Gobi Manchurian: ಗೋವಾ ಮಾಪುಸಾದಲ್ಲಿ ಬೀದಿಬದಿ ಗೋಬಿ ಮಂಚೂರಿ ಸಿಗಲ್ಲ; ಇಂಡೋ ಚೀನೀಸ್ ಖಾದ್ಯ ನಿಷೇಧಕ್ಕಿದುವೇ ಕಾರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gobi Manchurian: ಗೋವಾ ಮಾಪುಸಾದಲ್ಲಿ ಬೀದಿಬದಿ ಗೋಬಿ ಮಂಚೂರಿ ಸಿಗಲ್ಲ; ಇಂಡೋ ಚೀನೀಸ್ ಖಾದ್ಯ ನಿಷೇಧಕ್ಕಿದುವೇ ಕಾರಣ

Gobi Manchurian: ಗೋವಾ ಮಾಪುಸಾದಲ್ಲಿ ಬೀದಿಬದಿ ಗೋಬಿ ಮಂಚೂರಿ ಸಿಗಲ್ಲ; ಇಂಡೋ ಚೀನೀಸ್ ಖಾದ್ಯ ನಿಷೇಧಕ್ಕಿದುವೇ ಕಾರಣ

ಗೋವಾ ಮಾಪುಸಾದಲ್ಲಿ ಬೀದಿಬದಿ ಗೋಬಿ ಮಂಚೂರಿ ಸಿಗಲ್ಲ. ಸಾರ್ವಜನಿಕ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮಾಪುಸಾ ಸ್ಥಳೀಯಾಡಳಿತ ಸಂಸ್ಥೆ ಗಂಭೀರ ಚರ್ಚೆ ನಡೆಸಿ, ಬೀದಿಬದಿ ಸ್ಟಾಲ್‌ಗಳು, ಜಾತ್ರೆಗಳ ಸ್ಟಾಲ್‌ಗಳಲ್ಲಿ ಗೋಬಿ ಮಂಚೂರಿ ತಯಾರಿ, ಮಾರಾಟವನ್ನು ನಿಷೇಧಿಸಿದೆ. ಇಂಡೋ ಚೀನೀಸ್ ಖಾದ್ಯ ನಿಷೇಧಕ್ಕಿದುವೇ ಕಾರಣ.

ಗೋವಾ ಮಾಪುಸಾದಲ್ಲಿ ಬೀದಿಬದಿ ಗೋಬಿ ಮಂಚೂರಿ ಸಿಗಲ್ಲ. ಇಂಡೋ ಚೀನೀಸ್ ಖಾದ್ಯ ನಿಷೇಧಕ್ಕೆ ಶುಚಿತ್ವ, ಸಿಂಥೆಟಿಕ್‌ ಬಣ್ಣ ಬಳಕೆಯೇ ಕಾರಣ ಎಂದು ಮಾಪುಸಾ ಸ್ಥಳೀಯಾಡಳಿತ ಸಂಸ್ಥೆ ಹೇಳಿದೆ.
ಗೋವಾ ಮಾಪುಸಾದಲ್ಲಿ ಬೀದಿಬದಿ ಗೋಬಿ ಮಂಚೂರಿ ಸಿಗಲ್ಲ. ಇಂಡೋ ಚೀನೀಸ್ ಖಾದ್ಯ ನಿಷೇಧಕ್ಕೆ ಶುಚಿತ್ವ, ಸಿಂಥೆಟಿಕ್‌ ಬಣ್ಣ ಬಳಕೆಯೇ ಕಾರಣ ಎಂದು ಮಾಪುಸಾ ಸ್ಥಳೀಯಾಡಳಿತ ಸಂಸ್ಥೆ ಹೇಳಿದೆ.

ಗೋಬಿ ಮಂಚೂರಿ ಯಾರಿಗೆ ಇಷ್ಟ ಇಲ್ಲ ಹೇಳಿ! ಬಹಳ ಜನಪ್ರಿಯ ಇಂಡೋ ಚೀನೀಸ್ ಖಾದ್ಯ ಇದು. ಹೋಟೆಲ್, ರೆಸ್ಟೋರೆಂಟ್, ಸ್ಟ್ರೀಟ್ ಫುಡ್ ಎಲ್ಲೇ ಹೋಗಿ ಗೋಬಿ ಮಂಚೂರಿ ಸಿಗದೇ ಇರದು. ಅತ್ಯಂತ ಮಸಾಲೆಯುಕ್ತ ಫ್ಯೂಷನ್ ಫುಡ್ ಇದು. ಈ ಜನಪ್ರಿಯ ಖಾದ್ಯ ಇನ್ನು ಗೋವಾ ಮಾಪುಸಾದ ಬೀದಿಬದಿ ಸ್ಟಾಲ್‌ಗಳಲ್ಲಿ ಸಿಗಲ್ಲ.

