ಮಹಾರಾಷ್ಟ್ರ ಚುನಾವಣೆ 2024 : ಮಹಾಯುತಿ ಅಧಿಕಾರಕ್ಕೆ ಎಂದಿವೆ 4 ಎಕ್ಸಿಟ್‌ ಪೋಲ್ ಫಲಿತಾಂಶ, ಇನ್ನೆರಡಲ್ಲಿ ಸಮಬಲದ ಪೈಪೋಟಿ ಸುಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾರಾಷ್ಟ್ರ ಚುನಾವಣೆ 2024 : ಮಹಾಯುತಿ ಅಧಿಕಾರಕ್ಕೆ ಎಂದಿವೆ 4 ಎಕ್ಸಿಟ್‌ ಪೋಲ್ ಫಲಿತಾಂಶ, ಇನ್ನೆರಡಲ್ಲಿ ಸಮಬಲದ ಪೈಪೋಟಿ ಸುಳಿವು

ಮಹಾರಾಷ್ಟ್ರ ಚುನಾವಣೆ 2024 : ಮಹಾಯುತಿ ಅಧಿಕಾರಕ್ಕೆ ಎಂದಿವೆ 4 ಎಕ್ಸಿಟ್‌ ಪೋಲ್ ಫಲಿತಾಂಶ, ಇನ್ನೆರಡಲ್ಲಿ ಸಮಬಲದ ಪೈಪೋಟಿ ಸುಳಿವು

Maharashtra exit polls 2024: ಮಹಾರಾಷ್ಟ್ರ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಎಕ್ಸಿಟ್ ಪೋಲ್ ಫಲಿತಾಂಶಗಳು ಮಹಾಯುತಿ ಮರಳಿ ಅಧಿಕಾರದಲ್ಲಿ ಮುಂದುವರಿಯುವ ಸೂಚನೆ ನೀಡಿವೆ. 2019ರಂತೆಯೇ ಬಿಜೆಪಿ ಈ ಬಾರಿ ಕೂಡ ಅತಿದೊಡ್ಡ ಪಕ್ಷವಾಗಲಿದ್ದು, ಮಹಾಯುತಿ ಅಧಿಕಾರಕ್ಕೆ ಎಂದಿವೆ 4 ಎಕ್ಸಿಟ್‌ ಪೋಲ್ ಫಲಿತಾಂಶ, ಇನ್ನೆರಡಲ್ಲಿ ಸಮಬಲದ ಪೈಪೋಟಿ ಸುಳಿವು ನೀಡಿವೆ.

ಮಹಾರಾಷ್ಟ್ರ ಚುನಾವಣೆ 2024 : ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಪೀಪಲ್ಸ್‌ ಪಲ್ಸ್ ಎಕ್ಸಿಟ್ ಪೋಲ್‌ ಫಲಿತಾಂಶ ಹೇಳಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ (ಎಡ ಚಿತ್ರ), ಶಿವ ಸೇನಾ ನಾಯಕ ಉದ್ಧವ್ ಠಾಕ್ರೆ (ಮಧ್ಯ ಚಿತ್ರ), ಎನ್‌ಸಿಪಿ ನಾಯಕ ಶರದ್ ಪವಾರ್‌ ( ಬಲ ಚಿತ್ರ) ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.
ಮಹಾರಾಷ್ಟ್ರ ಚುನಾವಣೆ 2024 : ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಪೀಪಲ್ಸ್‌ ಪಲ್ಸ್ ಎಕ್ಸಿಟ್ ಪೋಲ್‌ ಫಲಿತಾಂಶ ಹೇಳಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ (ಎಡ ಚಿತ್ರ), ಶಿವ ಸೇನಾ ನಾಯಕ ಉದ್ಧವ್ ಠಾಕ್ರೆ (ಮಧ್ಯ ಚಿತ್ರ), ಎನ್‌ಸಿಪಿ ನಾಯಕ ಶರದ್ ಪವಾರ್‌ ( ಬಲ ಚಿತ್ರ) ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.

