Paveh Cruise Missile: 'ಇದು ಟ್ರಂಪ್‌ ಅವರನ್ನು ಕೊಲ್ಲಲು..' ಕ್ರೂಸ್‌ ಕ್ಷಿಪಣಿ ತೋರಿಸುತ್ತಾ ಇರಾನ್‌ ಕಮಾಂಡರ್‌ ಹೇಳಿದ್ದೇನು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Paveh Cruise Missile: 'ಇದು ಟ್ರಂಪ್‌ ಅವರನ್ನು ಕೊಲ್ಲಲು..' ಕ್ರೂಸ್‌ ಕ್ಷಿಪಣಿ ತೋರಿಸುತ್ತಾ ಇರಾನ್‌ ಕಮಾಂಡರ್‌ ಹೇಳಿದ್ದೇನು?

Paveh Cruise Missile: 'ಇದು ಟ್ರಂಪ್‌ ಅವರನ್ನು ಕೊಲ್ಲಲು..' ಕ್ರೂಸ್‌ ಕ್ಷಿಪಣಿ ತೋರಿಸುತ್ತಾ ಇರಾನ್‌ ಕಮಾಂಡರ್‌ ಹೇಳಿದ್ದೇನು?

ಇರಾನ್ 1,650 ಕಿಮೀ (1,025 ಮೈಲುಗಳು) ವ್ಯಾಪ್ತಿಯ ಕ್ರೂಸ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಈ ಕುರಿತು ಮಾತನಾಡಿರುವ ರೆವಲ್ಯೂಷನರಿ ಗಾರ್ಡ್ಸ್ ಏರೋಸ್ಪೇಸ್ ಫೋರ್ಸ್ ಮುಖ್ಯಸ್ಥ ಅಮೀರಲಿ ಹಾಜಿಝಾದೆಹ್, "ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಲು ನಾವು ಎದುರು ನೋಡುತ್ತಿದ್ದೇವೆ.." ಎಂದು ನೇರವಾಗಿಯೇ ಹೇಳಿರುವುದು ಜಾಗತಿಕವಾಗಿ ಗಮನ ಸೆಳೆದಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (HT)

ಟೆಹ್ರನ್: ಇರಾನ್ 1,650 ಕಿಮೀ (1,025 ಮೈಲುಗಳು) ವ್ಯಾಪ್ತಿಯ ಕ್ರೂಸ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ ಎಂದು ಉನ್ನತ ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಶುಕ್ರವಾರ ಹೇಳಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಇರಾನ್ ಡ್ರೋನ್‌ಗಳನ್ನು ರಷ್ಯಾ ಬಳಸಿದ ನಂತರ, ಪಾಶ್ಚಿಮಾತ್ಯ ಕಳವಳಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಈ ಕುರಿತು ಮಾತನಾಡಿರುವ ರೆವಲ್ಯೂಷನರಿ ಗಾರ್ಡ್ಸ್ ಏರೋಸ್ಪೇಸ್ ಫೋರ್ಸ್ ಮುಖ್ಯಸ್ಥ ಅಮೀರಲಿ ಹಾಜಿಝಾದೆಹ್, "ಇರಾನ್‌ನ ಉನ್ನತ ಕಮಾಂಡರ್‌ ಖಾಸೆಮ್ ಸೊಲೈಮಾನಿ ಅವರ ಹತ್ಯೆಗೆ ಪ್ರತೀಕಾರವಾಗಿ ನಾವು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಲು ಎದುರು ನೋಡುತ್ತಿದ್ದೇವೆ.." ಎಂದು ನೇರವಾಗಿಯೇ ಹೇಳಿರುವುದು ಜಾಗತಿಕವಾಗಿ ಗಮನ ಸೆಳೆದಿದೆ.

