ಅಮೆರಿಕಾದ ಕಳವಳದ ನಡುವೆಯೂ ರಷ್ಯಾದ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿಯವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಅತ್ಯುನ್ನತ ನಾಗರಿಕ ಪುರಸ್ಕಾರವಾದ 'ಆರ್ಡರ್ ಆಫ್ ಸೈಂಟ್ ಆ್ಯಂಡ್ರ್ಯೂ ದ ಅಪಾಸ್ಟಲ್' ನೀಡಿ ಗೌರವಿಸಿದ್ದಾರೆ. ಈ ಪುರಸ್ಕಾರವನ್ನು 1698ರಲ್ಲಿ ಜಾರ್ ದೊರೆ ಪೀಟರ್ ದ ಗ್ರೇಟ್ ಸ್ಥಾಪಿಸಿದ್ದರು.
PM Modi in Russia: ಜುಲೈ 9 ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 22ನೇ ಭಾರತ - ರಷ್ಯಾ ದ್ವಿಪಕ್ಷೀಯ ಸಮಾವೇಶದಲ್ಲಿ ವಿವಿಧ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು.
ಮೋದಿಯವರ ರಷ್ಯಾ ಭೇಟಿಯ ಎರಡನೇ ದಿನ ಅತ್ಯಂತ ಧನಾತ್ಮಕ ರೀತಿಯಲ್ಲಿ ಆರಂಭಗೊಂಡಿತು. ರಷ್ಯನ್ ಸೇನೆಗೆ ಅರಿವಿಲ್ಲದೆ ಸೇರಿಸಲ್ಪಟ್ಟು, ಉಕ್ರೇನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯರನ್ನು ಸೇನೆಯಿಂದ ಬಿಡುಗಡೆಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಮನವಿ ಸಲ್ಲಿಸಿದರು. ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ ಪುಟಿನ್, ಭಾರತೀಯರನ್ನು ಸೇನೆಯಿಂದ ಬಿಡುಗಡೆಗೊಳಿಸಲು ಒಪ್ಪಿಗೆ ಸೂಚಿಸಿದರು.
ಬಳಿಕ, ಪ್ರಧಾನಿ ಮೋದಿಯವರು ಮಾಸ್ಕೋದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ, ರಷ್ಯಾವನ್ನು ಭಾರತದ ಎಲ್ಲ ಕಾಲಕ್ಕೂ ಸಲ್ಲುವ ಸ್ನೇಹಿತ ಎಂದು ಮೋದಿ ಬಣ್ಣಿಸಿದರು. ಬಳಿಕ ಮೋದಿಗೆ ಹಾರ ಹಾಕಿ ಗೌರವಾರ್ಪಣೆ ಸಲ್ಲಿಸುವ ಸಮಾರಂಭವೊಂದರಲ್ಲಿ ಪಾಲ್ಗೊಂಡು, ರೋಸಾಟಾಮ್ ಪೆವಿಲಿಯನ್‌ಗೆ ಭೇಟಿ ನೀಡಿ, ಅಲ್ಲಿಂದ ಪುಟಿನ್‌ರೊಡನೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಕ್ರೆಮ್ಲಿನ್‌ಗೆ ತೆರಳಿದರು.
ತನ್ನ ಆರಂಭಿಕ ಮಾತುಗಳಲ್ಲಿ, ಮೋದಿಯವರು ಭಾರತ ಮತ್ತು ರಷ್ಯಾ ನಡುವಿನ ಸಹಯೋಗವನ್ನು ಹೊಗಳಿ, ಕಳೆದ ಕೆಲ ವರ್ಷಗಳಿಂದ ಭಾರತಕ್ಕೆ ಆಹಾರ, ತೈಲ, ಮತ್ತು ರಸಗೊಬ್ಬರಗಳ ಕೊರತೆಯಾಗದಂತೆ ರಫ್ತು ಮಾಡುವ ಮೂಲಕ ನೆರವಾಗಿರುವುದಕ್ಕೆ ರಷ್ಯಾಗೆ ಧನ್ಯವಾದ ಸಲ್ಲಿಸಿದರು. ಅದರೊಡನೆ, ಉಕ್ರೇನ್‌ನಲ್ಲಿ ಮಕ್ಕಳ ಆಸ್ಪತ್ರೆಯೊಂದಕ್ಕೆ ರಷ್ಯಾ ಬಾಂಬ್ ದಾಳಿ ನಡೆಸಿದ ವಿಚಾರವನ್ನೂ ಮೋದಿ ತನ್ನ ಮಾತಿನ ವೇಳೆ ಪ್ರಸ್ತಾಪಿಸಿದರು.