Maharashtra exit polls 2024: ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆ (Maharashtra Election) ಮತದಾನ ಇಂದು (ನವೆಂಬರ್ 20) ಪೂರ್ಣಗೊಂಡಿದ್ದು ಶೇಕಡ 60ರ ಆಸುಪಾಸು ಮತದಾನವಾಗಿದೆ. ಮತದಾನ ಮುಗಿದ ಅರ್ಧ ಗಂಟೆ ಬಳಿಕ ಅಂದರೆ 6.30ರಿಂದ ಎಕ್ಸಿಟ್ ಪೋಲ್ (ಮತದಾನೋತ್ತರ ಸಮೀಕ್ಷೆ) ಫಲಿತಾಂಶ ಪ್ರಕಟವಾಗತೊಡಗಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಮರಳಿ ಅಧಿಕಾರಕ್ಕೆ ಬರಲಿದೆ. ಅಗತ್ಯ ಬಹುಮತದೊಂದಿಗೆ ಆರಾಮವಾಗಿ ಆಡಳಿತ ಚುಕ್ಕಾಣಿ ಮೇಲಿನ ಹಿಡಿತ ಬಿಗಿಗೊಳಿಸಲಿದೆ ಎಂದು ಬುಧವಾರ (ನವೆಂಬರ್ 20) ಎಕ್ಸಿಟ್‌ ಪೋಲ್ (ಮತದಾನೋತ್ತರ ಸಮೀಕ್ಷೆ) ಫಲಿತಾಂಶ ಹೇಳಿದೆ. ಸದ್ಯ ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್‌ ಪ್ರಕಟವಾಗಿದೆ. 288 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಸ್ಥಾನಗಳಲ್ಲಿ ಗೆಲ್ಲಬೇಕು.

ಮಹಾರಾಷ್ಟ್ರ ಚುನಾವಣೆ 2024: ಎಕ್ಸಿಟ್ ಪೋಲ್‌ ಫಲಿತಾಂಶ

1) ಪೀಪಲ್ಸ್ ಪಲ್ಸ್‌ ಪ್ರಕಾರ ಮಹಾಯುತಿಗೆ ಜನಾದೇಶ

ಮಹಾರಾಷ್ಟ್ರ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಗೆ ಜನಾದೇಶ ಸಿಗಲಿದೆ. 2019 ಚುನಾವಣೆಯಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಸಿಕ್ಕರೂ ಬಿಜೆಪಿ, ಶಿವ ಸೇನಾ ಮತ್ತು ಎನ್‌ಸಿಪಿಗಳು ಸೇರಿ ಮಹಾ ವಿಕಾಸ್ ಅಘಾಡಿ ಮೈತ್ರಿ ರಚಿಸಿಕೊಂಡು ಸರ್ಕಾರ ರಚಿಸಿದ್ದವು. ಆದರೆ, 2022ರಲ್ಲಿ ಶಿವ ಸೇನಾ ಮತ್ತು ಎನ್‌ಸಿಪಿ ಎರಡೂ ಪಕ್ಷಗಳು ಇಬ್ಭಾಗಗಳಾಗಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಸೇರ್ಪಡೆಯಾಗಿದ್ದವು. ನಂತರ ಈ ಮಹಾಯುತಿ ಮೈತ್ರಿ ಆಡಳಿತ ನಡೆಸುತ್ತಿದ್ದು, ಇದೇ ಮೈತ್ರಿ ಈ ಬಾರಿ ಕೂಡ ಆಡಳಿತ ಮುಂದುವರಿಸಲಿದೆ ಎಂದು ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್ ಫಲಿತಾಂಶ ಹೇಳಿದೆ.

ಪೀಪಲ್ಸ್ ಪಲ್ಸ್‌ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಾರ, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಗೆ 175 ರಿಂದ 195 ಸ್ಥಾನಗಳಲ್ಲಿ ಗೆಲುವು ಸಿಗಲಿದೆ. ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ 85 ರಿಂದ 112 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ. ಇತರರು 7 -12 ಸ್ಥಾನಗಳಲ್ಲಿ ಗೆಲುವು ಕಾಣಲಿದ್ದಾರೆ.

