ಚಳಿಗಾಲದಲ್ಲಿ ಒಡೆದ ತುಟಿಗಳಿಂದ ಬೇಸತ್ತಿದ್ದೀರಾ: ಮನೆಯಲ್ಲಿ ತಯಾರಿಸಿದ ನೈಸರ್ಗಿಕ ಲಿಪ್ ಬಾಮ್ ಹಚ್ಚಿರಿ, ಪರಿಹಾರ ಪಡೆಯಿರಿ
ಚಳಿಗಾಲದಲ್ಲಿ ತುಟಿಗಳನ್ನು ಮೃದುವಾಗಿ ಮತ್ತು ತೇವಾಂಶದಿಂದ ಇಡಲು ಮನೆಯಲ್ಲಿ ಲಿಪ್ ಬಾಮ್ ಅನ್ನು ತಯಾರಿಸಬಹುದು. ಇದು ದಿನವಿಡೀ ನಿಮ್ಮ ತುಟಿಗಳನ್ನು ಹೈಡ್ರೀಕರಿಸಲು ಸಹಕಾರಿಯಾಗಿದೆ. ಈ ಲಿಪ್ ಬಾಮ್ ಅನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಚಳಿಗಾಲದಲ್ಲಿ ದೇಹದ ಆರೋಗ್ಯ, ಚರ್ಮ ಮಾತ್ರವಲ್ಲದೆ ತುಟಿಗಳ ಮೇಲೂ ಪರಿಣಾಮ ಬೀರುತ್ತದೆ. ಶೀತ ಹೆಚ್ಚಾದಂತೆ, ಶುಷ್ಕ ವಾತಾವರಣವು ತುಟಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಠಿಣ ಚಳಿಗಾಲವು ತುಟಿಗಳನ್ನು ಬಿರುಕುಗೊಳಿಸಬಹುದು ಅಥವಾ ಒಡೆಯಬಹುದು. ಗಾಳಿಯಲ್ಲಿ ತೇವಾಂಶದ ಕೊರತೆ ಮತ್ತು ಮನೆಯೊಳಗಿನ ಶಾಖವು ತುಟಿಗಳ ನೈಸರ್ಗಿಕ ತೇವಾಂಶವನ್ನು ಕಸಿದುಕೊಳ್ಳುತ್ತದೆ.ಇದರಿಂದಾಗಿ ಅವು ಒಣಗಲು ಪ್ರಾರಂಭಿಸುತ್ತವೆ. ಹೀಗಾಗಿ, ಶೀತ ತಿಂಗಳುಗಳಲ್ಲಿ ತುಟಿಗಳನ್ನು ಮೃದುವಾಗಿ ಮತ್ತು ಹೈಡ್ರೀಕರಿಸಿದಂತೆ ಇರಿಸಿಕೊಳ್ಳಲು, ಮನೆಯಲ್ಲಿ ಲಿಪ್ ಬಾಮ್ ಅನ್ನು ತಯಾರಿಸಬಹುದು. ಹೈಡ್ರೇಟಿಂಗ್ ಬಾಮ್ ಅನ್ನು ಬಳಸುವುದರಿಂದ ದಿನವಿಡೀ ತುಟಿಗಳನ್ನು ಹೈಡ್ರೀಕರಿಸುತ್ತದೆ. ಹಾಗಾದರೆ ಈ ನೈಸರ್ಗಿಕ ಲಿಪ್ ಬಾಮ್‍ಗಳನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಮನೆಯಲ್ಲಿಯೇ ಈ ಲಿಪ್ ಬಾಮ್‌ಗಳನ್ನು ತಯಾರಿಸಿ
ತುಪ್ಪದ ಲಿಪ್ ಬಾಮ್: ಅರ್ಧ ಕಪ್ ಬೀಟ್ರೂಟ್ ಅನ್ನು ತುರಿದು, ಅದರ ರಸವನ್ನು ಸೋಸಿಕೊಳ್ಳಿ. ಬೀಟ್ರೂಟ್ ರಸಕ್ಕೆ 1 ಚಮಚ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಸಣ್ಣ ಬೌಲ್‍ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಿ. ನಂತರ ಈ ಲಿಪ್ ಬಾಮ್ ಅನ್ನು ಬಳಸಬಹುದು. ಇದನ್ನು ತುಟಿಗಳಿಗೆ ಹಚ್ಚಿಕೊಳ್ಳಿ. ತುಪ್ಪವು ತುಟಿಯ ಚರ್ಮವನ್ನು ಆಳವಾಗಿ ಹೈಡ್ರೇಟ್ ಮಾಡುತ್ತದೆ. ತುಟಿಯನ್ನು ತೇವಾಂಶಯುಕ್ತವಾಗಿಸುತ್ತದೆ.