ಆದರೆ, ರಷ್ಯಾದೊಡನೆ ದ್ವಿಪಕ್ಷೀಯ ಸಭೆಯಲ್ಲಿ ಭಾರತ ಪಾಲ್ಗೊಂಡಿರುವುದಕ್ಕೆ ಉಕ್ರೇನ್ ಮತ್ತು ಅದರ ಪ್ರಮುಖ ಸಹಯೋಗಿ ಅಮೆರಿಕಾ ಟೀಕೆ ಮತ್ತು ಕಳವಳ ವ್ಯಕ್ತಪಡಿಸಿವೆ.
ಮೋದಿಯವರ ಮಾಸ್ಕೋ ಭೇಟಿಯನ್ನು ಟೀಕಿಸಿದ ಅಮೆರಿಕಾ
ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೆರಿಕಾ ಅಧ್ಯಕ್ಷ ಜೋ ಬಿಡನ್ ಅವರು 'ಸ್ಟೇಟ್ ವಿಸಿಟ್'ಗೆ ಆಹ್ವಾನಿಸಿ, ಭೋಜನಕೂಟವನ್ನೂ ಏರ್ಪಡಿಸಿದ್ದರು. ಇದನ್ನು ಮಹತ್ವದ ಘಟನೆ ಎಂದು ಬಣ್ಣಿಸಿದ್ದ ಶ್ವೇತ ಭವನದ ಅಧಿಕಾರಿಗಳು ಇದು ಭಾರತ - ಅಮೆರಿಕಾ ಸಂಬಂಧದ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದಿದ್ದರು. ಭಾರತದೊಡನೆ ಸ್ನೇಹ ಅಮೆರಿಕಾಗೆ ಅತ್ಯಂತ ಪರಿಣಾಮಕಾರಿ ಸ್ನೇಹ ಎಂದು ಶ್ವೇತ ಭವನ ಹೇಳಿತ್ತು.
ಆದರೆ, ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ ರಷ್ಯಾಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ತನ್ನ 'ಮಿತ್ರ' ವ್ಲಾಡಿಮಿರ್ ಪುಟಿನ್ ಅವರೊಡನೆಯ ಬಲವಾದ ಸ್ನೇಹವನ್ನೂ ಪ್ರತಿಪಾದಿಸಿದರು. ವ್ಲಾಡಿಮಿರ್ ಪುಟಿನ್ ಅವರು ನರೇಂದ್ರ ಮೋದಿಯವರನ್ನು ಅಪ್ಪಿಕೊಂಡು ಸ್ವಾಗತಿಸಿದ ಚಿತ್ರಗಳು ಬಿಡನ್ ಆಡಳಿತ ಭಾರತದೊಡನೆ ತನ್ನ ಸಂಬಂಧವನ್ನು ಬಲಪಡಿಸಲು ಪ್ರಯತ್ನ ನಡೆಸುತ್ತಿರುವ ನಡುವೆಯೂ ಭಾರತ ರಷ್ಯಾದೊಡನೆ ತನ್ನ ಗಾಢ ಸ್ನೇಹವನ್ನು ಮುಂದುವರಿಸಲಿದೆ ಎನ್ನುವುದರ ಕುರುಹಾಗಿತ್ತು. ಅದರೊಡನೆ, ಶ್ವೇತ ಭವನ ನಿರೀಕ್ಷಿಸಿರುವ ರೀತಿಯಲ್ಲಿ ಪುಟಿನ್ ಅವರು ಇನ್ನೂ ಜಾಗತಿಕವಾಗಿ ಏಕಾಂಗಿಯಾಗಿಲ್ಲ ಎಂಬ ಸಂದೇಶವನ್ನೂ ಈ ಚಿತ್ರಗಳು ನೀಡಿವೆ.
ಮೋದಿಯವರ ಮಾಸ್ಕೋ ಭೇಟಿಯ ನಡುವೆ, ನ್ಯಾಟೋ ವಾಷಿಂಗ್ಟನ್ ನಲ್ಲಿ ಮೂರು ದಿನಗಳ ಸಭೆಯನ್ನು ಆಯೋಜಿಸಿದೆ. ಇಂತಹ ಸಮಯದಲ್ಲಿ ಮೋದಿ ರಷ್ಯಾಗೆ ತೆರಳಿರುವುದು ಅಮೆರಿಕಾ ಮತ್ತು ಉಕ್ರೇನ್ ಎರಡಕ್ಕೂ ಕಳವಳ ಉಂಟುಮಾಡಿದೆ. ಮೋದಿಯವರ ರಷ್ಯಾ ಭೇಟಿಯ ಕುರಿತು ಪ್ರಶ್ನಿಸಿದಾಗ, ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರರಾದ ಮ್ಯಾಥ್ಯೂ ಮಿಲ್ಲರ್ ಅವರು "ನಾವು ಈಗಾಗಲೇ ರಷ್ಯಾದ ಜೊತೆಗಿನ ಭಾರತದ ಸಂಬಂಧದ ಕುರಿತ ನಮ್ಮ ಕಳವಳಗಳನ್ನು ಭಾರತಕ್ಕೆ ತಿಳಿಸಿದ್ದೇವೆ" ಎಂದಿದ್ದರು.