2) ಪೋ‌ಲ್‌ಸ್ಟರ್‌ ಮ್ಯಾಟ್ರಿಜ್ ಎಕ್ಸಿಟ್‌ ಪೋಲ್‌ನಲ್ಲೂ ಮಹಾಯುತಿಗೆ ಗೆಲುವು

ಪೋಲ್ಸ್ಟರ್ ಮ್ಯಾಟ್ರಿಜ್ ಎಕ್ಸಿಟ್‌ ಪೋಲ್‌ನಲ್ಲೂ ಬಿಜೆಪಿ-ಶಿವಸೇನೆ-ಎನ್‌ಸಿಪಿ ಮೈತ್ರಿಕೂಟಕ್ಕೆ ಭಾರಿ ಗೆಲುವು ಸಾಧಿಸಲಿದೆ ಎಂಬ ಭವಿಷ್ಯ ಕಂಡುಬಂದಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ 150 ರಿಂದ 170 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಂಸ್ಥೆ ಭವಿಷ್ಯ ನುಡಿದಿದೆ. ಕಾಂಗ್ರೆಸ್-ಶಿವಸೇನೆ (ಯುಬಿಟಿ)-ಎನ್‌ಸಿಪಿ (ಎಸ್‌ಸಿಪಿ) ಮೈತ್ರಿಕೂಟ 110-130 ಸ್ಥಾನಗಳನ್ನು ಗೆಲ್ಲಲಿದೆ. ಇತರ ಪಕ್ಷಗಳು ಮತ್ತು ಸ್ವತಂತ್ರರು 8-10 ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ಅದು ಹೇಳಿದೆ.

3) ಪಿ-ಮಾರ್ಕ್ ಎಕ್ಸಿಟ್ ಪೋಲ್‌: ಮಹಾಯುತಿ vs ಮಹಾ ವಿಕಾಸ್ ಅಘಾಡಿ ಸಮಬಲದ ಪೈಪೋಟಿ

ಪಿ-ಮಾರ್ಕ್ ಎಕ್ಸಿಟ್ ಪೋಲ್ ಪ್ರಕಾರ, ಮಹಾರಾಷ್ಟ್ರದಲ್ಲಿ ಸಮಬಲದ ಪೈಪೋಟಿಯ ಭವಿಷ್ಯ ನುಡಿದಿದೆ. ಬಿಜೆಪಿ ನೇತೃತ್ವದ ಮಹಾಯಿತಿ ಮೈತ್ರಿಕೂಟ 137 ರಿಂದ 157 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ 126 ರಿಂದ 146 ಸ್ಥಾನಗಳನ್ನು ಗೆಲ್ಲಬಹುದು. ಇತರರು 2 ರಿಂದ 8 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ.

4) ನ್ಯೂಸ್ 24 ಚಾಣಕ್ಯ ಎಕ್ಸಿಟ್ ಪೋಲ್‌ ಪ್ರಕಾರ ಮಹಾಯುತಿಗೆ ಗೆಲುವು

ಮಹಾರಾಷ್ಟ್ರ ಚುನಾವಣೆ 2024ರಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಗೆಲುವಿನ ನಗೆ ಬೀರಲಿದ್ದು, ಆಡಳಿತ ಮುಂದುವರಿಸಲಿದೆ ಎಂದು ನ್ಯೂಸ್ 24 ಚಾಣಕ್ಯ ಎಕ್ಸಿಟ್ ಪೋಲ್ ಫಲಿತಾಂಶ ಹೇಳಿದೆ. ಇದರಂತೆ, ಮಹಾಯುತಿ ಮೈತ್ರಿಗೆ 152 ರಿಂದ 160 ಸ್ಥಾನಗಳು, ಮಹಾ ವಿಕಾಸ್ ಅಘಾಡಿಗೆ 130 ರಿಂದ 138 ಸ್ಥಾನಗಳು ಸಿಗುವ ಸಾಧ್ಯತೆ ಇದೆ.

