Royal Enfield: ರಸ್ತೆಗಿಳಿಯಲು ಸರತಿಯಲ್ಲಿವೆ ರಾಯಲ್ ಎನ್‌ಫೀಲ್ಡ್‌ನ 4 ಬೈಕ್, ಬುಲೆಟ್ ಪ್ರಿಯರಿಗೆ ರೋಮಾಂಚನ, ಇಲ್ಲಿದೆ ವಿವರ
Royal Enfield Upcoming Bikes in India 2023: ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ವರ್ಷ ನಾಲ್ಕು ಹೊಸ ಬೈಕ್‌ಗಳನ್ನು ರಸ್ತೆಗಿಳಿಸಲಿದೆ. ಹಿಮಾಲಯನ್ 450(Royal Enfield Himalayan 450), ಬುಲೆಟ್ 350(Bullet 350), ಶೂಟ್‌ಗನ್ 650 (Shotgun 650), ಕ್ಲಾಸಿಕ್ ಬೂಬ್ಬರ್ 350 (Classic Bobber 350) ಗಳು ಈ ವರ್ಷ ರಸ್ತೆಗಿಳಿಯಲಿವೆ.
ದೇಶದಲ್ಲಿ ದ್ವಿಚಕ್ರವಾಹನಗಳಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಠೀವಿ, ಗತ್ತು ಜಾಸ್ತಿ. ಅನಾದಿ ಕಾಲದಿಂದ ಬುಡುಬುಡು ಸದ್ದು ಮಾಡುತ್ತ ರಸ್ತೆಯಲ್ಲಿ ಸಾಗುತ್ತಿದ್ದ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳು ಈಗಿನ ಟ್ರೆಂಡ್‌ಗೆ ತಕ್ಕಂತೆ ಸಾಕಷ್ಟು ಅಪ್‌ಡೇಟ್ ಆಗಿವೆ. ಒಂದಕ್ಕಿಂತ ಒಂದು ಸುಂದರ ಎನ್ನುವ ರೀತಿಯಲ್ಲಿ ಬಗೆಬಗೆಯ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ರಸ್ತೆಯಲ್ಲಿವೆ. ಈಗಾಗಲೇ ರಾಯಲ್ ಎನ್‌ಫೀಲ್ಡ್ ಕಂಪನಿಯು ಸೂಪರ್ ಮೀಟೊರ್ 650 ಬೈಕನ್ನು ಪರಿಚಯಿಸಿದೆ. ಇದರೊಂದಿಗೆ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650ಯ ಅಪ್‌ಡೇಟೆಡ್ ಆವೃತ್ತಿಗಳನ್ನು ಪರಿಚಯಿಸಿದೆ. ಎಚ್‌ಟಿ ಆಟೋದ ಮೂಲಗಳ ಪ್ರಕಾರ ಈ ವರ್ಷ ರಾಯಲ್ ಎನ್‌ಫೀಲ್ಡ್ ಕಂಪನಿಯು ನಾಲ್ಕು ಹೊಸ ಬೈಕ್‌ಗಳನ್ನು ಪರಿಚಯಿಸಲಿದೆ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 (Royal Enfield Himalayan 450)
ಇದನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯ ಬಹುನಿರೀಕ್ಷಿತ ಬೈಕ್ ಎಂದರೂ ತಪ್ಪಾಗದು. ಇದರ ವಿನ್ಯಾಸ ಮಾತ್ರವಲ್ಲದೆ ಪವರ್ ಕೂಡ ಬುಲೆಟ್ ಪ್ರಿಯರಿಗೆ ಅಚ್ಚುಮೆಚ್ಚಾಗಬಲ್ಲದು. ಇದರಲ್ಲಿ 450 ಸಿಸಿಯ ಎಂಜಿನ್ ಇರಲಿದ್ದು, 40-45 ಬಿಎಚ್‌ಪಿ ಮತ್ತು 40 ಎನ್‌ಎಂ ಟಾರ್ಕ್ ಪವರ್ ನಿರೀಕ್ಷಿಸಬಹುದು. ಈ ವರ್ಷದ ದೀಪಾವಳಿ ವೇಳೆಗೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ರಸ್ತೆಗಿಳಿಯುವ ನಿರೀಕ್ಷೆಯಿದೆ.
