EPFO 3 Schemes: ಫ್ರೆಶರ್‌ಗಳಿಗೆ 1 ತಿಂಗಳು ವೇತನ ಉಚಿತ, ಬಜೆಟ್‌ನ ಈ ಘೋಷಣೆ ನಿಮಗೆ ಕೇಳಿಸ್ತಾ? ಇಪಿಎಫ್‌ಒ ಆಧರಿತ ಸರಕಾರದ 3 ಸ್ಕೀಮ್‌ಗಳ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Epfo 3 Schemes: ಫ್ರೆಶರ್‌ಗಳಿಗೆ 1 ತಿಂಗಳು ವೇತನ ಉಚಿತ, ಬಜೆಟ್‌ನ ಈ ಘೋಷಣೆ ನಿಮಗೆ ಕೇಳಿಸ್ತಾ? ಇಪಿಎಫ್‌ಒ ಆಧರಿತ ಸರಕಾರದ 3 ಸ್ಕೀಮ್‌ಗಳ ವಿವರ

EPFO 3 Schemes: ಫ್ರೆಶರ್‌ಗಳಿಗೆ 1 ತಿಂಗಳು ವೇತನ ಉಚಿತ, ಬಜೆಟ್‌ನ ಈ ಘೋಷಣೆ ನಿಮಗೆ ಕೇಳಿಸ್ತಾ? ಇಪಿಎಫ್‌ಒ ಆಧರಿತ ಸರಕಾರದ 3 ಸ್ಕೀಮ್‌ಗಳ ವಿವರ

Budget 2024: ಕೇಂದ್ರ ಬಜೆಟ್‌ 2024-25ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಪಿಎಫ್‌ಒ ಸೇರ್ಪಡೆ ಮೂಲಕ ಮೊದಲ ಬಾರಿಗೆ ಉದ್ಯೋಗ ಕ್ಷೇತ್ರಕ್ಕೆ ಆಗಮಿಸುವ ಉದ್ಯೋಗಿಗಳಿಗೆ ಪ್ರಯೋಜನಕಾರಿಯಾಗುವ ಮೂರು ಯೋಜನೆಗಳ ಪ್ರಸ್ತಾಪ ಮಾಡಿದ್ದಾರೆ. ಇದು ಉದ್ಯೋಗದಾತರಿಗೆ ಮತ್ತು ಉದ್ಯೋಗ ಸೃಷ್ಟಿಗೂ ನೆರವಾಗಲಿದೆ.

EPFO 3 schemes: ಫ್ರೆಶರ್‌ಗಳಿಗೆ 1 ತಿಂಗಳು ವೇತನ ಉಚಿತ
EPFO 3 schemes: ಫ್ರೆಶರ್‌ಗಳಿಗೆ 1 ತಿಂಗಳು ವೇತನ ಉಚಿತ

ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್‌ಒ) ದಾಖಲಾತಿ ಆಧರಿಸಿ ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ಪ್ರಯೋಜನಕಾರಿಯಾದ ಮೂರು ಉದ್ಯೋಗ-ಸಂಯೋಜಿತ (ಎಂಪ್ಲಾಯ್‌ಮೆಂಟ್‌ ಲಿಂಕ್ಡ್‌ ) ಪ್ರೋತ್ಸಾಹ ಯೋಜನೆಗಳನ್ನು ಘೋಷಿಸಿದ್ದಾರೆ. ಉದ್ಯೋಗ ನೇಮಕವನ್ನು ಉತ್ತೇಜಿಸುವ ಸರಕಾರದ ಪ್ರಯತ್ನದ ಭಾಗವಾಗಿ ಈ ಮೂರು ಯೋಜನೆಗಳನ್ನು ಘೋಷಿಸಲಾಗಿದೆ. ಈ ಮೂರು ಸ್ಕೀಮ್‌ಗಳಲ್ಲಿ ಸ್ಕೀಮ್‌ ಒಂದರಲ್ಲಿ ಫ್ರೆಶರ್‌ಗಳಿಗೆ ಒಂದು ತಿಂಗಳ ವೇತನ ನೀಡುವ ಪ್ರಸ್ತಾಪವೂ ಇದೆ. ಉಳಿದಂತೆ ಸ್ಕೀಮ್‌ ಬಿ ಮತ್ತು ಸ್ಕೀಮ್‌ ಸಿ ಮೂಲಕ ಉದ್ಯೋಗ ಕ್ಷೇತ್ರಕ್ಕೆ ಪ್ರಯೋಜನಕಾರಿಯಾದ ಹಲವು ಅಂಶಗಳನ್ನು ಘೋಷಿಸಲಾಗಿದೆ. ಇಪಿಎಫ್‌ಒ ನೋಂದಣಿಯಾದ ಫ್ರೆಶರ್‌ಗಳಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಲಿದೆ. ಇಪಿಎಫ್‌ಒ ದಾಖಲಾತಿ ಹೆಚ್ಚಿಸುವ ಗುರಿಯೊಂದಿಗೆ ದೇಶದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಿಸುವ ಆಶಯವನ್ನೂ ಈ ಯೋಜನೆಗಳು ಹೊಂದಿವೆ.