ಗೋವಾದ ಮಾಪುಸಾ ಪಟ್ಟಣದ ಸ್ಥಳೀಯಾಡಳಿತ ಬೀದಿಬದಿಯ ಸ್ಟಾಲ್‌ಗಳಲ್ಲಿ ಗೋಬಿ ಮಂಚೂರಿ ತಯಾರಿ ಮತ್ತು ಮಾರಾಟವನ್ನು ನಿಷೇಧಿಸಿದೆ. ನೈರ್ಮಲ್ಯ ಕಾಳಜಿ ಮತ್ತು ಗೋಬಿ ಮಂಚೂರಿ ತಯಾರಿಗೆ ಬಳಸುತ್ತಿರುವ ಸಿಂಥೆಟಿಕ್ ಬಣ್ಣಗಳು ಇದಕ್ಕೆ ಕಾರಣ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮಾಪುಸಾದ ಕೌನ್ಸಿಲ್‌ನಲ್ಲಿ ಭಾರಿ ಚರ್ಚೆಯ ಬಳಿಕ ಗೋಬಿ ಮಂಚೂರಿ ನಿಷೇಧ

ಉತ್ತರ ಗೋವಾ ಜಿಲ್ಲೆಯ ಮಾಪುಸಾದ ಕೌನ್ಸಿಲರ್‌ ತಾರಕ್‌ ಅರೋಲ್ಕರ್ ಕಳೆದ ತಿಂಗಳು ಬೋಡಗೇಶ್ವರ ದೇವಸ್ಥಾನದ ಜಾತ್ರೆಗೆ ಹೋದಾಗ ಅಲ್ಲಿ ಗೋಬಿ ಮಂಚೂರಿ ತಯಾರಿಸುತ್ತಿದ್ದ ರೀತಿಯನ್ನು ಗಮನಿಸಿದ್ದರು. ಮಾಪುಸಾ ಮುನ್ಸಿಪಲ್‌ ಕೌನ್ಸಿಲ್ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ರಸ್ತೆ ಬದಿ ಸ್ಟಾಲ್‌ಗಳಲ್ಲಿ ಗೋಬಿ ಮಂಚೂರಿ ತಯಾರಿ, ಮಾರಾಟ ನಿಷೇಧಿಸಿದರೆ ಹೇಗೆ ಎಂಬ ಪ್ರಸ್ತಾವನೆಯನ್ನು ಮುಂದಿಟ್ಟರು. ಈ ಕುರಿತಾದ ಚರ್ಚೆಯಲ್ಲಿ ಚಿಕನ್ ಮಂಚೂರಿಗೆ ಪರ್ಯಾಯ ಇಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು ಎಂದು ವರದಿ ಹೇಳಿದೆ.

ರೆಸ್ಟೋರೆಂಟ್‌ಗಳಲ್ಲಿ 70 ರೂಪಾಯಿಯಿಂದ 100 ರೂಪಾಯಿ ತನಕ ಒಂದು ಪ್ಲೇಟ್ ಗೋಬಿ ಮಂಚೂರಿಗೆ ದರ ಇದೆ. ಬೀದಿಬದಿಯ ಸ್ಟಾಲ್‌ಗಳಲ್ಲಿ 30 ರೂಪಾಯಿಯಿಂದ 40 ರೂಪಾಯಿ ಇದೆ. ಇಷ್ಟು ಕಡಿಮೆ ದರದಲ್ಲಿ ಅವರು ಆ ಉತ್ಪನ್ನವನ್ನು ತಯಾರಿಸಿ ಮಾರಾಟ ಮಾಡುತ್ತಾರೆ ಎಂದಾದರೆ, ಗುಣಮಟ್ಟದಲ್ಲಿ ರಾಜಿಯಾಗಿದ್ದಾರೆ ಎಂದೇ ಅರ್ಥ ಎಂಬ ಅಭಿಪ್ರಾಯವೂ ಕೌನ್ಸಿಲ್ ಸಭೆಯಲ್ಲಿ ವ್ಯಕ್ತವಾಯಿತು.

ಗಂಭೀರ ಚರ್ಚೆಯ ಬಳಿಕ, ನೈರ್ಮಲ್ಯ ಕಾಳಜಿ ಮತ್ತು ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಬೀದಿಬದಿ ಸ್ಟಾಲ್‌ಗಳಲ್ಲಿ ಗೋಬಿ ಮಂಚೂರಿ ತಯಾರಿ ಮತ್ತು ಮಾರಾಟವನ್ನು ನಿಷೇಧಿಸಲು ಮಾಪುಸಾ ಸ್ಥಳೀಯಾಡಳಿತ ತೀರ್ಮಾನ ತೆಗೆದುಕೊಂಡಿತು ಎಂದು ವರದಿ ವಿವರಿಸಿದೆ.

