ಕನ್ನಡ ಸುದ್ದಿ  /  Nation And-world  /  Islands In Andaman And Nicobar To Name After Param Vir Chakra Awardees

Parakram Diwas: ಅಂಡಮಾನ್-ನಿಕೋಬಾರ್‌ನ 21 ದ್ವೀಪಗಳಿಗೆ ಪರಮವೀರ ಚಕ್ರ ಪುರಸ್ಕೃತರ ಹೆಸರು

“ಈ ಹೆಜ್ಜೆಯು ನಮ್ಮ ವೀರರಿಗೆ ಶಾಶ್ವತ ಗೌರವವಾಗಿದೆ. ಅವರಲ್ಲಿ ಹಲವರು ರಾಷ್ಟ್ರದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ್ದಾರೆ” ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

ದ್ವೀಪಗಳಿಗೆ ಪರಮವೀರ ಚಕ್ರ ಪುರಸ್ಕೃತರ ಹೆಸರು
ದ್ವೀಪಗಳಿಗೆ ಪರಮವೀರ ಚಕ್ರ ಪುರಸ್ಕೃತರ ಹೆಸರು (AFP File Photo)

ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಈವರೆಗೆ ಹೆಸರಿಡದ ಇಪ್ಪತ್ತೊಂದು ದೊಡ್ಡ ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಗುವುದು ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ(PMO) ಪ್ರಕಟಣೆ ತಿಳಿಸಿದೆ. ಸೋಮವಾರ(ಜನವರಿ 23) ನಡೆಯಲಿರುವ ಪರಾಕ್ರಮ್ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದ್ವೀಪಗಳಿಗೆ ನಾಮಕರಣ ಮಾಡಲಿದ್ದಾರೆ ಎಂದು ಕಚೇರಿ ಹೇಳಿಕೆ ತಿಳಿಸಿದೆ.

ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ಪ್ರತಿ ವರ್ಷ 'ಪರಾಕ್ರಮ್ ದಿವಸ್' ಆಗಿ ದೇಶದಲ್ಲಿ ಆಚರಿಸಲಾಗುತ್ತದೆ.

“ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅವರನ್ನು ಗೌರವಿಸುವ ಸಲುವಾಗಿ, ರಾಸ್ ದ್ವೀಪಗಳನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ. ಹ್ಯಾವ್ಲಾಕ್ ದ್ವೀಪವನ್ನು ಶಹೀದ್ ದ್ವೀಪ ಮತ್ತು ಸ್ವರಾಜ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ” ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಾಮಕರಣ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದದ್ದಾರೆ. ಇದೇ ವೇಳೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲಾಗುವ ನೇತಾಜಿಯ ರಾಷ್ಟ್ರೀಯ ಸ್ಮಾರಕ(National Memorial)ದ ಮಾದರಿಯನ್ನು ಅನಾವರಣಗೊಳಿಸಲಿದ್ದಾರೆ.

1947ರ ನವೆಂಬರ್ 3ರಂದು ಶ್ರೀನಗರ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ನುಸುಳುಕೋರರನ್ನು ಹಿಮ್ಮೆಟ್ಟಿಸುವಾಗ ಹುತಾತ್ಮರಾದ ಮೊದಲ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಮೇಜರ್ ಸೋಮನಾಥ್ ಶರ್ಮಾ(Major Somnath Sharma) ಅವರ ಹೆಸರನ್ನು ಅತಿದೊಡ್ಡ ದ್ವೀಪಕ್ಕೆ ಹೆಸರಿಸಲಾಗುವುದು. ಬದ್ಗಾಮ್(Badgam) ಕದನದ ಸಮಯದಲ್ಲಿ ಅವರ ಶೌರ್ಯ ಮತ್ತು ತ್ಯಾಗಕ್ಕಾಗಿ ಅವರಿಗೆ ಮರಣೋತ್ತರವಾಗಿ ಪರಮವೀರ ಚಕ್ರವನ್ನು ನೀಡಲಾಯಿತು.

ಎರಡನೇ ಅತಿ ದೊಡ್ಡ ದ್ವೀಪಕ್ಕೆ ಎರಡನೇ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರಾದ ಸುಬೇದಾರ್ ಮತ್ತು ಕ್ಯಾಪ್ಟನ್ (ಲ್ಯಾನ್ಸ್ ನಾಯಕ್) ಕರಮ್ ಸಿಂಗ್ ಅವರ ಹೆಸರನ್ನು ಇಡಲಾಗುತ್ತದೆ. ದೇಶದ ನಿಜ ಜೀವನದ ಹೀರೋಗಳಿಗೆ ಸೂಕ್ತ ಗೌರವವನ್ನು ನೀಡುವ ಪ್ರಧಾನ ಮಂತ್ರಿಯ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪಿಎಂಒ ಹೇಳಿದೆ.

“ಈ ಹೆಜ್ಜೆಯು ನಮ್ಮ ವೀರರಿಗೆ ಶಾಶ್ವತ ಗೌರವವಾಗಿದೆ. ಅವರಲ್ಲಿ ಹಲವರು ರಾಷ್ಟ್ರದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಅಂತಿಮ ತ್ಯಾಗವನ್ನು ಮಾಡಿದ್ದಾರೆ” ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

ದ್ವೀಪಗಳಿಗೆ ಹೆಸರಿಡಲಾಗುವ 21 ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ವಿವರ

ಮೇಜರ್ ಸೋಮನಾಥ ಶರ್ಮಾ‌, ಕರಮ್ ಸಿಂಗ್, ಲೆಫ್ಟಿನೆಂಟ್ ರಾಮ ರಾಘೋಬ ರಾಣೆ, ನಾಯಕ್ ಜಾದುನಾಥ್ ಸಿಂಗ್, ಕಂಪನಿ ಹವಾಲ್ದಾರ್ ಮೇಜರ್ ಪಿರು ಸಿಂಗ್, ಕ್ಯಾಪ್ಟನ್ ಜಿಎಸ್ ಸಲಾರಿಯಾ, ಲೆಫ್ಟಿನೆಂಟ್ ಕರ್ನಲ್ (ಆಗಿನ ಮೇಜರ್) ಧನ್ ಸಿಂಗ್ ಥಾಪಾ, ಸುಬೇದಾರ್ ಜೋಗಿಂದರ್ ಸಿಂಗ್, ಮೇಜರ್ ಶೈತಾನ್ ಸಿಂಗ್, ಅಬ್ದುಲ್ ಹಮೀದ್, ಲೆಫ್ಟಿನೆಂಟ್ ಕರ್ನಲ್ ಅರ್ದೇಶಿರ್ ಬುರ್ಜೋರ್ಜಿ ತಾರಾಪೋರ್, ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ, ಮೇಜರ್ ಹೋಶಿಯಾರ್ ಸಿಂಗ್, 2ನೇ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್, ನಿರ್ಮಲಜಿತ್ ಸಿಂಗ್ ಸೆಖೋನ್, ಮೇಜರ್ ರಾಮಸ್ವಾಮಿ ಪರಮೇಶ್ವರನ್, ನಾಯಬ್ ಸುಬೇದಾರ್ ಬನಾ ಸಿಂಗ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಸುಬೇದಾರ್ ಮೇಜರ್ ಸಂಜಯ್ ಕುಮಾರ್, ಮತ್ತು ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್.