ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Unnao Accident: ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಡಬಲ್‌ ಡೆಕ್ಕರ್‌ ಬಸ್‌, 18 ಮಂದಿ ಸಾವು

Unnao Accident: ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಡಬಲ್‌ ಡೆಕ್ಕರ್‌ ಬಸ್‌, 18 ಮಂದಿ ಸಾವು

Road Accident ಉತ್ತರ ಪ್ರದೇಶದ ಲಕ್ನೋ- ಆಗ್ರಾ ಎಕ್ಸ್‌ಪ್ರೆಸ್‌ ವೇನಲ್ಲಿ(Lucknow-Agra Expressway) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 18 ಮಂದಿ ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದಲ್ಲಿ ಅಪಘಾತಕ್ಕೆ ನಜ್ಜುಗುಜ್ಜಾದ ಬಸ್‌
ಉತ್ತರ ಪ್ರದೇಶದಲ್ಲಿ ಅಪಘಾತಕ್ಕೆ ನಜ್ಜುಗುಜ್ಜಾದ ಬಸ್‌ (Haider naqvi)

ದೆಹಲಿ: ಪ್ರವಾಸಿಗರನ್ನು ಕರೆದುಕೊಂಡು ಬರುತ್ತಿದ್ದ ಡಬಲ್‌ ಡೆಕ್ಕರ್‌ ಬಸ್‌ ಒಂದು ಹಾಲಿನ ಟ್ಯಾಂಕರ್‌ಗೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್‌ನಲ್ಲಿದ್ದ 18 ಮಂದಿ ಪ್ರಯಾಣಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಲಕ್ನೋ ಆಗ್ರಾ ಎಕ್ಸ್‌ಪ್ರೆಸ್‌ ವೇನಲ್ಲಿ ಈ ದುರ್ಘಟನೆ ಸಂಭವಿಸಿದೆ. ಉತ್ತರ ಪ್ರದೇಶದ ಉನ್ನಾವೋ ಬಳಿ ಈ ಘಟನೆ ಸಂಭವಿಸಿದ್ದು, ಒಂದು ಮಗು, ಮೂವರು ಮಹಿಳೆಯರು ಜೀವ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರು ಹೊರಕ್ಕೆ ಬಿದ್ದಿದ್ದಾರೆ. ಅಲ್ಲಿನ ಸನ್ನಿವೇಶ ಕಂಡು ಸ್ಥಳೀಯರು ಭಯಗೊಂಡಿದ್ದು ಕಂಡು ಬಂದಿತು.

ಟ್ರೆಂಡಿಂಗ್​ ಸುದ್ದಿ

ಬಿಹಾರದ ಸೀತಾಮರಿ ಭಾಗದಲ್ಲಿ ಪ್ರವಾಸಕ್ಕೆಂದು ಹೋಗಿದ್ದ ಡಬಲ್‌ ಡೆಕ್ಕರ್‌ ಬಸ್‌ ಅಲ್ಲಿಂದ ರಾತ್ರಿಯೇ ಹೊರಟು ದೆಹಲಿ ಕಡೆಗೆ ಹೊರಟಿತ್ತು. ಬೆಳಿಗ್ಗೆ ಹೊತ್ತಿಗೆ ಬಸ್‌ ದೆಹಲಿ ತಲುಪಬೇಕಿತ್ತು. ಈ ವೇಳೆ ಬುಧವಾರ ನಸುಕಿನ ಜಾವದಲ್ಲಿ ಡಡಲ್‌ ಡೆಕ್ಕರ್‌ ಬಸ್‌ ಲಕ್ನೋ ಆಗ್ರಾ ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚರಿಸುತಿತ್ತು. ಉನ್ನಾವೋ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಬಸ್‌ ಡಿಕ್ಕಿ ಹೊಡೆದ ರಭಸಕ್ಕೆ ಹಲವು ಭಾಗಗಳು ನಜ್ಜು ಗುಜ್ಜಾಗಿವೆ. ನಿದ್ರೆಯಲ್ಲಿದ್ದ ಹಲವರು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ. ಕಬ್ಬಿಣ, ಗಾಜಿನ ವಸ್ತುಗಳ ತಿವಿತ ಹಾಗೂ ತೀವ್ರ ಗಾಯದಿಂದ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಹಿಳೆಯರೂ ಅಲ್ಲಿಯೇ ಜೀವ ಬಿಟ್ಟಿದ್ದಾರೆ. ಗಾಯಾಳುಗಳನ್ನು ಉನ್ನಾವೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್‌ ಸ್ಥಿತಿಗತಿ, ಅಲ್ಲಿ ಬಿದ್ದವರು, ಪ್ರಾಣ ಕಳೆದುಕೊಂಡವರು, ನರಳಾಡುತ್ತಿದ್ದವರ ಸನ್ನಿವೇಶ ಕಂಡು ಮರುಗಿದ ಸ್ಥಳೀಯರು ಪೊಲೀಸರು ಹಾಗೂ ರಕ್ಷಣಾ ತಂಡದ ಸಹಕಾರದಿಂದ ಹಲವರನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು.

ಬೆಳಿಗ್ಗೆ 5:15ರ ಸಮಯದಲ್ಲಿ ಬಿಹಾರದ ಮೋತಿಹಾರಿಯಿಂದ ಬರುತಿದ್ದ ಡಬಲ್‌ ಡೆಕ್ಕರ್‌ ಬಸ್‌ ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಈಗಾಗಲೇ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಮೃತರ ವಿವರಗಳನ್ನು ಸಂಗ್ರಹಿಸಲಾಗಿದ್ದು, ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ.ಮರಣೋತ್ತರ ಪರೀಕ್ಷೆ ಬಳಿಕ ದೇಹಗಳನ್ನು ಕುಟುಂಬವರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಉನ್ನಾವೋ ಜಿಲ್ಲಾಧಿಕಾರಿ ಗೌರಾಂಗ್‌ ರಾಥಿ ಮಾಹಿತಿ ನೀಡಿದ್ದಾರೆ.

ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಹಾಗೂ ಗಾಯಾಳುಗಳ ಕುಟುಂಬಕ್ಕೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವಂತೆ ನಿರ್ದೇಶಿಸಿದ್ದಾರೆ.