"ನಮ್ಮ ಕ್ರೂಸ್ ಕ್ಷಿಪಣಿಯನ್ನು 1,650 ಕಿಮೀ ವ್ಯಾಪ್ತಿಯ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಕ್ಷಿಪಣಿ ಶಸ್ತ್ರಾಗಾರಕ್ಕೆ ಸೇರಿಸಲಾಗಿದೆ. ನಮ್ಮನ್ನು ಕೆಣಕುವ ಪಾಶ್ಚಮಾತ್ಯ ಶಕ್ತಿಗಳಿಗೆ ಇದು ಎಚ್ಚರಿಕೆಯ ಕರೆಗಂಟೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇರಾನ್‌ ರಕ್ಷಣಾ ಸಾಮರ್ಥ್ಯವನ್ನು ಕಡೆಗಣಿಸಿದರೆ, ಶತ್ರು ರಾಷ್ಟ್ರಗಳು ಅದಕ್ಕೆ ತಕ್ಕ ಪ್ರತಿಫಲವನ್ನು ಉಣ್ಣಲಿದ್ದಾರೆ.." ಎಂದು ಅಮೀರಲಿ ಹಾಜಿಝಾದೆಹ್ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ಸರ್ಕಾರಿ ಮಾಧ್ಯಮ ಹೊಸ ಪಾವೆಹ್ ಕ್ರೂಸ್ ಕ್ಷಿಪಣಿಯ ಮೊದಲ ವಿಡಿಯೋ ಪ್ರಸಾರ ಮಾಡಿದ್ದು, ಇರಾನ್‌ನ ಉನ್ನತ ಸೇನಾ ಕಮಾಂಡರ್‌ಗಳು ಕ್ಷಿಪಣಿಯ ಪರಿಶೀಲನೆ ನಡೆಸುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ.

2020ರಲ್ಲಿ ಬಾಗ್ದಾದ್‌ನಲ್ಲಿ ಯುಎಸ್ ನಡೆಸಿದ ಡ್ರೋನ್ ದಾಳಿಯಲ್ಲಿ, ಇರಾನ್‌ನ ಮಿಲಿಟರಿ ಕಮಾಂಡರ್ ಖಾಸೆಮ್ ಸೊಲೈಮಾನಿ ಅಸುನೀಗಿದ್ದರು. ಇದಾದ ಬಳಿಕ ಇರಾಕ್‌ನಲ್ಲಿರುವ ಯುಎಸ್ ನೇತೃತ್ವದ ಪಡೆಗಳ ಮೇಲೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿ‌ತ್ತು.

"ಆದರೆ ನಾವು ಅಮೆರಿಕದ ಬಡ ಸೈನಿಕರನ್ನು ಕೊಲ್ಲುವ ಉದ್ದೇಶ ಹೊಂದಿಲ್ಲ. ದೇವರ ಇಚ್ಛೆ ಇದ್ದರೆ, ನಾವು ಟ್ರಂಪ್ ಅವರನ್ನು ಕೊಲ್ಲಲು ಬಯಸುತ್ತೇವೆ. ಅದೇ ರೀತಿ ಖಾಸೆಮ್ ಸೊಲೈಮಾನಿ ಅವರನ್ನು ಕೊಲ್ಲಲು ಆದೇಶ ನೀಡಿದ ಅಂದಿನ ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್‌ ಪಾಂಪಿಯೋ ಮತ್ತು ಇತರ ಉನ್ನತ ಅಮೆರಿಕನ್ ಮಿಲಿಟರಿ ಕಮಾಂಡರ್‌ಗಳನ್ನು‌ ಕೊಲ್ಲಲು ಎದುರು ನೋಡುತ್ತಿದ್ದೇವೆ.." ಎಂದು ಹಾಜಿಝಾದೆಹ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇರಾನ್ ತನ್ನ ಕ್ಷಿಪಣಿ ಕಾರ್ಯಕ್ರಮವನ್ನು ಅದರಲ್ಲೂ ವಿಶೇಷವಾಗಿ ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ತಯಾರಿಕಾ ಯೋಜನೆಯನ್ನು ಬಹುವಾಗಿ ವಿಸ್ತರಿಸಿದೆ. ಅಮೆರಿಕದ ವಿರೋಧ ಮತ್ತು ಯುರೋಪಿಯನ್ ರಾಷ್ಟ್ರಗಳ ಕಳವಳದ ಅಭಿಪ್ರಾಯಗಳನ್ನು ಧಿಕ್ಕರಿಸಿ, ಇರಾನ್‌ ತನ್ನ ಕ್ಷಿಪಣಿ ಯೋಜನೆಗಳಿಗೆ ವೇಗ ನೀಡಿದೆ. ಕಾರ್ಯಕ್ರಮವು ಸಂಪೂರ್ಣವಾಗಿ ರಕ್ಷಣಾತ್ಮಕವಾಗಿದೆ ಇರಾನ್‌ ಹಲವು ಬಾರಿ ಸ್ಪಷ್ಟಪಡಿಸಿದೆ.

