Meta Job Cut: ಮೆಟಾದಿಂದ ಉದ್ಯೋಗ ಕಡಿತ, ಈ ಬಾರಿ ವಾಟ್ಸಪ್, ಇನ್‌ಸ್ಟಾಗ್ರಾಂ ಉದ್ಯೋಗಿಗಳಿಗೆ ಪಿಂಕ್‌ಸ್ಲಿಪ್
ಮೆಟಾ ಕಂಪನಿಯು ತನ್ನ ವಾಟ್ಸಪ್, ಇನ್‌ಸ್ಟಾಗ್ರಾಂ, ರಿಯಾಲಿಟಿ ಲ್ಯಾಬ್ ತಂಡದ ಹಲವು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ತಂಡಗಳ ಪುನರ್‌ರಚನೆ ಮತ್ತು ದೀರ್ಘಕಾಲದ ಗುರಿಗಳಿಗೆ ತಕ್ಕಂತೆ ಈ ಜಾಬ್ ಕಟ್ ಮಾಡುತ್ತಿದೆಯಂತೆ.
ಬೆಂಗಳೂರು: ತಂತ್ರಜ್ಞಾನ ಕಂಪನಿಗಳು ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗುವ ಸೂಚನೆ ದೊರಕಿದೆ. ಫೇಸ್‌ಬುಕ್‌ನ ಮೂಲಕಂಪನಿ ಮೆಟಾವು ದೊಡ್ಡಮಟ್ಟದ ಉದ್ಯೋಗ ಕಡಿತ ನಡೆಸುತ್ತಿದೆ. ವರದಿಗಳ ಪ್ರಕಾರ, ಕಂಪನಿಯು ಇನ್‌ಸ್ಟಾಂಟ್ ಮೆಸೆಂಜಿಂಗ್ ಆಪ್ ವಾಟ್ಸಪ್, ಸೋಷಿಯಲ್ ಮೀಡಿಯಾ ಆಪ್ ಇನ್‌ಸ್ಟಾಗ್ರಾಂ ಮತ್ತು ರಿಯಾಲಿಟಿ ಲ್ಯಾಬ್‌ಗಳಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ ಎಂದು ದಿ ವರ್ಜ್ ವರದಿ ಮಾಡಿದೆ. ಕಂಪನಿಯ ಕೆಲವೊಂದು ತಂಡಗಳ ಪುನರ್‌ರಚನೆಯ ಉದ್ದೇಶಕ್ಕಾಗಿ ಜಾಬ್‌ಕಟ್ ಮಾಡುತ್ತಿದೆ ಎಂದು ವರದಿಗಳು ತಿಳಿಸಿವೆ.
ಉದ್ಯೋಗ ಕಡಿತ ಖಚಿತಪಡಿಸಿದ ಕಂಪನಿ
ಈ ಉದ್ಯೋಗ ಕಡಿತದ ಪರಿಣಾಮಕ್ಕೆ ಒಳಗಾದ ಹಲವು ಉದ್ಯೋಗಿಗಳು "ಜಾಬ್ ಕಟ್ ಸುದ್ದಿ"ಯನ್ನು ಖಚಿತಪಡಿಸಿದ್ದಾರೆ ಎಂದು ವರ್ಜ್ ವರದಿ ಮಾಡಿದೆ. "ನನ್ನ ಉದ್ಯೋಗ ಕಡಿತ ಪ್ರಕ್ರಿಯೆಯಲ್ಲಿದೆ. ನನ್ನ ಹುದ್ದೆಯ ಮೇಲೆ ಪರಿಣಾಮವಾಗಿದೆ ಎಂದು ಕಂಪನಿ ತಿಳಿಸಿದೆ. ನನ್ನ ಎಲ್ಲಾ ತಂಡಕ್ಕೆ ಧನ್ಯವಾದಗಳು" ಎಂದು ಇನ್‌ಸ್ಟಾಗ್ರಾಂ ಉದ್ಯೋಗಿ ಜಾನೆ ಮುಚಾನ್ ವೋಂಗ್ ಹೇಳಿದ್ದಾರೆ.
