Kannada News  /  Nation And-world  /  Power Behind Billionaire: Rahul Gandhi's Dig At Pm Modi Over Adani Issue
ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Adani Row: 'ಕೋಟ್ಯಾಧಿಪತಿ ಅದಾನಿ ಹಿಂದಿರುವ ಶಕ್ತಿ ಯಾವುದು?' ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

06 February 2023, 19:50 ISTHT Kannada Desk
06 February 2023, 19:50 IST

ಅದಾನಿ-ಹಿಂಡೆನ್‌ಬರ್ಗ್ ವಿವಾದದ ಕುರಿತು ನಡೆಯುತ್ತಿರುವ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೋಟ್ಯಾಧಿಪತಿ ಅದಾನಿ ಹಿಂದಿರುವ ಶಕ್ತಿ ಯಾವುದು? ಎಂದು ಪ್ರಶ್ನಿಸಿದ್ದಾರೆ.

ನವದೆಹಲಿ: ಅದಾನಿ-ಹಿಂಡೆನ್‌ಬರ್ಗ್ ವಿವಾದದ ಕುರಿತು ನಡೆಯುತ್ತಿರುವ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೋಟ್ಯಾಧಿಪತಿ ಅದಾನಿ ಹಿಂದಿರುವ ಶಕ್ತಿ ಯಾವುದು? ಎಂದು ಪ್ರಶ್ನಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿ ವಿವಾದದ ಕುರಿತಾಗಿ ಸಂಸತ್ತಿನಲ್ಲಿ ಚರ್ಚೆಯನ್ನು ತಪ್ಪಿಸಲು ಕೈಲಾದ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್​ ಗಾಂಧಿ, ಇದಕ್ಕೂ ಒಂದು ಕಾರಣವಿದೆ ಮತ್ತು ಅದು ಏನಂದು ನಿಮಗೆ ತಿಳಿದಿದೆ. ನಾನು ಅದಾನಿ ವಿಷಯದ ಬಗ್ಗೆ ಚರ್ಚೆಯನ್ನು ಬಯಸುತ್ತೇನೆ ಮತ್ತು ಸತ್ಯವು ಹೊರಬರಬೇಕು ಎಂದರು.

ನಡೆದಿರುವ ಲಕ್ಷ ಕೋಟಿ ಭ್ರಷ್ಟಾಚಾರ ಹೊರಬರಬೇಕು. ಬಿಲಿಯನೇರ್ ಉದ್ಯಮಿ (ಅದಾನಿ) ಹಿಂದೆ ಯಾವ ಶಕ್ತಿ ಇದೆ ಎಂದು ದೇಶವು ತಿಳಿದುಕೊಳ್ಳಬೇಕು. ನಾನು ಹಲವಾರು ವರ್ಷಗಳಿಂದ ಸರ್ಕಾರ ಮತ್ತು 'ಹಮ್ ದೋ, ಹಮಾರೇ ದೋ' ( ನಾವಿಬ್ಬರು, ನಮಗಿಬ್ಬರು) ಬಗ್ಗೆ ಮಾತನಾಡುತ್ತಿದ್ದೇನೆ. ಅದಾನಿ ಜಿ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲು ಸರ್ಕಾರವು ಬಯಸುವುದಿಲ್ಲ ಮತ್ತು ಹೆದರುತ್ತಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ದೇಶಾದ್ಯಂತ ಜೀವ ವಿಮಾ ನಿಗಮ (ಎಲ್‌ಐಸಿ) ಕಚೇರಿಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಗಳ ಮುಂದೆ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅದಾನಿ ವಿಚಾರವನ್ನು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಅಥವಾ ಅದಾನಿ ಗ್ರೂಪ್ ವಿರುದ್ಧದ ಹಣಕಾಸು ವಂಚನೆ ಆರೋಪಗಳನ್ನು ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿ ರಚಿಸಲು ಆಗ್ರಹಿಸಿವೆ.

ಇಂದೂ ಕೂಡ ಸಂಸತ್ತಿನ ಅಧಿವೇಶನವು ಭಾರಿ ಗದ್ದಲಕ್ಕೆ ಸಾಕ್ಷಿಯಾಯಿತು. ಪ್ರತಿಪಕ್ಷಗಳ ಗದ್ದಲದ ನಂತರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಕಲಾಪ ಮುಂದೂಡಲಾಯಿತು. ಮೊನ್ನೆ ಕೂಡ ಅದಾನಿ ವಿಚಾರವನ್ನು ಪ್ರತಿಪಕ್ಷಗಳು ಎತ್ತಿ ಗದ್ದಲ ಸೃಷ್ಟಿಯಾಗುತ್ತಿದ್ದಂತೆಯೇ ಕಲಾಪವನ್ನು ಮುಂದೂಡಲಾಗಿತ್ತು.

ಏನಿದು ಅದಾನಿ ವಿವಾದ?

ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆಯಾದ ಹಿಂಡೆನ್‌ಬರ್ಗ್ ರಿಸರ್ಚ್, ಅದಾನಿ ಗ್ರೂಪ್‌ನ ಆರ್ಥಿಕ ಸ್ಥಿತಿಗತಿಗಳ ಕುರಿತು ಸಂಚಲನ ಮೂಡಿಸುವ ವರದಿಯನ್ನು ಬಿಡುಗಡೆ ಮಾಡಿತ್ತು. ಅದಾನಿ ಸಮೂಹದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿತ್ತು. ಈ ವರದಿ ಹೊರ ಬೀಳುತ್ತಿದ್ದಂತೆಯೇ ಅದಾನಿ ಷೇರು ಸಾಮ್ರಾಜ್ಯ ಎರಡೇ ದಿನಗಳಲ್ಲಿ ನಾಲ್ಕು ಲಕ್ಷ ಕೋಟಿಗೂ ಅಧಿಕ ಅಧಿಕ ನಷ್ಟ ಅನುಭವಿಸಿದ್ದು, ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿರುವ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಹಾಗೂ ಭಾರತೀಯ ಸ್ಟೇಟ್​ ಬ್ಯಾಂಕ್ (​ಎಸ್​ಬಿಐ)ಗೂ ನಷ್ಟದ ಬಿಸಿ ತಟ್ಟಿದೆ.

ಅದಾನಿ ಗ್ರೂಪ್‌ನ ರಿಟೇಲ್‌ ಮತ್ತು ಸಾಂಸ್ಥಿಕ ಹೂಡಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ. ಅದಾನಿ ಗ್ರೂಪ್​​ನ ಐದು ಅತೀ ದೊಡ್ಡ ಹೂಡಿಕೆದಾರರಲ್ಲಿ ಎಲ್‌ಐಸಿ ಕೂಡ ಒಂದಾಗಿದ್ದು, ಎರಡೇ ದಿನಗಳಲ್ಲಿ ಎಲ್‌ಐಸಿಗೆ 16,580 ಕೋಟಿ ರೂ. ನಷ್ಟವಾಗಿದೆ. ಈ ಹದಿನಾರುವರೆ ಸಾವಿರ ಕೋಟಿ ರೂ.ಗಳಲ್ಲಿ ಅದಾನಿ ಟೋಟಲ್‌ ಗ್ಯಾಸ್‌ನಲ್ಲಿ ಮಾಡಿರುವ ಹೂಡಿಕೆಯಿಂದಲೇ ಎಲ್‌ಐಸಿಯು 6,232 ಕೋಟಿ ರೂ. ನಷ್ಟ ಅನುಭವಿಸಿದೆ. ಅದಾನಿ ಟೋಟಲ್‌ ಗ್ಯಾಸ್‌ನಲ್ಲಿ ಎಲ್‌ಐಸಿಯು ಶೇಕಡ 5.96ರಷ್ಟು ಷೇರು ಹೊಂದಿದೆ.

ಈ ವಿಚಾರವಾಗಿ ಕಾಂಗ್ರೆಸ್​ ಕಿಡಿಕಾರುತ್ತಲೇ ಬಂದಿದ್ದು, ಎಲ್‌ಐಸಿಯ ಘೋಷಣೆಯನ್ನು "ಜಿಂದಗಿ ಕೆ ಸಾಥ್ ಭಿ ಇಂದ ಕೆ ಬಾದ್ ಭಿ" (ಜೀವನದ ಜೊತೆಗೂ ಜೀವನದ ನಂತರವೂ) ಇಂದ "ಜಿಂದಗಿ ಕೆ ಸಾಥ್ ಥಿ, ಅಬ್ ಅದಾನಿಜಿ ಕೆ ಸಾಥ್ ಹೈ" (ಜೀವನದ ಜೊತೆಗಿತ್ತು, ಈಗ ಅದಾನಿ ಜೊತೆ ಇದೆ) ಎಂದು ಬದಲಾಯಿಸುವ ಸಮಯ ಬಂದಿದೆ ಎಂದು ಕಾಂಗ್ರೆಸ್ ನಾಯಕ ಪವನ್​ ಖೇರಾ ಹೇಳಿದ್ದಾರೆ. ಯಾರ ಸೂಚನೆಯ ಮೇರೆಗೆ ಎಲ್‌ಐಸಿ ಅದಾನಿ ಗ್ರೂಪ್​ನಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಿತು ಎಂದು ಪ್ರಶ್ನಿಸಿದ್ದಾರೆ.

"ಅದಾನಿ ಸಮಸ್ಯೆಯು ಖಂಡಿತವಾಗಿಯೂ ಸೆಬಿ ಮತ್ತು ಆರ್‌ಬಿಐ ತನಿಖೆಯನ್ನು ಸಮರ್ಥಿಸುತ್ತದೆ. ಇದು ನಿಜವಾಗಿಯೂ ಸ್ವತಂತ್ರವಾಗಿದೆಯೇ ಎಂಬುದು ಪ್ರತ್ಯೇಕ ವಿಷಯವಾಗಿದೆ, ಅದಾನಿ ಆಡಳಿತವು ದೇಶದ ಆಡಳಿತದೊಂದಿಗೆ ವಿಶೇಷ ಸಂಬಂಧವನ್ನು ಹಂಚಿಕೊಂಡಿದೆ - ಇದನ್ನು ನರೇಂದ್ರದಾನಿ ಎಂದು ಕರೆಯಬಹುದು. ಅದಾನಿ ವಿಚಾರದಲ್ಲಿ ಮೋದಿ ಸರ್ಕಾರ ಸ್ಪಷ್ಟವಾಗಿ ಮೂಲೆಗುಂಪಾಗಿದೆ. ಅದನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲೂ ಮೋದಿ ಸರ್ಕಾರ ಬಯಸುವುದಿಲ್ಲ" ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.