ಮೋದಿ ರಷ್ಯಾ ಭೇಟಿಯ ಮಹತ್ವ ತಿಳಿಸಿದ ರಷ್ಯನ್ ರಾಯಭಾರಿ
ಭಾರತದಲ್ಲಿನ ರಷ್ಯನ್ ರಾಯಭಾರಿ ಡೆನಿಸ್ ಅಲಿಪೊವ್ ಅವರು ಪ್ರಧಾನಿ ನರೇಂದ್ರ ಮೋದಿಯವರ ರಷ್ಯಾ ಭೇಟಿಯ ಕುರಿತು ಪ್ರತಿಕ್ರಿಯಿಸಿ, "ನಾವು ಪ್ರಧಾನಿ ಮೋದಿಯವರನ್ನು ರಷ್ಯಾಗೆ ಹಾರ್ದಿಕವಾಗಿ ಸ್ವಾಗತಿಸಿದ್ದೇವೆ" ಎಂದಿದ್ದಾರೆ.
ಭಾರತ ಮತ್ತು ರಷ್ಯಾಗಳ ನಡುವೆ ಈಗ ಹಲವಾರು ಭರವಸೆಯ ಯೋಜನೆಗಳ ಕುರಿತು ಮತ್ತು ತೈಲ, ಅನಿಲ, ರಕ್ಷಣೆ, ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ವಲಯಗಳಲ್ಲಿ ಅವುಗಳ ಅನುಷ್ಠಾನದ ಕುರಿತು ಸಮಾಲೋಚನೆ ನಡೆಯುತ್ತಿದೆ ಎಂದು ಡೆನಿಸ್ ಅಲಿಪೊವ್ ಹೇಳಿದ್ದಾರೆ. "ಪ್ರತಿಯೊಂದು ವಲಯದಲ್ಲೂ ಭಾರತ ಮತ್ತು ರಷ್ಯಾಗಳು ದ್ವಿಪಕ್ಷೀಯ ಸಹಕಾರಕ್ಕೆ ಅವಕಾಶ ಹೊಂದಿವೆ" ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಮೋದಿಯವರು ಮುಂಬರುವ ಬ್ರಿಕ್ಸ್ ಸಮಾವೇಶದಲ್ಲೂ ಭಾಗವಹಿಸುವ ಕುರಿತು ರಾಯಭಾರಿ ಆಶಾ ಭಾವನೆ ವ್ಯಕ್ತಪಡಿಸಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ಭಾರತ ಮತ್ತು ರಷ್ಯಾಗಳ ವಾರ್ಷಿಕ ದ್ವಿಪಕ್ಷೀಯ ಸಭೆಯನ್ನು ಆಯೋಜಿಸುತ್ತಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದಿದ್ದಾರೆ. "ರಷ್ಯಾದಿಂದ ಉನ್ನತ ಮಟ್ಟದ ನಿಯೋಗ ಭಾರತಕ್ಕೆ ಭೇಟಿ ನೀಡುವುದನ್ನು ನಾವು ಎದುರು ನೋಡುತ್ತಿದ್ದೇವೆ" ಎಂದು ಅಲಿಪೊವ್ ಹೇಳಿದ್ದಾರೆ.
ರಷ್ಯಾದ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಪಾತ್ರರಾದ ಮೋದಿ
ಪ್ರಧಾನಿ ನರೇಂದ್ರ ಮೋದಿಯವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಅತ್ಯುನ್ನತ ನಾಗರಿಕ ಪುರಸ್ಕಾರವಾದ 'ಆರ್ಡರ್ ಆಫ್ ಸೈಂಟ್ ಆ್ಯಂಡ್ರ್ಯೂ ದ ಅಪಾಸ್ಟಲ್' ನೀಡಿ ಗೌರವಿಸಿದ್ದಾರೆ. ಈ ಪುರಸ್ಕಾರವನ್ನು 1698ರಲ್ಲಿ ಜಾರ್ ದೊರೆ ಪೀಟರ್ ದ ಗ್ರೇಟ್ ಸ್ಥಾಪಿಸಿದ್ದರು. ಈ ಗೌರವವನ್ನು ಯೇಸು ಕ್ರಿಸ್ತರ ಮೊದಲ ಧರ್ಮ ಪ್ರಚಾರಕರಾದ ಸಂತ ಆ್ಯಂಡ್ರ್ಯೂ ಅವರ ಸ್ಮರಣಾರ್ಥವಾಗಿ ಸ್ಥಾಪಿಸಲಾಯಿತು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅತ್ಯುನ್ನತ ನಾಗರಿಕ ಅಥವಾ ಮಿಲಿಟರಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ.
(ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)