ಬೀಸ್‌ವ್ಯಾಕ್ಸ್ (ಜೇನುಮೇಣ) ಲಿಪ್ ಬಾಮ್ : ಜೇನುಮೇಣ ಲಿಪ್ ಬಾಮ್ ಮಾಡಲು, 1 ಚಮಚ ಜೇನುಮೇಣ, 1 ಚಮಚ ತೆಂಗಿನ ಎಣ್ಣೆ, 1 ಚಮಚ ಜೇನುತುಪ್ಪ ಮತ್ತು 2 ವಿಟಮಿನ್ ಇ ಕ್ಯಾಪ್ಸುಲ್‍ಗಳನ್ನು ತೆಗೆದುಕೊಳ್ಳಿ. ಜೇನುಮೇಣವನ್ನು ಲೋಹದ ಬೋಗುಣಿಗೆ ಹಾಕಿ ಮಧ್ಯಮ ಉರಿಯಲ್ಲಿ ಕರಗಿಸಿ. ಅದು ಕರಗಿದಾಗ, ಅದಕ್ಕೆ ಕೆಲವು ಹನಿ ತೆಂಗಿನ ಎಣ್ಣೆ ಮತ್ತು ಜೇನುತುಪ್ಪವನ್ನು ಸೇರಿಸಿ. ಇದರ ನಂತರ, ವಿಟಮಿನ್ ಇ ಕ್ಯಾಪ್ಸುಲ್‍ನಿಂದ ತೈಲವನ್ನು ಈ ಮಿಶ್ರಣಕ್ಕೆ ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, ನಂತರ ಅದನ್ನು ಪಾತ್ರೆಯಲ್ಲಿ ಹಾಕಿ. ಸುಮಾರು 30 ನಿಮಿಷಗಳ ಕಾಲ ಅದನ್ನು ತಣ್ಣಗಾಗಲು ಬಿಡಿ. ಈ ರೀಕಿ ಮಾಡಿದರೆ ಮನೆಯಲ್ಲಿ ತಯಾರಿಸಿದ ಲಿಪ್ ಬಾಮ್ ಸಿದ್ಧ. ಇದು ತುಟಿಗಳನ್ನು ಮೃದುವಾಗಿಸಲು ಮತ್ತು ಹೈಡ್ರೀಕರಿಸಲು ಸಹಕಾರಿಯಾಗಿದೆ.
ತೆಂಗಿನೆಣ್ಣೆ ಲಿಪ್ ಬಾಮ್: ತೆಂಗಿನಕಾಯಿಯಲ್ಲಿರುವ ನೈಸರ್ಗಿಕ ಆರ್ಧ್ರಕ ಗುಣಲಕ್ಷಣಗಳು ತುಟಿಗಳನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಇದು ತುಟಿಗಳನ್ನು ಮೃದುವಾಗಿ ಮತ್ತು ಗಂಟೆಗಳ ಕಾಲ ಹೊಳೆಯುವಂತೆ ಮಾಡುತ್ತದೆ. ತೆಂಗಿನ ಎಣ್ಣೆ ಮತ್ತು ಪೆಟ್ರೋಲಿಯಂ ಜೆಲ್ಲಿಯ ಸಮಾನ ಭಾಗಗಳನ್ನು ಮಿಶ್ರಣ ಮಾಡಿ. ಮಿಶ್ರಣವನ್ನು ಗಾಳಿಯಾಡದ ಧಾರಕದಲ್ಲಿ ಹಾಕಿಡಿ. ಸುಮಾರು 30 ನಿಮಿಷಗಳ ಕಾಲ ಫ್ರೀಜ್ ಮಾಡಿ. ಸುಗಂಧಕ್ಕಾಗಿ ಸಾರಭೂತ ತೈಲದ (essential oil) ಒಂದು ಅಥವಾ ಎರಡು ಹನಿ ಸೇರಿಸಬಹುದು. ಈ ರೀತಿ ಮಾಡಿದರೆ ಮನೆಯಲ್ಲಿ ತಯಾರಿಸಿದ ಲಿಪ್ ಬಾಮ್ ಬಳಸಲು ಸಿದ್ಧ. ಈ ಮನೆಯಲ್ಲಿ ತಯಾರಿಸಿದ ಲಿಪ್ ಬಾಮ್‌ಗಳನ್ನು ಮಾಡುವ ಮೂಲಕ, ತುಟಿಗಳನ್ನು ಚಳಿಗಾಲದಲ್ಲಿ ಮೃದುವಾಗಿರಿಸಿಕೊಳ್ಳಬಹುದು.
ಸಲಹೆಗಳು
ಮನೆಯಲ್ಲಿ ತಯಾರಿಸಿದ ಲಿಪ್ ಬಾಮ್‌ಗಳನ್ನು ಯಾವಾಗಲೂ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಡಬೇಕು. ಇದರಿಂದ ಇವುಗಳನ್ನು ಸಾಮಾನ್ಯವಾಗಿ 7 ರಿಂದ 8 ದಿನಗಳವರೆಗೆ ಬಳಸಬಹುದು. ಅಲ್ಲದೆ, ನೀವು ಯಾವುದೇ ಪದಾರ್ಥಗಳಿಗೆ ಅಲರ್ಜಿಯನ್ನು ಹೊಂದಿದ್ದರೆ, ಅವುಗಳನ್ನು ಬಳಸದಿರುವುದು ಒಳ್ಳೆಯದು. ಚಳಿಗಾಲದ ತಿಂಗಳುಗಳಲ್ಲಿ, ನಿರ್ಜಲೀಕರಣವನ್ನು ತಡೆಗಟ್ಟಲು ಸಾಕಷ್ಟು ನೀರು ಕುಡಿಯಿರಿ.