Sabarimala online: ಶಬರಿಮಲೆ ಅಯ್ಯಪ್ಪ ಭಕ್ತರು ನಿರಾಳ; ಆನ್‌ಲೈನ್‌ ನೋಂದಣಿ ಇಲ್ಲದಿದ್ದರೂ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಿದ ಕೇರಳ ಸರ್ಕಾರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sabarimala Online: ಶಬರಿಮಲೆ ಅಯ್ಯಪ್ಪ ಭಕ್ತರು ನಿರಾಳ; ಆನ್‌ಲೈನ್‌ ನೋಂದಣಿ ಇಲ್ಲದಿದ್ದರೂ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಿದ ಕೇರಳ ಸರ್ಕಾರ

Sabarimala online: ಶಬರಿಮಲೆ ಅಯ್ಯಪ್ಪ ಭಕ್ತರು ನಿರಾಳ; ಆನ್‌ಲೈನ್‌ ನೋಂದಣಿ ಇಲ್ಲದಿದ್ದರೂ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಿದ ಕೇರಳ ಸರ್ಕಾರ

ಶಬರಿಮಲೆ ಯಾತ್ರೆಯ ವೇಳೆ ಆನ್‌ಲೈನ್‌ ನೋಂದಣಿ ಮಾಡಿಸಿಕೊಂಡರೆ ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂಬ ಕೇರಳ ಸರಕಾರದ ನಿರ್ಧಾರದ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಹೀಗಾಗಿ ತನ್ನ ನಿರ್ಧಾರದಿಂದ ಸರಕಾರ ಹಿಂದೆ ಸರಿದಿದ್ದು ಕೊಂಚ ಬದಲಾವಣೆ ಮಾಡಿದೆ.

ಕೇರಳದ ಶಬರಿಮಲೈ ದರ್ಶನ ನೋಂದಣಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಕೇರಳದ ಶಬರಿಮಲೈ ದರ್ಶನ ನೋಂದಣಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ತಿರುವನಂತಪುರಂ: ನೋಂದಣಿ ಇಲ್ಲದೇ ಏಕಾಏಕಿ ಬರುವ ಭಕ್ತರನ್ನು ನಿಯಂತ್ರಿಸಿ ನೂಕುನುಗ್ಗಲು ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಕೇರಳ ಸರ್ಕಾರವು ಶಬರಿ ಮಲೆ ದರ್ಶನಕ್ಕೆ ಬರುವವರಿಗೆ ಈ ವರ್ಷದಿಂದ ಆನ್‌ಲೈನ್‌ ನೋಂದಣಿ ಕಡ್ಡಾಯಗೊಳಿಸಿದೆ. ಆನ್‌ಲೈನ್‌ ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡುವುದಾಗಿ ಆದೇಶ ಜಾರಿಗೊಳಿಸಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದರಿಂದ ನೋಂದಣಿಯಲ್ಲಿ ಕೆಲವು ವಿನಾಯಿತಿ ನೀಡಿದೆ. ಆನ್‌ಲೈನ್‌ ನೋಂದಣಿ ಇಲ್ಲದೇ ಇದ್ದರೂ ಸ್ಪಾಟ್‌ ನೋಂದಣಿ ಮೂಲಕ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ದರ್ಶನ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದ ಭಕ್ತರು ನಿರಾಳವಾಗಲಿದ್ದಾರೆ.

ವರ್ಚುವಲ್‌ ಆಗಿ ಕ್ಯೂ ಬುಕಿಂಗ್‌ ಮಾಡದೆ ಆಗಮಿಸಿದ್ದರೂ ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಅಯ್ಯಪ್ಪ ದೇವಸ್ಥಾನದಲ್ಲಿ ಸುಗಮ ದರ್ಶನ ವ್ಯವಸ್ಥೆ ಮಾಡಲಾಗುವುದು. ಶಬರಿಮಲೆಗೆ ಭೇಟಿ ನೀಡುವ ಯಾವ ಭಕ್ತರೂ ನಿರಾಶರಾಗುವುದು ಬೇಡ ಎಂದು ಕೇರಳ ಸರಕಾರ ಕೊನೆಗೂ ಸ್ಪಷ್ಟನೆ ನೀಡಿದೆ. ಆನ್‌ಲೈನ್‌ ನೋಂದಣಿ ಹಾಗೂ ದಿನಕ್ಕೆ ದರ್ಶನಕ್ಕೆ ಮಿತಿ ಹೇರುವ ಆದೇಶಕ್ಕೆ ಕೇರಳ ಕಾಂಗ್ರೆಸ್‌ ಹಾಗೂ ಸಿಪಿಐಎಂ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಬದಲಾವಣೆ ಮಾಡುವಂತೆಯು ಮನವಿ ಸಲ್ಲಿಸಿದ್ದವು. ಆನಂತರ ಬದಲಾವಣೆ ಮಾಡಲಾಗಿದೆ.

ಈಗ ಸ್ಪಾಟ್‌ ಬುಕ್ಕಿಂಗ್‌ ಕೇಂದ್ರಗಳೂ ಇರಲಿವೆ. ಅಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಆನಂತರವೂ ಅವಕಾಶ ಆಗದೇ ಇದ್ದರೆ ವಿಶೇಷ ದರ್ಶನವೂ ಇರಲಿದ್ದು. ಪ್ರತಿ ಭಕ್ತರಿಗೂ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎನ್ನುವುದು ವಿವಾದದ ನಂತರ ಸರ್ಕಾರ ನೀಡಿರುವ ಸ್ಪಷ್ಟನೆ.