ರಾಯಲ್ ಎನ್‌ಫೀಲ್ಡ್ ಬುಲೆಟ್ 350 (Royal Enfield Bullet 350)
ಜೆ ಪ್ಲಾಟ್‌ಫಾರ್ಮ್‌ನ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆವ್ಯಕ್ತವಾದ ಹಿನ್ನಲೆಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಬುಲೆಟ್ 350 ಪರಿಚಯಿಸಲು ಮುಂದಾಗಿದೆ. ಇದರ ಎಂಜಿನ್ ಹಿಂದಿನಂತೆಯೇ ಇರಲಿದೆ. ಕ್ಲಾಸಿಕ್ 350ಗಿಂತ ವಿನ್ಯಾಸ ಕೊಂಚ ಅನನ್ಯವಾಗಿರುವ ನಿರೀಕ್ಷೆಯಿದೆ.
ರಾಯಲ್ ಎನ್‌ಫೀಲ್ಡ್ ಶೂಟ್‌ಗನ್ 650 (Royal Enfield Shotgun 650)
ಈ ವರ್ಷ ಜನವರಿ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಸೂಪರ್ ಮಿಟೋರ್ 650 ಬೈಕನ್ನು ಪರಿಚಯಿಸಿತ್ತು. ಇದು ಬುಲೆಟ್ ಪ್ರಿಯರಲ್ಲಿ ಕೆಲವರಿಗೆ ಇಷ್ಟವಾಯಿತು, ಇನ್ನು ಕೆಲವರಿಗೆ ಇಷ್ಟವಾಗಲಿಲ್ಲ. ಇದೇ ಕಾರಣಕ್ಕಾಗಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಮಧ್ಯಮ ಸೆಟ್‌ನ ಫೂಟ್‌ಪೆಗ್ಸ್ ಮತ್ತು ಫ್ಲಾಟಾದ ಹ್ಯಾಂಡಲ್‌ಬಾರ್‌ನೊಂದಿಗೆ ಹೊಸ ಬೈಕ್ ಪರಿಚಯಿಸಲು ಮುಂದಾಗಿದೆ. ಇದರ ಎಗ್ಸಾಸ್ಟ್ ವಿನ್ಯಾಸವೂ ಭಿನ್ನವಾಗಿರಲಿದೆ. ಇದಕ್ಕೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಶೂಟ್‌ಗನ್ 650 ಎಂದು ಹೆಸರಿಡಲಿದೆ. ಸದ್ಯ ಈ ಬೈಕ್‌ಗೆ SG650 ಎಂದು ಕಂಪನಿ ಹೆಸರಿಟ್ಟಿದೆ. ಲಾಂಚ್ ಸಮಯದಲ್ಲಿ ಶೂಟ್‌ಗನ್ ಎಂದಾಗಲಿದೆ.
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೂಬ್ಬರ್ 350 (Royal Enfield Classic Bobber 350)
ಸದ್ಯಕ್ಕೆ ಈ ನಾಲ್ಕನೇ ಬೈಕ್ ಕುರಿತು ಹೆಚ್ಚಿನ ವಿವರ ಲಭ್ಯವಿಲ್ಲ. ಇದು ಕ್ಲಾಸಿಕ್ 350ನ ಬೂಬ್ಬರ್ ಆವೃತ್ತಿಯಾಗಿರಲಿದೆ. ಇದು ಸಿಂಗಲ್ ಸೀಟ್ ಹೊಂದಿರಲಿದೆ.
ಒಟ್ಟಾರೆ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಲು ಬಯಸುವವರಿಗೆ ಹಲವು ಆಯ್ಕೆಗಳಿವೆ. ಅವರವರ ಅಭಿರುಚಿ, ಅವಶ್ಯಕತೆಗೆ ತಕ್ಕಂತೆ ರಾಯಲ್ ಎನ್‌ಫೀಲ್ಡ್ ಖರೀದಿಸಿ ರಸ್ತೆಯಲ್ಲಿ ರಾಜರಂತೆ ಸವಾರಿ ಮಾಡಬಹುದು.