"ನಮ್ಮ ಸರ್ಕಾರವು ಪ್ರಧಾನ ಮಂತ್ರಿಗಳ ಪ್ಯಾಕೇಜ್‌ನ ಭಾಗವಾಗಿ ಉದ್ಯೋಗ-ಸಂಯೋಜಿತ ಪ್ರೋತ್ಸಾಹ ನೀಡುತ್ತಿದೆ. ಇದರ ಅಡಿಯಲ್ಲಿ ಮೂರು ಯೋಜನೆಗಳನ್ನು ಜಾರಿಗೆ ತರುತ್ತದೆ - ಇಪಿಎಫ್‌ನಲ್ಲಿ ದಾಖಲಾತಿ, ಮೊದಲ ಬಾರಿ ಉದ್ಯೋಗ ಕ್ಷೇತ್ರಕ್ಕೆ ಆಗಮಿಸುವ ಉದ್ಯೋಗಿಗಳ ಗುರುತಿಸುವಿಕೆಯನ್ನು ಇದು ಒಳಗೊಂಡಿದೆ" ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಒಂದು ತಿಂಗಳು ಉಚಿತ ವೇತನ

"ಇಪಿಎಫ್‌ಒನಲ್ಲಿ ಹೆಸರು ನೋಂದಾಯಿಸಿರುವ ಫಸ್ಟ್‌ ಟೈಮ್‌ ಉದ್ಯೋಗಿಗಳಿಗೆ ಅಂದರೆ ಫ್ರೆಶರ್‌ಗಳಿಗೆ ಒಂದು ತಿಂಗಳ ವೇತನವನ್ನು ಮೂರು ಕಂತಿನಲ್ಲಿ ಇಪಿಎಫ್‌ಒ ನೀಡಲಿದೆ. ಗರಿಷ್ಠ 15 ಸಾವಿರ ರೂಪಾಯಿವರೆಗೆ ಮಾತ್ರ ವೇತನ ನೀಡಲಿದೆ. ಇದು ಈ ಸ್ಕೀಮ್‌ನ ನೇರ ಪ್ರಯೋಜನ. ತಿಂಗಳಿಗೆ 1 ಲಕ್ಷ ರೂಪಾಯಿಗಿಂತ ಕಡಿಮೆ ವೇತನವಿರುವ ಫ್ರೆಶರ್‌ಗಳಿಗೆ ಈ ಪ್ರಯೋಜನ ದೊರಕಲಿದೆ" ಎಂದು ಕೇಂದ್ರ ಹಣಕಾಸು ಸಚಿವರು ತಮ್ಮ ಬಜೆಟ್‌ ಭಾಷಣದಲ್ಲಿ ಹೇಳಿದ್ದಾರೆ.

ಉದ್ಯೋಗ ಸಂಯೋಜಿತ 3 ಸ್ಕೀಮ್‌ಗಳ ವಿವರ

ಸ್ಕೀಮ್‌ ಎ

ಈ ಯೋಜನೆಯಡಿಯಲ್ಲಿ ಮೊದಲ ಬಾರಿ ಉದ್ಯೋಗ ಪಡೆದವರು (ಫ್ರೆಶರ್ಸ್‌) 15 ಸಾವಿರ ರೂಪಾಯಿವರೆಗೆ ಸಬ್ಸಿಡಿ ರೂಪದಲ್ಲಿ ಪಡೆಯುತ್ತಾರೆ. ಫ್ರೆಶರ್ಸ್‌ ಇನ್ನೂ ಕಲಿಕೆಯ ಹಂತದಲ್ಲಿರುತ್ತಾರೆ ಮತ್ತು ಅವರು ಪೂರ್ಣ ಹಂತದಲ್ಲಿ ಉತ್ಪಾದಕರಾಗಿರುವುದಿಲ್ಲ. ಹೀಗಾಗಿ ಈ ಒಂದು ತಿಂಗಳ ಸಬ್ಸಿಡಿ ವೇತನ ನೀಡಲಾಗುವುದು. ಇದು ಎಲ್ಲಾ ವಲಯಗಳಿಗೆ ಅನ್ವಯವಾಗುತ್ತದೆ. 1 ಲಕ್ಷ ರೂಪಾಯಿಗಿಂತ ಕಡಿಮೆ ವೇತನ ಇರುವ ಇಪಿಎಫ್‌ಒ ನೋಂದಣಿಯಾಗುವ ಎಲ್ಲರಿಗೂ ಇದು ಅನ್ವಯವಾಗುತ್ತದೆ. ಸಬ್ಸಿಡಿಯನ್ನು ಉದ್ಯೋಗಿಗಳಿಗೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ.

ಮೊದಲ ತಿಂಗಳ ಉಚಿತ ವೇತನ/ಸಬ್ಸಿಡಿ ಪಡೆಯುವುದು ಹೇಗೆ?

ಹಾಗಂತ, ಎಲ್ಲಾ ಫ್ರೆಶರ್‌ಗಳಿಗೆ 15 ಸಾವಿರ ರೂಪಾಯಿ ಪಾವತಿಸುತ್ತದೆ ಎಂದುಕೊಳ್ಳಬೇಡಿ. ಇದಕ್ಕೊಂದು ಸಣ್ಣ ಷರತ್ತು ಇದೆ. ಈ ರೀತಿ ಮೊದಲ ತಿಂಗಳ ಸಬ್ಸಿಡಿ ವೇತನ ಪಡೆಯಲು ಬಯಸುವವರು ಕಡ್ಡಾಯವಾಗಿ "ಆನ್‌ಲೈನ್‌ ಆರ್ಥಿಕ ಸಾಕ್ಷರತೆ ಕೋರ್ಸ್‌" ( online Financial Literacy course) ಬರೆಯಬೇಕು. ಇದು ಸರಳ ಕೋರ್ಸ್‌ ಆಗಿದೆ. ಎಲ್ಲಾದರೂ 12 ತಿಂಗಳಲ್ಲೂ ಈ ಆನ್‌ಲೈನ್‌ ಸಾಕ್ಷರತೆ ಕೋರ್ಸ್‌ ಪಾಸ್‌ ಮಾಡಲು ಸಾಧ್ಯವಾಗದೆ ಇದ್ದರೆ ಅಂತಹ ಉದ್ಯೋಗಿಗಳು ತಮ್ಮ ಸಬ್ಸಿಡಿಯನ್ನು ವಾಪಸ್‌ ನೀಡಬೇಕಾಗುತ್ತದೆ. ಉದ್ಯೋಗಿಯು ಎರಡನೇ ಕಂತು ಸಬ್ಸಿಡಿ ಪಡೆಯುವ ಮೊದಲು ಈ ಕೋರ್ಸ್‌ ಪಾಸ್‌ ಮಾಡಬೇಕು. ಫ್ರೆಶರ್‌ಗಳು ಎರಡು ವರ್ಷದೊಳಗೆ ಈ ಕೋರ್ಸ್‌ ಪಾಸ್‌ ಮಾಡಿ ಉಚಿತ ಮೊದಲ ತಿಂಗಳ ವೇತನ ಪಡೆಯಲು ಪ್ರಯತ್ನಿಸಬಹುದು. ಆನ್‌ಲೈನ್‌ ಆರ್ಥಿಕ ಸಾಕ್ಷರತೆಯ ಕೋರ್ಸ್‌ ಹೆಚ್ಚು ಕಠಿಣ ಇರೋದಿಲ್ಲ. ತುಸು ಸಿದ್ಧತೆ ನಡೆಸಿಕೊಂಡು ಬರೆದರೆ ಸುಲಭವಾಗಿ ಪಾಸ್‌ ಆಗಬಹುದು.

ಸ್ಕೀಮ್‌ ಬಿ

ಕಳೆದ ಮೂರು ವರ್ಷಗಳ ಉತ್ತಮ ಇಪಿಎಫ್‌ಒ ಟ್ರ್ಯಾಕ್‌ ರೆಕಾರ್ಡ್‌ ಹೊಂದಿರುವ ಕಾರ್ಪೊರೇಟ್‌ ಅಥವಾ ಕಾರ್ಪೊರೇಟ್‌ ಅಲ್ಲದ ಉದ್ಯೋಗದಾತರು ಈ ಸ್ಕೀಮ್‌ನ ಪ್ರಯೋಜನ ಪಡೆಯಬಹುದು. ತಯಾರಿಕಾ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗದಾತರಾಗುವವರಿಗೆ ಸ್ಕೀಮ್‌ ಬಿ ಮೂಲಕ ಹಲವು ಪ್ರಯೋಜನ ನೀಡಲಾಗಿದೆ.

ಸ್ಕೀಮ್‌ ಸಿ

ಹಿಂದಿನ ವರ್ಷಕ್ಕೆ ಹೋಲಿಸಿದರೆ ತಮ್ಮ ಉದ್ಯೋಗಿಗಳ ಬೇಸ್‌ಲೈನ್‌ ಅನ್ನು ಹೆಚ್ಚಿಸಿರುವ ಉದ್ಯೋಗದಾತರುವವರಿಗೆ ಈ ಸ್ಕೀಮ್‌ನಡಿ ಪ್ರಯೋಜನ ದೊರಕಲಿದೆ. ಈ ಸ್ಕೀಮ್‌ನ ಷರತ್ತುಗಳನ್ನು ಪೂರೈಸಿದ ಉದ್ಯೋಗದಾತರು "ಹೊಸ ಉದ್ಯೋಗಿಗಳಿಗೆ ಕಂಪನಿಯ ಕಡೆಯಿಂದ ಪಾವತಿಸಿದ ಇಪಿಎಫ್‌ಒ ಕೊಡುಗೆಯ ಹಣವನ್ನು ಮರಳಿ ಪಡೆಯುವ" ಅವಕಾಶ ದೊರಕುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.