ಆನ್‌ಲೈನ್‌ ನೋಂದಣಿ ಇಲ್ಲದೆಯೂ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ವಿಧಾನಸಭೆಯಲ್ಲಿ ಸಿಎಂ ಪಿಣರಾಯಿ ವಿಜಯನ್‌ ಪ್ರಕಟಿಸಿದರು.

ಆನ್‌ಲೈನ್ ನೋಂದಣಿ ಇಲ್ಲದೆ ಬರುವ ಯಾತ್ರಾರ್ಥಿಗಳಿಗೆ ಸುಗಮ ದರ್ಶನಕ್ಕಾಗಿ ಸೌಲಭ್ಯಗಳನ್ನು ಖಾತ್ರಿಪಡಿಸಲಾಗುವುದು. ಆನ್‌ಲೈನ್‌ನಲ್ಲಿ ನೋಂದಾಯಿಸದವರಿಗೆ ಮತ್ತು ವ್ಯವಸ್ಥೆಯ ಬಗ್ಗೆ ತಿಳಿಯದೆ ಬರುವವರಿಗೆ ದರ್ಶನವನ್ನು ಖಾತ್ರಿಪಡಿಸಲಾಗುತ್ತದೆ. ಕಳೆದ ಅವಧಿಯಲ್ಲಿಯೂ ಇದೇ ರೀತಿಯ ಸೌಲಭ್ಯಗಳನ್ನು ಶಬರಿಮಲೆ ದೇವಸ್ಥಾನದಲ್ಲಿ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಅಕ್ಟೋಬರ್ 5 ರಂದು ನಡೆದ ಮೌಲ್ಯಮಾಪನ ಸಭೆಯಲ್ಲಿ ಶಬರಿಮಲೆಯಲ್ಲಿ ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕ್ಕಿಂಗ್ ಮಾಡಲು ಅವಕಾಶ ನೀಡುವ ಬಗ್ಗೆ ಚರ್ಚಿಸಲಾಗಿದೆ . ಶಬರಿಮಲೆ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಗೆ ಮುನ್ನ ಕೇರಳ ಸರ್ಕಾರವು ಈ ಬಾರಿ ಆನ್‌ಲೈನ್ ಬುಕಿಂಗ್ ಮೂಲಕ ಯಾತ್ರಾರ್ಥಿಗಳಿಗೆ ಅವಕಾಶ ನೀಡಲು ನಿರ್ಧರಿಸಿದೆ. ದಿನಕ್ಕೆ ಗರಿಷ್ಠ 80,000 ಭಕ್ತರಿಗೆ ಅವಕಾಶ ಕಲ್ಪಿಸುವ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿಜಯನ್‌ ನೀಡಿದ ವಿವರಣೆ.

ಯಾತ್ರಿಕರಿಗೆ ಬುಕಿಂಗ್ ಸಮಯದಲ್ಲಿ ಪ್ರಯಾಣದ ಮಾರ್ಗವನ್ನು ಆಯ್ಕೆ ಮಾಡುವ ಅವಕಾಶವನ್ನು ಒದಗಿಸಲಾಗುತ್ತದೆ. ಹೀಗಾಗಿ, ಯಾತ್ರಿಕರು ಕಡಿಮೆ ದಟ್ಟಣೆ ಇರುವ ಮಾರ್ಗವನ್ನು ಆಯ್ಕೆ ಮಾಡಬಹುದು. ಸಾಂಪ್ರದಾಯಿಕ ಅರಣ್ಯ ಮಾರ್ಗದಲ್ಲಿ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಜನದಟ್ಟಣೆ ಇರುವ ಸಮಯದಲ್ಲಿ ವಾಹನಗಳನ್ನು ನಿಯಂತ್ರಿಸಬೇಕಾದರೆ ಕೇಂದ್ರಗಳನ್ನು ಗುರುತಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು.ನಿಲಕ್ಕಲ್ ಮತ್ತು ಎರುಮೇಲಿಯಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ವಂ ಸಚಿವ ವಿಎನ್ ವಾಸವನ್ ಹೇಳಿದ್ದಾರೆ.

ಕಳೆದ ವರ್ಷ ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಆದ್ದರಿಂದ ನಿರ್ವಹಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳದ ಕಾರಣ ಭಾರಿ ಅವ್ಯವಸ್ಥೆ ಉಂಟಾಗಿತ್ತು. ಭಕ್ತರು ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಸರ್ಕಾರದ ವಿರುದ್ಧ ಆಕ್ರೋಶಗಳು ಭುಗಿಲೆದ್ದಿದ್ದವು. ಈ ಹಿನ್ನೆಲೆ ಭಕ್ತರ ನಿರ್ವಹಣೆ ಸಮರ್ಪಕ ಆಗಿಸುವ ಹಿನ್ನೆಲೆ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ ಮಾಡಿದವರಿಗೆ ಮಾತ್ರ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿತ್ತು. ಈಗ ಕೊಂಚ ಬದಲಾವಣೆ ಮಾಡಿಕೊಳ್ಳಲಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.