5) ಲೋಕಶಾಹಿ ಮರಾಠಿ-ರುದ್ರ ಎಕ್ಸಿಟ್ ಪೋಲ್‌ನಲ್ಲಿ ಸಮಬಲದ ಪೈಪೋಟಿ

ಲೋಕಶಾಹಿ ಮರಾಠಿ-ರುದ್ರ ಎಕ್ಸಿಟ್ ಪೋಲ್‌ ಫಲಿತಾಂಶದ ಪ್ರಕಾರ, ಮಹಾರಾಷ್ಟ್ರದಲ್ಲಿ ಎರಡು ಮೈತ್ರಿಕೂಟಗಳ ನಡುವೆ ನಿಕಟ ಹೋರಾಟ ಸಾಧ್ಯತೆ ಇದೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ 128 ರಿಂದ 142 ಸ್ಥಾನ, ಕಾಂಗ್ರೆಸ್ ನೇತೃತ್ವದ ಭಾರತ್ ಬ್ಲಾಕ್‌ಗೆ 125 ರಿಂದ 140 ಸ್ಥಾನ ಸಿಗಬಹುದು, ಇತರರು 18 ರಿಂದ 23 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಲೋಕಶಾಹಿ ಮರಾಠಿ-ರುದ್ರ ಎಕ್ಸಿಟ್ ಪೋಲ್ ಫಲಿತಾಂಶ ಹೇಳಿದೆ.

6) ಟೈಮ್ಸ್ ನೌ - ಜೆವಿಸಿ ಎಕ್ಸಿಟ್ ಪೋಲ್‌ನಲ್ಲಿ ಮಹಾಯುತಿಗೆ ಆಡಳಿತ

ಮಹಾರಾಷ್ಟ್ರ ಚುನಾವಣೆಯಲ್ಲಿ ಈ ಬಾರಿ ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ 150 ರಿಂದ 167 ಸ್ಥಾನಗಳಲ್ಲಿ, ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ 107 ರಿಂದ 125 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಸಾಧ್ಯತೆ ಇದೆ ಎಂದು ಟೈಮ್ಸ್ ನೌ - ಜೆವಿಸಿ ಎಕ್ಸಿಟ್ ಪೋಲ್ ಫಲಿತಾಂಶ ಹೇಳಿದೆ.

ಮಹಾರಾಷ್ಟ್ರ ವಿಧಾನಸಭೆಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳಲ್ಲಿ, ಅವಿಭಜಿತ ಶಿವ ಸೇನಾ 56, ಅವಿಭಜಿತ ಎನ್‌ಸಿಪಿ 54, ಕಾಂಗ್ರೆಸ್ ಪಕ್ಷ 44 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಅಂದು ಬಿಜೆಪಿ ಅತಿದೊಡ್ಡ ಪಕ್ಷವಾಗಿದ್ದರೂ ಬಿಜೆಪಿಗೆ ಅಧಿಕಾರ ಚುಕ್ಕಾಣಿ ಹಿಡಿಯಲಾಗಲಿಲ್ಲ. ಆದರೆ 2022ರಲ್ಲಿ ನಡೆದ ನಾಟಕೀಯ ಬೆಳವಣಿಗೆ ಬಳಿಕ ಶಿವ ಸೇನಾ ಏಕನಾಥ ಶಿಂಧೆ ಬಣ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಪಕ್ಷ ಒಡೆದು ಬಿಜೆಪಿ ಜತೆಗೆ ಕೈ ಜೋಡಿಸಿ ಸರ್ಕಾರ ರಚಿಸಿದವು. ಈ ಸಲದ ಮಹಾರಾಷ್ಟ್ರ ಚುನಾವಣೆಯ ಫಲಿತಾಂಶ ನವೆಂಬರ್ 23 (ಶನಿವಾರ ) ಪ್ರಕಟವಾಗಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.