ಮೆಟಾ ಕಂಪನಿಯು ಈ ಲೇಯಾಫ್ ಕುರಿತು ದಿ ವರ್ಜ್‌ಗೆ ಖಚಿತಪಡಿಸಿದೆ. "ಕಂಪನಿಯ ದೀರ್ಘಕಾಲದ ಕಾರ್ಯತಂತ್ರಗಳು, ಗುರಿಗಳು, ಆಯಾ ಸ್ಥಳಕ್ಕೆ ಸಂಬಂಧಪಟ್ಟ ಕಾರ್ಯತಂತ್ರಗಳಿಗೆ ತಕ್ಕಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಮೆಟಾ ತಿಳಿಸಿದೆ."ಈ ಸಂದರ್ಭದಲ್ಲಿ ಕೆಲವು ಉದ್ಯೋಗಿಗಳನ್ನು ಬೇರೆ ಸ್ಥಳಗಳಿಗೆ ಕಳುಹಿಸಲಾಗುತ್ತದೆ. ಕೆಲವು ಉದ್ಯೋಗಿಗಳನ್ನು ಬೇರೆ ಹುದ್ದೆಗೆ ನೇಮಕ ಮಾಡಲಾಗುತ್ತದೆ. ಈ ಸ್ಥಿತಿಯಲ್ಲಿ ಕೆಲವು ಹುದ್ದೆಗಳ ಮೇಲೆ ಪರಿಣಾಮ ಬೀರಲಿದೆ" ಎಂದು ಕಂಪನಿ ತಿಳಿಸಿದೆ.
ಮೆಟಾ ಕಂಪನಿಯ ಈ ಹಿಂದಿನ ಉದ್ಯೋಗ ಕಡಿತ
ಮೆಟಾ ಕಂಪನಿಯು ಕೋವಿಡ್19 ಸಾಂಕ್ರಾಮಿಕದ ಸಮಯದಲ್ಲಿ ದೊಡ್ಡಮಟ್ಟದಲ್ಲಿ ಉದ್ಯೋಗ ಕಡಿತ ಮಾಡಿತ್ತು. 2022ರಲ್ಲಿ ಕಂಪನಿಯು ಸುಮಾರು 11 ಸಾವಿರ ಉದ್ಯೋಗ ಕಡಿತ ಮಾಡಿತ್ತು. 2023ರಲ್ಲಿ ಮತ್ತೆ 10 ಸಾವಿರದಷ್ಟು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್‌ನೀಡಿತ್ತು. ಅಂದಹಾಗೆ, ಮೆಟಾ ಮಾತ್ರವಲ್ಲ, ಇತರೆ ಪ್ರಮುಖ ಕಂಪನಿಗಳು ಈ ಸಂದರ್ಭದಲ್ಲಿ ಸಾಕಷ್ಟು ಉದ್ಯೋಗಿಗಳ ಜಾಬ್ ಕಟ್ ಮಾಡಿದೆ. ಮೈಕ್ರೊಸಾಫ್ಟ್, ಗೂಗಲ್, ಅಮೆಜಾನ್ ಕೂಡ ಇತ್ತೀಚಿನ ವರ್ಷಗಳಲ್ಲಿ ತಮ್ಮ ಉದ್ಯೋಗ ಪಡೆಯನ್ನು ಚಿಕ್ಕದಾಗಿಸಿದೆ. ಜನವರಿ 2023ರಲ್ಲಿ ಮೈಕ್ರೊಸಾಫ್ಟ್ ಕಂಪನಿಯು 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿತ್ತು. ಗೂಗಲ್‌ನ ಮೂಲ ಕಂಪನಿ ಆಲ್ಪಬೆಟ್ ಕೂಡ ಅದೇ ತಿಂಗಳು 12 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು.