Ram Lalla Idol: ಕಣ್ಣು ತೆರೆದ ಬಾಲರಾಮ ಫೋಟೋ ನಕಲಿ, ತನಿಖೆಗೆ ಆಗ್ರಹಿಸಿದ ಅಯೋಧ್ಯೆ ರಾಮ ಮಂದಿರ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ram Lalla Idol: ಕಣ್ಣು ತೆರೆದ ಬಾಲರಾಮ ಫೋಟೋ ನಕಲಿ, ತನಿಖೆಗೆ ಆಗ್ರಹಿಸಿದ ಅಯೋಧ್ಯೆ ರಾಮ ಮಂದಿರ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್

Ram Lalla Idol: ಕಣ್ಣು ತೆರೆದ ಬಾಲರಾಮ ಫೋಟೋ ನಕಲಿ, ತನಿಖೆಗೆ ಆಗ್ರಹಿಸಿದ ಅಯೋಧ್ಯೆ ರಾಮ ಮಂದಿರ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್

ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೆ ಮೊದಲು ಬಾಲರಾಮನ ಕಣ್ಣು ತೆರೆದು ತೋರಿಸಲಾಗುವುದಿಲ್ಲ. ಅಂತಹ ಪದ್ಧತಿ ಇಲ್ಲ. ಧಾರ್ಮಿಕ ವಿಧಿ ವಿಧಾನ ಪ್ರಕಾರವೇ ಎಲ್ಲವೂ ನಡೆಯುತ್ತಿದೆ. ವೈರಲ್ ಆಗಿರುವ ಫೋಟೋ ನಕಲಿ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಸ್ಪಷ್ಟಪಡಿಸಿದರು.

ಅಯೋಧ್ಯೆ ರಾಮ ಮಂದಿರದ ಬಾಲರಾಮ ಮೂರ್ತಿಯ ಕಣ್ಣು ತೆರೆದ ಮುಖ ಕಾಣಿಸಿರುವ ಮೊದಲ ಚಿತ್ರ ಎಂದು ವೈರಲ್‌ ಆಗಿರುವ ಫೋಟೋ ಇದು.
ಅಯೋಧ್ಯೆ ರಾಮ ಮಂದಿರದ ಬಾಲರಾಮ ಮೂರ್ತಿಯ ಕಣ್ಣು ತೆರೆದ ಮುಖ ಕಾಣಿಸಿರುವ ಮೊದಲ ಚಿತ್ರ ಎಂದು ವೈರಲ್‌ ಆಗಿರುವ ಫೋಟೋ ಇದು.

ಅಯೋಧ್ಯೆ: ಶ್ರೀ ರಾಮಜನ್ಮಭೂಮಿಯ ರಾಮಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠೆಯ ದರ್ಪಣ ಶಾಸ್ತ್ರವಾಗದ ಹೊರತು ವಿಗ್ರಹದ ಕಣ್ಣುಗಳಿಗೆ ಕಟ್ಟಿದ ಬಟ್ಟೆ ತೆಗೆಯುವುದಿಲ್ಲ. ಈಗ ಬಹಿರಂಗವಾಗಿರುವ ಫೋಟೋ ನಿಜವಾದುದಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಇಂದು (ಜ.20) ಸ್ಪಷ್ಟಪಡಿಸಿದ್ದಾರೆ.

"...ಪ್ರಾಣ ಪ್ರತಿಷ್ಠಾ ಪೂರ್ಣಗೊಳ್ಳುವ ಮೊದಲು ಶ್ರೀರಾಮನ ವಿಗ್ರಹದ ಕಣ್ಣುಗಳನ್ನು ಹೊರಲೋಕಕ್ಕೆ ಬಹಿರಂಗಪಡಿಸಲಾಗುವುದಿಲ್ಲ. ಶ್ರೀರಾಮನ ಕಣ್ಣುಗಳು ಇರಬಹುದಾದ ವಿಗ್ರಹದ ಫೋಟೋ ನಿಜವಾದುದಲ್ಲ. ಕಣ್ಣುಗಳು ಕಂಡರೆ, ಕಣ್ಣುಗಳನ್ನು ಯಾರು ಬಹಿರಂಗಪಡಿಸಿದ್ದಾರೆ ಮತ್ತು ವಿಗ್ರಹದ ಚಿತ್ರಗಳು ಹೇಗೆ ವೈರಲ್ ಆಗುತ್ತಿವೆ ಎಂಬುದರ ಕುರಿತು ತನಿಖೆ ನಡೆಸಬೇಕು” ಎಂದು ಆಚಾರ್ಯ ಸತ್ಯೇಂದ್ರ ದಾಸ್ ಆಗ್ರಹಿಸಿದರು.

ಮೈಸೂರಿನ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ ಬಾಲರಾಮನ ವಿಗ್ರಹವನ್ನು ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಪ್ರಾಣ ಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ಆ ದಿನ ದರ್ಪಣ ಶಾಸ್ತ್ರ ನಡೆಯದ ಹೊರತು, ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ತೆಗೆಯಲಾಗುವುದಿಲ್ಲ. ಆದರೆ, ಗುರುವಾರ (ಜ.19) ಬಾಲರಾಮ ಕಣ್ಣು ತೆರೆದಿರುವ ಫೋಟೋ ವೈರಲ್ ಆಗಿದೆ.

ವಿಶ್ವಹಿಂದೂ ಪರಿಷತ್ ನಾಯಕರೊಬ್ಬರು ಅದನ್ನು ಶೇರ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇಂದು ಈ ಕುರಿತು ಸ್ಪಷ್ಟೀಕರಣ ನೀಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ಅದು ಅಸಲಿ ಫೋಟೋ ಅಲ್ಲ ಎಂದು ಹೇಳಿದರು.

ಅಷ್ಟೇ ಅಲ್ಲ, ಪ್ರಾಣ ಪ್ರತಿಷ್ಠೆಯ ಎಲ್ಲ ಪ್ರಕ್ರಿಯೆಗಳನ್ನು ಎಂದಿನಂತೆ ನಡೆಸಲಾಗುವುದು. ಆದರೆ, 'ಪ್ರಾಣ ಪ್ರತಿಷ್ಠಾ'ದವರೆಗೂ ಬಾಲರಾಮನ ಕಣ್ಣುಗಳು ಬಹಿರಂಗಗೊಳ್ಳುವುದಿಲ್ಲ. ಒಂದೊಮ್ಮೆ ಕಣ್ಣು ತೆರೆದುಕೊಂಡ ಫೋಟೋ ಬಹಿರಂಗವಾಗಿದೆ ಎಂದರೆ ಅದು ಹೇಗಾಯಿತು, ಯಾಕಾಯಿತು ಎಂಬ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಹಳೆಯ ರಾಮ ವಿಗ್ರಹವನ್ನು ಕೊಂಡೊಯ್ಯುವ ಕಾರ್ಯವಿಧಾನಗಳ ಬಗ್ಗೆಯೂ ಮಾತನಾಡಿದ ಅವರು, ಗರ್ಭಗುಡಿಯಲ್ಲಿ ಹಳೆಯ ವಿಗ್ರಹವೂ ಇರಲಿದೆ. ಮುಖ್ಯಪೀಠದಲ್ಲಿ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಹಳೆಯ ವಿಗ್ರಹ ಇರಿಸುವುದಕ್ಕೆ ಯಾವುದೇ ಶುಭ ಮುಹೂರ್ತವೂ ಇಲ್ಲ. ಹೊಸದನ್ನು ಮಾಡಬೇಕಾದಾಗ ಒಂದು ಶುಭ ಮುಹೂರ್ತವನ್ನು ಮುಂಚಿತವಾಗಿ ಗಮನಿಸಿ ಪ್ರಾಣ ಪ್ರತಿಷ್ಠೆ ಮಾಡುವುದು ಧಾರ್ಮಿಕ ವಿಧಿ ವಿಧಾನದ ಭಾಗವಾಗಿದೆ ಎಂದು ವಿವರಿಸಿದರು.

"ದೇವಸ್ಥಾನಕ್ಕೆ ಹಳೆಯ ವಿಗ್ರಹವನ್ನು ಯಾರು ಒಯ್ಯುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಈ ಹಿಂದೆ ಮುಖ್ಯಮಂತ್ರಿಯವರೇ ಗರ್ಭಗುಡಿಯಿಂದ ಬಾಲಾಲಯಕ್ಕೆ (ತಾತ್ಕಾಲಿಕವಾಗಿ ನಿರ್ಮಿಸಲಾದ ದೇವಾಲಯ)ಕ್ಕೆ ವಿಗ್ರಹವನ್ನು ಹೊತ್ತೊಯ್ದರು. ಸಿಎಂ ಯೋಗಿ ಅವರೇ ಮೂರ್ತಿಯನ್ನು ದೇವಸ್ಥಾನಕ್ಕೆ ಮತ್ತೆ ತರಬಹುದು" ಎಂದು ಆಚಾರ್ಯ ದಾಸ್ ಹೇಳಿದರು.

ಬಾಬರಿ ಮಸೀದಿ ಕಟ್ಟಡವನ್ನು ಕರಸೇವಕರು ಧ್ವಂಸಗೊಳಿಸಿದ ಬಳಿಕ, ಬಾಲರಾಮನನ್ನು ಬಾಲಾಲಯದಲ್ಲಿ ಇರಿಸಲಾಗಿತ್ತು. ಅಲ್ಲಿಯೇ ನಿತ್ಯ ಪೂಜೆ ನಡೆಯುತ್ತಿತ್ತು.

----------------------------------------

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.