ಕಳೆದ ನವೆಂಬರ್‌ನಲ್ಲಿ ಇರಾನ್ ಹೈಪರ್‌ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ ಎಂಬ ಹಾಜಿಝಾದೆಹ್ ಹೇಳಿಕೆಗೆ ಸಂಶಯ ವ್ಯಕ್ತಪಡಿಸಿರು ಅಮೆರಿಕ, ಇಂತಹ ಯಾವುದೇ ಬೆಳವಣಿಗೆ ತನ್ನ ಗಮನಕ್ಕೆ ಬಾರದಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದೆ.

ಉಕ್ರೇನ್‌ನಲ್ಲಿ ಯುದ್ಧದ ಮೊದಲು ತಾನು ರಷ್ಯಾಗೆ ಡ್ರೋನ್‌ಗಳನ್ನು ಪೂರೈಸಿರುವುದಾಗಿ ಇರಾನ್‌ ಹೇಳಿಕೊಂಡಿದೆ. ಉಕ್ರೇನ್‌ನ ವಿದ್ಯುತ್ ಕೇಂದ್ರಗಳು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಲು, ರಷ್ಯಾ ಈ ಡ್ರೋನ್‌ಗಳನ್ನು ಬಳಸುತ್ತಿದೆ.

ಇರಾನ್‌ನ ಪರಮಾಣು ಯೋಜನೆಗಳನ್ನು ವಿರೋಧಿಸುತ್ತಿರುವ ಅಮೆರಿಕ, ಹಲವು ನಿರ್ಬಂಧಗಳನ್ನು ಹೇರುವ ಮೂಲಕ ಒತ್ತಡ ಹೇರಲು ಪ್ರಯತ್ನಿಸುತ್ತಿದೆ. ಡೋನಾಲ್ಡ್‌ ಟ್ರಂಪ್‌ ಅಧ್ಯಕ್ಷೀಯ ಅವಧಿಯಲ್ಲಿ, ಅಮೆರಿಕ ಹಾಗೂ ಇರಾನ್‌ ನಡುವಿನ ಸಂಬಂಧ ತೀರ ಹದಗೆಟ್ಟಿತ್ತು. ಅಮೆರಿಕದಂತೆಯೇ ಇಸ್ರೇಲ್‌ ಕೂಡ ಇರಾನ್‌ನ ಶತ್ರು ರಾಷ್ಟ್ರವಾಗಿದೆ. 2020ರಲ್ಲಿ ನಡೆದ ಇರಾನ್‌ನ ಉನ್ನತ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾದೆ ಅವರ ಹತ್ಯೆಯಲ್ಲಿ ಇಸ್ರೇಲ್‌ ಕೈವಾಡವಿದೆ ಎಂದು ಇರಾನ್‌ ಗಂಭೀರ ಆರೋಪ ಮಾಡಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.