಗನಾ ರನೌತ್ ಅವರ ಪೂರ್ಣ ಹೇಳಿಕೆ ಗಮನಿಸಿ. ಈಗ, ಮೋದಿ ಜೀ, ನಿಮ್ಮ ಮೌನವನ್ನು ಮುರಿಯಿರಿ. ಇಲ್ಲದಿದ್ದರೆ, ಕನಿಷ್ಠ ಪಕ್ಷ ನಿಮ್ಮ ಮಿತ್ರಪಕ್ಷಗಳಾದ ಜೆಡಿಯು ಮತ್ತು ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಅವರಿಗಾದರೂ ನಿಮ್ಮ ನಿಲುವನ್ನು ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಸಂದರ್ಶನದಲ್ಲಿ ಕಂಗನಾ ರನೌತ್ ಹೇಳಿದ್ದೇನು
ದ ಲಲನ್ ಟಾಪ್ ಜೊತೆಗಿನ ಸಂದರ್ಶನದಲ್ಲಿ ಕಂಗನಾ ರನೌತ್ ಅವರ ಬಳಿ ಜಾತಿ ಗಣತಿ ವಿಚಾರ ಪ್ರಶ್ನಿಸಲಾಗಿತ್ತು. ಅದಕ್ಕೆ ಅವರು, ಯೋಗಿ ಆದಿತ್ಯನಾಥ್ ಅವರಂತೆಯೇ ಇದೆ ನನ್ನ ನಿಲುವು ಕೂಡ. ಸಾಥ್ ರಹೇಂಗೆ ನೇಕ್ ರಹೇಂಗೆ, ಬತೇಂಗೆ ಕತೆಂಗೆ (ಒಟ್ಟಿಗೇ ಇರೋಣ, ಚೆನ್ನಾಗಿರೋಣ. ಒಡೆದು ದೂರಾದರೆ ನಾಶವಾಗುತ್ತೇವೆ)” ಎಂದು ಹೇಳಿಕೊಂಡಿದ್ದಾರೆ.
''ಜಾತಿ ಗಣತಿ ಬೇಡ. ನಮಗೆ ನಟರ ಜಾತಿಯೂ ಗೊತ್ತಿಲ್ಲ. ಯಾರಿಗೂ ಏನೂ ಗೊತ್ತಿಲ್ಲ. ನನ್ನ ಸುತ್ತಲಿನ ಜನರಿಗೆ ಜಾತಿಯ ಬಗ್ಗೆ ಕಾಳಜಿ ಇಲ್ಲ. ಈಗ ಅದನ್ನು ಏಕೆ ನಿರ್ಧರಿಸಬೇಕು? ನಾವು ಇದನ್ನು ಶುರು ಮಾಡಲಿಲ್ಲ, ಈಗ ಅದನ್ನು ಏಕೆ ಮಾಡಬೇಕು? ” ಎಂದು ಕಂಗನಾ ಪ್ರಶ್ನಿಸಿದ್ದಾರೆ.
ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ಮಹಿಳೆಯರು ಹಿಂದುಳಿದ ಸಮುದಾಯವಾಗಿದ್ದು, ಜಾತಿ ಆಧಾರದಲ್ಲಿ ಅಲ್ಲ ಅವರನ್ನು ಮೇಲೆತ್ತಬೇಕಿದೆ ಎಂದು ಕಂಗನಾ ಹೇಳಿದ್ದಾರೆ.
“ಬಸ್ ಬಸ್ 3 ಜಾತಿಯಾ ಹೈಂ, ಗರೀಬ್, ಕಿಸಾನ್ ಔರ್ ಮಹಿಲಾಯೇಂ. ಇಸ್ಕೆ ಇಲಾವಾ ಚೌತಿ ಕೋಯಿ ಜಾತ್ ಹೇ ನಹಿ ಹೋನಿ ಚಾಹಯೇ (ಬಡವರು, ರೈತರು ಮತ್ತು ಮಹಿಳೆಯರು ಎಂಬ ಮೂರು ಜಾತಿಗಳು ಮಾತ್ರ ಇವೆ. ನಾಲ್ಕನೇ ಜಾತಿ ಇರಬಾರದು)” ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ, ಹಿಮಾಚಲ ಪ್ರದೇಶ ವಿಧಾನಸಭೆಯು ಕಾಂಗ್ರೆಸ್ ಬೆಂಬಲಿತ ನಿರ್ಣಯವನ್ನು ಅಂಗೀಕರಿಸಿದ್ದು, ಭಾರತೀಯ ಜನತಾ ಪಕ್ಷದ ಮಂಡಿ ಸಂಸದೆ ಕಂಗನಾ ರಣಾವತ್ ಅವರು ರೈತರ ಪ್ರತಿಭಟನೆಗಳ ಕುರಿತು ಇತ್ತೀಚೆಗೆ ಮಾಡಿದ ಟೀಕೆಗಳನ್ನು ಖಂಡಿಸಿದರು.
ಹಿಂದಿ ದೈನಿಕ ದೈನಿಕ್ ಭಾಸ್ಕರ್‌ಗೆ ನೀಡಿದ ಸಂದರ್ಶನದಲ್ಲಿ ಕಂಗನಾ ರನೌತ್, ರೈತ ಪ್ರತಿಭಟನೆಯಿಂದ "ಬಾಂಗ್ಲಾದೇಶದಂತಹ ಪರಿಸ್ಥಿತಿ" ಭಾರತದಲ್ಲಿ ಸ್ಫೋಟಗೊಳ್ಳಬಹುದು. ಹಾಗಾಗಿ, ದೇಶಕ್ಕೆ ಪ್ರಬಲ ನಾಯಕತ್ವ ಬೇಕು. ಈಗ ರದ್ದಾಗಿರುವಂತಹ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಸಮಯದಲ್ಲಿ ಸಾವುಗಳಾಗಿವೆ, ಅತ್ಯಾಚಾರಗಳು ನಡೆದಿವೆ ಎಂದು ಅವರು ಆರೋಪಿಸಿದ್ದರು. ಇದಲ್ಲದೆ, ಚೀನಾ ಮತ್ತು ಅಮೆರಿಕ ಈ ಪ್ರಕರಣದಲ್ಲಿ ಪಿತೂರಿ ನಡೆಸಿವೆ ಎಂದೂ ಟೀಕಿಸಿದ್ದರು.
ವಿಭಾಗ