ಗೋಬಿ ಮಂಚೂರಿ ಮಾರಾಟ ನಿರ್ಬಂಧ ಗೋವಾದಲ್ಲಿ ಮೊದಲಲ್ಲ…

ಗೋವಾದಲ್ಲಿ ಇಂಡೋ ಚೀನೀಸ್ ಖಾದ್ಯ ಗೋಬಿ ಮಂಚೂರಿ ತಯಾರಿ ಮತ್ತು ಮಾರಾಟದ ಮೇಲೆ ನಿರ್ಬಂಧ ಹೇರುತ್ತಿರುವುದು ಇದೇ ಮೊದಲಲ್ಲ.

ಇದಕ್ಕೂ ಮೊದಲು, ಮೋರ್ಮುಗಾವೋದ ಸ್ಥಳೀಯಾಡಳಿತ 2022ರಲ್ಲಿ ಶ್ರೀ ದಾಮೋದರ ದೇವಸ್ಥಾನದ ವಾಸ್ಕೋ ಸಪ್ತಾಹ ಜಾತ್ರೆಯಲ್ಲಿ ಗೋಬಿ ಮಂಚೂರಿ ಸ್ಟಾಲ್‌ಗಳನ್ನು ನಿಷೇಧಿಸಿತ್ತು. ಇದಕ್ಕೂ ಮೊದಲು ಗೋಬಿ ಮಂಚೂರಿ ಸ್ಟಾಲ್‌ಗಳ ಮೇಲೆ ದಾಳಿ ನಡೆಸಿ, ಬಳಸುತ್ತಿರುವ ಉತ್ಪನ್ನಗಳನ್ನು ಪರಿಶೋಧಿಸಿತ್ತು.

ಜಾತ್ರೆಗಳಲ್ಲಿ ಸ್ಟಾಲ್ ಇರಿಸುವುದಕ್ಕೆ ಅನುಮತಿ ನೀಡುವ ಮೊದಲು ಗೋಬಿ ಮಂಚೂರಿ ಮಾರಾಟ ಮಾಡದಂತೆ ನಿರ್ಬಂಧವನ್ನು ವಿಧಿಸಲಾಗುತ್ತಿದೆ. ಇಂತಹ ಸ್ಟಾಲ್‌ಗಳಲ್ಲಿ ಶುಚಿತ್ವದ ಕಡೆಗೆ ಗಮನಹರಿಸುತ್ತಿಲ್ಲ. ಗೋಬಿ ಮಂಚೂರಿಯ ಬಣ್ಣದ ಆಕರ್ಷಣೆಗಾಗಿ ಸಿಂಥೆಟಿಕ್‌ ಬಣ್ಣ ಬಳಸಲಾಗುತ್ತಿದೆ. ಕೊಳಕು ಬಟ್ಟೆಯಲ್ಲಿ ಪ್ಲೇಟ್ ಒರೆಸುವುದು, ಪ್ಲೇಟ್ ತೊಳೆದ ನೀರಿನಲ್ಲೇ ಮತ್ತೆ ಮತ್ತೆ ಪ್ಲೇಟ್ ತೊಳೆಯುವುದು ಮಾಡುತ್ತಿರುವ ಕಾರಣ ನಿಷೇಧ ಹೇರುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸ್ಥಳೀಯಾಡಳಿತ ಸಮರ್ಥನೆ ನೀಡಿದೆ.

ಗೋಬಿ ಮಂಚೂರಿ ಇತಿಹಾಸ ಗಮನಿಸಿದೆ, ಭಾರತವೇ ಗೋಬಿ ಮಂಚೂರಿಯ ಮೂಲ. ಮುಂಬೈನ ಕ್ರಿಕೆಟ್ ಕ್ಲಬ್‌ ಆಫ್ ಇಂಡಿಯಾದ ಷೆಫ್‌ ನೆಲ್ಸನ್ ವಾಂಗ್‌, 1975ರಲ್ಲಿ ಚಿಕನ್ ಮಂಚೂರಿಯನ್ನು ಗ್ರಾಹಕರಿಗೆ ಪರಿಚಯಿಸಿದರು. ಶಾಖಾಹಾರಿಗಳಿಗೆ ಏನಿದೆ ಆಪ್ಶನ್ ಎಂದಾಗ ಚಿಕನ್ ಬದಲು ಗೋಬಿಯನ್ನು ಪರಿಚಯಿಸಲಾಗಿದೆ ಎಂದು ಕೆಲವು ವರದಿಗಳು ಹೇಳುತ್ತಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.